ಪ್ರಭುತ್ವವನ್ನು ಪ್ರಶ್ನಿಸದಂತೆ ತಡೆಯುತ್ತಿರುವ ಎಫ್‌ಐಆರ್‌ಗಳು

0
309

✍️ ಅರ್ಶದ್ ಶೇಕ್

ಅನುವಾದ: ಮುಖ್ತಾರ್ ಅಹ್ಮದ್

ಸಯೀದಾ ಸೈಯಿದೇನ್ ಹಾಮೀದ್- ಸಮಾಜ ಸೇವಕಿ, ಶಿಕ್ಷಣ ತಜ್ಞೆ, ವಯಸ್ಸು 82, ದೇಶದ ಯೋಜನಾ ಆಯೋಗದ ಮಾಜಿ ಸದಸ್ಯೆ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ. ಇತ್ತೀಚೆಗೆ ಅವರು ಹಲವು ತಪ್ಪು ಕಾರಣಗಳಿಗಾಗಿ ಬೆಳಕಿಗೆ ಬಂದರು. ಕಾರಣ- ಅಸ್ಸಾಮ್ ರಾಜ್ಯದಲ್ಲಿ ಅವರ ವಿರುದ್ಧ ಏಕಕಾಲದಲ್ಲಿ 16 ಎಫ್‌ಐಆರ್‌ಗಳು ದಾಖಲಾಗಿವೆ. ಹೌದು 16 ಎಫ್‌ಐಆರ್‌ಗಳು. ಇದಕ್ಕೆ ಕಾರಣ ಬಾಂಗ್ಲಾದೇಶೀಯರು ಸಹ ಮನುಷ್ಯರು, ಅವರಿಗೂ ಗೌರವ ಸಿಗಬೇಕು ಎಂಬ ಹೇಳಿಕೆ. ಈ ಹೇಳಿಕೆಯನ್ನು ತಕ್ಷಣವೇ ಒಳನುಸುಳುವಿಕೆಗೆ ಬೆಂಬಲ ಎಂದು ಕರೆಯಲಾಯಿತು. ಜಿನ್ನಾರ ಕನಸನ್ನು ನನಸಾಗಿಸಲು ಸಈದಾ ಬಯಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಆರೋಪಿಸಿದರು. ಕೆಲವರು ಅವರನ್ನು ನೇರವಾಗಿ ದೇಶದ್ರೋಹಿ ಎಂದು ಕರೆದರು.

ಪ್ರಶ್ನೆ ಏನೆಂದರೆ, ಆಕೆಯ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಯಬೇಕಿತ್ತೇ? ಅಥವಾ ಆಕೆಯ ವಿರುದ್ಧ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಬೇಕಿತ್ತೇ? ಯೋಚಿಸಿ, 16 ಎಫ್‌ಐಆರ್‌ಗಳು ಎಂದರೆ ಅರ್ಥವೇನು? 16 ವಿಭಿನ್ನ ಕೋರ್ಟ್‌ಗಳಲ್ಲಿ ಹಾಜರಾತಿ. ಪ್ರತೀ ಬಾರಿಯೂ ವಕೀಲರ ಶುಲ್ಕ. ಪ್ರತಿಸಲವೂ ಪ್ರಯಾಣ. ಪ್ರತೀ ಬಾರಿಯೂ ಸಮಯ ಮತ್ತು ಶಕ್ತಿಯ ವ್ಯರ್ಥ. ಬಹುಶಃ ಇಂತಹ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಆದರೆ ಕಿರುಕುಳ ಪ್ರಕ್ರಿಯೆಯು ನಿಜವಾದ ಶಿಕ್ಷೆಯಾಗಿದೆ ಮತ್ತು ಈ ಕಥೆ ಸಯೀದಾ ಹಾಮೀದ್‌ಗೆ ಮಾತ್ರ ಸೀಮಿತವಾಗಿಲ್ಲ. ಇಂದು ಇದು ದೇಶದಲ್ಲಿ ಒಂದು ಮಾದರಿಯಾಗಿದೆ.

ಸರಕಾರವನ್ನು ಪ್ರಶ್ನಿಸುವವರು, ಪತ್ರಕರ್ತರು, ಬರಹಗಾರರು, ಸಾಮಾಜಿಕ ಕಾರ್ಯಕರ್ತರು ಅಥವಾ ರಾಜಕೀಯ ನಾಯಕರಾಗಿರಲಿ, ಎಲ್ಲರೂ ಈ ಅಸ್ತ್ರವನ್ನು ಎದುರಿಸುತ್ತಿದ್ದಾರೆ. ಒಂದು ಕಾಲದಲ್ಲಿ ನಾಗರಿಕರನ್ನು ರಕ್ಷಿಸುವ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದ್ದ ಎಫ್‌ಐಆರ್ ಇಂದು ಭಯ ಮತ್ತು ಬೆದರಿಕೆಯನ್ನು ಸೃಷ್ಟಿಸುವ ಸಾಧನವಾಗಿದೆ.

ಹೆಚ್ಚುತ್ತಿರುವ ಗುರಿಗಳ ಪಟ್ಟಿ:

ಆಡಳಿತದ ವಿರುದ್ಧ ಭಿನ್ನಾಭಿಪ್ರಾಯ ಹೊಂದಿರುವುದರ ವಿರುದ್ಧ ಎಫ್‌ಐಆರ್ ದಾಖಲಿಸುವುದರಿಂದ ಅಸ್ಸಾಮ್ ಕುಖ್ಯಾತಿ ಪಡೆಯುತ್ತಿದೆ. ಪತ್ರ ಕರ್ತರಾದ ಸಿದ್ದಾರ್ಥ್ ವರದರಾಜನ್ ಮತ್ತು ಕರಣ್ ಥಾಪರ್ ವಿರುದ್ಧ ಅಸ್ಸಾಮ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪವೇನು? ದೇಶದ ಸಾರ್ವಭೌಮತ್ವ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ. ಅವರ ಸುದ್ದಿ ವಾಹಿನಿ `ದಿ ವೈಯರ್’ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಲಾಗಿದೆ. ಅದೇ ರೀತಿ ಇನ್ನೋರ್ವ ಪತ್ರಕರ್ತ ಅಭಿಸಾರ್ ಶರ್ಮಾರ ವಿರುದ್ಧ ಗೌಹಾಟಿಯಲ್ಲಿ ಪ್ರಕರಣ ದಾಖಲಾಗಿದೆ. ದೇಶದ್ರೋಹಕ್ಕೆ ಸಂಬಂಧಿಸಿದ ಒಂದೇ ರೀತಿಯ ಸೆಕ್ಷನ್‌ಗಳಾಗಿವೆ ಇವು. ಅವರು ಸರಕಾರಿ ವಿರೋಧಿ ವೀಡಿಯೋ ಮಾಡಿದ್ದಾರೆ ಎಂಬುದು ಆರೋಪ. ಅವರ ಮಾತುಗಳು ಧಾರ್ಮಿಕ ದ್ವೇಷವನ್ನು ಹರಡುತ್ತವೆ ಎಂದು ಪೊಲೀಸರು ಹೇಳಿದ್ದಾರೆ. ಕಾರ್ಯಕರ್ತರ ಸ್ಥಿತಿ ಇನ್ನೂ ಕೆಟ್ಟದಾಗಿದೆ.

2019ರಲ್ಲಿ ಆರ್‌ಟಿಐ ಕಾರ್ಯಕರ್ತ ಮತ್ತು ರೈತ ನಾಯಕ ಅಖಿಲ್ ಗೊಗೊಯ್‌ರನ್ನು ಬಂಧಿಸಲಾಯಿತು. ಅವರ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಲಾಯಿತು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಅವರ ಮೇಲೆ ಆರೋಪ ಹೊರಿಸಲಾಯಿತು. ಹಲವು ತಿಂಗಳುಗಳ ಜೈಲುವಾಸದ ಬಳಿಕ ಅವರು ಬಿಡುಗಡೆ ಹೊಂದಿದರು. ಬುಡಕಟ್ಟು ಜನರ ಹಕ್ಕುಗಳ ಕಾರ್ಯಕರ್ತ ಶೃಂಗಲ್ ಚಲಿಹಾ ಮತ್ತು ಕಾಂಗ್ರೆಸ್ ಶಾಸಕ ಆಸಿಫ್ ಮೊಹಮ್ಮದ್ ನಝರ್ ಅವರ ವಿಷಯಗಳೂ ಪರಸ್ಪರ ಹೋಲುತ್ತವೆ. ಇವುಗಳಲ್ಲಿ ಒಂದೇ ಮಾದರಿ ಸ್ಪಷ್ಟವಾಗಿ ಗೋಚರಿಸುತ್ತದೆ. ಆಡಳಿತಗಾರರನ್ನು ಪ್ರಶ್ನಿಸುವ ಯಾರೇ ಆಗಿರಲಿ, ಅವರು ದೀರ್ಘ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅದು ಪತ್ರಕರ್ತನಾಗಿರಲಿ, ಕಾರ್ಯಕರ್ತನಾಗಿರಲಿ, ಫಲಿತಾಂಶ ಒಂದೇ ಆಗಿರುತ್ತದೆ. ನ್ಯಾಯಾಲಯಕ್ಕೆ ಭೇಟಿ, ಪ್ರಕರಣದ ವಿರುದ್ಧ ಹೋರಾಡುವ ವೆಚ್ಚ ಮತ್ತು ವರ್ಷಗಳ ಕಾಲದ ತೊಂದರೆಗಳು.

ಎಫ್‌ಐಆರ್ ಪ್ರಕ್ರಿಯೆಯು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಎಫ್‌ಐಆರ್ ಎಂದರೆ ಪ್ರಥಮ ಮಾಹಿತಿ ವರದಿ. ಇದನ್ನು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 154ರ ಅಡಿಯಲ್ಲಿ ನೋಂದಾಯಿಸಲಾಗಿದೆ. ಇದು ಗುರುತಿಸಬಹುದಾದ ಅಪರಾಧವನ್ನು ದಾಖಲಿಸುತ್ತದೆ. ಅಂದರೆ ಕೋರ್ಟಿನ ಅನುಮತಿಯಿಲ್ಲದೆ ಪೊಲೀಸರು ತನಿಖೆ ನಡೆಸಿ ಬಂಧಿಸಬಹುದಾದ ಅಪರಾಧ. ಎಫ್‌ಐಆರ್ ದಾಖಲಾದ ನಂತರ, ರಾಜ್ಯದ ಸಂಪೂರ್ಣ ಸಂಘಟಿತ ವ್ಯವಸ್ಥೆಯು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಆರೋಪಿಯನ್ನು ಕರೆಯಬಹುದು. ಅವನನ್ನು ಗಂಟೆಗಟ್ಟಲೆ ಪ್ರಶ್ನಿಸಬಹುದು. ಅವನನ್ನು ಯಾವುದೇ ಸಮಯದಲ್ಲಿ ಕಸ್ಟಡಿಗೆ ತೆಗೆದುಕೊಳ್ಳಬಹುದು. ಅವನ ಮನೆ ಮತ್ತು ಕಚೇರಿಯನ್ನು ಸಹ ಶೋಧಿಸಬಹುದು.

ಇಷ್ಟೆಲ್ಲಾ ಆದ ನಂತರ ಆರೋಪಿಯು ತನ್ನ ಸಮಯ, ಶಕ್ತಿ ಮತ್ತು ಹಣವನ್ನು ಕಾನೂನು ರಕ್ಷಣೆಗಾಗಿ ವ್ಯಯಿಸುವಂತೆ ಒತ್ತಾಯಿಸಲಾಗುತ್ತದೆ. ಪ್ರಕರಣ ಎಷ್ಟೇ ದುರ್ಬಲವಾಗಿದ್ದರೂ ನಿಜವಾದ ಶಿಕ್ಷೆ ಮುಂದುವರಿಯುತ್ತದೆ. ತನಿಖೆ ತಿಂಗಳಲ್ಲ, ವರ್ಷಗಳ ವರೆಗೆ ಎಳೆಯಬಹುದು. ವಿವಿಧ ರಾಜ್ಯಗಳಲ್ಲಿ ಹಲವಾರು ಎಫ್‌ಐಆರ್‌ಗಳು ದಾಖಲಾಗಿದ್ದರೆ, ಒಬ್ಬ ವ್ಯಕ್ತಿಯು ಅದರಿಂದ ಹೊರಬರಲು ಸಾಧ್ಯವಾಗದಷ್ಟು ಪ್ರಕರಣಗಳ ಜಾಲವೇ ಸೃಷ್ಟಿಯಾಗುತ್ತದೆ.

ಕಿರುಕುಳದ ಪ್ರಕಾರ:

ಇದರ ಹಿಂದೆ ಮೂರು ಪರಸ್ಪರ ಸಂಬಂಧ ಹೊಂದಿರುವ ಸತ್ಯಗಳಿವೆ. ಮೊದಲ ಸತ್ಯ ರಾಜಕೀಯ ವಾತಾವರಣದ ಬಗ್ಗೆ. ಇಂದಿನ ವಾತಾವರಣವು ಸರಕಾರದ ವಿಮರ್ಶಕರನ್ನು ರಾಷ್ಟ್ರದ ಶತ್ರುಗಳೆಂದು ಕರೆಯುವ ನಾಯಕರಿಗೆ ಪುರಸ್ಕಾರ ನೀಡುತ್ತದೆ. ಎರಡನೆಯ ಸತ್ಯ ಪೋಲೀಸರಿಗೆ ಸಂಬಂಧಿಸಿದೆ. ಪೊಲೀಸರು ಹೆಚ್ಚಾಗಿ ಆಡಳಿತ ಪಕ್ಷದ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಆದ್ದರಿಂದ ಮೇಲಿನ ಆದೇಶ ಬಂದಾಗ, ಎಫ್‌ಐಆರ್ ದಾಖಲಿಸಲಾಗುತ್ತದೆ. ವಿಷಯ ಎಷ್ಟೇ ಕ್ಷುಲ್ಲಕವಾಗಿದ್ದರೂ ಸಹ ಮೂರನೇ ಸತ್ಯವೆಂದರೆ ನಮ್ಮ ನ್ಯಾಯಾಲಯಗಳ ನಿಧಾನಗತಿ. ಪ್ರಕರಣಗಳು ವರ್ಷಗಳ ವರೆಗೆ ಎಳೆಯುತ್ತದೆ. ಆರೋಪಿಗಳು ದೀರ್ಘ ಸಮಯ ಕಾಯುವಲ್ಲಿ ಸುಸ್ತಾಗುತ್ತಾರೆ. ಪ್ರಕರಣದಿಂದ ಮುಕ್ತಿ ಸಿಕ್ಕರೂ ಅದು ವಿಳಂಬವಾಗಿರುತ್ತದೆ. ಈ ವಿಳಂಬವು ಸರಕಾರಕ್ಕೆ ಪ್ರಯೋಜನವನ್ನು ನೀಡುತ್ತದೆ.

ಏಕೆಂದರೆ ನಿಜವಾದ ಶಿಕ್ಷೆಯೇ ಅದರ ಪ್ರಕ್ರಿಯೆಯಾಗುತ್ತದೆ. ಹಲವು ಸಂಸ್ಥೆಗಳು ಇದರ ಬಗ್ಗೆ ಹಲವು ಬಾರಿ ವರದಿ ಮಾಡಿವೆ. ಪತ್ರಕರ್ತರ ವಿರುದ್ಧ ದಾಖಲಾಗುವ ಎಫ್‌ಐಆರ್‌ಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಅವರು ತೋರಿಸಿದ್ದಾರೆ. ಸಾಮಾನ್ಯ ಚರ್ಚೆ ಅಥವಾ ಅಭಿಪ್ರಾಯ ವ್ಯತ್ಯಾಸವೆಂದು ಪರಿಗಣಿಸಬೇಕಾದ ವಿವಾದಗಳನ್ನು ಅಪರಾಧೀ ಕರಿಸಲಾಗುತ್ತಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಎಚ್ಚರಿಸಿದೆ. ಮಾನವ ಹಕ್ಕುಗಳ ಸಂಘಟನೆಗಳು ಕಾರ್ಯಕರ್ತರ ಮೇಲೆ ಗಂಭೀರ ಆರೋಪಗಳನ್ನು ಹೇರಲಾಗುತ್ತಿದೆ ಎಂದು ಪದೇ ಪದೇ ವರದಿ ಮಾಡುತ್ತಿವೆ. ವಿಶೇಷವಾಗಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಕೆಲಸ ಮಾಡುವವರ ಕುರಿತು ಧ್ವನಿ ಎತ್ತುವವರ ವಿರುದ್ಧ ಅನೇಕ ಸಂದರ್ಭಗಳಲ್ಲಿ ಅವರು ಭಯೋತ್ಪಾದನಾ ವಿರೋಧಿ ಕಾನೂನುಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

ತಣ್ಣಗಾಗುವ ಪರಿಣಾಮ:

ಈ ಎಫ್‌ಐಆರ್- ಶಸ್ತ್ರಾಸ್ತ್ರ ತಂತ್ರದ ಪರಿಣಾಮವು ನೇರವಾಗಿ ಗುರಿಯಾಗಿಸಿ ಕೊಂಡವರ ಮೇಲೆ ಮಾತ್ರವಲ್ಲ, ಸರಕಾರದ ವಿರುದ್ಧ ಮಾತನಾಡಿ ಮತ್ತು ಪರಿಣಾಮಗಳನ್ನು ಎದುರಿಸಿ ಎಂಬ ಸಂದೇಶ ಸ್ಪಷ್ಟವಾಗಿದೆ. ಸಣ್ಣ ನಿಯತಕಾಲಿಕೆಗಳು ಮತ್ತು ಸ್ಥಳೀಯ ಪತ್ರಿಕೆಗಳು ಈಗ ಎಚ್ಚರಿಕೆಯಿಂದ ವರದಿಗಳನ್ನು ಪ್ರಕಟಿಸುತ್ತವೆ. ಮೊಕದ್ದಮೆಯಲ್ಲಿ ಸಿಲುಕಿಕೊಳ್ಳುವ ಮೊದಲು ಅದನ್ನು ಹಲವಾರು ಬಾರಿ ತೂಗಲಾಗುತ್ತದೆ. ಯುವ ಕಾರ್ಯಕರ್ತರು ಯಾವುದೇ ಚಳುವಳಿ ಅಥವಾ ಪ್ರತಿಭಟನೆಗೆ ಸೇರುವ ಮೊದಲು ಎರಡು ಬಾರಿ ಯೋಚಿಸುತ್ತಾರೆ. ಸಾಮಾನ್ಯ ನಾಗರಿಕನು ಇದನ್ನೆಲ್ಲ ನೋಡುತ್ತಿದ್ದಾನೆ. ಪ್ರಸಿದ್ಧ ಪತ್ರಕರ್ತರು, ಹಿರಿಯ ಬರಹಗಾರರು, ಸಾಮಾಜಿಕ ಕಾರ್ಯಕರ್ತರನ್ನು ಕೋರ್ಟಿಗೆ ಎಳೆಯುವುದನ್ನು ಜನರು ನೋಡುತ್ತಾರೆ. ತದನಂತರ ಭಯ ಅವರ ಮನಸ್ಸಿನಲ್ಲಿ ಬೇರೂರುತ್ತದೆ. ಇವೆಲ್ಲವೂ ಅವರಿಗೆ ಸಂಭವಿಸಬಹುದಾದರೆ, ನನಗೇನು ಸಂಭವಿಸಬಹುದು?

ಈ ಭಯವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಹೊಣೆಗಾರಿಕೆ ದುರ್ಬಲವಾಗುತ್ತದೆ. ಪ್ರತಿಭಟನೆಯನ್ನು ನೋಂದಾಯಿಸುವುದು ಅಪಾಯಕಾರಿ ಕೆಲಸವಾಗುತ್ತಿದೆ. ಎಫ್‌ಐಆರ್ ದುರುಪಯೋಗವು ನ್ಯಾಯ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಮುರಿಯುತ್ತದೆ. ನಾಗರಿಕರು ಕಾನೂನನ್ನು ರಕ್ಷಣೆಯಾಗಿ ನೋಡದೆ, ಶಿಕ್ಷೆಯಾಗಿ ನೋಡುತ್ತಿದ್ದಾರೆ. ನ್ಯಾಯದ ಮೇಲಿನ ನಂಬಿಕೆ ಅಲುಗಾಡಲು ಪ್ರಾರಂಭಿಸಿದಾಗ, ಕಾನೂನಿನ ಆಳ್ವಿಕೆಯ ಮೇಲಿನ ಗೌರವವೂ ಕ್ಷೀಣಿಸಲು ಪ್ರಾರಂಭಿಸುತ್ತದೆ. ಇವೆಲ್ಲ ಸಂಭವಿಸಿದಾಗ, ಸಾಂವಿಧಾನಿಕ ಪ್ರಜಾಪ್ರಭುತ್ವವು ನಿಂತಿರುವ ಅಡಿಪಾಯಕ್ಕೆ ಹಾನಿಯಾಗುತ್ತದೆ.

ಮುಂದಿನ ದಾರಿ:

ಈ ಇಡೀ ವಿಷಯವನ್ನು ಇಸ್ಲಾಮೀ ದೃಷ್ಟಿಕೋನದಿಂದ ನೋಡಿದರೆ, ನ್ಯಾಯವು ಆಡಳಿತದ ಆಧಾರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಪವಿತ್ರ ಕುರ್‌ಆನ್ ಹೇಳುತ್ತದೆ, ನ್ಯಾಯವು ನಿಮ್ಮ ವಿರುದ್ಧವಾಗಿದ್ದರೂ ಸಹ, ನ್ಯಾಯದ ಪರವಾಗಿ ಗಟ್ಟಿಯಾಗಿ ನಿಲ್ಲಿ. “ಸುಳ್ಳು ಆರೋಪಗಳನ್ನು ಹೊರಿಸುವುದು ಮತ್ತು ಅಧಿಕಾರದ ದುರುಪಯೋಗದ ವಿರುದ್ಧ ಪ್ರವಾದಿ(ಸ) ಎಚ್ಚರಿಕೆ ನೀಡಿದ್ದಾರೆ. ನಾವು ಎಫ್‌ಐಆರ್‌ಗಳ ದುರುಪಯೋಗವನ್ನು ನಿಲ್ಲಿಸಲು ಬಯಸಿದರೆ, ಹಾಗೆ ಮಾಡಲು ಸ್ಪಷ್ಟ ಮತ್ತು ಸಮಗ್ರ ಮಾರ್ಗಗಳಿವೆ.

ನ್ಯಾಯಾಲಯಗಳು ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಕರಣಗಳನ್ನು ತಕ್ಷಣವೇ ಕೊನೆಗೊಳಿಸಬೇಕು. ಒಂದೇ ಆರೋಪದ ಮೇಲೆ ವಿವಿಧ ಸ್ಥಳಗಳಲ್ಲಿ ಹಲವು ಎಫ್‌ಐಆರ್‌ಗಳನ್ನು ದಾಖಲಿಸುವುದನ್ನು ಹೇಗೆ ತಡೆಯಬಹುದು ಎಂಬುದರ ಕುರಿತು ಸಂಸತ್ತು ಗಂಭೀರವಾಗಿ ಚರ್ಚಿಸಬೇಕು. ರಾಜಕೀಯ ಒತ್ತಡದಲ್ಲಿ ಪ್ರಕರಣಗಳನ್ನು ದಾಖಲಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾಗರಿಕ ಸಮಾಜವು ಈ ಪ್ರಕರಣಗಳನ್ನು ನಿರಂತರವಾಗಿ ಮುನ್ನಲೆಗೆ ತರಬೇಕಾಗಿದೆ. ನೆನಪಿರಲಿ, ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಹೃದಯ ಬಡಿತ. ನೀವು ಅದನ್ನು ಅಪರಾಧವೆಂದು ಪರಿಗಣಿಸಿದರೆ, ನೀವು ಪ್ರಜಾಪ್ರಭುತ್ವವನ್ನು ಕೊಲ್ಲುತ್ತೀರಿ.”