ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶದ ಸಂಭಾಲ್ನಲ್ಲಿರುವ ಮೊಘಲ್ ಕಾಲದ ಮಸೀದಿಯ ಸರ್ವೆ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಮುಖ್ಯ ಆರೋಪಿಯಾಗಿ ಬಂಧಿತನಾಗಿರುವ ಮುಲ್ಲಾ ಆಫ್ರೋಜ್ನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ. ಅಕ್ಟೋಬರ್ 13 ರಂದು ಈ ಬಗ್ಗೆ ಜಿಲ್ಲಾ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದೆ.
ರಾಷ್ಟ್ರೀಯ ಭದ್ರತಾ ಕಾಯ್ದೆಯು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಹೆಚ್ಚಿನ ಅಧಿಕಾರವನ್ನು ಕೊಡುತ್ತದೆ ಮತ್ತು 12 ತಿಂಗಳ ಕಾಲ ವಶದಲ್ಲಿ ಇಟ್ಟುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಇದನ್ನು ಇನ್ನಷ್ಟು ವಿಸ್ತರಿಸುವುದಕ್ಕೂ ಅವಕಾಶ ಇದೆ.
2024 ನವೆಂಬರ್ 19 ರಂದು ಸಂಭಾಲ್ ನ ಶಾಹಿ ಜಮಾ ಮಸೀದಿಯ ಸಮೀಕ್ಷೆ ನಡೆಸುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿತ್ತು. ಈ ಮಸೀದಿಯು ಈ ಹಿಂದೆ ಹರಿಹರ ದೇವಸ್ಥಾನ ಆಗಿತ್ತು ಎಂಬ ಆರೋಪದಿಂದಾಗಿ ಸಂಭಾಲ್ ಮಸೀದಿ ವಿವಾದಕ್ಕೆ ಗುರಿಯಾಗಿತ್ತು. ಆದರೆ ನವೆಂಬರ್ 24ರಂದು ಎರಡನೇ ಬಾರಿ ಸಮೀಕ್ಷೆಗೆ ಅಧಿಕಾರಿಗಳು ಬಂದರು. ಇದು ಸ್ಥಳೀಯರಲ್ಲಿ ಅನುಮಾನ ಹುಟ್ಟಿಸಿತು ಅವರು ಪ್ರತಿಭಟನೆಗೆ ಇಳಿದರು. ಪೊಲೀಸರು ಗೋಲಿಬಾರ್ ನಡೆಸಿದರು. ನಾಲ್ಕು ಮಂದಿ ಸಾವಿಗೀಡಾದರು.
ಈ ಘರ್ಷಣೆಗೆ ಮುಲ್ಲಾ ಅಫ್ರೋಜ್ ನ ಪ್ರಚೋದನೆಯೇ ಕಾರಣ ಎಂದು ಪೊಲೀಸರು ಹೇಳಿದರು ಮಾತ್ರ ಅಲ್ಲ ಹಿಂಸೆಯ ಮಾಸ್ಟರ್ ಮೈಂಡ್ ಎಂದು ಹಣೆಪಟ್ಟಿ ಹಚ್ಚಿದರು. ಜನವರಿ 19ರಂದು ಈತನನ್ನು ಬಂಧಿಸಲಾಯಿತು.
ಅಂದಿನಿಂದಲೂ ಈತನ ಜಾಮೀನು ಅರ್ಜಿಯು ಅಲಹಾಬಾದ್ ಹೈಕೋರ್ಟ್ ನ ಮುಂದಿದೆ. ಆದರೆ ಇದೀಗ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಿರುವುದರಿಂದ ಪ್ರಕರಣ ಇನ್ನಷ್ಟು ಗಂಭೀರವಾಗಿದೆ.












