ಸನ್ಮಾರ್ಗ ವಾರ್ತೆ
ಇಸ್ರೇಲ್ ಸೇನೆ ಗಾಝಾದ ಮನೆಗಳನ್ನು ನಾಶ ಮಾಡಿರುವುದಷ್ಟೇ ಅಲ್ಲ ಮಕ್ಕಳ ಕೈಗೆ ಬಾಂಬುಗಳನ್ನು ನೀಡಿ ಹಿಂತಿರುಗಿದೆ ಎಂದು ಗಾಝಾ ಆರೋಗ್ಯ ಸಚಿವಾಲಯದ ನಿರ್ದೇಶಕ ಜನರಲ್ ಡಾಕ್ಟರ್ ಮುನೀರ್ ಅಲ್ಬರ್ಶ್ ಆಪಾದಿಸಿದ್ದಾರೆ. ಆಟಿಕೆಗಳು ಮುಂತಾದವುಗಳ ಒಳಗಡೆ ಬಾಂಬನ್ನು ಅಡಗಿಸಿಟ್ಟು ಇಸ್ರೇಲ್ ಸೇನೆ ಹೊರಟು ಹೋಗಿದ್ದು ಇದನ್ನು ಮುಟ್ಟಿದ ಅನೇಕ ಮಕ್ಕಳು ಗಾಯಾಳುಗಳಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಇವುಗಳಲ್ಲಿ ಅಡಗಿಸಿಟ್ಟ ಬಾಂಬುಗಳು ತಕ್ಷಣ ಸ್ಫೋಟಗೊಂಡು ಮಕ್ಕಳು ಕೈ ಕಾಲುಗಳನ್ನು ಕಳಕೊಳ್ಳುವುದಕ್ಕೂ ಕಾರಣವಾಗಿದೆ ಎಂದು ಮುನೀರ್ ಹೇಳಿದ್ದಾರೆ.
ಸ್ಪೋಟಗೊಳ್ಳದ ಮದ್ದು ಗುಂಡುಗಳು ಮತ್ತು ಆಟಿಕೆಗಳ ರೂಪದಲ್ಲಿ ಅಡಗಿಸಿಡಲಾದ ಸ್ಪೋಟಕಗಳು ಕಟ್ಟಡಗಳ ಅವಶೇಷಗಳ ಅಡಿಯಲ್ಲಿವೆ. ಇವು ಮಕ್ಕಳ ಪಾಲಿಗೆ ಅತ್ಯಂತ ಅಪಾಯಕಾರಿ ವಸ್ತುಗಳಾಗಿ ಮಾರ್ಪಟ್ಟಿವೆ. ಕದನ ವಿರಾಮ ಏರ್ಪಟ್ಟಿದ್ದರೂ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇರುವ ಈ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿಲ್ಲ. ಪುಟ್ಟ ಮಕ್ಕಳು ಆಟಿಕೆಗಳೆಂದು ಇವುಗಳನ್ನು ಕೈಯಲ್ಲಿ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಗಂಭೀರ ಗಾಯಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಕ್ಕಳ ಆಟಿಕೆಗಳನ್ನು ಹೋಲುವ ರೀತಿಯಲ್ಲಿ ಈ ಬಾಂಬುಗಳನ್ನು ಕಟ್ಟಡಗಳ ಅವಶೇಷಗಳಡಿಯಲ್ಲಿ ದೊಡ್ಡ ಮಟ್ಟದಲ್ಲಿ ಇರಿಸಲಾಗಿದೆ. ಈ ಮೂಲಕ ಇಸ್ರೇಲ್ ಸೇನೆ ಕಟ್ಟಡಗಳನ್ನು ನಶಿಸಿದ್ದಲ್ಲದೆ ಮಕ್ಕಳ ಕೈಗೆ ಬಾಂಬುಗಳನ್ನು ಕೊಟ್ಟು ಹೋದಂತಾಗಿದೆ. ಮಕ್ಕಳಿಗೆ ಇವು ಬಾಂಬುಗಳೆಂದು ಗೊತ್ತಿಲ್ಲ. ಅವು ಪ್ರಾಮಾಣಿಕವಾಗಿ ಆಟಿಕೆಗಳೆಂದು ನಂಬಿ ಅವುಗಳನ್ನು ಕೈಗೆತ್ತಿಕೊಂಡು ಮುಖವನ್ನೇ ಮತ್ತು ಅವಯವಗಳನ್ನೇ ಕಳಕೊಳ್ಳುವಂತಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರತಿದಿನ ಮುಖ ವಿರೂಪ ಗೊಂಡ, ಕೈಕಾಲುಗಳನ್ನು ಕಳಕೊಂಡ ಮತ್ತು ದೇಹವಿಡಿ ಗಾಯಗೊಂಡ ಪುಟ್ಟ ಮಕ್ಕಳು ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಅವರು ದುಃಖ ತೋಡಿಕೊಂಡಿದ್ದಾರೆ.












