ಮಧ್ಯಪ್ರದೇಶದಲ್ಲಿ ಕೋಮು ಘರ್ಷಣೆ: ಎಪಿಸಿಆರ್‌ನಿಂದ ಫ್ಯಾಕ್ಟ್ ಫೈಂಡಿಂಗ್ ವರದಿ

0
342

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶದ ಬೆತ್ತೂರು ಜಿಲ್ಲೆಯ ಮುಲ್ತಾಯಿಯಲ್ಲಿ ಅಕ್ಟೋಬರ್ ಒಂಬತ್ತರಂದು ಕೋಮು ಘರ್ಷಣೆ ನಡೆದಿದ್ದು ಈ ಬಗ್ಗೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಅಥವಾ ಎಪಿಸಿಆರ್ ಮಧ್ಯಪ್ರದೇಶ ಘಟಕವು ಅಧ್ಯಯನ ನಡೆಸಿ ಫ್ಯಾಕ್ಟ್ ಫೈಂಡಿಂಗ್ ವರದಿಯನ್ನು ಬಿಡುಗಡೆಗೊಳಿಸಿದೆ. ಅಕ್ಟೋಬರ್ ಒಂಬತ್ತರಂದು ಸಂಜೆ ಎರಡು ಬೈಕುಗಳ ನಡುವಿನ ಡಿಕ್ಕಿಯು ಆ ಬಳಿಕ ಕೋಮು ಘರ್ಷಣೆಗೆ ಕಾರಣವಾಗಿ ಮಾರ್ಪಟ್ಟಿದೆ. ಈ ಘರ್ಷಣೆಯು ಧಾರ್ಮಿಕ ಕ್ಷೇತ್ರಗಳ ಮೇಲಿನ ದಾಳಿಗೆ ಕಾರಣವಾಗಿದೆ. ಆಸ್ತಿಪಾಸ್ತಿಗಳು ಎತ್ತಿನ ಗಾಡಿಗಳು ಧಾರ್ಮಿಕ ಕ್ಷೇತ್ರಗಳ ಮೇಲೆಯೂ ದಾಳಿ ನಡೆಸಲಾಗಿದೆ.

ಸಂತ್ರಸ್ತರ ಕಡೆಯಿಂದ ಬಂದಿರುವ ದೂರುಗಳ ಬಗ್ಗೆ ಸರಿಯಾದ ಎಫ್ ಐ ಆರ್ ದಾಖಲಿಸುವುದಕ್ಕೆ ಪೊಲೀಸರು ವಿಫಲರಾಗಿದ್ದಾರೆ ಎಂದು ಎಪಿಸಿಆರ್ ಮಧ್ಯಪ್ರದೇಶದ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಹೇಳಿದ್ದಾರೆ.

ಮುಖ್ಯವಾಗಿ ಮುಸ್ಲಿಂ ಸಮುದಾಯದ ಸಣ್ಣ ವ್ಯಾಪಾರಿಗಳು ಮತ್ತು ತಳ್ಳು ಗಾಡಿಯ ಮಾಲಕರು ಭಾರಿ ನಾಶ ನಷ್ಟವನ್ನು ಅನುಭವಿಸಿದ್ದಾರೆ. ಒಬ್ಬೊಬ್ಬರು ಹದಿನೈದು ಸಾವಿರದಿಂದ 40,000 ದಷ್ಟು ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ ಎಂದು ಫ್ಯಾಕ್ಟ್ ಫೈಂಡಿಂಗ್ ವರದಿಯಲ್ಲಿ ತಿಳಿಸಲಾಗಿದೆ.

ಸಿಸಿಟಿವಿ ವಿಡಿಯೋ ದಾಖಲೆಗಳನ್ನು ಪರಿಶೀಲಿಸಿ ಸಂತ್ರಸ್ತರು ನೀಡುವ ದೂರಿನ ಮೇಲೆ ಎಫ್ ಐ ಆರ್ ದಾಖಲಿಸಬೇಕು. ನಾಶನಷ್ಟ ಸಂಭವಿಸಿದವರಿಗೆ ತಕ್ಷಣ ಪರಿಹಾರವನ್ನು ಒದಗಿಸಬೇಕು. ಘರ್ಷಣೆಯ ಕುರಿತಂತೆ ಸ್ವತಂತ್ರ ಸಂಸ್ಥೆಯಿಂದ ಅಥವಾ ಉನ್ನತ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಎಪಿಸಿಆರ್ ಆಗ್ರಹಿಸಿದೆ.

ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಹಾಗೆಯೇ ಮಾನವ ಹಕ್ಕು ಆಯೋಗಕ್ಕೆ ಮತ್ತು ಉನ್ನತ ಅಧಿಕಾರಿಗಳಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.