ಮೊದಲ ಪತ್ನಿಯ ಅನುಮತಿ ಇಲ್ಲದೆ ಪತಿಯ ಎರಡನೇ ಮದುವೆಯನ್ನು ರಿಜಿಸ್ಟರ್ ಮಾಡುವಂತಿಲ್ಲ: ಕೇರಳ ಹೈಕೋರ್ಟ್

0
354

ಸನ್ಮಾರ್ಗ ವಾರ್ತೆ

ಮೊದಲ ಪತ್ನಿ ಜೀವಂತ ಇದ್ದೂ ಇನ್ನೊಂದು ಮದುವೆಯಾದ ಮುಸ್ಲಿಂ ವ್ಯಕ್ತಿ ಅದನ್ನು ರಿಜಿಸ್ಟ್ರೇಷನ್ ಮಾಡಬೇಕೆಂದಾದರೆ ಈ ಮದುವೆಗೆ ನಿನ್ನ ಒಪ್ಪಿಗೆ ಇದೆಯೇ ಇಲ್ಲವೇ ಎಂದು ಮೊದಲ ಪತ್ನಿಯಲ್ಲಿ ಕೇಳಬೇಕಾಗುತ್ತದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಇಂಥ ಸ್ಥಿತಿಯಲ್ಲಿ ಸಂವಿಧಾನಕ್ಕೆ ಪ್ರಾಧಾನ್ಯತೆ ಇದೆಯೇ ಹೊರತು ಧರ್ಮಕ್ಕೆ ಅಲ್ಲ ಎಂದು ನ್ಯಾಯಾಧೀಶರಾದ ಪಿವಿ ಕುನ್ನಿ ಕೃಷ್ಣನ್ ಹೇಳಿದ್ದಾರೆ.

ಮೊದಲ ಪತ್ನಿ ಜೀವಂತ ಇದ್ದೂ ಮತ್ತು ಆಕೆಯೊಂದಿಗೆ ಮದುವೆ ಸಂಬಂಧ ಊರ್ಜಿತ ಇದ್ದೂ ಮತ್ತು ಆಕೆಯ ಗಮನಕ್ಕೆ ತಾರದೆಯೇ ಇನ್ನೋರ್ವ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದನ್ನು ಪವಿತ್ರ ಕುರಾನ್ ಅಥವಾ ಇಸ್ಲಾಮಿ ಕಾನೂನು ಅನುಮತಿಸುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅವರು ಮುಸ್ಲಿಂ ವ್ಯಕ್ತಿ ಮತ್ತು ಆತನ ಎರಡನೇ ಪತ್ನಿ ತಮ್ಮ ಮದುವೆ ನೋಂದಣಿ ಮಾಡಿಕೊಳ್ಳುವಂತೆ, ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ಮೇಲೆ ವಿಚಾರಣೆ ನಡೆಸುತ್ತಾ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ.

ತನ್ನ ಮೊದಲ ಪತ್ನಿಯನ್ನು ಈ ಪ್ರಕರಣದಲ್ಲಿ ಕಕ್ಷಿಯಾಗಿ ಸ್ವೀಕರಿಸಬಾರದು ಎಂಬ ವ್ಯಕ್ತಿ ಯ ಮನವಿಯನ್ನು ಕೋರ್ಟು ತಿರಸ್ಕರಿಸಿದೆ.

ಇಸ್ಲಾಮಿ ಕಾನೂನಿನ ಪ್ರಕಾರ ಎರಡನೇ ಮದುವೆಗೆ ಅವಕಾಶ ಇದೆ. ಆದರೆ ವಿಶೇಷ ಪರಿಸ್ಥಿತಿಯಲ್ಲಿ ಮಾತ್ರ ಇಂತಹ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಯಾರಾದರೂ ಮೊದಲ ಪತ್ನಿ ಇದ್ದೂ ಇನ್ನೊಂದು ಮದುವೆಯನ್ನು ನೋಂದಣಿ ಮಾಡಲು ಹೊರಟರೆ, ಮೊದಲ ಪತ್ನಿಯ ಅಭಿಪ್ರಾಯವನ್ನು ಕೇಳಬೇಕಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿ ಇದ್ದೂ ಇನ್ನೊಂದು ಮದುವೆಯಾಗಿದ್ದ. ಮೊದಲ ಪತ್ನಿಯ ಅನುಮತಿಯ ಮೇರೆಗೆ ತಾನು ಈ ವಿವಾಹ ಆಗಿದ್ದೇನೆ ಎಂದು ಹೇಳಿದ್ದ. ಆದರೆ ಆತ ಎರಡನೇ ಮದುವೆಯನ್ನು ನೋಂದಣಿ ಮಾಡಲು ಹೊರಟಾಗ ಅಧಿಕಾರಿಗಳು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದ್ದು ಮೊದಲ ಪತ್ನಿಯನ್ನು ನೋಂದಣಿ ಅಧಿಕಾರಿಗಳು ಕರೆಸಿ ಆಕೆಯ ಅಭಿಪ್ರಾಯವನ್ನು ಕೇಳಬೇಕು. ಆಕೆ ಒಪ್ಪದಿದ್ದರೆ ಈ ಪ್ರಕರಣ ಸಿವಿಲ್ ನ್ಯಾಯಾಲಯಕ್ಕೆ ವಿಚಾರಣೆಗೆ ಒಳಗಾಗಬೇಕು ಎಂದು ಹೇಳಿದ್ದಾರೆ.