ಸನ್ಮಾರ್ಗ ವಾರ್ತೆ
ಸೌಹಾರ್ದದ ಸಿರಿಗನ್ನಡ ಎಂಬ ಹೆಸರಲ್ಲಿ ಕುವೈಟ್ ನ ಸಾಲ್ಮಿಯದಲ್ಲಿರುವ ICSK ಸೀನಿಯರ್ ಆಡಿಟೋರಿಯಂನಲ್ಲಿ ಕರ್ನಾಟಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (KMWA) ಕಾರ್ಯಕ್ರಮ ಆಯೋಜಿಸಿತು.
ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸನ್ಮಾರ್ಗ ಮಾಧ್ಯಮ ಸಂಸ್ಥೆಯ ಪ್ರಧಾನ ಸಂಪಾದಕ ಏ.ಕೆ.ಕುಕ್ಕಿಲ ಅವರು ಭಾಗವಹಿಸಿ ಸೌಹಾರ್ದ ಕನ್ನಡ ಮತ್ತು ಅದಕ್ಕಿರುವ ಸವಾಲುಗಳ ಹಿನ್ನೆಲೆಯಲ್ಲಿ ಪ್ರಧಾನ ಭಾಷಣ ಮಾಡಿದರು. ಕನ್ನಡ ನಾಡಿನಲ್ಲಿರುವ ಸೌಹಾರ್ದ, ಅದಕ್ಕೆ ಎದುರಾಗಿರುವ ಸವಾಲುಗಳು ಮತ್ತು ಅದನ್ನು ನಿಭಾಯಿಸಬಹುದಾದ ಪರಿಹಾರ ವಿಧಾನಗಳ ಬಗ್ಗೆ ಇವರು ಬೆಳಕು ಚೆಲ್ಲಿದರು.

ಕುವೈತ್ ಕನ್ನಡ ಕೂಟದ ಅಧ್ಯಕ್ಷ ತಾರೆಂದ್ರ ಶೆಟ್ಟಿಗಾರ್, ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಯೂಸುಫ್ ರಶೀದ್, ದಿ ಟೈಮ್ಸ್ ಕುವೈಟ್ ನ ಎಕ್ಸಿಕ್ಯೂಟಿವ್ ಮ್ಯಾನೇಜಿಂಗ್ ಎಡಿಟರ್ ರೀವನ್ ಡಿ ಸೋಜ, ಬಂಟಸಂಘ ಕುವೈಟ್ ಇದರ ಅಧ್ಯಕ್ಷ ನಕ್ರೆ ಸತೀಶ್ ಚಂದ್ರ ಶೆಟ್ಟಿ, ಫಾರಂ ಆಫ್ ಇಂಡಿಯನ್ ಡಾಕ್ಟರ್ಸ್ ಕುವೈಟ್ ಇದರ ಮಾಜಿ ಅಧ್ಯಕ್ಷ ಡಾ. ದಿವಾಕರ್ ಚೆಲುವಯ್ಯ, ಕುವೈಟ್ ಜಿ ಎಸ್ ಬಿ ಸಭಾದ ಅಧ್ಯಕ್ಷ ಡಾ. ಸುರೇಂದ್ರ ನಾಯಕ್.. ಮುಂತಾದವರು ಕನ್ನಡ ನಾಡು ನುಡಿಗಳ ಮೇಲೆ ಬೆಳಕು ಚೆಲ್ಲಿದರು. ಕನ್ನಡ ನಾಡಿನ ಹಿರಿಮೆಯನ್ನು ಕೊಂಡಾಡಿದರು ಮತ್ತು ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಕರ್ನಾಟಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನ ಇತಿಹಾಸ, ಅದರ ಕೆಲಸ ಕಾರ್ಯಗಳು ಮತ್ತು ಸಮಾಜ ಸೇವಾ ಕೆಲಸಗಳ ಬಗ್ಗೆ ಇರ್ಶಾದ್ ಕುದ್ರೋಳಿಯವರು ಸಭೆಗೆ ಮಾಹಿತಿ ನೀಡಿದರು. ಫಹೀಮ್ ಶರೀಫ್ ಅವರು ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಜಮೀಲ್ ಅಹ್ಮದ್ ಅವರು ಧನ್ಯವಾದ ಅರ್ಪಿಸಿದರು.
ಮೊಹಮ್ಮದ್ ರಮೀಝ್, ಫಹೀಮ್ ಶರೀಫ್, ಅತೀಖ್ ಬಯಝೀದ್, ಜಾಫರ್ ಸಾದಿಕ್, ಅಹಮದ್ ಅಲಿ, ಅಬ್ದುಲ್ ನಸೀರ್ ಖಾನ್, ವಸಿಂ, ಫಹೀಮ್ ಪಟೇಲ್, ಇಮಾಮ್ ಬಕ್ಶ್, ತನ್ವೀರ್ ಮುಂತಾದವರು ಕಾರ್ಯಕ್ರಮ ಆಯೋಜಿಸುವುದಕ್ಕೆ ಮತ್ತು ವಿವಿಧ ಚಟುವಟಿಕೆಗಳನ್ನು ಜವಾಬ್ದಾರಿಗಳನ್ನು ಹೊತ್ತುಕೊಂಡು ಕಾರ್ಯನಿರ್ವಹಿಸಿರುವುದಕ್ಕೆ ಜಮೀಲ್ ಅಹ್ಮದ್ ಅವರು ವಿಶೇಷ ಧನ್ಯವಾದ ಸಲ್ಲಿಸಿದರು.
ಇಂಡಿಯನ್ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಉಮರ್ ಫಲಾಯಿ ಅವರ ಸಹಕಾರವನ್ನು ಈ ಸಂದರ್ಭದಲ್ಲಿ ಜಮೀಲ್ ಅಹ್ಮದ್ ಅವರು ಸ್ಮರಿಸಿದರಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಕುವೈತ್ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅತೀಕ್ ಬಯಝೀದ್ ಅವರು ಕ್ವಿಝ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆರಂಭದಲ್ಲಿ ಬೇಬಿ ಝಹ್ರಾ ಕುರ್ಆನ್ ಪಠಿಸಿದರು.


















