ಸನ್ಮಾರ್ಗ ವಾರ್ತೆ
ಬಿಹಾರದಲ್ಲಿ ಗುಂಪು ಥಳಿತದಿಂದ ಹತ್ಯೆಗೀಡಾದ ಬಟ್ಟೆ ವ್ಯಾಪಾರಿ ಅಥರ್ ಹುಸೇನ್ ಗೆ ಪರಿಹಾರ ನೀಡುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹಿಸಿದೆ. ರಾಜ್ಯ ಸರಕಾರದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಈ ಹತ್ಯೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಬಿಹಾರ ಘಟಕ ಅಧ್ಯಕ್ಷ ಮೌಲಾನಾ ರಿಜ್ವಾನ್ ಅಹಮದ್ ಇಸ್ಲಾಹಿ ಹೇಳಿದ್ದಾರೆ.
ಈ ಕೃತ್ಯದ ತನಿಖೆಯನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಅಪರಾಧಿಗಳಿಗೆ ಶೀಘ್ರ ಶಿಕ್ಷೆಯಾಗುವಂತೆ ನೋಡಿಕೊಂಡು ಉಳಿದವರಿಗೆ ಕಠಿಣ ಸಂದೇಶ ರವಾನೆ ಆಗಬೇಕು. ಅಥರ್ ಹುಸೇನ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ತನ್ನ ಬೈಸಿಕಲ್ ನಲ್ಲಿ ಬಟ್ಟೆ ಮಾರುತ್ತಿದ್ದ ಅವರು ಕುಟುಂಬದ ಏಕೈಕ ಜೀವನಧಾರ ಆಗಿದ್ದರು ಎಂದು ಮೌಲಾನ ಹೇಳಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಬಿಹಾರದ ಅಲ್ಪಸಂಖ್ಯಾತ ಆಯೋಗಕ್ಕೆ ಮೌಲಾನ ಮನವಿ ಮಾಡಿದ್ದಾರೆ.
ತನ್ನ ಗಂಡ ಗ್ರಾಮಗಳಿಗೆ ತೆರಳಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಇದು ದಶಕಗಳಿಂದ ನಡೆಯುತ್ತಿದೆ ಎಂದು ಅವರ ಪತ್ನಿ ಹೇಳಿದ್ದಾರೆ. ಅವರ ಹೇಳಿಕೆಯಂತೆ ಎಫ್ಐಆರ್ ದಾಖಲಾಗಿದೆ.
ಪೊಲೀಸರು ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬಿಹಾರದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.












