ಗಾಝಾಕ್ಕೆ ಒಂದು ಕೋಟಿ ಆಹಾರ ಪೊಟ್ಟಣವನ್ನು ಕಳುಹಿಸಿಕೊಟ್ಟ ಯುಎಇ

0
373

ಸನ್ಮಾರ್ಗ ವಾರ್ತೆ

ಒಂದು ಕಡೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಗಾಝಾದ ಮೇಲೆ ಇಸ್ರೇಲ್ ದಾಳಿ ನಡೆಸುತ್ತಲೇ ಇರುವಾಗ ಇನ್ನೊಂದು ಕಡೆ ಗಾಝಾದ ಜನರಿಗೆ ಆಹಾರವನ್ನು ಕಳುಹಿಸಿಕೊಡುವ ಮಾನವೀಯ ಕ್ರಮಗಳೂ ನಡೆಯುತ್ತಲೇ ಇವೆ. ಸೌದಿ ಅರೇಬಿಯಾ ಕತಾರ್ ಕುವೈಟ್ ಯುಎಇ ಮುಂತಾದ ರಾಷ್ಟ್ರಗಳು ಯಾವ ಅದ್ದೂರಿ ಪ್ರಚಾರವೂ ಇಲ್ಲದೆ ತಮ್ಮ ಪಾಡಿಗೆ ತಾವು ಗಾಝಾದ ಜನರಿಗೆ ನೆರವಾಗುತ್ತಲೂ ಇವೆ.

ಇಂಥದ್ದೊಂದು ಮಾಹಿತಿ ಇದೀಗ ಯುಎಇಯಿಂದ ಬಂದಿದೆ. ಒಂದು ಕೋಟಿ ಆಹಾರ ಪೊಟ್ಟಣಗಳೊಂದಿಗೆ ಯುಎಇ ಹಡಗು ಇದೀಗ ಗಾಝಾಕ್ಕೆ ಹೊರಟಿದೆ. ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರರೂ ಆಗಿರುವ ಶೈಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ ತೂಮ್ ಅವರ ಹೆಸರಲ್ಲಿ ಈ ಹಡಗು ಗುರುತಿಸಿಕೊಂಡಿದೆ.

ಕಳೆದ ವಾರ ಅಬುದಾಬಿಯಿಂದ ಹೊರಟ ಈ ಹಡಗಿನಲ್ಲಿ 7300 ಟನ್ ಆಹಾರ ವಸ್ತುಗಳಿವೆ. ಇದರಲ್ಲಿ 65 ಶೇಕಡ ಕೂಡ ಪರಿಹಾರ ಸಾಮಗ್ರಿಗಳಾಗಿವೆ. ಗಾಝಾದಲ್ಲಿ ಈಗ ತೀವ್ರ ಚಳಿಯ ವಾತಾವರಣವಿದ್ದು ಅದನ್ನು ತಡೆಯುವ ವಸ್ತ್ರಗಳು 27 ಶೇಕಡ ಇವೆ. ಎಂಟು ಶೇಕಡ ವಸ್ತುಗಳು ಮಹಿಳೆಯರು ಮತ್ತು ಮಕ್ಕಳಿಗೆ ಸೇರಿದ್ದಾಗಿದೆ.

ಅಬುದಾಬಿಯಿಂದ ಹೊರಟ ಈ ಹಡಗು ಎರಡು ವಾರಗಳಲ್ಲಿ ಈಜಿಪ್ಟಿನ ಆರಿಷ್ ಬಂದರ್ ಗೆ ತಲುಪಲಿದೆ ಆರೀಶ್ ಬಂದರ್ ನಲ್ಲಿ ಯುಏಇಗೆ ಸಂಬಂಧಿಸಿದ ಗೋಡೌನ್ ಇದ್ದು ಹಡಗಿನಿಂದ ವಸ್ತುಗಳನ್ನು ಈ ಗೋಡೌನ್ಗೆ ಸ್ಥಳಾಂತರಿಸಲಾಗುವುದು.

ಇಲ್ಲಿಂದ ಕಂಟೇನರ್ ಲಾರಿಗಳ ಮೂಲಕ ಗಾಜಾಕ್ಕೆ ತಲುಪಿಸಲಾಗುವುದು. ಸರಕಾರದ ಈ ನೆರವು ಯೋಜನೆಗೆ ಸಮಾಜ ಸೇವಾ ಸಂಘಟನೆಗಳು ಕೂಡ ಕೈಜೋಡಿಸಿದ್ದವು. ಇದರ ಮೂಲಕ ಈ ಬಾರಿ ಪ್ರಮಾಣದಲ್ಲಿ ಆಹಾರ ವಸ್ತುಗಳನ್ನು ಸಂಗ್ರಹಿಸಲಾಗಿದೆ.

ಗಾಝಾದಲ್ಲಿ ಕದನ ವಿರಾಮ ಒಪ್ಪಂದ ಚಾಲ್ತಿಯಲ್ಲಿದ್ದರೂ ಇಸ್ರೇಲ್ ದಾಳಿ ನಿಲ್ಲಿಸದೆ ಇರುವುದರಿಂದ ಜನರ ಬದುಕು ಕಷ್ಟಕರವಾಗಿದೆ. ಶಾಲೆಗಳು ಕುಸಿದು ಬಿದ್ದಿವೆ. ಆಸ್ಪತ್ರೆಗಳು ಧ್ವಂಸವಾಗಿವೆ. ಮನೆಗಳು ಕುಸಿದು ಹೋಗಿವೆ . ಅಲ್ಲದೆ ಗಾಝಾದಲ್ಲಿ ಈಗ ತೀವ್ರ ಪ್ರಮಾಣದ ಚಳಿ ವಾತಾವರಣವಿದೆ. ಚಳಿಯನ್ನು ತಡೆದುಕೊಳ್ಳುವುದಕ್ಕೆ ಜನರಲ್ಲಿ ಪೂರಕ ವಸ್ತುಗಳಿಲ್ಲ. ಆಹಾರ ಧಾನ್ಯಗಳ ತೀವ್ರ ಕೊರತೆ ಇದೆ. ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಅರಬ್ ರಾಷ್ಟ್ರಗಳು ಈ ಹಿನ್ನೆಲೆಯಲ್ಲಿ ಸಕ್ರಿಯವಾಗಿದ್ದು ಭಾರಿ ಪ್ರಮಾಣದಲ್ಲಿ ನೆರವನ್ನು ಕಳುಹಿಸಿಕೊಡುತ್ತಲೂ ಇವೆ.