ಕೋಲ್ಕತ್ತಾಕ್ಕೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಭೇಟಿ: ಪ್ರತಿಭಟನಾಕಾರರಿಂದ ಕಪ್ಪು ಬಾವುಟ ಪ್ರದರ್ಶನ

0
269

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮನೋಜ್ ಅಗರ್ವಾಲ್ ಅವರೊಂದಿಗೆ ಸೋಮವಾರ ಕೋಲ್ಕತ್ತಾದ ಕಾಳೀಘಾಟ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಭೇಟಿಯನ್ನು ವಿರೋಧಿಸಿ ದೇವಸ್ಥಾನದ ಹೊರಗೆ ಹಲವಾರು ಜನರು ಜಮಾಯಿಸಿದ್ದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ದೇವಾಲಯದ ಆವರಣಕ್ಕೆ ತಲುಪುತ್ತಿದ್ದಂತೆ, ಪ್ರತಿಭಟನಾಕಾರರು ಕಪ್ಪು ಬಾವುಟಗಳನ್ನು ಬೀಸುತ್ತಾ ಘೋಷಣೆಗಳನ್ನು ಕೂಗುವುದಕ್ಕೆ ಶುರು ಮಾಡಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, “ಪಶ್ಚಿಮ ಬಂಗಾಳದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳು. ಕಾಳಿ ಮಾತೆಯು ಎಲ್ಲರಿಗೂ ಆಶೀರ್ವದಿಸಲಿ. ಜೈ ಭಾರತ್, ಜೈ ಹಿಂದ್,” ಎಂದು ಹೇಳಿದರು.

ಮತ್ತೊಂದೆಡೆ, ಪಶ್ಚಿಮ ಬಂಗಾಳದ ವಿಶೇಷ ಮತದಾರರ ಪಟ್ಟಿ ವೀಕ್ಷಕ ಸುಬ್ರತಾ ಗುಪ್ತಾ ಸುದ್ದಿಗಾರರೊಂದಿಗೆ ಮಾತನಾಡಿ, “ಚುನಾವಣೆಗಳು ಶಾಂತಿಯುತವಾಗಿ ನಡೆಯಲಿ ಎಂದು ನಾವು ಪ್ರಾರ್ಥಿಸಿದ್ದೇವೆ,” ಎಂದರು. ಮುಖ್ಯ ಚುನಾವಣಾ ಆಯುಕ್ತರಿಗೆ ತೋರಿಸಲಾದ ಕಪ್ಪು ಬಾವುಟ ಮತ್ತು ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ,” ಎಂದು ಹೇಳಿದರು.

ಈ ಮಧ್ಯೆ, ಭಾನುವಾರ ಪಶ್ಚಿಮ ಬಂಗಾಳದ ನಿವಾಸಿಗಳು ನ್ಯೂ ಟೌನ್‌ನ ಖಾಸಗಿ ಹೋಟೆಲ್ ಒಂದರ ಮುಂದೆ ಜಮಾಯಿಸಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಂದಿಗೆ ಚುನಾವಣಾ ಆಯುಕ್ತರಾದ ಎಸ್.ಎಸ್. ಸಂಧು, ವಿವೇಕ್ ಜೋಶಿ ಮತ್ತು ಹಿರಿಯ ಉಪ ಚುನಾವಣಾ ಆಯುಕ್ತರಾದ ಮನೀಶ್ ಗರ್ಗ್ ಹಾಗೂ ಪವನ್ ಕುಮಾರ್ ಅವರು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಸ್ಥಳೀಯರು ‘ಪ್ರಜಾಪ್ರಭುತ್ವದ ಹಂತಕ ಜ್ಞಾನೇಶ್ ಕುಮಾರ್ ಅವರೇ ಹಿಂತಿರುಗಿ’ ಎಂದು ಬರೆದ ಪೋಸ್ಟರ್‌ಗಳನ್ನು ಎದೆಗೆ ಅಂಟಿಸಿಕೊಂಡು ಪ್ರತಿಭಟನೆ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಮುಖ್ಯ ಚುನಾವಣಾ ಆಯುಕ್ತರು ಮಾರ್ಚ್ 8 ರಿಂದ ಮಾರ್ಚ್ 10 ರವರೆಗೆ ಮೂರು ದಿನಗಳ ಭೇಟಿಗಾಗಿ ಕೋಲ್ಕತ್ತಾ ತಲುಪಿದ್ದಾರೆ. ಕೋಲ್ಕತ್ತಾ ವಿಮಾನ ನಿಲ್ದಾಣದ ಹೊರಗೆ ಸ್ಥಳೀಯರು ಪ್ರತಿಭಟನೆ ಸಂಘಟಿಸಿ ಮುಖ್ಯ ಚುನಾವಣಾ ಆಯುಕ್ತರ ಬೆಂಗಾವಲು ವಾಹನಕ್ಕೆ ಕಪ್ಪು ಬಾವುಟ ಪ್ರದರ್ಶಿಸಿದರು.