ಒಂದು ತಿಂಗಳ ಕದನ ವಿರಾಮಕ್ಕಾಗಿ ಇರಾನ್‌ಗೆ ಅಮೆರಿಕದಿಂದ 15 ಅಂಶಗಳ ಮಾಸ್ಟರ್ ಪ್ಲಾನ್ ಪ್ರಸ್ತಾವನೆ

0
589

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ತಿಂಗಳ ಕಾಲದ ಕದನ ವಿರಾಮದ ಹೊಸ ಕ್ರಮವನ್ನು ಪ್ರಸ್ತಾಪಿಸಿದ್ದಾರೆ. ಇರಾನ್‌ನ ಪರಮಾಣು ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಕೈಬಿಡುವುದು ಸೇರಿದಂತೆ ಕಠಿಣ ಷರತ್ತುಗಳನ್ನು ಟ್ರಂಪ್ ಮುಂದಿಟ್ಟಿದ್ದಾರೆ. ಆದಾಗ್ಯೂ, ಟೆಹ್ರಾನ್ ಟ್ರಂಪ್ ಅವರ ಈ ‘ಮಾಸ್ಟರ್ ಪ್ಲಾನ್’ ಅನ್ನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಅಂತರಾಷ್ಟ್ರೀಯ ರಾಜಕೀಯ ವೀಕ್ಷಕರು ನಂಬಿದ್ದಾರೆ.

ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿಯನ್ನು ಸ್ಥಗಿತಗೊಳಿಸುವುದು, ಪರಮಾಣು ಕೇಂದ್ರಗಳ ಅಂತರಾಷ್ಟ್ರೀಯ ತಪಾಸಣೆಗೆ ಅವಕಾಶ ನೀಡುವುದು ಮತ್ತು ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸಂಚಾರದ ಸ್ವಾತಂತ್ರ್ಯವನ್ನು ಖಚಿತಪಡಿಸುವುದು ಮುಂತಾದ ನಿರ್ಣಾಯಕ ವಿಷಯಗಳು ಈ ಯೋಜನೆಯಲ್ಲಿ ಸೇರಿವೆ. ಇರಾನ್ ಈ ಷರತ್ತುಗಳನ್ನು ಒಪ್ಪಿಕೊಂಡರೆ ಪ್ರಸ್ತುತ ಇರುವ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ಆದರೆ, 2018 ರಲ್ಲಿ ಯುನೈಟೆಡ್ ಸ್ಟೇಟ್ಸ್ ಏಕಪಕ್ಷೀಯವಾಗಿ ಹಿಂತೆಗೆದುಕೊಂಡ ಪರಮಾಣು ಒಪ್ಪಂದಕ್ಕಿಂತ ಪ್ರಸ್ತುತ ಷರತ್ತುಗಳು ಹೆಚ್ಚು ಕಠಿಣವಾಗಿವೆ ಎಂದು ಬೆಟ್ಟು ಮಾಡಲಾಗಿದೆ.

ಇರಾನ್ ಇಸ್ರೇಲ್‌ನೊಂದಿಗೆ ನೇರ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವುದರಿಂದ, ಇಂತಹ ಒಪ್ಪಂದವು ಇರಾನ್‌ನ ಸಾರ್ವಭೌಮತ್ವದ ಮೇಲಿನ ಅತಿಕ್ರಮಣ ಎಂದು ಟೆಹ್ರಾನ್ ಪ್ರತಿಕ್ರಿಯಿಸಬಹುದು. ಟ್ರಂಪ್ ಅವರ ಹಿಂದಿನ ನಿಲುವುಗಳನ್ನು ಗಮನಿಸಿದರೆ, ಈ ಯೋಜನೆಯು ಶಾಂತಿಗಿಂತ ಹೆಚ್ಚಾಗಿ ಇರಾನ್ ಅನ್ನು ವಿಶ್ವದ ಮುಂದೆ ಅಪರಾಧಿಯನ್ನಾಗಿ ಬಿಂಬಿಸುವ ಕ್ರಮವಾಗಿದೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

ಅಮೆರಿಕದ ಈ ಕ್ರಮವು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಹಾರ್ಮುಝ್ ಜಲಸಂಧಿಯ ನಿಯಂತ್ರಣದ ಮೇಲಿನ ವಿವಾದವು ತೀವ್ರಗೊಂಡರೆ, ಇಂಧನ ಬೆಲೆಗಳು ಗಗನಕ್ಕೇರಬಹುದು. ಮಿತ್ರರಾಷ್ಟ್ರಗಳಾದ ಯುರೋಪಿಯನ್ ರಾಷ್ಟ್ರಗಳು ಮತ್ತು ಗಲ್ಫ್ ರಾಷ್ಟ್ರಗಳು ಟ್ರಂಪ್ ಅವರ ಕ್ರಮವನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದಾಗಿ ವರದಿಯಾಗಿದೆ.