ಮಾಲೆಗಾಂವ್ ಮಸೀದಿಯಲ್ಲಿ ಬಾಂಬ್ ಸ್ಫೋಟಿಸಿದವರು ಯಾರು?

0
243

ಸನ್ಮಾರ್ಗ ಸಂಪಾದಕೀಯ

2006 ಮತ್ತು 2008- ಈ ಎರಡೂ ಇಸವಿಗಳು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನ ನಾಗರಿಕರ ಪಾಲಿಗೆ ಮಾತ್ರ ಮುಖ್ಯ ಅಲ್ಲ, ನ್ಯಾಯವನ್ನು ಅಪೇಕ್ಷಿಸುವ ಸರ್ವ ಭಾರತೀಯರ ಪಾಲಿಗೂ ಅಷ್ಟೇ ಮಹತ್ವಪೂರ್ಣ.

2008 ಸೆ. 29ರಂದು ಮಾಲೆಗಾಂವ್‌ನ ಬಿಕುಚೌಕ್‌ನ ಮಸೀದಿ ಬಳಿ ಬಾಂಬ್ ಸ್ಫೋಟವಾಯಿತು. 6 ಮಂದಿ ಸಾವಿಗೀಡಾಗಿ 100ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡರು. ಅದು ರಮಝಾನ್ ಉಪವಾಸದ ತಿಂಗಳು. ಇದಕ್ಕಿಂತ ಎರಡು ವರ್ಷಗಳ ಮೊದಲು ಇದೇ ಮಾಲೆಗಾಂವ್‌ನ ಹಮೀದಿಯಾ ಮಸೀದಿ ಮತ್ತು ಕಬರಸ್ತಾನದಲ್ಲಿ ಬಾಂಬ್ ಸ್ಫೋಟಿಸಿತ್ತು. ಶುಕ್ರವಾರದ ನಮಾಝï ಮುಗಿದು ಹೊರಬರುವ ಸಮಯದಲ್ಲಿ ಈ ಬಾಂಬ್ ಸ್ಫೋಟಿಸಿತ್ತು. ಅಲ್ಲದೇ ಅದು ಮುಸ್ಲಿಮರ ಪಾಲಿಗೆ ಮಹತ್ವವಾಗಿರುವ ಶಬೇ ಬರಾಅತ್ ದಿನವೂ ಆಗಿತ್ತು. ಇದರಲ್ಲಿ 37 ಮಂದಿ ಸಾವಿಗೀಡಾಗಿ 100ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡರು. ತನಿಖೆ ಕೈಗೆತ್ತಿಕೊಂಡ ಸ್ಥಳೀಯ ಪೊಲೀಸರು ಮುಸ್ಲಿಮರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು. ಸಿಮಿಯ ಕೈವಾಡ ಇದೆ ಎಂದರು. 9 ಮಂದಿ ಮುಸ್ಲಿಮ್ ಯುವಕರನ್ನು ಬಂಧಿಸಿದರು.

ಇದಾಗಿ ಎರಡು ವರ್ಷಗಳ ಬಳಿಕ ಇದೇ ಮಾಲೆಗಾಂವ್‌ನ ಬಿಕುಚೌಕ್‌ನ ಮಸೀದಿ ಬಳಿ ಬಾಂಬ್ ಸ್ಫೋಟವಾಯಿತು. ತನಿಖೆಯನ್ನು ಕೈಗೆತ್ತಿಕೊಂಡ ಮಹಾರಾಷ್ಟ್ರ ಎಟಿಎಸ್, ಬೈಕ್‌ನಲ್ಲಿ ಬಾಂಬ್ ಇರಿಸಿರುವುದನ್ನು ಪತ್ತೆ ಹಚ್ಚಿತು ಮತ್ತು ಆ ಬೈಕ್ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಸೇರಿರುವುದನ್ನು ಕಂಡುಕೊಂಡಿತು. 2008 ಅಕ್ಟೋಬರ್ 23ರಂದು ಅವರನ್ನು ಬಂಧಿಸಿತು. ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪದಲ್ಲಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್‌ರನ್ನು ಬಂಧಿಸಿತು. ಹೀಗೆ ಬಂಧನ ಮುಂದುವರಿಯುತ್ತಾ ಹೋಯಿತು ಮತ್ತು 14 ಮಂದಿಯ ಮೇಲೆ ಮೋಕಾ, ಯುಎಪಿಎ ಇತ್ಯಾದಿ ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಯಿತು.

ಇದಕ್ಕಿಂತ ಮೊದಲು 2007 ಮೇ 18ರಂದು ಹೈದರಾಬಾದ್‌ನ ಮಕ್ಕಾ ಮಸೀದಿಯಲ್ಲೂ ಬಾಂಬ್ ಸ್ಫೋಟಿಸಿತ್ತು. ಅದೂ ಶುಕ್ರವಾರದ ಜುಮಾ ನಮಾಝ್‌ನ ಸಮಯದಲ್ಲಾಗಿತ್ತು. ಅಂಗಸ್ನಾನ ಮಾಡುವ ಸ್ಥಳದ ಸಮೀಪದಲ್ಲಿ ಬಾಂಬ್ ಇಡಲಾಗಿತ್ತು. ಸ್ಫೋಟದ ಸಮಯದಲ್ಲಿ 10 ಸಾವಿರದಷ್ಟು ಜನರು ಮಸೀದಿಯಲ್ಲಿ ಪ್ರಾರ್ಥನಾ ನಿರತರಾಗಿದ್ದರು. ಸುಮಾರು 16 ಮಂದಿ ಸಾವಿಗೀಡಾಗಿ 90ರಷ್ಟು ಮಂದಿ ಗಾಯಗೊಂಡರು. ಈ ಸ್ಫೋಟದ ಹಿಂದೆ ಹರ್ಕತುಲ್ ಜಿಹಾದಿ ಇಸ್ಲಾಮೀ ಎಂಬ ತೀವ್ರವಾದಿ ಗುಂಪು ಭಾಗಿಯಾಗಿದೆ ಎಂದು ಹೇಳಿದ ಹೈದರಾಬಾದ್‌ನ ಪೊಲೀಸರು, ಸುಮಾರು 40ರಷ್ಟು ಮುಸ್ಲಿಮ್ ಯುವಕರನ್ನು ಬಂಧಿಸಿದರು. ಅವರನ್ನು ತೀವ್ರವಾಗಿ ಹಿಂಸಿಸಲಾಯಿತು. ಈ ನಡುವೆ 2010 ನವೆಂಬರ್‌ನಲ್ಲಿ ಹರಿದ್ವಾರದ ಆಶ್ರಮದಿಂದ ಅಸೀಮಾನಾಂದರನ್ನು ಸಿಬಿಐ ಬಂಧಿಸಿತು. ಪ್ರಕರಣ ಇನ್ನೊಂದು ತಿರುವನ್ನು ಪಡಕೊಂಡದ್ದೇ ಆ ಬಳಿಕ.

2010 ಡಿಸೆಂಬರ್ ಮತ್ತು 2011 ಜನವರಿಯಲ್ಲಿ ಮ್ಯಾಜಿಸ್ಟ್ರೇಟ್‌ ಮುಂದೆ ಅಸೀಮಾನಂದ ಅಪರಾಧ ಕೃತ್ಯಗಳನ್ನು ಒಪ್ಪಿಕೊಂಡು ಸುದ್ದಿಗೀಡಾದರು. 2006 ಮತ್ತು 2008ರ ಮಾಲೆಗಾಂವ್ ಮಸೀದಿ ಸ್ಫೋಟ, 2007ರಲ್ಲಿ ನಡೆದ ಅಜ್ಮೀರ್ ದರ್ಗಾ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಮತ್ತು ಮಕ್ಕಾ ಮಸೀದಿ ಸ್ಫೋಟಗಳಲ್ಲಿ ಭಾಗಿಯಾಗಿರುವ ಬಗ್ಗೆ ಹೇಳಿಕೊಂಡರು. ಆ ಬಳಿಕ ತಪ್ಪೊಪ್ಪಿಗೆಯಿಂದ ಹಿಂದೆ ಸರಿದರು. ಆದರೆ, ಈ ಎಲ್ಲ ಬಾಂಬ್ ಸ್ಫೋಟಗಳ ಸ್ವರೂಪವನ್ನು ನೋಡಿದರೆ, ಆ ತಪ್ಪೊಪ್ಪಿಗೆಯಲ್ಲಿ ಸತ್ಯಾಂಶ ಇದೆ ಅನ್ನುವುದನ್ನು ಸ್ಪಷ್ಟಪಡಿಸುತ್ತಿತ್ತು. ಕೊನೆಗೆ ಬಂಧಿತ ಮುಸ್ಲಿಮ್ ಯುವಕರನ್ನು ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿತಲ್ಲದೇ, ವಿನಾ ಕಾರಣ ಅವರ ಬದುಕನ್ನು ದುರಂತಕ್ಕೆ ದೂಡಿದ್ದಕ್ಕೆ ಪಶ್ಚಾತ್ತಾಪ ರೂಪದಲ್ಲಿ ಸರಕಾರ ಪರಿಹಾರವನ್ನು ನೀಡಿತು. ಆದರೆ,

2018ರಲ್ಲಿ ಹೈದರಾಬಾದ್‌ನ ವಿಶೇಷ ನ್ಯಾಯಾಲಯ ಬಂಧಿತ ಅಸೀಮಾನಂದ, ದೇವೇಂದ್ರ ಗುಪ್ತಾ ಸೇರಿ ಎಲ್ಲ ಆರೋಪಿಗಳನ್ನು ಪ್ರಕರಣದಿಂದ ಮುಕ್ತಗೊಳಿಸಿತು. ಇದರ ಬಳಿಕ 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟದ ತೀರ್ಪು ಬಂತು. 2025 ಜುಲೈ 31ರಂದು ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಎ.ಕೆ. ಲಾಹೋಟಿ ಅವರು ಸಾಧ್ವಿ ಪ್ರಜ್ಞಾ ಸಹಿತ ಎಲ್ಲ 7 ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿದರು. ಈ ಪ್ರಕರಣದಲ್ಲಿ 37 ಸಾಕ್ಷಿಗಳು ತಾವು ಈ ಮೊದಲು ನೀಡಿದ್ದ ಹೇಳಿಕೆಗಿಂತ ಭಿನ್ನ ಹೇಳಿಕೆ ನೀಡುವ ಮೂಲಕ ಇವರ ಬಿಡುಗಡೆಗೆ ನೆರವಾಗಿದ್ದರು. ಇದೀಗ 2006ರ ಮಾಲೆಗಾಂವ್ ಹಮೀದಿಯಾ ಮಸೀದಿ ಬಾಂಬ್ ಸ್ಫೋಟದ ತೀರ್ಪು ಬಂದಿದೆ.

ಮಹಾರಾಷ್ಟ್ರ ಎಟಿಎಸ್, ಸಿಬಿಐ ಮತ್ತು ಎನ್‌ಐಎ ಎಂಬ ಮೂರು ಪ್ರಮುಖ ತನಿಖಾ ಸಂಸ್ಥೆಗಳ ವಿಚಾರಣೆಗೆ ಒಳಪಟ್ಟ ಈ ಪ್ರಕರಣವು ಇದೀಗ ಬಿದ್ದು ಹೋಗಿದೆ. ಆರಂಭದಲ್ಲಿ ಮುಸ್ಲಿಮ್ ಯುವಕರನ್ನು ಬಂಧಿಸಿದ್ದ ತನಿಖಾ ಸಂಸ್ಥೆಗಳಿಗೆ ನಿಧಾನಕ್ಕೆ ಇವರಿಗೂ ಸ್ಫೋಟಕ್ಕೂ ಸಂಬಂಧ ಇಲ್ಲ ಅನ್ನುವುದು ಗೊತ್ತಾಗಿತ್ತು. ಮುಖ್ಯವಾಗಿ 2011ರಲ್ಲಿ ಅಸೀಮಾನಂದ ಬಂಧನ ಮತ್ತು 2008ರಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್, ಪುರೋಹಿತ್ ಬಂಧನಗಳೊಂದಿಗೆ ಇದು ಮತ್ತಷ್ಟು ಸ್ಪಷ್ಟತೆಯನ್ನು ಪಡೆದಿತ್ತು. ಆದ್ದರಿಂದಲೇ 2011ರಲ್ಲಿ ಬಂಧಿತ ಮುಸ್ಲಿಮ್ ಯುವಕರಿಗೆ ಜಾಮೀನು ನೀಡಲಾಯಿತು ಮತ್ತು 2016ರಲ್ಲಿ ಅವರನ್ನು ದೋಷಮುಕ್ತಗೊಳಿಸಲಾಯಿತು. ಆದರೆ, ಈ ನಡುವೆ ಆರು ವರ್ಷಗಳನ್ನು ಅವರು ಜೈಲಲ್ಲಿ ಕಳೆದಿದ್ದರು. 2013ರಲ್ಲಿ ಎನ್‌ಐಎ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಮನೋಹರ್ ನರ್ವಾರಿಯಾ, ರಾಜೇಂದ್ರ ಚೌಧರಿ, ಧನ್‌ಸಿಂಗ್ ಮತ್ತು ಲೋಕೇಶ್ ಶರ್ಮಾ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.

ಸುನೀಲ್ ಜೋಷಿ ಮುಖ್ಯ ಸೂತ್ರಧಾರನಾಗಿದ್ದ. ಈತ ಇನ್ನಿತರ ಬಾಂಬ್ ಸ್ಫೋಟಗಳಲ್ಲೂ ಬೇಕಾದವನಾಗಿದ್ದ. ಆದರೆ, ಈತ 2007ರಲ್ಲಿ ನಿಗೂಢವಾಗಿ ಸಾವನ್ನಪ್ಪಿರುವುದಾಗಿ ತನಿಖಾ ಸಂಸ್ಥೆಗಳು ಕಂಡುಕೊಂಡಿದ್ದುವು. ಬಂಧಿತ ಈ ನಾಲ್ಕು ಮಂದಿ ಆರೋಪಿಗಳು 6 ವರ್ಷಗಳ ಕಾಲ ಜಾಮೀನಿಲ್ಲದೇ ಜೈಲಲ್ಲಿ ಕಳೆದರು. 2019ರಲ್ಲಿ ಇವರಿಗೆ ಜಾಮೀನು ಸಿಕ್ಕಿತು. ಇದೀಗ ಬಾಂಬೆ ಹೈಕೋರ್ಟ್ ಈ ನಾಲ್ವರನ್ನು ದೋಷಮುಕ್ತ ಗೊಳಿಸಿದೆ. ಈ ಮೂಲಕ 37 ಮಂದಿಯ ಸಾವಿಗೆ ಮತ್ತು 100ಕ್ಕಿಂತಲೂ ಅಧಿಕ ಮಂದಿ ಗಾಯಗೊಳ್ಳುವುದಕ್ಕೆ ಕಾರಣವಾಗಿದ್ದ ಭಯೋತ್ಪಾದನಾ ಕೃತ್ಯವೊಂದು ಸಾಕ್ಷ್ಯಾಧಾರಗಳಿಲ್ಲದೇ ಮುಚ್ಚಿ ಹೋಗಿದೆ. ನಿಜವಾಗಿ,

ಇಫ್ತಾರ್‌ನ ಸಮಯದಲ್ಲಿ ಅಜ್ಮೀರ್ ದರ್ಗಾದ ಪ್ರಾಂಗಣದಲ್ಲಿ 2007ರಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬAಧಿಸಿ ದೇವೇಂದ್ರ ಗುಪ್ತ ಮತ್ತು ಭವೇಶ್ ಪಟೇಲ್ ಎಂಬವರಿಗೆ ಎನ್‌ಐಎ ನ್ಯಾಯಾಲಯವು 2017ರಲ್ಲಿ ಜೀವಾವಧಿ ಶಿಕ್ಷೆ ನೀಡಿರುವುದನ್ನು ಬಿಟ್ಟರೆ, ಉಳಿದಂತೆ ಮಾಲೆಗಾಂವ್‌ನ ಎರಡು ಮಸೀದಿಗಳಲ್ಲಿ ನಡೆದ ಬಾಂಬ್ ಸ್ಫೋಟಗಳು, 2007ರಲ್ಲಿ 68 ಮಂದಿಯ ಸಾವಿಗೆ ಕಾರಣವಾದ (ಹೆಚ್ಚಿನವರು ಪಾಕಿಸ್ತಾನಿಯರು) ಸಂಜೋತಾ ರೈಲು ಸ್ಫೋಟ ಮತ್ತು ಹೈದರಾಬಾದ್ ಮಕ್ಕಾ ಮಸೀದಿ ಸ್ಫೋಟ ಪ್ರಕರಣಗಳಲ್ಲಿ ಯಾವ ಆರೋಪಿಗಳಿಗೂ ಶಿಕ್ಷೆಯಾಗಿಲ್ಲ. ಮಾತ್ರವಲ್ಲ, ಎಲ್ಲರೂ ದೋಷಮುಕ್ತರಾಗಿ ಹೊರಗಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳಾಗಿ ಅಸೀಮಾನಂದ ಮತ್ತು ಇನ್ನಿತರರು ಇದ್ದರು ಎಂಬುದೂ ಇಲ್ಲಿ ಗಮನಾರ್ಹ. ಅಲ್ಲದೇ, ಇಲ್ಲಿ ಇನ್ನೂ ಒಂದು ಅಂಶಕ್ಕೆ ಮಹತ್ವವಿದೆ. ಅದೇನೆಂದರೆ, ಈ ಎಲ್ಲ ಪ್ರಕರಣಗಳಲ್ಲೂ ತೀರ್ಪುಗಳು ಬಂದಿರುವುದು 2014ರ ಬಳಿಕ. ಅಂದಹಾಗೆ,

ಮನ್‌ಮೋಹನ್ ಸಿಂಗ್ ಸರಕಾರ ಪತನಗೊಂಡು ಮೋದಿ ಸರಕಾರ 2014ರಲ್ಲಿ ಅಸ್ತಿತ್ವಕ್ಕೆ ಬರುವುದರಲ್ಲಿ ದೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ಪ್ರಭಾವ ಸಾಕಷ್ಟಿತ್ತು. ಈ ಬಾಂಬ್ ಸ್ಫೋಟಗಳು ಜನರಲ್ಲಿ ಅಸುರಕ್ಷಿತತೆಯ ಭಯವನ್ನು ಹುಟ್ಟು ಹಾಕಿತ್ತು. ಜನರಿಗೆ ಸುರಕ್ಷಿತತೆಯನ್ನು ಒದಗಿಸುವಲ್ಲಿ ಮನ್‌ಮೋಹನ್ ಸಿಂಗ್ ಶಕ್ತವಾಗಿಲ್ಲ ಎಂಬ ಭಾವನೆಯನ್ನು ಸಾರ್ವತ್ರಿಕವಾಗಿ ಹರಡುವಲ್ಲಿ ಬಾಂಬ್ ಸ್ಫೋಟಗಳು ಮಹತ್ವದ ಪಾತ್ರವನ್ನು ನಿಭಾಯಿಸಿದ್ದುವು. ಆದ್ದರಿಂದಲೇ ಮೋದಿ ಸರಕಾರ ಬಾಂಬ್ ಸ್ಫೋಟಗಳ ರೂವಾರಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದನ್ನು ನಾಗರಿಕರು ಬಯಸಿದ್ದರು. ಭಯೋತ್ಪಾದನೆಯನ್ನು ಖಂಡಿಸುತ್ತಲೇ ಮತ್ತು ಭಯೋತ್ಪಾದನಾ ಮುಕ್ತ ಆಡಳಿತದ ಭರವಸೆಯನ್ನು ನೀಡುತ್ತಲೇ ಅಧಿಕಾರಕ್ಕೆ ಬಂದಿದ್ದ ಮೋದಿ ಸರಕಾರದಿಂದ ಇಂಥ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ತಪ್ಪೂ ಆಗಿರಲಿಲ್ಲ. ಆದರೆ, ಈಗಿನ ಪರಿಸ್ಥಿತಿಯನ್ನು ನೋಡಿದರೆ ಗಾಢ ನಿರಾಶೆಯಾಗುತ್ತದೆ. ಬಾಂಬ್ ಸ್ಫೋಟಗಳು ನಡೆದಿರುವುದೂ ಹೌದು. ಜನರು ಸಾವಿಗೀಡಾಗಿ ರುವುದೂ ಹೌದು. ಮಾತ್ರವಲ್ಲ, ಈ ಸ್ಫೋಟಗಳನ್ನು ಖಂಡಿಸಿಯೇ ಮೋದಿ ಸರಕಾರ ಅಧಿಕಾರಕ್ಕೆ ಬಂದಿರುವುದೂ ಹೌದು. ಆದರೆ, ಇದೀಗ ಇದೇ ಮೋದಿ ಸರಕಾರದ ಕಣ್ಣೆದುರೇ ಆರೋಪಿಗಳು ಸಾಲು ಸಾಲಾಗಿ ದೋಷಮುಕ್ತರಾಗುತ್ತಿದ್ದಾರೆ. ಈ ವೈಫಲ್ಯಕ್ಕೆ ಏನೆನ್ನಬೇಕು?