ಸನ್ಮಾರ್ಗ ಸಂಪಾದಕೀಯ
ಕಳೆದವಾರ ದೆಹಲಿ ಮತ್ತು ಕೇರಳದಲ್ಲಿ ನಡೆದ ಎರಡು ಘಟನೆಗಳು ರಾಷ್ಟ್ರದ ಗಮನ ಸೆಳೆದುವು. ದೆಹಲಿಯ ಮಾಳವಿಯ ಪ್ರದೇಶದ ಫ್ಲೋರಿಶ್ ಸ್ಟೇ ಬ್ರೆಡ್ ಆಂಡ್ ಬ್ರೇಕ್ ಫಾಸ್ಟ್ ಕಟ್ಟಡದಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿತು. ಕಟ್ಟಡದ ಒಳಗೆ ಎಲ್ಲೆಲ್ಲೂ ಹೊಗೆ. ಒಳಗಿದ್ದ ಜನರು ಕಿರುಚಲಾರಂಭಿಸಿದರು. ಹೊರ ಹೋಗುವ ದಾರಿ ಕಾಣದೇ ಕಂಗೆಟ್ಟರು. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿಲ್ಲ. ಆ ಕ್ಷಣದಲ್ಲಿ ಕೆಲವು ಯುವಕರು ಕಟ್ಟಡದ ಸುತ್ತ ಸೇರಿದರು. ಕಿಟಕಿಗಳನ್ನು ಒಡೆದು ಒಳಗಿದ್ದವರನ್ನು ರಕ್ಷಿಸತೊಡಗಿದರು. ಇದೇವೇಳೆ,
ಮೇಲಿನ ಅಂತಸ್ತಿನಲ್ಲಿದ್ದವರು ದಿಕ್ಕು ಕಾಣದೇ ಜಿಗಿಯಲು ಆರಂಭಿಸಿದರು. ಈ ಹೊಟೇಲ್ನ ಎದುರು ಗಡೆ ರಿಯಾಝುದ್ದೀನ್ ಮನ್ಸೂರಿ ಮತ್ತು ಅವರ ಮಗ ಅರ್ಮಾನ್ ಬೆಡ್ ಅಂಗಡಿ ಇಟ್ಟಿದ್ದರು. ಅವರು ಮತ್ತೇನೂ ಆಲೋಚಿಸಲಿಲ್ಲ. ತಮ್ಮ ಅಂಗಡಿಯಲ್ಲಿದ್ದ ಬೆಡ್ ಮತ್ತು ಬ್ಲಾಂಕೆಟ್ಗಳನ್ನು ರಸ್ತೆಯಲ್ಲಿ ಹಾಸಿದರು. ಕಟ್ಟಡದಿಂದ ಜಿಗಿಯುವವರಿಗೆ ಅನುಕೂಲವಾಗಲೆಂದು ಹೀಗೆ ಲಕ್ಷ ಲಕ್ಷ ರೂಪಾಯಿಯ ಬೆಡ್ಗಳನ್ನು ರಸ್ತೆಯಲ್ಲಿ ಹಾಸಿ ಜೀವ ಉಳಿಸಲು ಪ್ರಯತ್ನಿಸಿದರು. ಹೀಗೆ ಜಿಗಿದವರು ಸಣ್ಣ-ಪುಟ್ಟ ಗಾಯಗಳೊಂದಿಗೆ ಸಾವಿನಿಂದ ಪಾರಾದರು. ಆದರೂ 20ಕ್ಕಿಂತ ಅಧಿಕ ಮಂದಿ ಸಾವಿಗೀಡಾದರು. 60ಕ್ಕಿಂತಲೂ ಅಧಿಕ ಮಂದಿ ಗಾಯ ಗೊಂಡರು. ಹೀಗೆ,
ಆ ಕ್ಷಣದಲ್ಲಿ ತಮ್ಮ ಜೀವದ ಹಂಗು ತೊರೆದು ಜನರ ಜೀವ ರಕ್ಷಣೆಯಲ್ಲಿ ತೊಡಗಿದ್ದ ವಕೀಲರಾದ ಮುಹಮ್ಮದ್ ಅಫ್ಝಲ್, ವಸೀಮ್ ರಝಾ, ಅಮೀರ್ ಖಾನ್, ಮುಹಮ್ಮದ್ ಫೈಝಲ್ರನ್ನು ಸ್ಥಳೀಯ ಬಿಜೆಪಿ ಶಾಸಕ ಸತೀಶ್ ಉಪಾಧ್ಯಾಯ ಅಭಿನಂದಿಸಿದರು. ಯುವಕರನ್ನು ಮಾಧ್ಯಮಗಳ ಮುಂದೆ ನಿಲ್ಲಿಸಿ ಶ್ಲಾಘಿಸಿದರು. ಇದರ ಬೆನ್ನಿಗೇ,
ಕೇರಳದ ಪಾಲಕ್ಕಾಡಿನಲ್ಲಿ ಜಿಮ್ ಸೆಂಟರ್ ನಡೆಸುತ್ತಿರುವ ನವಾಝï ಎಂಬವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊAಡ ವೀಡಿಯೋವೊಂದು ಸುದ್ದಿಗೆ ಒಳಗಾಯಿತು. ತಾನು ‘ಇಸ್ಲಾಮ್ ಫ್ರೆಂಡ್ಲಿ ಜಿಮ್ ಸೆಂಟರ್’ ಪರಿಚಯಿಸಲು ಹೋಗುವುದಾಗಿ ಅವರು ವೀಡಿಯೋದಲ್ಲಿ ಹೇಳಿದರು. ಹಿಜಾಬ್ ಧರಿಸಿ ಜಿಮ್ ಮಾಡುವುದಕ್ಕೆ ಅವಕಾಶ ಇರುವ, ಲೌಡ್ ಮ್ಯೂಸಿಕ್ ಇಲ್ಲದ ಮತ್ತು ಮಹಿಳೆಯರಿಗೆ ಮಹಿಳಾ ಟ್ರೈನರ್ ಮತ್ತು ಪುರುಷರಿಗೆ ಪುರುಷ ಟ್ರೈನರ್ ಇರುವ ನೂತನ ವ್ಯವಸ್ಥೆ ಅಳವಡಿಸುವುದಾಗಿಯೂ ಅವರು ಹೇಳಿದರು. ಮಹಿಳೆಯರಿಗೂ ಪುರುಷರಿಗೂ ಪ್ರತ್ಯಪ್ರತ್ಯೇಕ ಸಮಯ ನಿಗದಿಯ ಬಗ್ಗೆಯೂ ಅವರು ಹೇಳಿದರು. ವಿಷಾದ ಏನೆಂದರೆ,
ದೇಶದ ಪ್ರಮುಖ ಇಂಗ್ಲಿಷ್ ಮತ್ತು ಹಿಂದಿ ಟಿವಿ ಚಾನೆಲ್ಗಳ ಕೇಂದ್ರ ಕಚೇರಿ ಇರುವುದು ದೆಹಲಿಯಲ್ಲಿ. ಆದರೆ, ಈ ಚಾನೆಲ್ಗಳು ತಮ್ಮ ಮೂಗಿನಡಿಯಲ್ಲಿ ನಡೆದ ಯುವಕರ ರಕ್ಷಣಾ ಕಾರ್ಯಾಚರಣೆಗಿಂತ ದೂರದ ಈ ಜಿಮ್ ಸೆಂಟರ್ಗೆ ಇನ್ನಿಲ್ಲದ ಮಹತ್ವ ಕೊಟ್ಟವು. ಅದನ್ನು ಪ್ರೈಮ್ ಟೈಮ್ ಚರ್ಚೆಗೆ ಬಳಸಿಕೊಂಡವು. ಜೀವದ ಹಂಗು ತೊರೆದು ಹಲವು ಜೀವಗಳನ್ನು ಉಳಿಸಿದವರಿಗಿಂತ ಇನ್ಸ್ಟಾಗ್ರಾಮ್ನಲ್ಲಿ ವ್ಯಕ್ತಿಯೋರ್ವ ತನ್ನ ಖಾಸಗಿ ಸಂಸ್ಥೆಯ ಬಗ್ಗೆ ಹಾಕಿಕೊಂಡ ವೀಡಿಯೋಗೆ ಪ್ರಾಮುಖ್ಯತೆ ಕೊಟ್ಟವು. ಲಕ್ಷಾಂತರ ರೂಪಾಯಿಯ ಬೆಡ್ಡನ್ನು ರಸ್ತೆಯಲ್ಲಿ ಹಾಸಿದ ರಿಯಾಝುದ್ದೀನ್ ಮನ್ಸೂರಿ ಎಂಬ ಹಿರಿಯ ವ್ಯಕ್ತಿಗಿಂತ ನವಾಝ್ ಎಂಬ ಜಿಮ್ ಸೆಂಟರ್ ಮಾಲಕನನ್ನು ಈ ಚಾನೆಲ್ಗಳು ನೆಚ್ಚಿಕೊಂಡವು. ಬೇರೆ ಬೇರೆ ವ್ಯಕ್ತಿಗಳಿಂದ ಅಭಿಪ್ರಾಯಗಳನ್ನು ಪಡೆದು ಪ್ರಸಾರ ಮಾಡಿದುವು. ಕೇರಳದಲ್ಲಿ ಶರಿಯಾ ಹೇರುವ ಪ್ರಯತ್ನ ನಡೆಯುತ್ತಾ ಇದೆ, ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಾ ಇದೆ, ಹೆಣ್ಣು-ಗಂಡಿಗೆ ಪ್ರತ್ಯಪ್ರತ್ಯೇಕ ಸಮಯ ನಿಗದಿ ಏಕೆ, ಟ್ರೈನರ್ ಏಕೆ, ಇದು ಮೂಲಭೂತ ವಾದ.. ಎಂದೆಲ್ಲಾ ಹೇಳಲಾಯಿತು. ನಿಜವಾಗಿ,
‘ಇಸ್ಲಾಮ್ ಫ್ರೆಂಡ್ಲಿ ಜಿಮ್ ಸೆಂಟರ್’ ಎಂಬ ಪದವೊಂದನ್ನು ಬಿಟ್ಟರೆ, ಉಳಿದಂತೆ ಅದ್ಭುತ ಮತ್ತು ಅಚ್ಚರಿಪಡುವಂಥದ್ದೇನೂ ಆ ವೀಡಿಯೋದಲ್ಲಿ ಇರಲಿಲ್ಲ. ಈ ದೇಶದಲ್ಲಿ ಸಸ್ಯಾಹಾರಿ ಹೊಟೇಲ್ಗಳಿವೆ, ಮಾಂಸಾಹಾರಿ ಹೊಟೇಲ್ಗಳಿವೆ. ಬೆಂಗಳೂರು ಮತ್ತು ಮಲೆನಾಡು ಕರ್ನಾಟಕದಲ್ಲಿ ಹವ್ಯಕ ಮೆಸ್, ತಂಬುಳಿ ಮನೆ, ಹವ್ಯಕ ಖಾನಾವಳಿಗಳಿವೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲಿಂಗಾಯತ ಖಾನಾವಳಿಗಳಿವೆ. ಶ್ರೀ ಬಸವೇಶ್ವರ ಲಿಂಗಾಯತ ಖಾನಾವಳಿ, ಶ್ರೀ ವೀರಭದ್ರೇಶ್ವರ ಲಿಂಗಾಯತ ಖಾನಾವಳಿಗಳಿವೆ. ಇದರರ್ಥ ಲಿಂಗಾಯತರಿಗೆ ಮಾತ್ರ ಪ್ರವೇಶ ಎಂದಲ್ಲ. ಹಾಗೆಯೇ ಸಸ್ಯಾಹಾರಿಗಳಿಗೆ ಮಾತ್ರ ಪ್ರವೇಶ, ಹವ್ಯಕರಿಗೆ ಮಾತ್ರ ಪ್ರವೇಶ ಎಂದೂ ಅಲ್ಲ. ಯಾರು ಇಂಥ ಹೊಟೇಲ್ ಉಪಾಹಾರಗಳನ್ನು ಬಯಸುತ್ತಾರೋ ಅವರಿಗೆ ಅನುಕೂಲವಾಗಲಿ ಎಂದಷ್ಟೇ ಇದರ ಉದ್ದೇಶ.
ಪಾಲಕ್ಕಾಡಿನ ಜಿಮ್ ಸೆಂಟರ್ ಮಾಲಕ ಈ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆಯೇ ಹೊರತು ಇನ್ನೇನೂ ಅಲ್ಲ. ಪುರುಷರೊಂದಿಗೆ ಬೆರೆತು ಜಿಮ್ ಮಾಡುವುದಕ್ಕೆ ಮುಸ್ಲಿಮ್ ಸಮುದಾಯದ ಮಹಿಳೆಯರಲ್ಲಿ ಅಂಜಿಕೆ ಇದೆ. ಮೈಗಂಟಿದ ಉಡುಪು ಧರಿಸಲು ಮತ್ತು ಲೌಡ್ ಮ್ಯೂಸಿಕ್ ಹಾಡು ಇಷ್ಟಪಡದ ಮಹಿಳೆಯರಿದ್ದಾರೆ. ಇಂಥವರನ್ನು ಆಕರ್ಷಿಸಲು ಈ ಜಿಮ್ ಮಾಲಕ ಪ್ರಯತ್ನಿಸಿದ್ದಾರೆ ಎಂಬುದು ಸ್ಪಷ್ಟ. ಇದನ್ನೇ ಆ ಮಾಲಕ ಆ ಬಳಿಕ ಸ್ಪಷ್ಟಪಡಿಸಿದ್ದಾರೆ. ಇದು ಹಿಜಾಬ್ ಧರಿಸಿದವರಿಗೆ ಮಾತ್ರ ಇರುವ ಜಿಮ್ ಸೆಂಟರ್ ಅಲ್ಲ ಎಂದೂ ಹೇಳಿದ್ದಾರೆ. ಅಂದಹಾಗೆ,
‘ಇಸ್ಲಾಮ್ ಫ್ರೆಂಡ್ಲೀ ಜಿಮ್ ಸೆಂಟರ್’ ಎಂಬ ಪದವನ್ನು ಆ ಜಿಮ್ ಮಾಲಕ ಬಳಸದೆ ಇರುತ್ತಿದ್ದರೆ, ಆ ಇನ್ಸ್ಟಾಗ್ರಾಮ್ ವೀಡಿಯೋ ಖಂಡಿತ ಸದ್ದು ಮಾಡುತ್ತಿರಲಿಲ್ಲ. ಅದೊಂದು ವಿವಾದವಾಗುವ ಸಾಧ್ಯತೆಯೂ ಇರಲಿಲ್ಲ. ಯಾಕೆಂದರೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯಪ್ರತ್ಯೇಕ ಸಮಯ ನಿಗದಿಪಡಿಸಿದ ಜಿಮ್ ಸೆಂಟರ್ ನಗರಗಳಲ್ಲಿ ಸಾಮಾನ್ಯವಾಗಿದೆ. ಮಹಿಳೆಯರಿಗೆ ಮಾತ್ರ ಇರುವ ಜಿಮ್ ಸೆಂಟರ್ಗಳೂ ಇವೆ. ಮಹಿಳಾ ಟ್ರೈನರ್ಗಳೂ ಧಾರಾಳ ಇದ್ದಾರೆ. ಹೀಗಿರುವಾಗ, ಈ ವೀಡಿಯೋ ಶರಿಯಾ ಹೇರಿಕೆಯಂತೆ, ಮೂಲಭೂತ ವಾದದಂತೆ, ಧಾರ್ಮಿಕ ವಿಭಜನೆಯಂತೆ ವೀಡಿಯಾಗಳಿಗೆ ಕಾಣಿಸಿರುವುದಕ್ಕೆ ಜಿಮ್ ಮಾಲಕ ಬಳಸಿರುವ ‘ಇಸ್ಲಾಮ್ ಫ್ರೆಂಡ್ಲೀ ಜಿಮ್ ಸೆಂಟರ್’ ಎಂಬ ಪದ ಬಳಕೆಯೇ ಕಾರಣ ಎಂದೇ ಹೇಳಬೇಕಾಗುತ್ತದೆ.
ಇಸ್ಲಾಮ್ ಎಂಬುದು ಮೀಡಿಯಾಗಳ ಪಾಲಿಗೆ ಬಿಸಿ ಬಿಸಿ ದೋಸೆಯಂತೆ ಖರ್ಚಾಗುವ ಪದ. ಇದರ ಸುತ್ತ ಭೀತಿಕಾರಕ ಕತೆಯನ್ನು ಕಟ್ಟಿ ಪ್ರಸಾರ ಮಾಡುವುದರಿಂದ ಟಿಆರ್ಪಿ ಸಿಗುತ್ತದೆ. ಉಳಿದೆಲ್ಲ ಗಂಭೀರ ವಿಷಯಗಳನ್ನು ಮರೆಮಾಚುವ ಸಾಮರ್ಥ್ಯ ಈ ಪದಕ್ಕಿದೆ. ಇಂಥ ವಿಷಯಗಳ ಮೇಲೆ ಸಿಡಿಗುಂಡಿನ ಹೇಳಿಕೆ ನೀಡುವುದಕ್ಕೆ ರಾಜಕಾರಣಿಗಳಿದ್ದಾರೆ. ಸಂಘಟನೆಗಳ ನಾಯಕರಿದ್ದಾರೆ. ಜನರ ಬಳಿ ಮೈಕ್ ಹಿಡಿದರೆ ತರಹೇವಾರಿ ಅಭಿಪ್ರಾಯಗಳು ಸಿಗುತ್ತವೆ. ಮಾತ್ರವಲ್ಲ, ಪ್ರಭುತ್ವದ ಸರ್ವ ವೈಫಲ್ಯಗಳನ್ನೂ ಮತ್ತು ಜನಸಾಮಾನ್ಯರ ಸರ್ವ ಬವಣೆಗಳನ್ನೂ ಮಾಯಗೊಳಿಸುವುದಕ್ಕೆ ‘ಇಸ್ಲಾಮ್’ ಎಂಬ ಪದಕ್ಕೆ ಸಾಧ್ಯವಿದೆ. ಒಂದುವೇಳೆ,
‘ವುಮೆನ್ ಫ್ರೆಂಡ್ಲೀ ಜಿಮ್ ಸೆಂಟರ್’ ಎಂದು ಪಾಲಕ್ಕಾಡಿನ ಆ ಜಿಮ್ ಮಾಲಕ ಹೇಳಿರುತ್ತಿದ್ದರೆ, ಆ ವೀಡಿಯೋ ಹತ್ತರಲ್ಲಿ ಹನ್ನೊಂದಾಗಿ ಕಳೆದು ಹೋಗುತ್ತಿತ್ತೇ ಹೊರತು, ಅದರ ಮೇಲೆ ದೆಹಲಿ ಮೀಡಿಯಾಗಳು ಯಾವ ಆಸಕ್ತಿಯನ್ನೂ ತೋರಿಸುತ್ತಿರಲಿಲ್ಲ. ಅಷ್ಟಕ್ಕೂ,
‘ಇಸ್ಲಾಮ್ ಫ್ರೆಂಡ್ಲೀ ಜಿಮ್ ಸೆಂಟರ್’ ಎಂಬ ಪದ ಬಳಕೆಯ ಅಗತ್ಯ ಇತ್ತೇ ಎಂಬ ಪ್ರಶ್ನೆಯೂ ಚರ್ಚೆಗೆ ಅರ್ಹವಾದದ್ದು. ಜನರನ್ನು ಆಕರ್ಷಿಸುವ ಉದ್ದೇಶದಿಂದ ಬಳಸುವ ಪದಬಳಕೆ ಕೆಲವೊಮ್ಮೆ ಹೇಗೆ ಇಡೀ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸಲು ದುರುಪಯೋಗವಾಗಬಲ್ಲದು ಎಂಬುದನ್ನು ಈ ಬೆಳವಣಿಗೆ ಸೂಚಿಸುತ್ತದೆ. ವಿವಾದದ ಬಳಿಕ ಆ ಜಿಮ್ ಮಾಲಕ ವೀಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಮಾತ್ರವಲ್ಲ, ಹಿಂದೂ-ಮುಸ್ಲಿಮ್ ಎಲ್ಲ ಮಹಿಳೆಯರಿಗೂ ಈ ಜಿಮ್ ಸೆಂಟರ್ ಮುಕ್ತವಾಗಿದೆ ಎಂದೂ ಹೇಳಿದ್ದಾರೆ. ಆದರೆ, ವೀಡಿಯೋ ಮಾಡುವುದಕ್ಕಿಂತ ಮೊದಲೇ ಈ ಬಗ್ಗೆ ಆಲೋಚಿಸಿದ್ದರೆ ವಿವಾದವೇ ಉಂಟಾಗುತ್ತಿರಲಿಲ್ಲ.
ಒಂದೆಡೆ ಇಸ್ಲಾಮೋಫೋಬಿಯಾ, ಇನ್ನೊಂದೆಡೆ ಮುಸ್ಲಿಮರ ಸಂವೇದನಾ ಶೂನ್ಯ ವರ್ತನೆ- ಇವೆರಡೂ ಇಸ್ಲಾಮಿನ ಸೌಂದರ್ಯಕ್ಕೆ ಮಸಿ ಬಳಿಯುತ್ತಿವೆ.












