ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶದ ಶ್ಯಾಮ್ಲಿಯ ಪ್ರಮುಖ ವ್ಯಾಪಾರ ಕುಟುಂಬದ ಯುವಕ ಆಯುಷ್ ಮಲಿಕ್ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದು ತೀವ್ರ ಪ್ರಶ್ನೆ ಮತ್ತು ಚರ್ಚೆಗೆ ಕಾರಣವಾಗಿದೆ. ಆಯುಷ್ ಮಲಿಕ್ ಅವರ ಪತ್ನಿ ಚಾಂದಿನಿ ಕುರೇಶಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿಯನ್ನು ಇವರು ಬ್ರೈನ್ ವಾಶ್ ಮಾಡಿದ್ದಾರೆ ಎಂದು ಸಾಧನ ಆಶ್ರಮದ ಮುಖ್ಯಸ್ಥ ಸ್ವಾಮಿ ಯಶ್ ವೀರ್ ಮಹಾರಾಜ್ ಆರೋಪಿಸಿದ್ದಾರೆ. ಆಯುಷ್ ತಂದೆ ದೇವರಾಜ್ ಮಲಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಆಯುಷ್ ಮಲಿಕ್ ಅವರ ಪತ್ನಿ ಮತ್ತು ಮಾವನನ್ನು ಪೊಲೀಸರು ಬಂಧಿಸಿದ್ದಾರೆ ಆದರೆ ಪ್ರಕರಣ ಇನ್ನಷ್ಟು ಗೋಜಲಾಗಿದೆ.
ಅವರ ಬಂಧನದ ಬಳಿಕ ಆಯುಷ್ ಮಲಿಕ್ ಎಲ್ಲೂ ಓಡಿ ಹೋಗಲಿಲ್ಲ. ಮಾಧ್ಯಮಗಳ ಜೊತೆ ನಿರರ್ಗಳವಾಗಿ ಮಾತಾಡಿದ್ದಾರೆ. ತಾನು ಸ್ವ ಇಚ್ಛೆಯಿಂದ ಇಸ್ಲಾಂ ಗೆ ಮತಾಂತರಗೊಂಡಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಾನು ಧರ್ಮವನ್ನು ಸ್ವಯಂ ಪ್ರೇರಣೆಯಿಂದ ಅನುಸರಿಸುತ್ತಾ ಇದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ ಮದುವೆಗಾಗಿ ಆಯುಷ್ ಮಲಿಕ್ ಮತಾಂತರಗೊಂಡಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ.
ಇದೇ ವೇಳೆ ಸ್ಥಳೀಯರು ಇನ್ನೊಂದು ಪರಿಹಾರ ಸೂಚಿಸುತ್ತಾರೆ. ಆಯುಷ್ ಹಿಂದೂ ಧರ್ಮಕ್ಕೆ ಮರಳುವುದೇ ಸಂಘರ್ಷವನ್ನು ಪರಿಹರಿಸಲು ಏಕೈಕ ಮಾರ್ಗ ಎಂದು ಅವರು ಹೇಳುತ್ತಾರೆ.
ನಮ್ಮ ಅಂಗಡಿಗಳಿಗೆ ಬರುತ್ತಿದ್ದ ಹಿಂದೂ ಗ್ರಾಹಕರು ಈಗ ಸದ್ದಿಲ್ಲದೆ ಬರುವುದನ್ನು ನಿಲ್ಲಿಸಿದ್ದಾರೆ. ಯಾರು ಅಧಿಕೃತವಾಗಿ ಅಂಗಡಿಗೆ ಬಹಿಷ್ಕಾರ ಹೇರಿಲ್ಲ. ಆದರೆ ನಡವಳಿಕೆಯಲ್ಲಿನ ಬದಲಾವಣೆಯನ್ನು ನಾವು ಅರ್ಥಮಾಡಿಕೊಳ್ಳಬಹುದು.. ಇನ್ನು ಮುಂದೆ ಗಲಭೆಗಳು ನಡೆಯದಂತೆ ನಾವು ಮೌನವಾಗಿದ್ದೇವೆ ಎಂದು ಆ ಪ್ರದೇಶದ ಮುಸ್ಲಿಂ ವರ್ತಕ ಹೇಳಿದ್ದಾರೆ.












