✍️ ಅರಫಾ ಮಂಚಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂಡಿಯ ಕೂಟದ ಒಗ್ಗಟ್ಟು ಉತ್ತಮಪಡಿಸಬೇಕೆಂದು ಕರೆ ನೀಡಿದ್ದಾರೆ. ಆರೆಸ್ಸೆಸ್ ಬಿಜೆಪಿಯನ್ನು ಒಟ್ಟುಗೂಡಿ ಎದುರಿಸಲು ಜೂನ್ ಎಂಟಕ್ಕೆ ಇಂಡಿಯ ಕೂಟ ನಿರ್ಧರಿಸಿದೆ. 25 ಪಾರ್ಟಿಗಳು ಸೇರಿ ದಿಲ್ಲಿಯಲ್ಲಿ ನಡೆಸಿದ ಸಭೆಯ ಬೆಳವಣಿಗೆ ಇದು.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಘೋರ ಪರಾಭವದ ನಂತರ ಮಮತಾರಿಗೆ ಇಂಡಿಯ ಗಟ್ಟಿ ಮಾಡಬೇಕೆಂದು ಮನಸ್ಸಾಗಿದೆ. ಇದನ್ನು ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿದ್ದಾಗ ಮಾಡುತ್ತಿದ್ದರೆ ಮಮತಾರಿಗೆ ಈಗಲೂ ಖದರಿರುತ್ತಿತ್ತು.
ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದೇನು?:
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರಕಾರದ ಡಿಲಿಮಿಟೇಶನ್ ಬಿಲ್ ಅನ್ನು ಎಪ್ರಿಲ್ 17ಕ್ಕೆ ಎಲ್ಲ ಪ್ರತಿಪಕ್ಷಗಳು ಸೇರಿ ವಿಫಲಗೊಳಿಸಿದ್ದಂತೆ ಬಿಜೆಪಿ ಸರಕಾರದ ವಿರುದ್ಧ ಎಲ್ಲ ವಿಪಕ್ಷಗಳು ಒಗ್ಗೂಡಬೇಕೆಂದು ಕರೆ ನೀಡಿದ್ದಾರೆ. ಅವರ ಪ್ರಕಾರ ಇದೇ ಮನೋಭಾವದಲ್ಲಿ ಮುಂದುವರಿಯಬೇಕು. ವಾಸ್ತವದಲ್ಲಿ ಈ ಒಗ್ಗಟ್ಟು ಇಂಡಿಯ ಕೂಟದಲ್ಲಿ ಎಷ್ಟು ಸಾಧ್ಯ. ಇಂಡಿಯ ಕೂಟಕ್ಕೆ ಬಂದವರಲ್ಲಿ ಕಾಂಗ್ರೆಸ್ ಹೊರತು ಪಡಿಸಿದರೆ ಹೆಚ್ಚಿನವರು ಅಸಹಾಯಕ ರಾಜಕಾರಣಿಗಳು. ಕೇಜ್ರಿವಾಲ್ರನ್ನು ಬಿಜೆಪಿ ದಿಲ್ಲಿಯಿಂದ ಧೂಳಿಪಟ ಮಾಡಿದೆ. ಆರೆಸ್ಸೆಸ್ ಆಂದೋಲನದಿಂದ ಜನ್ಮವೆತ್ತ ಪಾರ್ಟಿ ಅದು. ಖಂಡಿತ ಅದು ಇಂಡಿಯ ಕೂಟದಲ್ಲಿ ಇದ್ದರೂ ಈ ಕಾರಣ ಗಳಿಂದ ಇಂಡಿಯದ ಒಗ್ಗಟ್ಟಿಗೆ ಅದು ಅಪಾಯಕಾರಿ. ಮಹಾ ನಾಯಕ ಮನ್ಮೋಹನ್ ಸಿಂಗ್ರ ವಿರುದ್ಧ ಸೆಟೆದೆದ್ದವರಲ್ಲಿ ಬಹುತೇಕರು ಈಗಾಗಲೇ ಬಿಜೆಪಿಯ ರಾಜಕೀಯ ಮುಷ್ಠಿ ಪ್ರಹಾರದಿಂದ ಬಳಲುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಟಿಎಂಸಿ ಆಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮಬಂಗಾಳದಲ್ಲಿ ಟಿಎಂಸಿಯ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿತ್ತು. ಇದು ಕೂಡ ಟಿಎಂಸಿ ಸೋಲಿಗೆ ಬಹುದೊಡ್ಡ ಕಾರಣವಾಯಿತು. ಇತ್ತ ದಕ್ಷಿಣದ ಕೇರಳದಲ್ಲಿ ಸಿಪಿಐ ಸಿಪಿಎಂಗಳ ವಿರುದ್ಧ ಅಬ್ಬರದ ಪ್ರಚಾರ ನಡೆಸಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದಿದೆ.
ಇಂಥ ತದ್ವಿರುದ್ಧ ವಿರೋಧಾಭಾಸಗಳನ್ನಿಟ್ಟುಕೊಂಡು ಬಿಜೆಪಿಯ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಒಂದು ಗೂಡುವುದು ಅಷ್ಟು ಸುಲಭ ಅಲ್ಲ ಎಂಬುದು ಒಂದು ಪರಮ ಸತ್ಯವೇ ಆಗಿದೆ. ಇನ್ನೊಂದು ಕಡೆ ಎಎಪಿ ಕಾಂಗ್ರೆಸ್ ಅನ್ನು ವಿರೋಧಿಸುತ್ತಿದೆ. ಅದು ಕಾಂಗ್ರೆಸ್ಸನ್ನು ಹೊರಗಿಟ್ಟು ಉಳಿದ ಪ್ರತಿಪಕ್ಷಗಳು ಸಖ್ಯ ಮಾಡಿಕೊಳ್ಳಬೇಕೆಂದು ಬಯಸುತ್ತದೆ. ಇವೆಲ್ಲವನ್ನೂ ಮೀರಿ ಎದ್ದು ನಿಲ್ಲಲು ಇಂಡಿಯಕ್ಕೆ ಸಾಧ್ಯವಾಗಿದ್ದಿದ್ದರೆ ಕೇಂದ್ರದಲ್ಲಿ ಇಂಡಿಯ ಕೂಟ ಸರಕಾರವನ್ನು ಹೊಂದುತ್ತಿತ್ತು.
ಎಸ್ಐಆರ್ ಬಂದು ಒಂದು ವರ್ಷ ಪೂರ್ತಿ ಆಗಿಲ್ಲ. ಪ್ರಜೆಗಳ ವೋಟು ಹಕ್ಕಿನ ದಮನವನ್ನು ಕೇಂದ್ರದಲ್ಲಿ ಪ್ರಬಲ ಪ್ರತಿಪಕ್ಷವಾದ ಇಂಡಿಯ ಕೂಟಕ್ಕೆ ತಡೆಯಲು ಸಾಧ್ಯವಾಗಿಲ್ಲ. ಬರೇ ಹೋರಾಟ ಎಂಬ ಮಾತು ಹೊರಬಿದ್ದರೆ, ಚುನಾವಣಾ ಆಯೋಗದ ವಿರುದ್ಧ ಕೇಸು ಮಾಡಿದರೆ ಮೋದಿರಾಜ್ನಲ್ಲಿ ಪ್ರಯೋಜನ ಆಗುವುದಿಲ್ಲ. ಆ ಶಕ್ತಿಯ ವಿರುದ್ಧ ಜೀವದ ಹಂಗು ತೊರೆದು ಹೋರಾಟಕ್ಕಿಳಿದರೆ ಮಾತ್ರ ಏನಾದರೂ ಗಿಟ್ಟೀತು. ಗಡಿಯಲ್ಲಿ ಒಂದು ವರ್ಷ ಕೂತು ಚಳಿಮಳೆ ಸಹಿತ ಎಲ್ಲ ಕಷ್ಟಗಳನ್ನು ಅನುಭವಿಸಿ ರೈತರು ಇದೇ ಮೋದಿ ಸರಕಾರದಿಂದ ಮೂರು ಕರಾಳ ಕೃಷಿ ಕಾನೂನು ರದ್ದು ಪಡಿಸಿದ್ದು. ಇಂತಹ ಮಾದರಿ ಹೋರಾಟಕ್ಕೆ ಇಂಡಿಯ ತಯಾರಿರಬೇಕಾಗುತ್ತದೆ.
ರಿಬ್ಬನ್ ವೀರ ಎನ್ಡಿಎ ಶೂರ
ಇಂಡಿಯ ಕೂಟಕ್ಕೆ ರಿಬ್ಬನ್ ಕಟ್ ಮಾಡಿ ಬಿಹಾರಕ್ಕೆ ಹೋದ ನಿತೀಶ್ ಕುಮಾರ್ ನಂತರ ಇಂಡಿಯ ಕೂಟಕ್ಕೆ ಕೈ ಕೊಟ್ಟದ್ದು ಜನರಿಗೆ ಗೊತ್ತಿದೆ. ಹೀಗಾಗಿ ಇಂಡಿಯದ ಹೋರಾಟ ಸಹಿತ ಯಾವ ಘೋಷಣೆಗಳನ್ನೂ ಜನ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಈ ಸಲ ಇಂಡಿಯ ಕೂಟದ ಒಗ್ಗಟ್ಟಿಗೆ ಮಮತಾ ಬ್ಯಾನರ್ಜಿ ಮುಂದಾಗಿದ್ದು ಎಂಬುದರಿಂದ ಒಂದಿಷ್ಟು ಬದಲಾವಣೆ ನಿರೀಕ್ಷಿಸಬಹುದು. ಅದರೂ ಮಮತ ಬಿಜೆಪಿ ಜೊತೆ ಅಧಿಕಾರದ ರುಚಿ ಕಂಡಿದ್ದಾರೆ. ಅಷ್ಟಾಗಿ ಅವರನ್ನು ನಿತೀಶ್ರಿಂದ ಪ್ರತ್ಯೇಕಿಸಿ ನೋಡಬೇಕಾಗಿಲ್ಲ ಎಂಬ ಮಾತೂ ಇದೆ. ಈಗ ಇಂಡಿಯ ಕೂಟದ ಸಭೆಯಲ್ಲಿ ಆರ್ಜೆಡಿ, ಟಿಎಂಸಿ, ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಶಿವಸೇನೆ, ಸಿಪಿಎಂ, ಸಿಪಿಐ, ಜೆಎಂಎಂ ವರ್ಚುವಲ್ ಆಗಿ ಭಾಗವಹಿಸಿತ್ತು. ಇವರೆಲ್ಲರೂ ಬಿಜೆಪಿಯಿಂದ ಪೆಟ್ಟು ತಿಂದವರೆಂಬುದು ಎಲ್ಲರಿಗೂ ಗೊತ್ತಿದೆ.
ಬಿಜೆಪಿ ಪ್ಲಾನ್:
ಟಿಎಂಸಿಯ 28 ಎಂಪಿಗಳಲ್ಲಿ 20 ಎಂಪಿಗಳು ಮಮತಾರನ್ನು ಧಿಕ್ಕರಿಸಿ ಎನ್ಡಿಎಗೆ ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ ಅವರ ಬಳಿ ತೃಣಮೂಲ ಕಾಂಗ್ರೆಸ್ ಉಳಿಯುವುದೇ ಬಹಳ ಕಷ್ಟ ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ದಾಳಕ್ಕೆ ಸಿಕ್ಕು ಶರದ್ ಪವಾರ್, ಎನ್ಸಿಪಿಯನ್ನು ಮತ್ತು ಉದ್ಧವ್ ಠಾಕ್ರೆ ಶಿವಸೇನೆಯನ್ನು ಕಳಕೊಂಡಂತೆ ಮಮತಾ ಕೂಡ ತಮ್ಮ ಹೂವು ಹುಲ್ಲಿನ ಚಿಹ್ನೆಯನ್ನು ಕೂಡ ಕಳೆದುಕೊಳ್ಳಲಿದ್ದಾರೆ ಅನ್ಸುತ್ತೆ. ದೇಶದಲ್ಲಿ ಒಂದೊಂದೇ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ರಾಜಕೀಯ ಅಸ್ಪೃಶ್ಯತೆಗೆ ದೂಡುತ್ತ ಬಂದಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿಯ ಬಿಎಸ್ಪಿ, ಅಖಿಲೇಶ್ರ ಸಮಾಜವಾದಿ ಪಾರ್ಟಿಯದ್ದೂ ಹೆಚ್ಚು ಕಮ್ಮಿ ಇದೇ ಅವಸ್ಥೆಯಾಗಿದೆ.
ಇಂಡಿಯವೊಂದೇ ಮಮತಾರ ಮುಂದಿನ ದಾರಿ:
ಇದು ಅವರಿಗೆ ಅನಿವಾರ್ಯ. ಇನ್ನು ಮುಂದೆ ತನ್ನ ಟಿಎಂಸಿಯ ಮೂಲಕ ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲ. ಮೋದಿಯ ವಿರುದ್ಧ ಸೆಣಸಬೇಕಾದರೆ ತನ್ನ ಮಾತೃಪಕ್ಷ ಕಾಂಗ್ರೆಸ್ಸಿನೊಂದಿಗೆ ಟಿಎಂಸಿಯನ್ನು ವಿಲೀನಗೊಳಿಸಬೇಕಾಗುತ್ತದೆ. ಅದೊಂದು ಅವಕಾಶ ತೆರೆದಿದೆ. ಮಮತಾರ ಹೆಸರು ಹೇಳಿಕೊಂಡು ಗೆದ್ದಿದ್ದ ಎಂಪಿಗಳು ಎಂಎಲ್ಎಗಳು ಮಮತಾರನ್ನು ಈಗ ಕ್ಯಾರ್ ಮಾಡುತ್ತಿಲ್ಲ. ಮುಖ್ಯಮಂತ್ರಿಯಾಗಿದ್ದ ದೀದಿಗೆ ಈ ಸಲ ಸ್ವಕ್ಷೇತ್ರ ಭವಾನಿಪುರದಲ್ಲಿ ಗೆಲ್ಲಲು ಕೂಡ ಸಾಧ್ಯವಾಗಲಿಲ್ಲ. ಈಗ ಮಮತಾಗೆ ಹಳೆ ಖದರಿಲ್ಲ. ಟಿಎಂಸಿಯಲ್ಲಿ ಘೋರ ಭಿನ್ನಮತ ಇದೆ. ಪಶ್ಚಿಮಬಂಗಾಳದಲ್ಲಿ ಭಿನ್ನಮತ ಗ್ರೂಪಿನ ಲೀಡರ್ ಮಾಜಿ ಕಮ್ಯುನಿಸ್ಟ್ ಋತಬ್ರತ ಬ್ಯಾನರ್ಜಿಗೆ ಸ್ಪೀಕರ್ ಗೂಟದ ಕಾರು ಕೊಟ್ಟಿದ್ದಾರೆ.
ಪವರ್ ಪೊಲಿಟಿಕ್ಸ್ ಖತಮ್:
ಕಾಂಗ್ರೆಸ್ಸಿನ ಮಾಜಿ ಸಂಸದೀಯ ನಾಯಕ ಸುಧೀರ್ ರಂಜನ್ ಚೌಧರಿಯನ್ನು ಒಪ್ಪಿಸುವುದು ಕಷ್ಟ. ಅವರನ್ನು ಕಳೆದ ಎಂಪಿ ಇಲೆಕ್ಷನ್ನಲ್ಲಿ ಗುಜರಾತಿನಿಂದ ಯೂಸುಫ್ ಪಠಾಣ್ರನ್ನು ಕರೆತಂದು ಮಮತಾ ಸೋಲಿಸಿದ್ದು. ಈ ನೋವು ನಿಷ್ಠಾವಂತ ಕಾಂಗ್ರೆಸ್ಸಿಗ ರಂಜನ್ ಚೌಧರಿಗೆ ವಾಸಿಯಾಗಿಲ್ಲ. ಈ ಮಹಾ ನಾಯಕಿ ಅಧಿಕಾರದಲ್ಲಿದ್ದಾಗ ಪವರ್ ಪಾಲಿಟಿಕ್ಸ್ ಆಟ ಆಡಿದ್ದಾರೆ. ನೋಡಿ, 2021ರಲ್ಲಿ ಮೇಘಾಲಯದಲ್ಲಿ ವಿಪಕ್ಷವಾಗಿದ್ದ ಕಾಂಗ್ರೆಸ್ಸಿನ ಹನ್ನೊಂದು ಶಾಸಕರನ್ನು ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಜೊತೆ ಟಿಎಂಸಿಗೆ ಸೇರಿಸಿದ್ದರು. ಕಾಂಗ್ರೆಸ್ಸನ್ನೇ ನಿರ್ನಾಮ ಮಾಡಿದ್ದರು. ಇಲ್ಲಿ ಇನ್ನೊಂದು ವಿಚಾರ ಹೇಳಬೇಕು. ಜಾತ್ಯತೀತ ಪಾರ್ಟಿಗಳು ಜಾತ್ಯತೀತ ಪಾರ್ಟಿಗಳನ್ನು ಮುಗಿಸಲು ಹೊರಟದ್ದು. ಸುಲಭವಾಗಿ ಕೋಮುವಾದಿಗಳು ಅಧಿಕಾರದಲ್ಲಿ ಕೂರುತ್ತಾರೆ. ಈಗ ಪಶ್ಚಿಮಬಂಗಾಳದಲ್ಲಿ ಅಗಿದ್ದು ಇದು. ನೋಡಿ,
ಪಶ್ಚಿಮಬಂಗಾಳದಲ್ಲಿ ಹುಡುಕಿದರೂ ಬಿಜೆಪಿ ಇರಲಿಲ್ಲ. ಬಿಜೆಪಿಗೆ ಅವಕಾಶ ಮಾಡಿಕೊಟ್ಟದ್ದೇ ಮಮತಾ ಬ್ಯಾನರ್ಜಿ. ಆರೆಸ್ಸೆಸ್ಸಿಗೆ ಅವರು ಹತ್ತಿರವಾಗುತ್ತಿದ್ದರು. ನಂದಿಗ್ರಾಮ ಹೋರಾಟದಲ್ಲಿ ಅದು ಮಮತಾಗೆ ಬಲ ತುಂಬುತ್ತಿತ್ತು. ಜಾತ್ಯತೀತ ಪಾರ್ಟಿಗಳಾದ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಸ್ ಮುಕ್ತ ಮಾಡಲು ಮಮತಾ ಎಲ್ಲ ಪವರ್ಗಳನ್ನು ಬಳಸಿದ್ದಾರೆ.
ರಾಹುಲ್ರ ಭಾರತ್ ಜೊಡೊ ಯಾತ್ರೆಗೆ ಪಶ್ಚಿಮ ಬಂಗಾಳದಲ್ಲಿ ಕೀಟಲೆ ಕೊಟ್ಟಿದ್ದ ಅದೇ ಮಮತಾಗೆ ಈಗ ಕಾಂಗ್ರೆಸ್ಸಿನ ಆಶ್ರಯ ಪಡೆಯುವುದು ಅನಿವಾರ್ಯವಾಗಿದೆ.
ಕಾಂಗ್ರೆಸ್, ಟಿಎಂಸಿ ವೀಲೀನ ಸಾಧ್ಯತೆ:
ಈಗ ಕಾಂಗ್ರೆಸ್ನೊಂದಿಗೆ ಟಿಎಂಸಿ ವಿಲೀನ ಅಷ್ಟು ಸುಲಭ ಅಲ್ಲ. ಯಾಕೆಂದರೆ ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕರು ಮಮತಾ ಬ್ಯಾನರ್ಜಿಯವರನ್ನು ನಖಶಿಖಾಂತ ವಿರೋಧಿಸುತ್ತಿದ್ದಾರೆ. ಆದರೆ ರಾಹುಲ್ರನ್ನು ಇಂದು ಎದುರು ಹಾಕಿಕೊಳ್ಳುವುದು ಅಷ್ಟು ಸುಲಭ ಅಲ್ಲ. ಮಮತಾರಿಗಾದರೆ ಟಿಎಂಸಿಯನ್ನು ವಿಲೀನ ಗೊಳಿಸುವ ಅನಿವಾರ್ಯತೆ ಇದೆ. ತನ್ನ ಪಾರ್ಟಿಯನ್ನು ಪಶ್ಚಿಮಬಂಗಾಳದಲ್ಲಿ ಕಾಂಗ್ರೆಸ್ ಸಿಪಿಐಸಿಪಿಎಂ ಸಖ್ಯದ ಜೊತೆ ಸೇರಿಸಿಕೊಳ್ಳಬೇಕಾಗುತ್ತದೆ.
ಪ್ರತಿಪಕ್ಷಗಳು ಅಧಿಕಾರ ಲಾಲಸಿಗಳು
ಪ್ರತಿಪಕ್ಷಗಳು ಅಧಿಕಾರ ಲಾಲಸಿಗಳು. ಅವರಿಗೆ ಐಕ್ಯಕ್ಕಿಂತ ಅಧಿಕಾರ ಮುಖ್ಯವಾಗುತ್ತದೆ. ಬಿಜೆಪಿ ಎಲ್ಲರನ್ನೂ ಅಳೆದು ಆಗಿದೆ. ಅಧಿಕಾರಕ್ಕಾಗಿ ನಿತೀಶ್ ಆಗಲಿ, ಮಮತಾರೇ ಇರಲಿ, ಡಿಎಂಕೆ ಸಹಿತ ಬಹುತೇಕ ಎಲ್ಲ ಪಾರ್ಟಿಗಳು ಸಖ್ಯ ಬೆಳೆಸಿವೆ. ವಾಜಪೇಯಿ ಸರಕಾರದಲ್ಲಿ ಡಿಎಂಕೆ ಸಚಿವರಿದ್ದರು. ಮಮತಾ ರೈಲ್ವೆ ಸಚಿವೆ ಆಗಿದ್ದರು. ಶಿವಸೇನೆ, ಬಹುಜನ ಸಮಾಜವಾದಿ ಪಾರ್ಟಿ, ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಸಹಿತ ಹಲವು ಪಾರ್ಟಿಗಳು ಒಂದಿಲ್ಲೊಂದು ಘಟ್ಟದಲ್ಲಿ ಬಿಜೆಪಿಯೊಂದಿಗೆ ಸಖ್ಯ ಮಾಡಿಕೊಂಡಿವೆ. ಬಿಜೆಪಿ ನೇತೃತ್ವಕ್ಕೆ ಇವರ ನಾಡಿ ಬಡಿತ ಗೊತ್ತಿದೆ. ಈಗ ಪವರ್ ಇದೆ, ಇವರ ದೌರ್ಬಲ್ಯ ಹುಡುಕಿ ತೆಗೆದು ಬಿಜೆಪಿ ಹೊಡೆತ ನೀಡುತ್ತಿದೆ. ಟಿಎಂಸಿಯ ಇಂದಿನ ಅವಸ್ಥೆ ಇದು. ಇದಕ್ಕಿಂತ ಮೊದಲು ಅಕಾಲಿದಳ, ಶಿವಸೇನೆ, ಜಮ್ಮು ಕಾಶ್ಮೀರದ ಪಿಡಿಪಿ ಸಹಿತ ಕೆಲವು ಪ್ರಾದೇಶಿಕ ಪಾರ್ಟಿಗಳು ಬಿಜೆಪಿಯೊಂದಿಗೆ ಮಾಡಿಕೊಂಡ ಸಖ್ಯಕ್ಕೆ ಬೆಲೆ ತೆತ್ತಿವೆ. ಈ ಕಹಿ ಅನುಭವಗಳು ಇಂಡಿಯಾ ಕೂಟದೊಂದಿಗೆ ಸೇರುವ ಅನಿವಾರ್ಯತೆ ಸೃಷ್ಟಿಸಿದ್ದು. ಇವೆಲ್ಲವೂ ಕಾಂಗ್ರೆಸ್ಸಿನೊAದಿಗೆ ಕೈಜೋಡಿಸದಿದ್ದರೆ ಅಸ್ತಿತ್ವ ಇಲ್ಲದಂತಾಗುವ ಪರಿಸ್ಥಿತಿ ಮಮತಾರ ಎದುರು ನಿಂತಿದೆ.
ಇಂಡಿಯ ಏನು ಮಾಡಬೇಕು:
ಇಂಡಿಯ ಕೂಟ ಒಂದೇ ಪಾರ್ಟಿಯಂತೆ ಜನರ ಪರ ಕೆಲಸ ಮಾಡಬೇಕು. ಎಸ್ಐಆರ್ ಮೂಲಕ ದೇಶದ ಲಕ್ಷಾಂತರ ಸಾಮಾನ್ಯತೀಸಾಮಾನ್ಯರ ವೋಟುಗಳು ನಷ್ಟವಾಗಿದೆ ಇಂತಹ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳ ಇಂಡಿಯ ಕೂಟ ಜನತಾ ಹೋರಾಟಕ್ಕಿಳಿಯುವುದು ಮುಖ್ಯವಾಗಿದೆ. 275 ಎಂಪಿಗಳನ್ನು ಹೊಂದಿರುವ ಇಂಡಿಯ ಕೂಟಕ್ಕೆ ಒಟ್ಟುಗೂಡಿ ಈ ವರೆಗೂ ಸಂಘಟಿತ ಹೋರಾಟ ನಡೆಸಲು ಆಗಿಲ್ಲ.
ಕೇಂದ್ರ ಸರಕಾರದ ವಿರುದ್ಧ ಒಬ್ಬ. ರಾಹುಲ್ ಗಾಂಧಿ ಗುಡುಗಿದರೆ ಸಾಲುವುದಿಲ್ಲ. ಪವರ್ ಪಾಲಿಟಿಕ್ಸ್ನ ಭಾಗವಾಗಿರುವ ಮುಖ್ಯ ವಾಹಿನಿ ಮೀಡಿಯಾಗಳು ಅವರನ್ನು ಅಷ್ಟಾಗಿ ತೋರಿಸುವುದಿಲ್ಲ. ಈ ಷಡ್ಯಂತ್ರ ಯಶಸ್ವಿಯಾಗಿದೆ. ಅದ್ದರಿಂದ ಈ ಪಾರ್ಟಿಗಳು ಒಟ್ಟಾಗಿ ಗುಂಡಿಗೆಯ ಗಟ್ಟಿತನ ತೋರಿಸಿದರೆ ಚುನಾವಣಾ ಆಯೋಗ ಅನಿವಾರ್ಯವಾಗಿ ಎಸ್ಐಆರ್ ಹಿಂದಕ್ಕೆ ತೆಗೆದುಕೊಳ್ಳ ಬೇಕಾಗುತ್ತದೆ.












