ರಿವೆಂಜ್ ಪೋರ್ನ್, ಸೆಕ್ಸ್ಟಾರ್ಷನ್ ದೂರುಗಳಿಗೆ ಕಡ್ಡಾಯ ಎಫ್‌ಐಆರ್: ರಾಜ್ಯ ಸರ್ಕಾರ ಆದೇಶ

0
185

ಸನ್ಮಾರ್ಗ ವಾರ್ತೆ

ಬೆಂಗಳೂರು: ರಿವೆಂಜ್ ಪೋರ್ನೋಗ್ರಫಿ, ಸೆಕ್ಸ್ಟಾರ್ಷನ್ (ಲೈಂಗಿಕ ಸುಲಿಗೆ) ಹಾಗೂ ಬ್ಲ್ಯಾಕ್‌ಮೇಲ್‌ನಂತಹ ಗಂಭೀರ ಸೈಬರ್ ಅಪರಾಧಗಳಿಗೆ ಬ್ರೇಕ್ ಹಾಕಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪರಸ್ಪರ ಒಪ್ಪಿಗೆಯಿಲ್ಲದೆ ಖಾಸಗಿ ಚಿತ್ರಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಪ್ರಕರಣಗಳಲ್ಲಿ ಪೊಲೀಸರು ಇನ್ಮುಂದೆ ಕಡ್ಡಾಯವಾಗಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಬೇಕೆಂದು ಸರ್ಕಾರ ಆದೇಶಿಸಿದೆ ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಲು ನೀಡುವ ಒಪ್ಪಿಗೆಯು, ಅದನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಲು ನೀಡಿದ ಒಪ್ಪಿಗೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವರು, ಸಂತ್ರಸ್ತರು ಈ ಹಿಂದೆ ಒಪ್ಪಿಗೆ ನೀಡಿದ್ದರು ಎಂಬ ಕ್ಷುಲ್ಲಕ ಕಾರಣ ಒಡ್ಡಿ ದೂರು ದಾಖಲಿಸಿಕೊಳ್ಳಲು ನಿರಾಕರಿಸುವ ಅಥವಾ ವಿಳಂಬ ಮಾಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಕುರಿತು ಈಗಾಗಲೇ ಕರ್ನಾಟಕ ಪೊಲೀಸರು ತಮ್ಮ ಅಧಿಕಾರಿಗಳಿಗೆ ಸ್ಥಾಯಿ ಆದೇಶ (ಸ್ಟ್ಯಾಂಡಿಂಗ್ ಆರ್ಡರ್) ಹೊರಡಿಸಿದ್ದಾರೆ.

ಆರಂಭದಲ್ಲಿ ಒಪ್ಪಿಗೆಯಿಂದಲೇ ವಿಡಿಯೋ ಅಥವಾ ಫೋಟೋ ರೆಕಾರ್ಡ್ ಮಾಡಿದ್ದರೂ, ತದನಂತರ ಅದನ್ನು ಅನುಮತಿಯಿಲ್ಲದೆ ಹಂಚಿಕೊಳ್ಳುವುದು, ಪ್ರಕಟಿಸುವುದು, ಫಾರ್ವರ್ಡ್ ಮಾಡುವುದು ಅಥವಾ ರವಾನಿಸುವುದು ಕಾನೂನುಬದ್ಧವಾಗಿ ಪ್ರತ್ಯೇಕವಾದ ಸಂಜ್ಞೇಯ ಅಪರಾಧ (cognizable offence) ಎಂದು ಈ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಾಗಿ, ಲೈಂಗಿಕ ಇಣುಕುನೋಟಕ್ಕೆ(voyeurism) ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 77 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ, ಸೆಕ್ಷನ್ 67 ಮತ್ತು ಸೆಕ್ಷನ್ 67ಎ ಅಡಿಯಲ್ಲಿ ಕಡ್ಡಾಯವಾಗಿ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಇನ್ನು ಬ್ಲ್ಯಾಕ್‌ಮೇಲ್, ಸುಲಿಗೆ, ಲೈಂಗಿಕ ಸೌಕರ್ಯಗಳಿಗಾಗಿ ಬೇಡಿಕೆ ಇಡುವುದು ಅಥವಾ ಇತರ ರೂಪದ ಬೆದರಿಕೆ ಪ್ರಕರಣಗಳಲ್ಲಿ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ನಿಬಂಧನೆಗಳನ್ನು ಸಹ ಅನ್ವಯಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಘಟನೆ ನಡೆದ ವ್ಯಾಪ್ತಿಯ ಗೊಂದಲವಿರುವ ಪ್ರಕರಣಗಳಲ್ಲಿ, ಯಾವುದೇ ಠಾಣೆಯಲ್ಲಾದರೂ ಮೊದಲು ‘ಶೂನ್ಯ ಎಫ್‌ಐಆರ್’ (Zero FIR) ದಾಖಲಿಸಿಕೊಂಡು, ನಂತರ ಅದನ್ನು ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಲು ಸೂಚಿಸಲಾಗಿದೆ. ಇದರೊಂದಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ಕಂಟೆಂಟ್ ಅನ್ನು ತಕ್ಷಣವೇ ತೆಗೆದುಹಾಕಲು ಅಥವಾ ಬ್ಲಾಕ್ ಮಾಡಲು ಕ್ರಮ ಕೈಗೊಳ್ಳುವಂತೆ ಹಾಗೂ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂರಕ್ಷಿಸಲು ಸೈಬರ್ ಕ್ರೈಮ್ ಘಟಕಗಳೊಂದಿಗೆ ಸಮನ್ವಯ ಸಾಧಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.