72.5 ಲಕ್ಷ ಕೋಟಿ ವಿದೇಶಿ ಸಾಲ; ಭಾರತದ ಸಾಲದ ಹೊರೆ ಹೆಚ್ಚಳ

0
521

ಸನ್ಮಾರ್ಗ ವಾರ್ತೆ

ಮುಂಬೈ: ಕೇಂದ್ರ ಸರ್ಕಾರದ ವಿದೇಶಿ ಸಾಲದಲ್ಲಿ ಹೆಚ್ಚಳವಾಗಿದೆ. ವಿದೇಶಿ ಸಾಲವು 72.5 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದರಲ್ಲಿ 2.48 ಲಕ್ಷ ಕೋಟಿ ರೂಪಾಯಿಗಳ ಹೆಚ್ಚಳ ದಾಖಲಾಗಿದೆ. ಇದರೊಂದಿಗೆ ಭಾರತದ ಜಿಡಿಪಿಗೆ (GDP) ಹೋಲಿಸಿದರೆ ವಿದೇಶಿ ಸಾಲದ ಅನುಪಾತವೂ ಹೆಚ್ಚಾಗಿದೆ. ಇದು ಶೇಕಡಾ 19.8 ರಿಂದ ಶೇಕಡಾ 20.8 ಕ್ಕೆ ಏರಿಕೆಯಾಗಿದೆ.

ಅಮೆರಿಕನ್ ಡಾಲರ್ ಬಲವರ್ಧನೆಗೊಂಡಿರುವುದೇ ಭಾರತದ ವಿದೇಶಿ ಸಾಲ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಸಾಲದ ಮಿತಿಯಾಗಿರುವ ಭಾರತದ ವಿದೇಶಿ ಸಾಲವು 613.5 ಬಿಲಿಯನ್ ಡಾಲರ್‌ಗೆ ಏರಿದೆ. ಇದರಲ್ಲಿ 11.6 ಬಿಲಿಯನ್ ಡಾಲರ್‌ನಷ್ಟು ಹೆಚ್ಚಳ ದಾಖಲಾಗಿದೆ. ಭಾರತದ ವಿದೇಶಿ ಸಾಲದ ಸಿಂಹಪಾಲು ದೀರ್ಘಾವಧಿಯ ಸಾಲವಾಗಿದೆ. ಕೇವಲ ಶೇಕಡಾ 19 ರಷ್ಟು ಮಾತ್ರ ಅಲ್ಪಾವಧಿಯ ಸಾಲವಾಗಿದೆ.

ಭಾರತದ ಸಾಲದಲ್ಲಿ ಸಾಲದ ರೂಪದ ಮೊತ್ತವೇ ಹೆಚ್ಚಿನ ಪಾಲನ್ನು ಹೊಂದಿದೆ. ಸಾಲದ ಬಾಂಡ್‌ಗಳು (ಡೆಟ್ ಸೆಕ್ಯುರಿಟೀಸ್) ಸಹ ಭಾರತದ ಸಾಲವನ್ನು ಹೆಚ್ಚಿಸುವಲ್ಲಿ ಪಾತ್ರವಹಿಸಿವೆ ಎಂದು ಆರ್‌ಬಿಐ (RBI) ವರದಿ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ(ಜೂನ್‌ 29) ಈ ಸಂಬಂಧ ವರದಿಯನ್ನು ಬಿಡುಗಡೆ ಮಾಡಿದೆ. ಭಾರತದ ಒಟ್ಟು ಸಾಲ 214 ಲಕ್ಷ ಕೋಟಿ ರೂಪಾಯಿಗಳಾಗಿದೆ. ಇದರಲ್ಲಿ ಬಹುಪಾಲು ದೇಶೀಯ ಸಾಲವಾಗಿದೆ. ದೇಶದ ಜಿಡಿಪಿ ಮತ್ತು ಸಾಲದ ನಡುವಿನ ಅನುಪಾತವು ಶೇಕಡಾ 55 ರಷ್ಟಿದೆ.