ಸನ್ಮಾರ್ಗ ವಾರ್ತೆ
ಲಕ್ನೋ: ಉತ್ತರ ಪ್ರದೇಶದ ಆಗ್ರಾದ ನಗ್ಲಾ ಭುಜಾ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಫ್ರಿಡ್ಜ್‌ನೊಳಗೆ ಶಿವಲಿಂಗದ ಆಕಾರದ ಮಂಜುಗಡ್ಡೆ ನಿರ್ಮಾಣವಾದ ಹಿನ್ನೆಲೆಯಲ್ಲಿ, ಸ್ಥಳೀಯರು ಅದಕ್ಕೆ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲು ಆರಂಭಿಸಿದ್ದಾರೆ ಎನ್ನಲಾಗಿದೆ. ಮನೆ ಮಾಲೀಕರು ಫ್ರಿಡ್ಜ್ ಸ್ವಚ್ಛಗೊಳಿಸುವಾಗ ಫ್ರೀಜರ್‌ನ ಒಳಗೆ ಮಂಜುಗಡ್ಡೆಯ ಈ ವಿಚಿತ್ರ ರಚನೆಯನ್ನು ಗಮನಿಸಿದ್ದಾರೆ. ಅಮರನಾಥ ಗುಹೆಯಲ್ಲಿನ ಹಿಮಲಿಂಗ ಕರಗುತ್ತಿದೆ ಎಂಬ ಮಾಹಿತಿ ತಿಳಿದಿದ್ದ ಕುಟುಂಬಕ್ಕೆ, ದೇವರೇ ಅಮರನಾಥದ ಬದಲು ತಮ್ಮ ಫ್ರಿಡ್ಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ನಂಬಿಕೆ ಮೂಡಿದೆ.
ಈ ಶಿವಲಿಂಗಕ್ಕೆ ಜಲಾಭಿಷೇಕ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಫ್ರಿಡ್ಜ್‌ನಲ್ಲಿ ಶಿವಲಿಂಗ ಕಾಣಿಸಿಕೊಂಡಿರುವ ಸುದ್ದಿ ಹರಡುತ್ತಿದ್ದಂತೆಯೇ, ಅದನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಫ್ರಿಡ್ಜ್‌ನ ಒಳಗೆ ನೀರು ಸುರಿದು, ಜನರು ‘ಹರ ಹರ ಮಹಾದೇವ’ ಎಂದು ಘೋಷಣೆ ಕೂಗುತ್ತಾ ಅದನ್ನು ವೀಕ್ಷಿಸಲು ಆಗಮಿಸಿದ್ದಾರೆ. ಈ ಮಂಜುಗಡ್ಡೆಯ ಶಿವಲಿಂಗದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನೊಂದೆಡೆ ಫ್ರಿಡ್ಜ್‌ನಲ್ಲಿನ ಈ ಮಂಜುಗಡ್ಡೆಗೂ ಶಿವಲಿಂಗಕ್ಕೂ ಅಥವಾ ಧಾರ್ಮಿಕ ನಂಬಿಕೆಗೂ ಯಾವುದೇ ಸಂಬಂಧವಿಲ್ಲ ಮತ್ತು ಇದು ಸಾಮಾನ್ಯ ವಿದ್ಯಮಾನ ಎಂದು ಅನೇಕರು ಅಭಿಪ್ರಾಯಪಡುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅಮರನಾಥದಲ್ಲಿನ ಹಿಮಲಿಂಗವು ಬೇಗನೆ ಕರಗುತ್ತಿದೆ ಎಂಬ ವರದಿಗಳು ಬಂದಿದ್ದವು. ಅಮರನಾಥ ಯಾತ್ರೆಯ ಅವಧಿಯಲ್ಲಿ ಗುಹೆಯ ಒಳಗೆ ಈ ಹಿಮಲಿಂಗವು ರೂಪುಗೊಳ್ಳುತ್ತದೆ. ಇದು 60 ದಿನಗಳ ಯಾತ್ರೆಯುದ್ದಕ್ಕೂ ಅಲ್ಲಿಯೇ ಇರುತ್ತಿತ್ತು. ಆದರೆ, ಈ ಬಾರಿ ಅಮರನಾಥ ಯಾತ್ರೆ ಆರಂಭವಾದ ಒಂದು ವಾರದಲ್ಲೇ ಹಿಮಲಿಂಗ ಕರಗಲು ಪ್ರಾರಂಭಿಸಿದೆ ಎನ್ನಲಾಗಿದೆ.
https://x.com/TheSiasatDaily/status/2076943047447687514/photo/1












