ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ನಿಯಮದಲ್ಲಿ ತಿದ್ದುಪಡಿ: ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಚರ್ಚಿಸಲು ಶಾಸಕ‌ ರಿಝ್ವಾನ್ ಅರ್ಷದ್‌ಗೆ ಸೋಲಿಡಾರಿಟಿ ಮನವಿ

0
254

ಸನ್ಮಾರ್ಗ ವಾರ್ತೆ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ನಿಯಮದಲ್ಲಿ ತಿದ್ದುಪಡಿ ಮಾಡಲು ಕರಡು ಪ್ರತಿಯಲ್ಲಿ ಕೆಲವೊಂದು ನ್ಯೂನತೆಗಳಿದ್ದು, ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಚರ್ಚಿಸಲು ಶಾಸಕ‌ ರಿಝ್ವಾನ್ ಅರ್ಷದ್‌ಗೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.

ದಿನಾಂಕ 29.06.2026 ರಂದು ಪ್ರಕಟಿಸಲಾದ ಕರಡು ಅಧಿಸೂಚನೆ ಸಂಖ್ಯೆ EP 50 DPI 2026 ರನ್ವಯ 1 ರಿಂದ 8ನೇ ತರಗತಿಗಳ ಕಂಪ್ಯೂಟರ್ ವಿಜ್ಞಾನ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡ ಭಾಷೆಯ ಅರ್ಹತೆಯ ಕುರಿತು ನಿಗದಿಪಡಿಸಿರುವ ಕರಡು ಅಧಿಸೂಚನೆಯಲ್ಲಿ ಕನ್ನಡ ಭಾಷೆಯ ಅರ್ಹತೆಗೆ ಸಂಬಂಧಿಸಿ ಜಾರಿಯಲ್ಲಿರುವ ಕಾನೂನು ನಿಯಮಗಳಿಗೆ ಹೊಂದಿಕೆಯಾಗುವಂತೆ, ಅರ್ಹ ಅಭ್ಯರ್ಥಿಗಳಿಗೆ ನ್ಯಾಯಸಮ್ಮತ ಅವಕಾಶ ದೊರೆಯುವಂತೆ ಹಾಗೂ ಸರ್ಕಾರಿ ನೇಮಕಾತಿಯಲ್ಲಿ ಸಮಾನ ಅವಕಾಶದ ತತ್ತ್ವವನ್ನು ಕಾಪಾಡುವಂತೆ ಪರಿಷ್ಕರಿಸುವುದು ಅಗತ್ಯವಾಗಿದೆ‌ ಎಂದು ಸೋಲಿಡಾರಿಟಿ ಮನವಿಯಲ್ಲಿ ಉಲ್ಲೇಖಿಸಿದೆ.

ಇದೇ ವೇಳೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಹುದ್ದೆ ಹಾಗೂ ಇನ್ನಿತರ ವಿಭಾಗದಲ್ಲಿ ಆಯುರ್ವೇದ ಮತ್ತು ಹೋಮಿಯೋಪತಿ ಪದ್ಧತಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ.‌ ಇತರೆ ಪದ್ಧತಿಗಳಿಗೆ ಅವಕಾಶ ಲಭ್ಯವಾಗುತ್ತಿಲ್ಲ. ಹೀಗಾಗಿ, ಯುನಾನಿ, ಯೋಗ, ನ್ಯಾಚುರೋಪತಿ ಸೇರಿದಂತೆ ಎಲ್ಲ ಪದ್ಧತಿಗೂ ಕೂಡ ಸಮಾನ ಅವಕಾಶ ನೀಡಲು ಒತ್ತಾಯಿಸಲು ಮನವಿ ಸಲ್ಲಿಸಲಾಯಿತು.

2023ರ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕ ರಾಜ್ಯ ಯುವ ಆಯೋಗವನ್ನು ತಕ್ಷಣವೇ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಂಡು, ಈ ಕುರಿತು ಮಾನ್ಯ ಮುಖ್ಯಮಂತ್ರಿಯವರಿಗೆ ಶಿಫಾರಸು ಪತ್ರ ಬರೆಯುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿದ ಸಂದರ್ಭದಲ್ಲಿ, ರಾಜ್ಯದ ಯುವಜನರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ, ಅವರ ಸಮಸ್ಯೆಗಳಿಗೆ ನೀತಿ ಮಟ್ಟದಲ್ಲಿ ಸ್ಪಂದಿಸುವ ಹಾಗೂ ಯುವಜನರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಯುವ ಆಯೋಗದ ಸ್ಥಾಪನೆ ಅತ್ಯಂತ ಅಗತ್ಯವಾಗಿದೆ ಎಂದು ವಿವರಿಸಲಾಯಿತು.

ಅದೇ ವೇಳೆ, ರಾಜ್ಯದ ಯುವಜನರನ್ನು ಸಾಮಾಜಿಕ, ಪ್ರಜಾಸತ್ತಾತ್ಮಕ ಮತ್ತು ಅಭಿವೃದ್ಧಿಯ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಘೋಷಿಸಿರುವ ಭಾರತ್ ಜೋಡೋ ಯುವ ಸಂಘಟನೆ ರಚನೆಯ ನಿರ್ಧಾರವನ್ನು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಸ್ವಾಗತಿಸಿತು. ಇದರ ಜೊತೆಗೆ, ರಾಜ್ಯ ಯುವ ಆಯೋಗವನ್ನು ಸ್ಥಾಪಿಸಿದಲ್ಲಿ ಯುವಪರ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಯುವಜನರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಂ ಅಹ್ಮದ್, ರಾಜ್ಯ ಕಾರ್ಯದರ್ಶಿಗಳಾದ ಇಸ್ಮಾಯಿಲ್ ತೀರ್ಥಹಳ್ಳಿ, ಅಸದುಲ್ಲಾ ಖಾನ್ ಝಕಿ, ರೆಹಾನ್ ಉಡುಪಿ ಹಾಗೂ ರಾಜ್ಯ ಮಾಧ್ಯಮ ಸಂಯೋಜಕರಾದ ಇರ್ಷಾದ್ ವೇಣೂರು ಉಪಸ್ಥಿತರಿದ್ದರು.