ಮಂದಿರ ಲೂಟಿ: ನೈತಿಕತೆಗಿಂತ ರಾಜಕೀಯ ನಿಷ್ಠೆಯೇ ಮಿಗಿಲು

0
142

✍️ ಸಂಜಯ್ ಕೆ. ಝಾ
ರಾಜಕೀಯ ವಿಶ್ಲೇಷಕರು

ರಾಜಕೀಯವು ಸುಳ್ಳು, ವಂಚನೆ ಮತ್ತು ಕಳ್ಳತನದಿಂದ ಕೂಡಿದ್ದರೂ ಗೌರವವನ್ನು ತಂದುಕೊಡುವ ಏಕೈಕ ವೃತ್ತಿ ಎಂದು ಮಾರ್ಕ್ ಟ್ವೈನ್ ಅಭಿಪ್ರಾಯಪಟ್ಟಿದ್ದರು. ಸ್ವಾತಂತ್ರ್ಯೋತ್ತರ ಆರಂಭದ ದಿನಗಳಲ್ಲಿ ಭಾರತವು ಅದೃಷ್ಠವಶಾತ್‌ ನೈತಿಕ ಶ್ರೇಷ್ಠತೆಯಿದ್ಧ ಧೀಮಂತ ನಾಯಕರಿಂದ ಮುನ್ನಡೆಸಲ್ಪಟ್ಟಿತಾದರೂ, ಇಂದಿನ ರಾಜಕಾರಣದಲ್ಲಿ ನೈತಿಕ ಮೌಲ್ಯಗಳ ಕೊರತೆ ಇರುವುದು ತರ್ಕಾತೀತ ಸತ್ಯ. ಸುಳ್ಳು, ವಂಚನೆ ಹಾಗೂ ಕಳ್ಳತನದಲ್ಲಿ ತೊಡಗಿರುವ ರಾಜಕಾರಣಿಗಳೇ ಇಂದು ಗೌರವ ಮತ್ತು ಪ್ರಭಾವವನ್ನು ಚಲಾಯಿಸುತ್ತಿದ್ದಾರೆ. ನೈತಿಕ ಪತನದ ವ್ಯಾಪ್ತಿಗೆ ಬರುವ ಅವರ ಕೆಲವು ದುಷ್ಕೃತ್ಯಗಳು ದೇಶಾದ್ಯಂತ ಜನಾಕ್ರೋಶ ಮೂಡಿಸುವಲ್ಲಿ ವಿಫಲವಾಗುತ್ತಿವೆ. ಹಾಗಾದರೆ, ಪ್ರಸ್ತುತ ದಿನಗಳಲ್ಲಿ ಕೆಟ್ಟತನಕ್ಕೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆಯೇ? ಇದು ಸಾಮಾನ್ಯ ಜನರ ನೈತಿಕ ಬದುಕು ಜರ್ಜರಿತಗೊಂಡಿದೆ ಎಂಬುದರ ಸಂಕೇತವೇ? ಬಹುಸಂಖ್ಯಾತ ಜನಸಮೂಹವು ರಾಜಕಾರಣಿಗಳನ್ನು ಅವರ ವೈಯಕ್ತಿಕ ಚಾರಿತ್ರ್ಯ ಮತ್ತು ಸಾಂವಿಧಾನಿಕ ನೈತಿಕತೆಯ ತಕ್ಕಡಿಯಲ್ಲಿ ಅಳೆಯುವುದನ್ನು ಕೈಬಿಟ್ಟಿದ್ದಾರೆ ಎಂಬುದು ನಿಜವೇ? 

ರಾಮಮಂದಿರದ ಕೊಳ್ಳೆ ಬಹುತೇಕ ಎಲ್ಲ ಭಾರತೀಯರ ಮನಸ್ಸನ್ನು ಕಲುಕಿದೆ, ಆದರೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು ಮಾತ್ರ ತೀರಾ ಅಸ್ಪಷ್ಟ ಹಾಗೂ ಗೊಂದಲಕಾರಿ ಅನಿಸಿಕೆಗಳನ್ನು ಮೂಡಿಸುತ್ತಿವೆ. ಕಳ್ಳತನ ಹಾಗೂ ಆರ್ಥಿಕ ವಂಚನೆಯ ನೈಜ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುವ ಬದಲು, ವಿನಾಕಾರಣ ಹಿಂದೂ ವಿರೋಧಿ ಮತ್ತು ದೇಶದ್ರೋಹದ ಬೂಟಾಟಿಕೆಯನ್ನು ಹೂಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಆಘಾತಕಾರಿ ಪ್ರತಿಕ್ರಿಯೆಯನ್ನು ಸದ್ಯಕ್ಕೆ ಪಕ್ಕಕ್ಕಿಡೋಣ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ತತ್ವ ಹಾಗೂ ರಾಜಕಾರಣವನ್ನು ವಿರೋಧಿಸುವವರು ಸಹಜವಾಗಿಯೇ ತಾವು ಅಂದುಕೊಂಡದ್ದೇ ಸರಿಯಾಯಿತು ಎಂದು ವಾದಿಸುತ್ತಿದ್ದಾರೆ; ಈ ಜನರಿಂದ ಎಂದಿಗೂ ನೈತಿಕ ಅಥವಾ ವಿವೇಕಯುತ ನಡವಳಿಕೆಯನ್ನು ಆಶಿಸಲು ಸಾಧ್ಯವಿರಲಿಲ್ಲ ಎನ್ನುವುದು ಅವರ ವಾದ. ಸಂಘ ಪರಿವಾರದ ಬಗ್ಗೆ ಸದ್ಭಾವನೆ ಹೊಂದಿರುವವರು ಅಥವಾ ‘ಭಕ್ತರೆಂದು’ ಕರೆಸಿಕೊಳ್ಳುವವರೂ ಸಹ ಇದರಿಂದ ತೀವ್ರವಾಗಿ ನೊಂದಿದ್ದಾರೆ. ಅವರಲ್ಲಿ ಬಹುಪಾಲು ಜನ ಸ್ತಬ್ಧರಾಗಿದ್ದಾರೆ ಹಾಗೂ ಈ ಕೃತ್ಯ ತಮ್ಮ ಅಂತರಾತ್ಮವನ್ನೇ ಸೀಳಿದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಗುಂಪಿನಲ್ಲೂ ಸ್ಥೂಲವಾಗಿ ಮೂರು ಬಗೆಯ ಧ್ವನಿಗಳು ಕೇಳಿಬರುತ್ತಿದ್ದು, ರಾಜಕೀಯದ ಮೇಲಿನ ಅಂಧಾಭಿಮಾನವು ಹೇಗೆ ನೈತಿಕ ತತ್ವಗಳನ್ನು ನುಂಗಿ ಹಾಕುತ್ತದೆ ಎಂಬುದನ್ನು ಇದು ತೋರಿಸಿಕೊಡುತ್ತದೆ. 

ಮೊದಲ ವರ್ಗ

ಮೊದಲ ವರ್ಗದವರು ಇದನ್ನು ಸಮರ್ಥಿಸಲು ಬಯಸುತ್ತಾರೆ. ಕೊಳ್ಳೆಯ ಅಂದಾಜು 200 ಕೋಟಿ ರೂ.ನಿಂದ 2,000 ಕೋಟಿ ರೂ.ಗಳಷ್ಟಿರಬಹುದು ಎಂಬ ಊಹಾಪೋಹಗಳ ಹೊರತಾಗಿಯೂ, ಈ ವಿಷಯದಲ್ಲಿ ಯಾವುದೇ ವಾದವನ್ನು ಹೊಂದಿಲ್ಲದ ರಾಜಕೀಯ ವಿರೋಧಿಗಳು ಸಣ್ಣ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಜನರ ಈ ವರ್ಗವು ಹೇಳುತ್ತದೆ.

ಅವರ ವಾದದ ಸಾರಾಂಶ ಹೀಗಿದೆ: “ಬಾಬರಿ ಮಸೀದಿಯ  ಧ್ವಂಸವನ್ನು ಹಾಗೂ ರಾಮಮಂದಿರದ ಆಂದೋಲನವನ್ನು ವಿರೋಧಿಸಿದ ಜನರೇ ಈಗ ಕೈಕಾಲು ಬಡಿಯುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರು ಈವರೆಗೆ ಕನಿಷ್ಠ ಒಂದು ಬಾರಿಯೂ ಮಂದಿರದ ದರ್ಶನ ಪಡೆದಿಲ್ಲ. ಕೊಳ್ಳೆಯನ್ನು ಪ್ರಶ್ನಿಸುವ ಯಾವ ಅರ್ಹತೆಯೂ ಅವರಿಗಿಲ್ಲ. ನಮ್ಮ ಈ ಆಂತರಿಕ ವಿದ್ಯಮಾನವನ್ನು ನಾವೇ ಹಿಂದೂಗಳು ನೋಡಿಕೊಳ್ಳುತ್ತೇವೆ, ನಮಗೆ ಬಿಟ್ಟುಬಿಡಿ.” 

ಇದು ಅಪಾಯಕಾರಿ ಪರಿಕಲ್ಪನೆಯಾಗಿದೆ. ಈ ಜನರು ಈಗ ಅಪರಾಧದ ಬಗ್ಗೆ ಮಾತನಾಡುವ ಹಕ್ಕು ಯಾರಿಗೆ ಇದೆ ಎಂಬುದನ್ನು ವ್ಯಾಖ್ಯಾನಿಸುತ್ತಿದ್ದಾರೆ. ಕಾನೂನಿನ ಉಲ್ಲಂಘನೆಯನ್ನು ಇನ್ನು ಮುಂದೆ ರಾಜಕೀಯ ಸಂಯೋಜನೆಯ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ರಾಮಮಂದಿರದಲ್ಲಿನ ಕಳ್ಳತನದ ವಿಷಯದ ಬಗ್ಗೆ ಮೌನವಾಗುವಂತೆ ಮಾಡಲಾಗುತ್ತಿರುವ ಅದೇ ನಾಗರಿಕರಿಗೆ, ಬ್ಯಾಂಕ್, ಮಸೀದಿ ಅಥವಾ ಸಂಘ ಪರಿವಾರದಿಂದ ನಡೆಸಲ್ಪಡದ ದೇವಸ್ಥಾನಗಳಲ್ಲಿನ ಕಳ್ಳತನದ ಬಗ್ಗೆ ಮಾತನಾಡಲು ಬಹುಶಃ ಅನುಮತಿ ಇರುತ್ತದೆ. ಇದು ಸಂಘ ಪರಿವಾರವು ಕಾನೂನಿಗಿಂತ ಮೇಲಿದೆ ಎಂಬ ಪ್ರತಿಪಾದನೆಯಾಗಿದೆ; ಸಮಾನತೆ ಮತ್ತು ನ್ಯಾಯದ ಸಾಂವಿಧಾನಿಕ ಭರವಸೆಗಳು ಅವರಿಗೆ ಅನ್ವಯಿಸುವುದಿಲ್ಲ. ಅಪರಾಧವು ಒಂದು “ಆಂತರಿಕ ವಿಷಯ” ವಾಗುತ್ತದೆ, ಇದನ್ನು ಸಾಮಾನ್ಯ ಕಾನೂನು ಪರಿಣಾಮಗಳಿಲ್ಲದೆ ಪರಿಹರಿಸಬಹುದು. ಸಂಘ ಪರಿವಾರದ ತಪ್ಪು ಕೃತ್ಯಗಳನ್ನು ಇತರ ಅಪರಾಧಗಳಿಗೆ ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬಂತೆ!

ಒಂದು ದಿನ ಈ ಅತಾರ್ಕಿಕತೆಯನ್ನು ವಿಸ್ತರಿಸಿ ‘ಹಿಂದೂ ಒಬ್ಬ ಹಿಂದೂವನ್ನು ಕೊಂದರೆ ಪೊಲೀಸರು ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದು ಹೇಳಲಾಗುತ್ತದೆಯೇ? ಹಿಂದೂ ಹುಡುಗನೊಬ್ಬ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದರೆ, ಸಮಾಜವು ಅದನ್ನು ತನ್ನದೇ ಆದ ಅನುಕೂಲಕ್ಕೆ ತಕ್ಕಂತೆ ನಿಭಾಯಿಸುತ್ತದೆಯೇ?

ಪ್ರಧಾನಮಂತ್ರಿಗಳು ರೂಪಿಸಿದ ಟ್ರಸ್ಟ್‌ನ ಉಸ್ತುವಾರಿಯಲ್ಲಿರುವ ರಾಮಮಂದಿರವನ್ನು ಬಿಟ್ಟು ಬೇರೆಡೆ ಇಂತಹುದೇ ಘಟನೆ ಸಂಭವಿಸಿದ್ದರೆ, ಪರಿಸ್ಥಿತಿಯನ್ನು ನಿಭಾಯಿಸುವ ರೀತಿಯೇ ಬೇರೆಯಾಗಿರುತ್ತಿತ್ತು. ಮೊದಲ ಹೆಜ್ಜೆಯಾಗಿ ಎಫ್‌ಐಆರ್ ದಾಖಲಿಸಲಾಗುತ್ತಿತ್ತು, ಆ ಬಳಿಕ ಬಂಧನ ಪ್ರಕ್ರಿಯೆ ನಡೆಯುತ್ತಿತ್ತು. ಅದು ಕೆಳಹಂತದ ಸಿಬ್ಬಂದಿಗಳದ್ದಲ್ಲ, ಬದಲಿಗೆ ಮುಖ್ಯ ಅಧಿಕಾರಿಗಳದ್ದಾಗಿರುತ್ತಿತ್ತು. ಆರೋಪಿಗಳಿಗೆ ಸಾಕ್ಷ್ಯಧಾರಗಳನ್ನು ತಿದ್ದಲು ಅವಕಾಶ ಸಿಗುತ್ತಿರಲಿಲ್ಲ. ಕೊಳ್ಳೆ ನಡೆಯುವಾಗ ಯಾರ ಮೇಲ್ವಿಚಾರಣೆ ಇತ್ತೋ ಆ ವ್ಯವಸ್ಥಾಪಕರ ಬದಲಾಗಿ, ಪೊಲೀಸರೇ ಖುದ್ದಾಗಿ ದಾಳಿಗಳನ್ನು ನಡೆಸುತ್ತಿದ್ದರು ಎನ್ನುವುದು ನಿಶ್ಚಿತ. 

ಕೊಳ್ಳೆಯಾದ ಮಾಲನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯು ಎಫ್‌ಐಆರ್ ದಾಖಲಾದ ಬೆನ್ನಲ್ಲೇ ನಡೆಯಬೇಕಿತ್ತೇ ಹೊರತು ಅದಕ್ಕಿಂತ ಮುಂಚಿತವಾಗಿ ಅಲ್ಲ. ಆದರ್ಶಪ್ರಾಯವಾಗಿ, ದೇಶಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಬಹುದಾದ ಇಂತಹದೊಂದು ಸೂಕ್ಷ್ಮ ಪ್ರಕರಣದಲ್ಲಿ ಯಾವುದೇ ರೀತಿಯ ಗೌಪ್ಯತೆ ಮತ್ತು ಬಚ್ಚಿಡುವಿಕೆಗಳಿಗೆ ಆಸ್ಪದ ನೀಡದೆ, ಪ್ರಾಯಶಃ ನ್ಯಾಯಾಂಗದ ಕಣ್ಗಾವಲಿನಲ್ಲಿ ತೀರಾ ಪಾರದರ್ಶಕವಾದ ತನಿಖೆ ನಡೆಯಬೇಕಾಗಿತ್ತು. 

ಎರಡನೇ ವರ್ಗ

ಈ ಕೊಳ್ಳೆಯಿಂದ ತೀವ್ರ ಆಘಾತ ಮತ್ತು ಸಂಕಟಕ್ಕೆ ಒಳಗಾಗಿದ್ದರೂ, ಮೋದಿ ಸರ್ಕಾರವಾಗಲಿ ಅಥವಾ ಆರ್‌ಎಸ್‌ಎಸ್ ಸಂಸ್ಥೆಯಾಗಲಿ ಈ ನಿಂದನೆಗೆ ಹೊಣೆಯಾಗಬೇಕು ಎಂದು ಒಪ್ಪದ ಒಂದು ಬೃಹತ್ ಜನಸಮೂಹವೇ ಇದೆ. ಕೆಳಮಟ್ಟದ ಪದಾಧಿಕಾರಿಗಳ ವಿರುದ್ಧ ಜರುಗಿಸಲಾದ ಶಿಸ್ತುಕ್ರಮದಿಂದಲೇ ತೃಪ್ತಿ ಹೊಂದಿರುವ ಈ ಗುಂಪು, ಹಣ ಎಣಿಸುವ ಕೆಳಮಟ್ಟದ ಸಿಬ್ಬಂದಿ ದುರಾಸೆಯಿಂದಾಗಿ ಈ ತಪ್ಪು ಎಸಗಿದ್ದಾರೆ ಎಂದು ಪ್ರತಿಪಾದಿಸುತ್ತದೆ. ಈ ಅಹಿತಕರ ಬೆಳವಣಿಗೆಯನ್ನು ಮರೆಮಾಚುವ ಯಾವುದೇ ಪ್ರಯತ್ನ ಇಲ್ಲಿ ನಡೆದಿಲ್ಲ ಎಂದು ವಾದಿಸುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ನಡೆಗಳನ್ನು ಮೆಚ್ಚುತ್ತಾರೆ. ತನ್ನ ಮೋದಿ-ಭಕ್ತಿಯನ್ನು ಸಾರುವ ವ್ಯಾಪಾರಿಯೇ ಇರಲಿ ಅಥವಾ ತನ್ನ ಭಕ್ತಿಯನ್ನು ಹಿಂದೂ ಸರ್ವಾಧಿಕಾರತ್ವ ಮತ್ತು ತೀವ್ರ ರಾಷ್ಟ್ರೀಯತೆಯ ಮುಖವಾಡದ ಹಿಂದೆ ಅಡಗಿಸುವ ಐಟಿ ಉದ್ಯೋಗಿಯೇ ಇರಲಿ, ಈ ವಲಯವು ಸುಲಭವಾಗಿ ತಪ್ಪಿಸಬಹುದಾಗಿದ್ದ ಇಂತಹದೊಂದು ನಡವಳಿಕೆಯನ್ನು ರಾದ್ಧಾಂತ ಮಾಡುವುದನ್ನು ಬೆಂಬಲಿಸುವುದಿಲ್ಲ. 

ಯುವ ಉದ್ಯೋಗಿಯೊಬ್ಬರು ಈ ರೀತಿ ಅಭಿಪ್ರಾಯಪಟ್ಟರು, “ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಷ್ಟು ಹಗರಣಗಳು ಸಂಭವಿಸಲಿಲ್ಲ? ಒಂದು ತಪ್ಪಿಗಾಗಿ ಚೆನ್ನಾಗಿ ಕೆಲಸ ಮಾಡುತ್ತಿರುವ ಮೋದಿ ಸರ್ಕಾರವನ್ನು ನಾವೇಕೆ ಸಂಕಷ್ಟಕ್ಕೆ ತಳ್ಳಬೇಕು? ಕಳ್ಳತನ ನಡೆಯದಂತೆ ತಡೆಯಬಹುದಿತ್ತಾದರೂ, ಪ್ರತಿಯೊಬ್ಬ ಸಿಬ್ಬಂದಿಯನ್ನೂ ನಿಯಂತ್ರಣದಲ್ಲಿಡುವುದು ಅಸಾಧ್ಯ.” ಟ್ರಸ್ಟ್ ಅನ್ನು ಸ್ಥಾಪಿಸಿದ ನರೇಂದ್ರ ಮೋದಿ ಹಾಗೂ ಟ್ರಸ್ಟ್‌ನಲ್ಲಿ ತಮ್ಮದೇ ಬೆಂಬಲಿಗರನ್ನು ಹೊಂದಿರುವ ಮೋಹನ್ ಭಾಗವತ್ ಅವರು ಈ ನಿಂದನೆಗೆ ಹೊಣೆಯಾಗಬೇಕಲ್ಲವೇ ಎಂದು ಪ್ರಶ್ನಿಸಿದಾಗ, “ಕೆಳಗಿನ ನೌಕರರು ಮಾಡುವ ತಪ್ಪುಗಳಿಗೆ ಉನ್ನತ ನಾಯಕರನ್ನು ಹೊಣೆ ಮಾಡುವುದು” ಸರಿಯಲ್ಲ ಎಂದು ಈ ಜನರು ತೀವ್ರವಾಗಿ ಪ್ರತಿಪಾದಿಸಿದರು. 

ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರಂತಹ ಉನ್ನತ ನಾಯಕರನ್ನು ಒಳಗೊಂಡ ಹಗರಣದ ಭೂ ವ್ಯವಹಾರಗಳು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ತಿಳಿದಿದ್ದರೂ, ಮೋದಿ ಅಥವಾ ಭಾಗವತ್ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ನೆನಪಿಸಿದಾಗ, ದೊಡ್ಡ ಯೋಜನೆಗಳಲ್ಲಿ ಕೆಲವು ವ್ಯಕ್ತಿಗಳು ಲಾಭ ಗಳಿಸುವುದು ಸಹಜ ಎಂದು ಅವರು ಹೇಳುತ್ತಾರೆ. ನಂತರ ಅವರು – ಕಾಂಗ್ರೆಸ್ ಇದನ್ನು ಮಾಡಿತು, ಕಾಂಗ್ರೆಸ್ ಅದನ್ನು ಮಾಡಿತು… ಎಂದು ಬಡಬಡಿಸುತ್ತಾರೆ.

ನೋಟು ರದ್ದತಿ, ಕೋವಿಡ್ ದುರ್ನಿರ್ವಹಣೆ, ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಆಪ್ತ ಬಂಡವಾಳಶಾಹಿ, ಚೀನಾದ ನುಸುಳುವಿಕೆ ಮತ್ತು ಡೊನಾಲ್ಡ್ ಟ್ರಂಪ್ ಮತ್ತು ಷಿ ಜಿನ್‌ಪಿಂಗ್ ಎದುರು ಹೇಡಿತನ ಪ್ರದರ್ಶಿಸಿದಾಗ ಮೋದಿಯನ್ನು ಸಮರ್ಥಿಸಿಕೊಂಡವರು ಇದೇ ಜನರು. ಇತರ ಪಕ್ಷಗಳ ಭ್ರಷ್ಟ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವಲ್ಲಿ ಅಥವಾ ಕಳಂಕಿತ ಮತ್ತು ವಿವಾದಾತ್ಮಕ ಅಧಿಕಾರಿಗಳನ್ನು ಉತ್ತೇಜಿಸುವಲ್ಲಿ ಮೋದಿ ಸರಿಯಾಗಿದ್ದಾರೆಯೇ ಎಂದು ಕೇಳಿದಾಗ, ರಾಜಕೀಯದಲ್ಲಿ ಇಂತಹ ವಿಷಯಗಳು ಸಾಮಾನ್ಯ ಎಂದು ಅವರು ಹೇಳುತ್ತಾರೆ. ಹಾಗಿದ್ದಲ್ಲಿ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳನ್ನು ನೈತಿಕ ಮಾನದಂಡಗಳ ಮೇಲೆ ಏಕೆ ನಿರ್ಣಯಿಸಲಾಗುತ್ತದೆ? ಉತ್ತರ ಸ್ಪಷ್ಟವಾಗಿದೆ – ರಾಜಕೀಯ ನಿಷ್ಠೆಯು ನೈತಿಕತೆಗಿಂತ ಮೇಲಿರುತ್ತದೆ.

ಮೂರನೇ ವರ್ಗ

ಧನ್‌ಬಾದ್‌ನ ವೃದ್ಧೆಯೊಬ್ಬರು ತಮ್ಮ ಖಾತೆಯಲ್ಲಿದ್ದ ಪೆನ್ಷನ್ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡುವಂತೆ ತಮ್ಮ ಪುತ್ರರನ್ನು ಒತ್ತಾಯಿಸಿದ್ದರು. ಅವರ ಹಠವನ್ನು ಕಂಡು ಆಶ್ಚರ್ಯಚಕಿತರಾದ ಪುತ್ರರು, ನಿಮ್ಮ ಹಣ ಟ್ರಸ್ಟ್‌ಗೆ ತಲುಪದಿದ್ದರೆ ಮಂದಿರ ನಿರ್ಮಾಣ ವಿಳಂಬವಾಗುತ್ತದೆಯೇ ಎಂದು ಟೀಕಿಸಿದ್ದರು. ಇಬ್ಬರೂ ಪುತ್ರರು ಉತ್ತಮ ಸ್ಥಿತಿಯಲ್ಲಿದ್ದ ಕಾರಣ, ತಾಯಿಯ ಪೆನ್ಷನ್ ಹಣ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡುವ ಮೂಲಕ ಆಕೆಯ ಆಸೆಯನ್ನು ಪೂರೈಸಿದ್ದರು. ವರ್ಷಗಳ ನಂತರ, ಲೂಟಿಯ ವರದಿಗಳಿಂದ ಅವರು ಆಘಾತಕ್ಕೊಳಗಾಗಿದ್ದಾರೆ. ಭಗವಾನ್ ರಾಮನನ್ನೂ ಬಿಡದ ಕಳ್ಳರಿಗೆ ಅವರು ಶಾಪ ಹಾಕುತ್ತಿದ್ದಾರೆ.

ಈ ವರ್ಗದಲ್ಲಿ ರಾಜಕೀಯೇತರ ಹಿಂದೂಗಳು, ನಿಜವಾದ ಸಂತರು, ಯುವ ಪೀಳಿಗೆ ಹಾಗೂ ಹಿಂದುತ್ವವೇ ಹಿಂದೂ ಧರ್ಮ ಎಂದು ಗೊಂದಲಕ್ಕೊಳಗಾಗಿದ್ದ ಆರ್‌ಎಸ್‌ಎಸ್-ಬಿಜೆಪಿ ಬೆಂಬಲಿಗರ ಒಂದು ವಲಯ ಸೇರಿದೆ. ಹಿಂದೆ ಕರಸೇವೆಯಲ್ಲಿ ಪಾಲ್ಗೊಂಡು,  ರಾಮಮಂದಿರದ ನಿರ್ಮಾಣದೊಂದಿಗೆ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡಿದ್ದ ರಾಂಚಿಯ ತೀವ್ರ ಬಿಜೆಪಿ ಅಭಿಮಾನಿಯೊಬ್ಬರು ಈಗ ಕೆರಳಿ ಕೆಂಡವಾಗಿದ್ದಾರೆ. ಇಂತಹ ಅನೈತಿಕ ನಡಾವಳಿಗಳ ಬಗ್ಗೆ ಮೋದಿ ಹಾಗೂ ಭಾಗವತ್ ಅವರಿಗೆ ಮಾಹಿತಿ ಇರಲಿಲ್ಲ ಎಂದು ಭಾವಿಸುವುದು ಮೂರ್ಖತನ ಎಂದು ಒಪ್ಪುವ ಅವರು, ಈ ಕಳ್ಳತನದಲ್ಲಿ ಶಾಮೀಲಾಗಿರುವ ಪ್ರತಿಯೊಬ್ಬರಿಗೂ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸುತ್ತಾರೆ. ಅಯೋಧ್ಯೆಯ ಸಾಧು-ಸಂತರು ರಾಮಮಂದಿರವನ್ನು “ಆರ್‌ಎಸ್‌ಎಸ್ ಕಛೇರಿ” ಎಂದು ಕರೆಯುತ್ತಾ, ಅಲ್ಲಿನ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು “ಮೇಲಿನಿಂದ ಕೆಳಗಿನ ತನಕ ಭ್ರಷ್ಟಾಚಾರದಿಂದ ಕೂಡಿದೆ” ಎಂದು ದೂರುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಫೈಜಾಬಾದ್-ಅಯೋಧ್ಯೆಯ ವಕೀಲರು ಆರ್‌ಎಸ್‌ಎಸ್‌ನ ಮೂವರು ಪ್ರಮುಖ ಪದಾಧಿಕಾರಿಗಳಾದ – ಮಂದಿರದ ಉಸ್ತುವಾರಿ ವಹಿಸಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಪ್ರತಿಷ್ಠಾಪನಾ ಸಮಾರಂಭದಲ್ಲಿ ಪ್ರಮುಖ ಆಚರಣೆಗಳನ್ನು ನೆರವೇರಿಸಿದ ಅನಿಲ್ ಮಿಶ್ರಾ ಮತ್ತು ಮಂದಿರದ ದೈನಂದಿನ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಗೋಪಾಲ್ ರಾವ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿದ್ದಾರೆ. ವ್ಯಂಗ್ಯವೆಂದರೆ, ಮಂದಿರದ ನಿರ್ವಹಣೆಯಲ್ಲಿ ತೊಡಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಂಘ ಪರಿವಾರದವರಾಗಿದ್ದಾರೆ. ಆದರೆ, ಆರ್‌ಎಸ್‌ಎಸ್ ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಬೂಟಾಟಿಕೆಯನ್ನು ಎತ್ತುವ ಮೂಲಕ ದೇಶವನ್ನು ಗೊಂದಲಕ್ಕೀಡು ಮಾಡುತ್ತಿದೆ.

ಆದರೆ, ಮಂದಿರದೊಳಗೆ ನಡೆದ ಕರಾಳ ಕೃತ್ಯಗಳ ಬಗ್ಗೆ ಮೋದಿ ಅಥವಾ ಭಾಗವತ್ ಅವರಿಗೆ ಮಾಹಿತಿ ಇರಲಿಲ್ಲ ಎಂಬ ವಾದವನ್ನು ಒಪ್ಪಲು ಈ ಜನಕೂಟ ತಯಾರಿಲ್ಲ. ಪ್ರಧಾನಿ ಅವರು ತಮ್ಮ ಆಪ್ತರನ್ನು ಹಾಗೂ ಸಂಘದ ಮುಖಂಡರನ್ನು ಆರಿಸಿ ಈ ಟ್ರಸ್ಟ್ ಅನ್ನು ಸ್ಥಾಪಿಸಿದರು ಎಂಬುದನ್ನು ಮಾನ್ಯ ಮಾಡುವ ಇವರು, ಶುದ್ಧ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಯಾವುದೇ ಭದ್ರವಾದ ತಳಹದಿಯನ್ನು ರೂಪಿಸಲಿಲ್ಲ ಎಂದು ದೂರುತ್ತಾರೆ. ಆರ್‌ಎಸ್‌ಎಸ್ ಮತ್ತು ಮೋದಿ ಸರ್ಕಾರವು ಈ ಮಂದಿರವನ್ನು ತಮ್ಮ ಖಾಸಗಿ ಸ್ವತ್ತಿನಂತೆ ನಡೆಸಿಕೊಂಡಿವೆ, ಆದ್ದರಿಂದ ಈ ಕೊಳ್ಳೆಗೆ ಅವರೇ ಹೊಣೆ ಹೊರಬೇಕು ಎಂಬುದು ಅಯೋಧ್ಯೆಯ ಜನರ ನಿಲುವು. ಜಮೀನುಗಳನ್ನು ದುಬಾರಿ ಬೆಲೆಗೆ ಕೊಂಡುಕೊಂಡಿರುವುದು, ಸಾಮಗ್ರಿ ಖರೀದಿ ಹಾಗೂ ನಿರ್ಮಾಣದಲ್ಲಿ ಕಮಿಷನ್ ಹೊಡೆದಿರುವುದು ಮತ್ತು ಹಣ ಎಣಿಕೆಯ ಗೊಂದಲಗಳ ಕುರಿತು ಬಂದಿದ್ದ ಎಚ್ಚರಿಕೆಗಳನ್ನೆಲ್ಲ ವರ್ಷಗಟ್ಟಲೆ ಮೂಲೆಗೆ ತಳ್ಳಲಾಯಿತು. ಈ ಕೊಳ್ಳೆಯ ವಿರುದ್ಧ ಧ್ವನಿ ಎತ್ತಿದವರನ್ನು ಕೆಲಸದಿಂದಲೇ ಕಿತ್ತೊಗೆಯಲಾಯಿತು. ಅಯೋಧ್ಯೆ ಸೇರಿದಂತೆ ಇಡೀ ದೇಶದಲ್ಲಿ ಈಗ, ಅಸಲಿ ಅಪರಾಧಿಗಳನ್ನು ರಕ್ಷಿಸಿ ಕೇವಲ ಸಣ್ಣಪುಟ್ಟ ಕೆಲಸಗಾರರನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಅಭಿಪ್ರಾಯ ಎದ್ದಿದೆ. “ಚೋಟಿ ಮಚ್ಲಿಯಾನ್ ಪಕ್ಡಿ ಜಾ ರಹೀ ಹೈಂ…” (ಸಣ್ಣ ಮೀನುಗಳನ್ನು ಹಿಡಿಯಲಾಗುತ್ತಿದೆ) ಎಂಬ ಅಳಲನ್ನು ಹೊತ್ತ ಮುಗಿಯದಷ್ಟು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಸ್ತೆ ರಸ್ತೆಗಳಲ್ಲೂ “ಟ್ರಸ್ಟ್ ಇಸ್ ಭ್ರಷ್ಟ್” ಎಂಬ ಘೋಷಣೆಗಳು ಕೇಳಿಬರುತ್ತಿವೆ. 

ಈ ಹಗರಣದ ಅಸಲಿ ಸೂತ್ರಧಾರಿಗಳು ಅಥವಾ ನೈಜ ಅಪರಾಧಿಗಳು ಎಂದಿಗೂ ಕಾನೂನಿನ ಕೈಗೆ ಸಿಗುವುದಿಲ್ಲ ಎಂಬುದು ತರ್ಕಕ್ಕೆ ನಿಲುಕದ ಸತ್ಯ. ಆದರೆ, ಅಷ್ಟಕ್ಕೇ ಈ ಜುಗುಪ್ಸೆ ಹುಟ್ಟಿಸುವ ಅಧ್ಯಾಯವು ಮುಕ್ತಾಯ ಹಾಡುವುದಿಲ್ಲ; ಇದು ಹಿಂದೂ ಧರ್ಮದ ರಾಜಕಾರಣವಲ್ಲ, ಬದಲಿಗೆ ಹಿಂದುತ್ವದ ರಾಜಕೀಯ ಇತಿಹಾಸದ ಕಪ್ಪು ಚುಕ್ಕೆಯಾಗಿದೆ. ತನಿಖೆಗಳು ಯಾವ ತೀರ್ಮಾನಕ್ಕೆ ಬಂದು ತಲುಪಿದರೂ ಸಹ, ಕೊಳ್ಳೆಯ ಹಿಂದಿರುವ ನಿಜವಾದ ಹೊಣೆಗಾರರು ಯಾರು ಎಂಬುದು ಸಾರ್ವಜನಿಕರ ಮನದಾಳದಲ್ಲಿ ಗಟ್ಟಿಯಾಗಿ ಕೂತುಬಿಟ್ಟಿದೆ. ಸಾರ್ವಜನಿಕರ ನಂಬಿಕೆ ಈಗ ನುಜ್ಜುಗುಜ್ಜಾಗಿದೆ ಮತ್ತು ಅದಕ್ಕೆ ತೀವ್ರ ಘಾಸಿಯಾಗಿದೆ. ಇದು ಖಂಡಿತವಾಗಿಯೂ ದಿಕ್ಸೂಚಿ ಬದಲಿಸುವ ದೊಡ್ಡ ರಾಜಕೀಯ ಪಲ್ಲಟಗಳಿಗೆ ಕಾರಣವಾಗಲಿದೆ. ಒಂದು ಕಾಲದಲ್ಲಿ ಬಿಜೆಪಿಗೆ ರಾಜಕೀಯ ಚೈತನ್ಯದ ತಾಯಿಸ್ಥಾನವಾಗಿದ್ದ ಇದೇ ಅಯೋಧ್ಯೆ, ಈಗ ಬಿಜೆಪಿಯ ಪಾಲಿಗೆ ವಾಟರ್‌ಲೂ ಅಂದರೆ ಚರಮಗೀತೆಯಾಗಿ ಪರಿಣಮಿಸಬಹುದು. 

ಕೃಪೆ: thewire.in