✍️ ಏ.ಕೆ. ಕುಕ್ಕಿಲ
ರಾಮಮಂದಿರ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿ ಎರಡು ವಾದ ಇದೆ
- ರಾಮನನ್ನು ದೂಷಿಸಬೇಡಿ. ಹಿಂದೂ ಧರ್ಮವನ್ನೂ ದೂಷಿಸಬೇಡಿ. ಕಳ್ಳರನ್ನು ದೂಷಿಸಿ. ಅವರನ್ನು ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ.
- ಮಂದಿರಕ್ಕೆ ದೇಣಿಗೆ ನೀಡದವರಿಗೆ ದೇಣಿಗೆ ಕಳ್ಳತನದ ಬಗ್ಗೆ ಪ್ರಶ್ನಿಸುವುದಕ್ಕೆ ಯಾವುದೇ ಅರ್ಹತೆ ಇಲ್ಲ. ಅಂದಹಾಗೆ,
ಈ ಎರಡೂ ವಾದಗಳ ಮೂಲ ಒಂದೇ ಅಲ್ಲ. ಈ ಎರಡೂ ವಾದಗಳನ್ನು ಒಬ್ಬರೇ ಪ್ರತಿನಿಧಿಸುತ್ತಲೂ ಇಲ್ಲ. ಕ್ರಮ ಸಂಖ್ಯೆ 1ರಲ್ಲಿ ಸ್ವಾಮೀಜಿಗಳು, ಚಿಂತಕರು, ಹಿಂದೂ ಧರ್ಮದ ಬಗ್ಗೆ ನಿಜ ಕಾಳಜಿ ಇರುವ ಜನಸಾಮಾನ್ಯರು ಇದ್ದಾರೆ. ಕ್ರಮ ಸಂಖ್ಯೆ 2ರಲ್ಲಿ ಬಿಜೆಪಿ ಇದೆ. ಅವರ ಬೆಂಬಲಿಗ ಪರಿವಾರ ಇದೆ. ನಿಜವಾಗಿ,
ಕ್ರಮ ಸಂಖ್ಯೆ 1ರ ವಾದ ಅತ್ಯಂತ ತರ್ಕಬದ್ಧವಾದುದು. ಧರ್ಮಬದ್ಧವಾದುದು. ಈ ನೆಲದ ಮತ್ತು ಈ ಭೂಗೋಳದ ಸಹಜ ನ್ಯಾಯಕ್ಕೆ ಅನ್ವರ್ಥವಾದದ್ದು. ರಾಮಮಂದಿರದಲ್ಲಾದ ಕಳ್ಳತನಕ್ಕೆ ಶ್ರೀರಾಮ ಹೊಣೆಯಲ್ಲ. ಹಿಂದೂ ಧರ್ಮವೂ ಹೊಣೆಯಲ್ಲ. ಕಳ್ಳತನವನ್ನು ಒಂದು ಮೌಲ್ಯವಾಗಿ ಶ್ರೀರಾಮ ಕಲಿಸಿಲ್ಲ. ಕಳ್ಳತನವನ್ನು ಶ್ರೀರಾಮ ಧರ್ಮ ಬದ್ಧ ಗೊಳಿಸಿಲ್ಲ. ಹಿಂದೂ ಧರ್ಮದ ಪ್ರತಿಪಾದನೆಯಲ್ಲಿ ಎಲ್ಲೂ ಕಳ್ಳತನಕ್ಕೆ ಮಾನ್ಯತೆ ಕೊಟ್ಟಿಲ್ಲ. ಅದು ವಂಚನೆ ಮತ್ತು ಅನ್ಯಾಯದ ಮೂಲದಿಂದ ಸಂಗ್ರಹವಾದ ಧನವನ್ನು ಧರ್ಮ ಬದ್ಧ ಎಂದು ಘೋಷಿಸಿಲ್ಲ. ಆದ್ದರಿಂದ ಯಾರು ಕಳ್ಳತನ ನಡೆಸಿದ್ದಾರೋ ಅವರು ಮಾತ್ರ ಕಳ್ಳತನಕ್ಕೆ ಹೊಣೆಗಾರರು. ಹಾಗಂತ,
ಈ ಬಗೆಯ ವಾದವನ್ನು ಈ ದೇಶದ ಮುಸ್ಲಿಮರು ಉದ್ದಕ್ಕೂ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಮುಸ್ಲಿಮ್ ರಾಜರು ಮತ್ತು ಮುಸ್ಲಿಮ್ ವ್ಯಕ್ತಿಗಳು ಮಾಡಿರುವ ಕೃತ್ಯಗಳಿಗೆ ಅವರವರೇ ಹೊಣೆಗಾರರು. ಅದಕ್ಕೆ ಇಸ್ಲಾಮ್ ಧರ್ಮ ಹೊಣೆ ಅಲ್ಲ. ಮುಸ್ಲಿಮ್ ಸಮುದಾಯ ಹೊಣೆಯಲ್ಲ. ಪ್ರವಾದಿ ಮುಹಮ್ಮದ್(ಸ) ಹೊಣೆ ಅಲ್ಲ. ಪವಿತ್ರ ಕುರ್ಆನ್ ಕೂಡ ಹೊಣೆ ಅಲ್ಲ. ಆದರೆ ಇಂಥ ವಾದವನ್ನು ಈ ದೇಶದ ಒಂದು ಗುಂಪು ಪದೇ ಪದೇ ವ್ಯಂಗ್ಯ ಮಾಡುತ್ತಲೇ ಬಂದಿದೆ. ಮುಸ್ಲಿಮ್ ವ್ಯಕ್ತಿಯ ತಪ್ಪನ್ನು ಅದು ಇಸ್ಲಾಮ್ ಧರ್ಮದ ತಪ್ಪಾಗಿ ಮತ್ತು ಮುಸ್ಲಿಮ್ ಸಮುದಾಯದ ಅಪರಾಧವಾಗಿ ಅದು ಬಿಂಬಿಸುತ್ತಲೇ ಬಂದಿದೆ ಮತ್ತು ಬರುತ್ತಿದೆ. ಕ್ರಿ.ಶ. 1000-1027ನೇ ಇಸವಿಯ ನಡುವೆ ಅಫಘಾನ್ ದೊರೆ ಮುಹಮ್ಮದ್ ಘಝ್ನಿ ಎಂಬವ ಈ ಉಪಭೂಖಂಡದ ಮೇಲೆ 17 ಬಾರಿ ದಂಡೆತ್ತಿ ಬಂದಿದ್ದಾನೆ ಮತ್ತು ಪ್ರತಿ ಸಂದರ್ಭದಲ್ಲೂ ದೇವಾಲಯಗಳನ್ನು ಲೂಟಿ ಮಾಡಿದ್ದಾನೆ ಎಂಬ ಚರಿತ್ರೆ ಇದೆ. ಇದರಲ್ಲಿ ಪ್ರಸಿದ್ಧ ಸೋಮನಾಥ ದೇವಾಲಯವೂ ಒಂದು. ಆಗ ಸೋಮನಾಥ ದೇವಾ ಲಯದ ಗಂಟೆಯನ್ನು ನೇತು ಹಾಕಲು ಬಳಸಿದ ಬೆಳ್ಳಿಯ ಪ್ರತಿಯೊಂದು ಸರಪಳಿಯ ತೂಕ ಇಪ್ಪತ್ತು ಮಣ ಎಂದು ಹೇಳಲಾಗುತ್ತದೆ. ಗರ್ಭಗುಡಿಯಲ್ಲಿ 362 ಬೆಳ್ಳಿ ಮತ್ತು ಚಿನ್ನದ ಮೂರ್ತಿಗಳಿದ್ದುವು ಎಂದೂ ಹೇಳಲಾಗುತ್ತಿದೆ. ಈ ದೇವಾಲಯದಿಂದ ಸುಮಾರು ಎರಡು ಕೋಟಿ ದೀನಾರ್ ಗಳಷ್ಟು ಬೆಲೆ ಬಾಳುವ ಬಂಗಾರ, ವಜ್ರ, ರತ್ನಗಳನ್ನು ಆತ ಲೂಟಿ ಮಾಡಿದ್ದಾನೆ. ಮಥುರಾ, ಕನೌಜ್ನ ಮಂದಿರ ಗಳ ಮೇಲೂ ದಾಳಿ ಮಾಡಿದ್ದಾನೆ ಎಂಬ ವರದಿಗಳಿವೆ. ಅಂದಹಾಗೆ,
ಮುಹಮ್ಮದ್ ಘೋರಿ ಕೂಡಾ ಅಫಘಾನ್ ದೊರೆ. ಈತನೂ ಈ ಉಪಭೂಖಂಡದ ಮೇಲೆ ದಾಳಿ ಮಾಡಿದ್ದಾನೆ. ಈತ ಕಣ್ಣಿಟ್ಟದ್ದೂ ಮಂದಿರಗಳ ಮೇಲೆಯೇ. 1178ರಲ್ಲಿ ಕಿರಾಡು ಶಿವ ದೇವಾಲಯದ ಮೇಲೆ ಮತ್ತು 1192ರಲ್ಲಿ ಕಾಶಿ ಮಂದಿರದ ಮೇಲೆ ದಾಳಿ ಮಾಡಿದ್ದಾನೆ ಎಂಬ ವರದಿಗಳಿವೆ. ಮಾತ್ರವಲ್ಲ, ಅಪಾರ ಪ್ರಮಾಣದ ಸಂಪತ್ತನ್ನು ದೋಚಿಕೊಂಡು ಹೋಗಿದ್ದಾನೆ ಎಂದೂ ಹೇಳಲಾಗುತ್ತದೆ. ಅಷ್ಟಕ್ಕೂ,
ಈ ಇಬ್ಬರೂ ರಾಜರುಗಳನ್ನು ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
ಘಝ್ನಿ ಮತ್ತು ಘೋರಿಗಳ ಕಾಲದಿಂದ ಹಿಡಿದು ಈ 2026ರ ವರೆಗಿನ ಕಾಲದ ವರೆಗೆ ಮಂದಿರಗಳೆಂಬುದು ಸಂಪತ್ತನ್ನು ಸಂಗ್ರಹಿಸಿ ಇಡುವ ಬ್ಯಾಂಕ್ ಗಳಾಗಿ ಪರಿವರ್ತನೆ ಆಗಿದೆ. ರಾಜರುಗಳ ಕಾಲದಲ್ಲಿ ಬ್ಯಾಂಕ್ಗಳು ಇರಲಿಲ್ಲ. ಆದ್ದರಿಂದ ಮಂದಿರಗಳು ಆರ್ಥಿಕ ಕೇಂದ್ರಗಳಾಗಿ ಬ್ಯಾಂಕ್ನಂತೆ ಕಾರ್ಯನಿರ್ವ ಹಿಸುತ್ತಿದ್ದುವು. ದೇವಾಲಯಗಳು ಪವಿತ್ರ ಮತ್ತು ಸುರಕ್ಷಿತ ಸ್ಥಳಗಳಾಗಿ ಗುರುತಿಗೀಡಾಗಿರುವುದರಿಂದ ಜನರು ತಮ್ಮ ಬೆಳ್ಳಿ, ಆಸ್ತಿ, ಹಣವನ್ನು ಠೇವಣಿ ಇಡುತ್ತಿದ್ದರು. ದೇವಾಲಯಗಳು ಕೃಷಿಕರು ಮತ್ತು ವ್ಯಾಪಾರಿಗಳಿಗೆ ಸಾಲ ನೀಡುತ್ತಿದ್ದುವು ಎಂಬುದೇ ಅಲ್ಲಿ ಠೇವಣಿಯಾಗಿ ಇರಬಹುದಾದ ಅಪಾರ ಸಂಪತ್ತಿನ ರಾಶಿಯನ್ನು ಹೇಳುತ್ತದೆ. ಆದರೆ,
ಮಸೀದಿಗಳು ಇದಕ್ಕೆ ವ್ಯತಿರಿಕ್ತವಾಗಿದ್ದುವು. ಪ್ರವಾದಿ(ಸ) ಕಾಲದಿಂದ ಹಿಡಿದು ಈ 2026ರ ವರೆಗಿನ ಯಾವುದೇ ಕಾಲದಲ್ಲೂ ಮಸೀದಿ ಧನ-ಕನಕಗಳಿಂದ ತುಂಬಿ ಕೊಂಡಿದ್ದೇ ಇಲ್ಲ. ಮಸೀದಿಗೆ ಬೆಳ್ಳಿ-ಬಂಗಾರವನ್ನು ದಾನ ಮಾಡುವ ಪರಿಪಾಠವೂ ಇಲ್ಲ. ಮಸೀದಿಗಳ ಪೈಕಿ ಪರಮೋಚ್ಛ ಸ್ಥಾನವನ್ನು ಪಡೆದಿರುವ ಮಕ್ಕಾದ ಮಸ್ಜಿದುಲ್ ಹರಮ್ನಲ್ಲಾಗಲಿ ಮದೀನಾದ ಮಸ್ಜಿದುನ್ನಬವಿಯಲ್ಲಾಗಲಿ ದೇಣಿಗೆ ಕೊಡುವ ಅಥವಾ ಸ್ವೀಕರಿಸುವ ಸಂಪ್ರದಾಯವೇ ಇಲ್ಲ. ಅಲ್ಲಿ ದೇಣಿಗೆ ನೀಡುವುದಕ್ಕೆ ಕೌಂಟರ್ಗಳಿಲ್ಲ. ಸ್ವೀಕರಿಸುವುದಕ್ಕೆಂದು ಸಿಬಂದಿಗಳೂ ಇಲ್ಲ. ಮಸೀದಿ ಎಂಬುದು ನಾಲ್ಕು ಗೋಡೆಗಳಿಂದ ಸುತ್ತು ವರಿದಿರುವ ಸಾಮಾನ್ಯ ಕಟ್ಟಡವೇ ಹೊರತು ಅದು ಮುಸ್ಲಿಮರ ಪಾಲಿನ ಬ್ಯಾಂಕ್ ಅಲ್ಲ. ಮಸೀದಿ ಒಳಗೆ ನಮಾಝ್ ಮಾಡುವುದಕ್ಕೆಂದು ಚಾಪೆಗಳಿವೆ. ಮೈಕ್ ಇದೆ. ಪ್ರವಚನ ಪೀಠ ಇದೆ. ಕತ್ತಲೆಯನ್ನು ಓಡಿಸುವುದಕ್ಕೆಂದು ವಿದ್ಯುತ್ ದೀಪಗಳಿವೆ. ಒಂದಷ್ಟು ಮಸೀದಿಗಳಲ್ಲಿ ಎಸಿ ಸೌಲಭ್ಯವಿದೆ. ಬಹಳಷ್ಟು ಮಸೀದಿಗಳಲ್ಲಿ ಫ್ಯಾನ್ ಸೌಕರ್ಯ ಮಾತ್ರವೇ ಇದೆ. ಇಲ್ಲಿ ಧರ್ಮದ ಬಗ್ಗೆ ಹೆಚ್ಚು ಜ್ಞಾನ ಇರುವ ವ್ಯಕ್ತಿಯ ನೇತೃತ್ವದಲ್ಲಿ ನಮಾಝ್ ನಡೆಯುತ್ತದೆ. ಅವರು ಎಲ್ಲರಿಗಿಂತ ಮುಂದೆ ನಿಲ್ಲುತ್ತಾರೆ. ಉಳಿದವರೆಲ್ಲರೂ ಅವರ ಹಿಂದೆ ಸಾಲಾಗಿ ನಿಂತು ಅವರನ್ನು ಅನುಸರಿಸುತ್ತಾರೆ. ಮಸೀದಿಗಳು ಅಂದಿನಿಂದ ಇಂದಿನ ವರೆಗೆ ನಡೆದು ಬಂದಿರುವುದೇ ಹೀಗೆ.
ಇಂಥ ವಾತಾವರಣದಲ್ಲಿ ಬೆಳೆದಿರುವ ಘಝ್ನಿ, ಘೋರಿಗಳಿಗೆ ಮಂದಿರಗಳು ಇವಕ್ಕೆ ಭಿನ್ನವಾಗಿರುವುದನ್ನು ಮತ್ತು ಸಂಪತ್ತಿನ ರಾಶಿಯನ್ನೇ ತನ್ನ ಒಡಲಲ್ಲಿ ಬಚ್ಚಿಟ್ಟು ಕೊಂಡಿರುವುದನ್ನು ಕೇಳಿ ಕೊಳ್ಳೆ ಹೊಡೆಯುವ ಆಲೋಚನೆ ಹುಟ್ಟಿರಬಹುದು. ಈ ಇಬ್ಬರೂ ರಾಜರು ಲೂಟಿ ಮಾಡಿದ ಸಂಪತ್ತಿನೊಂದಿಗೆ ಅಫಘಾನ್ಗೆ ಹಿಂತಿರುಗಿರುವುದನ್ನು ನೋಡಿದರೆ, ಅವರ ಉದ್ದೇಶ ಏನು ಅನ್ನುವುದು ಗೊತ್ತಾಗುತ್ತದೆ. ಒಂದುವೇಳೆ,
ಇವರು ಮತ್ತು ಇತರ ಮುಸ್ಲಿಮ್ ದೊರೆಗಳು ಮಂದಿರಗಳ ಮೇಲೆ ನಡೆಸಿರುವ ದಾಳಿ, ಕೊಳ್ಳೆ ಮತ್ತು ಲೂಟಿಗೆ ಬೇರೆಯದೇ ಆದ ಕಾರಣಗಳಿವೆ ಮತ್ತು ಅವರಲ್ಲಿ ಧರ್ಮದ್ವೇಷ ಇದೆ ಎಂದೇ ವಾದಿಸಿದರೂ ಅದಕ್ಕೆ ಮುಸ್ಲಿಮ್ ಸಮುದಾಯ ಹೊಣೆಯಾಗುವುದಿಲ್ಲ. ಇಸ್ಲಾಮ್ ಧರ್ಮವೂ ಹೊಣೆಯಾಗುವುದಿಲ್ಲ. ರಾಜರುಗಳಿಗೆ ಅವರದ್ದೇ ಆದ ಧೋರಣೆ ಮತ್ತು ಉದ್ದೇಶಗಳಿರುತ್ತವೆ. ಅದರಲ್ಲಿ ಭೂವಿಸ್ತಾರವೂ ಒಂದು. ಅಧಿಕಾರ ರಾಜಕಾರಣವೂ ಒಂದು. ಜೋಧಪುರದ ಜಸ್ವಂತ್ ಸಿಂಗ್ ಎಂಬ ರಜಪೂತ ರಾಜ ಮಸೀದಿಗಳನ್ನು ಒಡೆದು ಮಂದಿರ ನಿರ್ಮಿಸಿದ್ದಾನೆ ಎಂಬ ಆರೋಪ ಇದೆ. 1658-59ರಲ್ಲಿ ಔರಂಗಝೇಬನ ಕಾಲದಲ್ಲಿ ನಡೆದ ಘಟನೆಯಾಗಿ ಇತಿಹಾಸ ಇದನ್ನು ದಾಖಲಿಸಿದೆ. ಮರಾಠ ದೊರೆಗಳ ಕಾಲ ದಲ್ಲೂ ಮುಖ್ಯವಾಗಿ ಜಿಂಜಿ ಪ್ರದೇಶದಲ್ಲಿ ಮಸೀದಿಗಳನ್ನು ಒಡೆದು ದೇವಾಲಯಗಳಾಗಿ ಪರಿವರ್ತಿಸಲಾಗಿರುವ ಆರೋಪಗಳಿವೆ. 1858ರಲ್ಲಿ ಅವಧ್ನ ಹನುಮಾನ್ಘಡ್ನಲ್ಲಿ ಸ್ಥಳೀಯ ರಾಜರುಗಳು ಮಸೀದಿ ನಾಶ ಮಾಡಿರುವ ಬಗ್ಗೆ ಉಲ್ಲೇಖಗಳಿವೆ. ಇವಲ್ಲದೇ,
ಹಿಂದೂ ರಾಜರುಗಳೇ ಮಂದಿರಗಳ ಮೇಲೂ ಜೈನ ಬಸದಿ ಮತ್ತು ಬೌದ್ಧ ಸ್ತೂಪಗಳ ಮೇಲೂ ದಾಳಿ ಮಾಡಿರುವ ಮತ್ತು ನಾಶ ಮಾಡಿರುವ ಧಾರಾಳ ಘಟನೆಗಳಿವೆ. ಇವೆಲ್ಲದರ ಹಿಂದೆ ಧರ್ಮದ್ವೇಷಕ್ಕಿಂತ ರಾಜಕೀಯ ಶಕ್ತಿ ಪ್ರದರ್ಶನಗಳೇ ಮುಖ್ಯವಾಗಿತ್ತು. ಗೆದ್ದ ರಾಜ ಸೋತ ರಾಜನ ವ್ಯಾಪ್ತಿಯಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ನಾಶ ಮಾಡುವುದನ್ನು ತನ್ನ ಶಕ್ತಿ ಸಾಮರ್ಥ್ಯದ ಪ್ರತೀಕವಾಗಿ ಮತ್ತು ಸೋತ ರಾಜನನ್ನು ಅವಮಾನಿಸುವ ಆಯುಧವಾಗಿ ಪರಿಗಣಿಸುತ್ತಿದ್ದ. 1089ರಿಂದ 1101ರ ವರೆಗೆ ಕಾಶ್ಮೀರದ ರಾಜನಾಗಿದ್ದ ಹರ್ಷದೇವ ಎಂಬವ ‘ಮಂದಿರ ಭಂಜಕ’ ಎಂಬ ಖಾತೆಯನ್ನೇ ಸೃಷ್ಟಿಸಿ ಅದಕ್ಕೊಬ್ಬ ಅಧಿಕಾರಿಯನ್ನೂ ನೇಮಿಸಿದ್ದ ಎಂದು ಕಲ್ಹಣನ ರಾಜತರಂಗಿಣಿ ಗ್ರಂಥದಲ್ಲಿದೆ. ದೇವಾಲಯವನ್ನು ಲೂಟಿ ಮಾಡುವುದೇ ಮತ್ತು ಅಲ್ಲಿನ ಬಂಗಾರ, ಬೆಳ್ಳಿ ವಿಗ್ರಹಗಳನ್ನು ಕರಗಿಸಿ ರಾಜ್ಯದ ಖಜಾನೆ ತುಂಬಿಸುವುದೇ ಈ ಅಧಿಕಾರಿಯ ಪರಮ ಹೊಣೆಗಾರಿಕೆಯಾಗಿತ್ತು. ದುರಂತ ಏನೆಂದರೆ,
ಮುಸ್ಲಿಮ್ ದೊರೆಗಳ ಕೃತ್ಯವನ್ನು ಮುಸ್ಲಿಮ್ ಸಮುದಾಯ ಮತ್ತು ಇಸ್ಲಾಮ್ ಧರ್ಮದ ಮೇಲೆ ಹೊರಿಸು ವವರು ಹಿಂದೂ ರಾಜರುಗಳ ಕೃತ್ಯವನ್ನು ಹಿಂದೂ ಸಮುದಾಯ ಮತ್ತು ಹಿಂದೂ ಧರ್ಮದ ಮೇಲೆ ಹೊರಿಸುವುದೇ ಇಲ್ಲ. ಈ ದ್ವಂದ್ವಕ್ಕೆ ರಾಮಮಂದಿರ ಪ್ರಕರಣವು ಕನ್ನಡಿ ಹಿಡಿದಿದೆ. ರಾಮಮಂದಿರ ಹುಂಡಿ ಕಳ್ಳತನ ಹೇಗೆ ವ್ಯಕ್ತಿಗಳ ವೈಯಕ್ತಿಕ ಅಪರಾಧವೋ ಹಾಗೆಯೇ ಮುಸ್ಲಿಮ್ ವ್ಯಕ್ತಿಗಳ ಅಪರಾಧಗಳು ಕೂಡಾ ಅವರ ವೈಯಕ್ತಿಕವೇ. ಅದನ್ನು ಹಾಗೆಯೇ ನೋಡಬೇಕು ಎಂಬುದನ್ನು ರಾಮ ಮಂದಿರ ಪ್ರಕರಣ ಸ್ಪಷ್ಟಪಡಿಸಿದೆ. ಇದೇವೇಳೆ,
ಕ್ರಮ ಸಂಖ್ಯೆ 2ರ ವಾದ ಅತ್ಯಂತ ಬೇಜವಾಬ್ದಾರಿತನದ್ದು ಮತ್ತು ಕಳ್ಳತನವನ್ನು ಪರೋಕ್ಷವಾಗಿ ಸಮರ್ಥಿಸುವಂಥದ್ದು. ಇದು, ರಾಜಕೀಯ ಪಕ್ಷವೊಂದು ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕೆ ಕಂಡುಕೊಂಡ ದುರ್ಬಲ ವಾದವೇ ಹೊರತು ಇನ್ನೇನಲ್ಲ. ಇದೇ ವಾದ ಸರಿ ಎಂದಾದರೆ, ‘ನಮಾಝ್ ಮಾಡದವರು ನಮಾಝ್ನ ಬಗ್ಗೆ ಮಾತಾಡುವ ಹಾಗಿಲ್ಲ’, ‘ಇಸ್ಲಾಮ್ ಧರ್ಮಕ್ಕೆ ನಿಷ್ಠೆ ಇಲ್ಲದವರು ಇಸ್ಲಾಮ್ನ ಬಗ್ಗೆ ಮಾತಾಡುವ ಹಾಗಿಲ್ಲ’, ‘ಬುರ್ಖಾ-ಹಿಜಾಬ್ ಧರಿಸದವರು ಅದರ ಬಗ್ಗೆ ಮಾತಾಡುವ ಹಾಗಿಲ್ಲ’, ‘ಮಾಂಸಾಹಾರ ಸೇವಿಸದವರು ಮಾಂಸಾಹಾರದ ಬಗ್ಗೆ ಮಾತಾಡುವ ಹಾಗಿಲ್ಲ’, ‘ರಮಝಾನ್ ಉಪವಾಸ ಮಾಡದವರು ಉಪವಾಸದ ಬಗ್ಗೆ ಮಾತಾಡುವ ಹಾಗಿಲ್ಲ’, ‘ಮಸೀದಿಗೆ ನಡಕೊಳ್ಳದವರು ಮಸೀದಿ ಬಗ್ಗೆ ಮಾತಾಡುವ ಹಾಗಿಲ್ಲ’.. ಎಂದೆಲ್ಲಾ ವಾದಿಸುವುದೂ ಸರಿ ಎಂದಾಗುತ್ತದೆ. ನಿಜವಾಗಿ,
ಈ ದೇಶದ ಸಂವಿಧಾನವನ್ನು ಒಪ್ಪಿಕೊಂಡು ಬದುಕುವ ಎಲ್ಲರಿಗೂ ಇಲ್ಲಿನ ಎಲ್ಲ ಬೆಳವಣಿಗೆಗಳ ಬಗ್ಗೆಯೂ ಮಾತಾಡುವ ಹಕ್ಕು ಸಹಜವಾಗಿಯೇ ಬಂದಿರುತ್ತದೆ. ಅದು ಮಂದಿರವಾದರೂ ಮಸೀದಿಯಾದರೂ. ಇಂಥ ವಾದಗಳು ಅಂತಿಮವಾಗಿ ಅತ್ಯಾಚಾರ, ಅನ್ಯಾಯ, ಹತ್ಯೆ ಇತ್ಯಾದಿಗಳನ್ನು ಧರ್ಮಾಧಾರಿತವಾಗಿ ವಿಭಜಿಸಿ ಬಿಡುವ ಮತ್ತು ಆಯಾ ಧರ್ಮದವರ ಹೊರತಾಗಿ ಇತರರು ಮಾತಾಡದಂತೆ ತಡೆಯುವ ಅಪಾಯಕಾರಿ ಹಂತಕ್ಕೆ ತಂದು ನಿಲ್ಲಿಸಬಹುದು. ರಾಜಕಾರಣಿಗಳು ತಮ್ಮ ವೈಫಲ್ಯವನ್ನು ಧರ್ಮದ ಮರೆಯಲ್ಲಿ ಮುಚ್ಚಿ ಹಾಕಲು ಹೇಗೆ ಯತ್ನಿಸುತ್ತಾರೆ ಅನ್ನುವುದಕ್ಕೆ ಈ ವಾದ ಒಂದೊಳ್ಳೆಯ ಉದಾಹರಣೆ. ನಿಜ ಏನೆಂದರೆ,
ರಾಮ ಮಂದಿರದ ದೇಣಿಗೆ ಕಳ್ಳತನಕ್ಕೆ ಶ್ರೀರಾಮ ಕಾರಣ ಅಲ್ಲ, ಹಿಂದೂ ಧರ್ಮವೂ ಕಾರಣ ಅಲ್ಲ.












