ಸನ್ಮಾರ್ಗ ವಾರ್ತೆ
ಟೆಲ್ ಅವಿವ್: ಫೆಲೆಸ್ತೀನ್ ಕೈದಿಗಳು ಜೈಲಿನಿಂದ ಪರಾರಿಯಾಗುವುದನ್ನು ತಡೆಯಲು ನೈಲ್ ಮೊಸಳೆಗಳಿಂದ ಸುತ್ತುವರೆದ ಕಂದಕಗಳನ್ನು ನಿರ್ಮಿಸುವ ಇಸ್ರೇಲ್ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಅವರ ಪ್ರಸ್ತಾವನೆಯನ್ನು ಜಾರಿಗೆ ತರಲು ಇಸ್ರೇಲ್ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ನೈಲ್ ಮೊಸಳೆಗಳ ಕಾನೂನುಬದ್ಧ ರಕ್ಷಣಾ ಸ್ಥಾನಮಾನವನ್ನು ಇಸ್ರೇಲ್ ತೆಗೆದುಹಾಕಿದ್ದು, ರಾಷ್ಟ್ರೀಯ ಭದ್ರತಾ ಉದ್ದೇಶಗಳಿಗಾಗಿ ಮತ್ತು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಭದ್ರತಾ ಪಡೆಗಳು ಮೊಸಳೆಗಳನ್ನು ಇಟ್ಟುಕೊಳ್ಳಲು ಸರ್ಕಾರಕ್ಕೆ ಅನುಮತಿ ನೀಡಲಾಗಿದೆ ಎಂದು ಇಸ್ರೇಲ್ ಪರಿಸರ ರಕ್ಷಣೆ ಸಚಿವೆ ಎಡಿತ್ ಝಿಲ್ಮಾನ್ ಆದೇಶದಲ್ಲಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ‘ಫೆಲೆಸ್ತೀನಿಯರಿಂದ ತುಂಬಿದ ಜೈಲು, ಕಂದಕಗಳು ಮತ್ತು ಮೊಸಳೆಗಳಿಂದ ಸುತ್ತುವರಿಯಲಿ’ ಎಂಬ ಈ ಯೋಜನೆಯನ್ನು ಮೊದಲು ದಕ್ಷಿಣ ಇಸ್ರೇಲ್ನಲ್ಲಿರುವ ಫೆಲೆಸ್ತೀನ್ ಕೈದಿಗಳನ್ನು ಹೊಂದಿರುವ ‘ಕೆಟ್ಜಿಯೋಟ್’ ಜೈಲಿನಲ್ಲಿ ಜಾರಿಗೆ ತರಲಾಗುವುದು.
ಸರ್ಕಾರದ ಆದೇಶ ಹೊರಬಂದ ನಂತರ, ಬೆನ್ ಗ್ವಿರ್ ಹಗ್ಗ ಹಿಡಿದಿರುವ ಮೊಸಳೆಯ ಎಐ-ಸೃಷ್ಟಿಸಿದ ಚಿತ್ರವನ್ನು “ಪರಾರಿಯಾಗುವ ಬಗ್ಗೆ ಯೋಚಿಸಬೇಡಿ” ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಇಸ್ರೇಲ್ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಇಸ್ರೇಲ್ ನೈಸರ್ಗಿಕ ಮತ್ತು ಉದ್ಯಾನ ಪ್ರಾಧಿಕಾರ ಹಾಗೂ ಪರಿಸರ ಸಚಿವಾಲಯದ ಕಾನೂನು ಸಲಹೆಗಾರರು ಮುಂದೆ ಬಂದಿದ್ದಾರೆ. ಯಾವುದೇ ಕಾನೂನು ಆಧಾರವಿಲ್ಲದ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಪರಿಸರ ಸಚಿವಾಲಯದ ಕಾನೂನು ಸಲಹೆಗಾರ್ತಿ ನೇತಾ ದ್ರೋರಿ ಪ್ರತಿಕ್ರಿಯಿಸಿದ್ದಾರೆ. ಮೊಸಳೆಗಳನ್ನು ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಮಾತ್ರ ಇಟ್ಟುಕೊಳ್ಳಬೇಕು ಎಂದು ನೈಸರ್ಗಿಕ ಮತ್ತು ಉದ್ಯಾನ ಪ್ರಾಧಿಕಾರವು ಈ ಹಿಂದೆ ಹೇಳಿದ್ದು, ಸಿಲ್ಮಾನ್ ಅವರ ಆದೇಶವು ಇದನ್ನು ಮೀರುತ್ತದೆ ಎಂದು ತಿಳಿಸಲಾಗಿದೆ. ಆಕ್ರಮಣಕಾರಿ ನಾಯಿಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ತಮ್ಮ ಅಧಿಕಾರಿಗಳು ಮೊಸಳೆಗಳನ್ನೂ ಸಹ ನಿರ್ವಹಿಸಬಲ್ಲರು ಎಂದು ಇಸ್ರೇಲ್ ಜೈಲು ಪ್ರಾಧಿಕಾರವು ಹೇಳುತ್ತಿದ್ದರೂ, ಈ ಪ್ರತಿಪಾದನೆಯನ್ನು ನೇತಾ ದ್ರೋರಿ ತಿರಸ್ಕರಿಸಿದ್ದು, ಸೈನ್ಯದಲ್ಲಿರುವ ಅಧಿಕಾರಿಗಳಿಗೆ ಮೊಸಳೆಗಳನ್ನು ನಿರ್ವಹಿಸುವ ಜ್ಞಾನವಿಲ್ಲ ಎಂದೂ ಎತ್ತಿ ತೋರಿಸಿದ್ದಾರೆ.












