ಸನ್ಮಾರ್ಗ ವಾರ್ತೆ
ಹೊಸದೆಹಲಿ: ತಾನು ಭಾರತ ಸರ್ಕಾರದ ಅಧಿಕೃತ ನಿಯೋಗದ ಭಾಗವಾಗಿರಲಿಲ್ಲ ಎಂದು ಗೋಸ್ವಾಮಿ ಸುಶೀಲ್ ಜಿ ಮಹಾರಾಜ್ ಸ್ಪಷ್ಟಪಡಿಸಿದ್ದಾರೆ. ಧರ್ಮಗಳ ನಡುವಿನ ಸೌಹಾರ್ದತೆಗೆ ಬದ್ಧವಾಗಿರುವ ಧಾರ್ಮಿಕ ನಾಯಕರ ಪ್ರತಿನಿಧಿಯಾಗಿ ಇರಾನ್ ರಾಯಭಾರ ಕಚೇರಿಯ ಆಹ್ವಾನದ ಮೇರೆಗೆ ತಾನು ಇರಾನ್ಗೆ ಪ್ರಯಾಣ ಬೆಳೆಸಿದ್ದಾಗಿ ಅವರು ತಿಳಿಸಿದ್ದಾರೆ. ತಮ್ಮ ನಿಯೋಗಕ್ಕೆ ಸಿಕ್ಕ ಗೌರವವು ಧರ್ಮದ ಆಧಾರದ ಮೇಲೆ ಅಲ್ಲ, ಬದಲಿಗೆ ಮಾನವತೆಯನ್ನು ಪ್ರತಿನಿಧಿಸುವ ಆಧ್ಯಾತ್ಮಿಕ ನಾಯಕರು ಎಂಬ ಕಾರಣಕ್ಕೆ ಎಂದು ಒತ್ತಿಹೇಳಿದ್ದಾರೆ.
“ನಮ್ಮನ್ನು ಭಾರತ ಸರ್ಕಾರ ಕಳುಹಿಸಿಲ್ಲ, ಇರಾನ್ ಆಹ್ವಾನಿಸಿದೆ. ಸರ್ಕಾರದ ನಿಯೋಗವು ಪ್ರತ್ಯೇಕವಾಗಿತ್ತು. ನಾವು ಧಾರ್ಮಿಕ ನಾಯಕರು ಮತ್ತು ಸಮಾಜದಲ್ಲಿ ಆಧ್ಯಾತ್ಮಿಕ ನಾಯಕರು ವಿಶೇಷ ಸ್ಥಾನವನ್ನು ಹೊಂದಿದ್ದಾರೆ ಎಂದು ಅವರು ನಂಬುವುದರಿಂದ ನಮಗೆ ಗೌರವ ನೀಡಿದರು” ಎಂದು ವಿವರಿಸಿದ್ದಾರೆ.
ಇರಾನ್ನಿಂದ ತಾವು ಹೊತ್ತುಕೊಂಡು ಬಂದ ಬಲವಾದ ಅನಿಸಿಕೆಗಳಲ್ಲಿ ಅಲ್ಲಿನ ಜನತೆ ಮತ್ತು ಅಧಿಕಾರಿಗಳು ತೋರಿದ ಅಸಾಧಾರಣ ಆತಿಥ್ಯವೂ ಒಂದಾಗಿದೆ. “ನಾನು ಅನೇಕ ದೇಶಗಳಿಗೆ ಪ್ರಯಾಣಿಸಿದ್ದೇನೆ, ಆದರೆ ಇರಾನ್ನಲ್ಲಿ ಅನುಭವಿಸಿದಂತಹ ಆತಿಥ್ಯವನ್ನು ನಾನು ಎಂದಿಗೂ ಅನುಭವಿಸಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಬಲ್ಲೆ” ಎಂದಿರುವ ಅವರು, ಭೇಟಿಯ ಪ್ರತಿಯೊಂದು ನಿಮಿಷವನ್ನು ಕಾಳಜಿಯಿಂದ ಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ. ನಮಗೆ ಯಾವುದೇ ತೊಂದರೆಯಾಗದಂತೆ ಅವರು ನಿರಂತರವಾಗಿ ನೋಡಿಕೊಂಡರು ಮತ್ತು ಆರಾಮದಾಯಕವಾಗಿದೆ ಎಂದು ನಾವು ಹೇಳಿದಾಗ್ಯೂ ಅಪಾರ ಪ್ರೀತಿ ಹಾಗೂ ಗೌರವದಿಂದ ನೋಡಿಕೊಳ್ಳುವುದನ್ನು ಮುಂದುವರೆಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇರಾನ್ನ ಹಿರಿಯ ನಾಯಕರು ವೈಯಕ್ತಿಕವಾಗಿ ನಿಯೋಗವನ್ನು ಭೇಟಿಯಾದರು. ಇರಾನ್ ಅಧ್ಯಕ್ಷರು ಪ್ರತ್ಯೇಕವಾಗಿ ಆಹ್ವಾನಿಸಿದರು, ಧಾರ್ಮಿಕ ನಾಯಕರು ಊಟದ ಆತಿಥ್ಯ ನೀಡಿದರು ಮತ್ತು ಅಯತೊಲ್ಲಾ ಖಾಮ್ನೆಯಿ ಅವರ ಜೀವನಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಕರೆದೊಯ್ದು ಪರಂಪರೆಯನ್ನು ಅರ್ಥೈಸಿದರು ಎಂದು ಸ್ಮರಿಸಿಕೊಂಡಿದ್ದಾರೆ.
ಭಾರತದಲ್ಲಿನ ಧರ್ಮಗಳ ನಡುವಿನ ಸೌಹಾರ್ದತೆಯ ಪೂರ್ವಯೋಜಿತ ಕಾರ್ಯಕ್ರಮದ ನಿಮಿತ್ತ ತಮ್ಮ ನಿಯೋಗವು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಇರಾನ್ ಬಿಡಬೇಕಾಗಿ ಬಂದಾಗ ಭೇಟಿಯ ಅತ್ಯಂತ ಗಮನಾರ್ಹ ಕ್ಷಣ ಎದುರಾಯಿತು ಎಂದಿದ್ದಾರೆ. “ಪೂರ್ವಯೋಜಿತ ಕಾರ್ಯಕ್ರಮಗಳ ಕಾರಣದಿಂದ ನಾವು ನಿಗದಿತ ದಿನಾಂಕದವರೆಗೆ ಇರಲು ಸಾಧ್ಯವಿಲ್ಲ ಎಂದು ತಿಳಿಸಿದೆವು. ನಮ್ಮ ಮರಳುವ ಪ್ರಯಾಣದ ಬಗ್ಗೆ ಅಲ್ಲಿನ ಪರಿಸ್ಥಿತಿಗಳನ್ನು ಗಮನಿಸಿ ನಮಲ್ಲಿ ಆತಂಕವಿತ್ತು. ಆದರೆ ಅವರು ಸರಳವಾಗಿ ಆ ಜವಾಬ್ದಾರಿಯನ್ನು ನಮಗೆ ಬಿಡಿ ಎಂದು ಹೇಳಿದರು” ಎಂದು ನೆನಪಿಸಿಕೊಂಡಿದ್ದಾರೆ. ನಿಯೋಗದ ಎಂಟು ಸದಸ್ಯರಿಗಾಗಿ ಇರಾನ್ ಅಧಿಕಾರಿಗಳು ಮುಂಬೈಗೆ ಚಾರ್ಟರ್ಡ್ ವಿಮಾನವನ್ನು ವ್ಯವಸ್ಥೆಗೊಳಿಸಿದರು ಎಂದು ಬಹಿರಂಗಪಡಿಸಿದ್ದು, ಇದನ್ನು ಮರೆಯಲಾಗದ ನಡೆ ಎಂದು ಬಣ್ಣಿಸಿದ್ದಾರೆ. “ಇದು ಪ್ರವಾಸದ ಅತಿ ದೊಡ್ಡ ಆಶ್ಚರ್ಯಕರ ಸಂಗತಿಯಾಗಿದೆ. ಈ ಹಿಂದೆ ಯಾವ ದೇಶವೂ ನಮಗಾಗಿ ಚಾರ್ಟರ್ಡ್ ವಿಮಾನವನ್ನು ವ್ಯವಸ್ಥೆ ಮಾಡಿರಲಿಲ್ಲ. ಸಾಧುಗಳು ಐಷರಾಮಿ ಜೀವನಕ್ಕಾಗಿ ಪ್ರಯಾಣಿಸುವುದಿಲ್ಲ. ಆದರೆ ಅವರು ನಮಗೆ ಗೌರವಿಸಿದ ರೀತಿಯು ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಜೈನರು ಅಥವಾ ಬೌದ್ಧರು ಯಾರೇ ಆಗಿರಲಿ, ಆಧ್ಯಾತ್ಮಿಕ ನಾಯಕರನ್ನು ಎಷ್ಟು ಆಳವಾಗಿ ಗೌರವಿಸುತ್ತಾರೆ ಎಂಬುದನ್ನು ತೋರಿಸಿದೆ” ಎಂದಿದ್ದಾರೆ. ಈ ನಡೆಯು ವ್ಯಕ್ತಿಗಳಿಗೆ ಮಾತ್ರವಲ್ಲದೆ ಧಾರ್ಮಿಕ ಸೌಹಾರ್ದತೆಗೂ ಇರಾನ್ ನೀಡುತ್ತಿರುವ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇರಾನ್ ಕುರಿತು ಸಾಂಪ್ರದಾಯಿಕ ದೇಶ ಎಂಬ ವ್ಯಾಪಕ ಗ್ರಹಿಕೆಗಳಿಗೆ ಪ್ರತಿಕ್ರಿಯಿಸಿದ ಗೋಸ್ವಾಮಿ ಸುಶೀಲ್ ಜಿ ಮಹಾರಾಜ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲಾಗುವ ಚಿತ್ರಣಕ್ಕಿಂತ ನೆಲದ ಮೇಲಿನ ವಾಸ್ತವವು ತುಂಬಾ ಭಿನ್ನವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲಿನ ಜನರು ತುಂಬಾ ವಿನಮ್ರರಾಗಿದ್ದರು, ಸೌಜನ್ಯದಿಂದ ಕೂಡಿದ್ದರು ಮತ್ತು ಸೂಕ್ತ ಗೌರವದೊಂದಿಗೆ ಕಾಳಜಿ ವಹಿಸಿದರು ಎಂದಿದ್ದಾರೆ. “ಇರಾನ್ ನನಗೆ ಯಾವ ರೀತಿಯಲ್ಲೂ ಭಯಾನಕ ದೇಶವಾಗಿ ಕಂಡುಬಂದಿಲ್ಲ. ವಿವಿಧ ಪ್ರದೇಶಗಳಲ್ಲಿ ಸುಮಾರು 150 ರಿಂದ 200 ಕಿಲೋಮೀಟರ್ಗಳಷ್ಟು ಪ್ರಯಾಣಿಸಿದ್ದೇವೆ ಮತ್ತು ಎಲ್ಲೂ ನಮಗೆ ಭಯವಾಗಲಿಲ್ಲ. ಜೀವನವು ಸಾಮಾನ್ಯವಾಗಿ ನಡೆಯುತ್ತಿತ್ತು. ಅಲ್ಲಿ ಶಿಸ್ತು, ಘನತೆ ಮತ್ತು ಪ್ರೀತಿ ಇತ್ತು” ಎಂದು ಅವರು ವಿವರಿಸಿದ್ದಾರೆ. ಪ್ರಾದೇಶಿಕ ಉದ್ವಿಗ್ನತೆಯ ಹೊರತಾಗಿಯೂ ಸಾಮಾನ್ಯ ನಾಗರಿಕರು ಶಾಂತವಾಗಿ ಕಾಣಿಸಿಕೊಂಡು ತಮ್ಮ ದೈನಂದಿನ ಜೀವನವನ್ನು ಮುಂದುವರೆಸಿದರು ಎಂದೂ ಅವರು ನುಡಿದಿದ್ದಾರೆ. “ನಾನು ಅಲ್ಲಿ ಯುದ್ಧ ವಲಯದಲ್ಲಿದ್ದೇನೆ ಎಂದು ನನಗೆ ಎಂದಿಗೂ ಅನಿಸಲಿಲ್ಲ. ವಾತಾವರಣವು ಶಾಂತಯುತವಾಗಿತ್ತು. ರಾಷ್ಟ್ರೀಯ ಶೋಕದ ಅವಧಿಯಲ್ಲಿ ಜನರು ಇಷ್ಟು ಸಂಯಮದಿಂದ ಇರಲು ಸಾಧ್ಯವಾದರೆ, ಸಂತೋಷದ ಸಮಯದಲ್ಲಿ ಅವರು ಎಷ್ಟು ಸ್ವಾಗತಾರ್ಹರಾಗಿರುತ್ತಾರೆ ಎಂಬುದನ್ನು ಊಹಿಸಬಹುದು” ಎಂದು ಹೇಳಿರುವ ಅವರು, ಇರಾನ್ ಅತಿಯಾದ ಸಾಂಪ್ರದಾಯಿಕ ಸಮಾಜ ಎಂಬ ಕಲ್ಪನೆಯನ್ನು ತಳ್ಳಿಹಾಕಿದ್ದಾರೆ.
“ಆಳವಾದ ಐತಿಹಾಸಿಕ ಬೇರುಗಳನ್ನು ಹೊಂದಿರುವ ಸಂಸ್ಕೃತಿಯ ಮತ್ತು ವ್ಯವಸ್ಥಿತವಾದ ದೇಶವನ್ನು ನಾನು ನೋಡಿದೆ. ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ದೀರ್ಘಕಾಲದ ಸಹಕಾರವನ್ನು ತಲೆಮಾರುಗಳಿಂದ ಸಂರಕ್ಷಿಸಲಾಗಿರುವ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ಅಂತಹ ಉದಾಹರಣೆಗಳು ಸಹಬಾಳ್ವೆಯು ಇರಾನ್ ನಾಗರಿಕತೆಯ ಭಾಗವಾಗಿದೆ ಎಂಬುದನ್ನು ತೋರಿಸುತ್ತವೆ” ಎಂದಿದ್ದಾರೆ.
ಸಂದರ್ಶನದುದ್ದಕ್ಕೂ ತಮ್ಮ ಭೇಟಿಯು ರಾಜಕಾರಣಕ್ಕಿಂತ ಧರ್ಮಗಳ ನಡುವಿನ ಸೌಹಾರ್ದತೆಯ ತತ್ವಗಳಿಂದ ಕೂಡಿದೆ ಎಂದು ಗೋಸ್ವಾಮಿ ಸುಶೀಲ್ ಜಿ ಮಹಾರಾಜ್ ಒತ್ತಿಹೇಳಿದ್ದಾರೆ. “ನಾವು ಅಲ್ಲಿ ಯಾವುದೇ ಒಂದು ಧರ್ಮದ ಪ್ರತಿನಿಧಿಗಳಾಗಿ ಹೋಗಲಿಲ್ಲ. ಎಲ್ಲಾ ನಂಬಿಕೆಗಳನ್ನು ಪ್ರತಿನಿಧಿಸಿದ್ದೇವೆ. ಶಾಂತಿ, ಏಕತೆ ಮತ್ತು ಸಹಬಾಳ್ವೆಯ ಬಗ್ಗೆ ಮಾತನಾಡಿದ್ದೇವೆ. ಅದಕ್ಕಾಗಿಯೇ ಅವರು ನಮಗೆ ಅಂತಹ ಮಹತ್ವವನ್ನು ನೀಡಿದರು” ಎಂದು ಅವರು ನುಡಿದಿದ್ದಾರೆ. ಧರ್ಮವು ಎಂದಿಗೂ ಹಿಂಸಾಚಾರಕ್ಕೆ ಕಾರಣವಾಗಬಾರದು ಎಂದು ವಾದಿಸಿರುವ ಅವರು, “ಒಬ್ಬ ವ್ಯಕ್ತಿಯ ಧರ್ಮವು ಅವರು ಹುಟ್ಟಿದ ಕುಟುಂಬ ಮತ್ತು ಸಂಸ್ಕೃತಿಯಿಂದ ರೂಪುಗೊಳ್ಳುತ್ತದೆ. ಧರ್ಮದ ಹೆಸರಿನಲ್ಲಿ ಹಿಂಸಾಚಾರ ಮಾಡುವುದು ಮಾನವಕುಲದ ಅತಿ ದೊಡ್ಡ ದುರಂತಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ನಂಬಿಕೆಯನ್ನು ಅನುಸರಿಸುವ ಹಕ್ಕನ್ನು ಹೊಂದಿದ್ದು, ಇತರರ ನಂಬಿಕೆಯನ್ನು ಗೌರವಿಸಬೇಕು” ಎಂದು ತಿಳಿಸಿದ್ದಾರೆ. ಅವರ ಪ್ರಕಾರ ಧಾರ್ಮಿಕ ವಿಭಜನೆಗಳಿಗಿಂತ ಮಾನವತೆ ಮೊದಲು ಬರಬೇಕು.
ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಉದ್ವಿಗ್ನತೆಯ ಬಗ್ಗೆ ಪ್ರತಿಕ್ರಿಯಿಸಿ, ಸಶಸ್ತ್ರ ಸಂಘರ್ಷವು ಎಂದಿಗೂ ಶಾಶ್ವತ ಶಾಂತಿಯನ್ನು ತರಲು ಸಾಧ್ಯವಿಲ್ಲ ಎಂದು ಬಲವಾಗಿ ವಾದಿಸಿದ್ದಾರೆ. “ಮಾತುಕತೆಯನ್ನು ಹೊರತುಪಡಿಸಿ ಯುದ್ಧಕ್ಕೆ ಯಾವುದೇ ಪರಿಹಾರವಿಲ್ಲ. ಅಂತಿಮವಾಗಿ, ಪ್ರತಿಯೊಂದು ಸಂಘರ್ಷವು ಮಾತುಕತೆಯ ಮೇಜಿನ ಬಳಿ ಕೊನೆಗೊಳ್ಳುತ್ತದೆ. ಅಲ್ಲಿಂದಲೇ ಏಕೆ ಪ್ರಾರಂಭಿಸಬಾರದು?” ಎಂದು ಅವರು ಪ್ರಶ್ನಿಸಿದ್ದಾರೆ.
ಧರ್ಮಗಳ ನಡುವಿನ ಸಂವಾದದ ಮೂಲಕ ಭಾರತ-ಇರಾನ್ ಸ್ನೇಹವನ್ನು ಬಲಪಡಿಸಲು ತಮ್ಮ ಬದ್ಧತೆಯನ್ನು ಗೋಸ್ವಾಮಿ ಸುಶೀಲ್ ಜಿ ಮಹಾರಾಜ್ ಪುನರುಚ್ಚರಿಸಿದ್ದಾರೆ. “ಭಾರತ ಮತ್ತು ಇರಾನ್ ನಡುವಿನ ಸಂಬಂಧವು ಶತಮಾನಗಳ ಹಳೆಯದು. ಅದನ್ನು ಮುರಿಯಲು ಸಾಧ್ಯವಿಲ್ಲ. ಅದು ಬಲಗೊಳ್ಳುತ್ತದೆ. ಇರಾನ್ ಮತ್ತು ಭಾರತ ಒಟ್ಟಾಗಿ ವಿಶ್ವಶಾಂತಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕು. ಮಾನವತೆಯು ಉಳಿಯಬೇಕು ಮತ್ತು ಸಂಘರ್ಷದ ಮೇಲೆ ಶಾಂತಿಯು ಮೇಲುಗೈ ಸಾಧಿಸಬೇಕು. ಅದೇ ನನ್ನ ಸಂದೇಶ” ಎಂದು ಅವರು ನುಡಿದಿದ್ದಾರೆ.












