ಸನ್ಮಾರ್ಗ ವಾರ್ತೆ
ಭೋಪಾಲ್: 2022ರ ರಾಮನವಮಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಆರೋಪ ಹೊರಿಸಲಾಗಿದ್ದ ಎಲ್ಲಾ 11 ಮುಸ್ಲಿಂ ಯುವಕರನ್ನು ದೋಷಮುಕ್ತಗೊಳಿಸಲಾಗಿದೆ. ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ ಖರಗೋನ್ ಸೆಷನ್ಸ್ ನ್ಯಾಯಾಲಯವು ನಾಲ್ಕು ವರ್ಷಗಳ ಬಳಿಕ ಈ ಯುವಕರನ್ನು ಖುಲಾಸೆಗೊಳಿಸಿದೆ.
ಯಾವೊಬ್ಬ ಆರೋಪಿಯ ಮೇಲಿನ ಅಪರಾಧವನ್ನು ಸಂಶಯಾತೀತವಾಗಿ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಪ್ರಕರಣದಲ್ಲಿ ಬಿಡುಗಡೆಯಾದ ಎಲ್ಲಾ 11 ಮಂದಿ 462 ರಿಂದ 827 ದಿನಗಳವರೆಗೆ ಜೈಲು ವಾಸ ಅನುಭವಿಸಿದ್ದರು. ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯಗಳಲ್ಲಿ ಪ್ರಮುಖ ವಿರೋಧಾಭಾಸಗಳಿವೆಯೆಂದು ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು (ಮಂಡಲೇಶ್ವರ) ಕಂಡುಕೊಂಡಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ 13 ಪ್ರಾಸಿಕ್ಯೂಷನ್ ಸಾಕ್ಷಿಗಳಲ್ಲಿ 8 ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದಾರೆ ಮತ್ತು ಆರೋಪಿಗಳನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಎತ್ತಿ ತೋರಿಸಿದೆ. ಅಲ್ಲದೆ, ದಾಳಿಕೋರರ ಗುರುತಿನ ಬಗ್ಗೆ ವಿವಾದವಿದ್ದರೂ ಸಹ ಯಾವುದೇ ಗುರುತು ಪೆರೇಡ್ ನಡೆಸಲಾಗಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ಹಿಂದೂಗಳ ಮನೆಗಳು ಮತ್ತು ವಾಹನಗಳ ಮೇಲೆ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ಗಳನ್ನು ತೂರಿ ಹಾನಿ ಎಸಗಿದ ಗುಂಪಿನಲ್ಲಿ ಈ ಮುಸ್ಲಿಂ ಯುವಕರು ಭಾಗಿಯಾಗಿದ್ದರು ಎಂದು ಪ್ರಾಸಿಕ್ಯೂಷನ್ ಪಕ್ಷ ಆರೋಪಿಸಿತ್ತು. ಗಲಭೆ, ಬೆಂಕಿ ಹಚ್ಚುವುದು, ಸಂಚು, ಅತಿಕ್ರಮ ಪ್ರವೇಶ ಮತ್ತು ಸ್ಫೋಟಕ ಕಾಯ್ದೆಯ ಉಲ್ಲಂಘನೆ ಸೇರಿದಂತೆ ವಿವಿಧ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿತ್ತು. ಆದಾಗ್ಯೂ, ಎಫ್ಐಆರ್ನಲ್ಲಿ ಅಥವಾ ಆರಂಭಿಕ ದೂರಿನಲ್ಲಿ ಹೆಸರಿಸದಿರುವ ಮತ್ತು ಘಟನೆ ನಡೆದ 51 ದಿನಗಳ ನಂತರ ಹೇಳಿಕೆ ದಾಖಲಿಸಲಾದ ಸಾಕ್ಷಿಯ ಹೇಳಿಕೆಯನ್ನು ಮಾತ್ರ ಪ್ರಾಸಿಕ್ಯೂಷನ್ ಮುಖ್ಯವಾಗಿ ನಂಬಿಕೊಂಡಿತ್ತು ಎಂದು ನ್ಯಾಯಾಲಯ ತಿಳಿಸಿದೆ. ಮೇಲಾಗಿ, ವಶಪಡಿಸಿಕೊಂಡ ವಸ್ತುಗಳ ಮೇಲೆ ಪೆಟ್ರೋಲ್, ಡೀಸೆಲ್ ಅಥವಾ ಸೀಮೆಎಣ್ಣೆಯ ಯಾವುದೇ ಕುರುಹುಗಳು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಕಂಡುಬಂದಿಲ್ಲ. ಇದೆಲ್ಲವೂ ಪ್ರಾಸಿಕ್ಯೂಷನ್ ವಾದವನ್ನು ದುರ್ಬಲಗೊಳಿಸಿತು.
ಪರಿಣಾಮವಾಗಿ, ಗಲಭೆ, ಬೆಂಕಿ ಹಚ್ಚುವುದು, ಸಂಚು, ಅತಿಕ್ರಮ ಪ್ರವೇಶ ಮತ್ತು ಸ್ಫೋಟಕ ಕಾಯ್ದೆಯ ಅಪರಾಧಗಳು ಸೇರಿದಂತೆ ಎಲ್ಲಾ ಆರೋಪಗಳಿಂದ ನ್ಯಾಯಾಲಯವು 11 ಆರೋಪಿಗಳನ್ನು ದೋಷಮುಕ್ತಗೊಳಿಸಿತು. ಈ ಮುಸ್ಲಿಂ ಯುವಕರ ಪರವಾಗಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಸಂಸ್ಥೆಯು ಪ್ರಕರಣ ದಾಖಲಿಸಿತ್ತು. ಇವರ ಪರವಾಗಿ ವಕೀಲೆ ರೇಖಾ ಶ್ರೀವಾಸ್ತವ ವಾದ ಮಂಡಿಸಿದ್ದರು.
ಈ ಘಟನೆಯು 2022ರ ಏಪ್ರಿಲ್ 10 ರಂದು ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಖರಗೋನ್ನಲ್ಲಿ ನಡೆದಿತ್ತು. ಈ ಹಿಂಸಾಚಾರದಲ್ಲಿ ಇದ್ರಿಸ್ ಖಾನ್ ಎಂಬ ಮುಸ್ಲಿಂ ಯುವಕನೂ ಸೇರಿದಂತೆ ಹಲವರು ಹತ್ಯೆಗೀಡಾಗಿದ್ದರು ಮತ್ತು ಅನೇಕ ಮುಸ್ಲಿಮರನ್ನು ಬಂಧಿಸಲಾಗಿತ್ತು. ಮುಸ್ಲಿಮರ ಮನೆಗಳು ಹಾಗೂ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿತ್ತು.












