ಸನ್ಮಾರ್ಗ ಸಂಪಾದಕೀಯ
ಅಪ್ಪ-ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿ.. ಇವೆಲ್ಲ ಬರೇ ಎರಡೆರಡು ಪದಗಳಲ್ಲ. ಇವು ಅಸಂಖ್ಯ ಭಾವನೆಗಳ ಗುಚ್ಚ. ಅದರಲ್ಲೂ ಅಪ್ಪ ಮತ್ತು ಅಮ್ಮ ಎಂಬುದು ಈ ಜಗತ್ತಿನ ಅನೂಹ್ಯ ರತ್ನಗಳಾಗಿ ಗುರುತಿಸಿಕೊಂಡಿವೆ. ‘ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ಅಪ್ಪ ಅಥವಾ ಅಪ್ಪ ಇರಲಾರರು’ ಎಂಬ ತುಸು ಉತ್ಪ್ರೇಕ್ಷಿತ ಅಭಿಪ್ರಾಯಗಳ ವರೆಗೆ ಹೆತ್ತವರನ್ನು ಸಮಾಜ ಗೌರವಿಸುತ್ತದೆ. ಆದರೆ, ಈ ದೇಶದಲ್ಲಿರುವ ವೃದ್ಧಾಶ್ರಮಗಳನ್ನು ನೋಡಿದರೆ ಮತ್ತು ಅಲ್ಲಿರುವ ವೃದ್ಧರ ಸಂಖ್ಯೆಗಳನ್ನು ನೋಡಿದರೆ ಹಾಗೂ ಕಳೆದವಾರ ಹರ್ಯಾಣದಲ್ಲಿ ನಡೆದ ಘಟನೆಯೊಂದನ್ನು ಅವಲೋಕಿಸಿದರೆ ಹೆತ್ತವರ ಬಗೆಗಿನ ಈ ಗೌರವಯುತ ಪರಿಕಲ್ಪನೆ ಸಡಿಲವಾಗುತ್ತಿರುವಂತೆ ಕಾಣಿಸುತ್ತಿದೆ.
ಹರ್ಯಾಣದ ಸೋನಿಪತ್ನಲ್ಲಿ 74 ವರ್ಷದ ಶಿವಚರಣ್ ರಾಮ್ ರತನ್ ಗುಪ್ತಾ ಎಂಬವರ ಅಂತ್ಯ ಸಂಸ್ಕಾರ ನಡೆಯಿತು. ಅಂತ್ಯಸಂಸ್ಕಾರ ನಡೆಸಿದ್ದು ವೃದ್ಧಾಶ್ರಮದ ಸಿಬಂದಿಗಳು ಮತ್ತು ಸ್ಥಳೀಯರು. ಈ ಗುಪ್ತಾ ಅವರು ಯಶಸ್ವಿ ಬಟ್ಟೆ ವ್ಯಾಪಾರಿಯಾಗಿದ್ದರು. ಮುಂಬೈಯಲ್ಲಿ ವ್ಯಾಪಾರ ಮಾಡುತ್ತಾ ತನ್ನ ಮೂವರು ಹೆಣ್ಣು ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಸಾಕಿದ್ದರು. ಮೂವರಿಗೂ ಉನ್ನತ ಶಿಕ್ಷಣ ನೀಡಿದರು. ಮೂವರಲ್ಲಿ ಇಬ್ಬರು ಸರಕಾರಿ ಶಿಕ್ಷಕರಾದರು. ಮಕ್ಕಳಿಗೆ ಮದುವೆಯಾಯಿತು. ರತನ್ ಗುಪ್ತಾರಿಗೆ ಪ್ರಾಯವಾಯಿತು. ಈ ನಡುವೆ ಗುಪ್ತಾ ಮತ್ತು ಪತ್ನಿ ಮೀನಾರನ್ನು ಹರ್ಯಾಣದ ಸೋನಿಪತ್ನಲ್ಲಿರುವ ವೃದ್ಧಾಶ್ರಮಕ್ಕೆ ಹಾಕಲಾಯಿತು. ತಿಂಗಳ ಹಿಂದೆ ಮೀನಾ ಗುಪ್ತಾ ನಿಧನರಾದರು. ಇದರಿಂದ ಗುಪ್ತಾ ಇನ್ನಷ್ಟು ಒಂಟಿಯಾದರು. ಬದುಕಿನ ಸುಖ-ದುಃಖಗಳನ್ನು ಹಂಚಿಕೊಳ್ಳಲು ಇದ್ದ ಏಕೈಕ ಆಸರೆಯೂ ಕೊನೆಗೊಂಡ ಬಳಿಕ ಅವರನ್ನು ಒಂಟಿತನ ಕಾಡ ತೊಡಗಿತು. ಅನಾರೋಗ್ಯಕ್ಕೆ ತುತ್ತಾದರು. ಈ ನಡುವೆ ತಂದೆಯ ಅನಾರೋಗ್ಯದ ವಿಷಯವನ್ನು ವೃದ್ಧಾಶ್ರಮದ ಅಧಿಕಾರಿಗಳು ಈ ಮೂವರು ಮಕ್ಕಳಿಗೂ ತಿಳಿಸಿದರು. ಅವರಿಗೆ ಬರಲು ಸಾಧ್ಯವಾಗಲಿಲ್ಲ.
ಕೊನೆಗೆ ಅವರು ಮೃತಪಟ್ಟ ಸುದ್ದಿಯನ್ನು ಈ ಮಕ್ಕಳಿಗೆ ತಿಳಿಸಿದರು. ಹಿರಿಯ ಮಗಳು ಅನಿತಾ ನೇಪಾಳದಲ್ಲಿದ್ದಾರೆ. ತಂದೆಯ ಅಂತ್ಯಸಂಸ್ಕಾರಕ್ಕೆಂದು ಆಕೆ 5001 ರೂಪಾಯಿಯನ್ನು ಕಳುಹಿಸಿಕೊಟ್ಟರು. ಮುಂಬೈಯಲ್ಲಿರುವ ಮಗಳು ನಿಶಾ ಮತ್ತು ಉತ್ತರ ಪ್ರದೇಶದ ಆಝಂಘಡದಲ್ಲಿರುವ ಮಗಳು ಪ್ರಿಯ ಸೇರಿ ಮೂವರೂ ಅಂತಿಮ ಸಂಸ್ಕಾರ ವನ್ನು ವೀಡಿಯೋವನ್ನು ಕಾಲ್ ಮೂಲಕ ವೀಕ್ಷಿಸಿದರು. ಮಕ್ಕಳ ಅನುಪಸ್ಥಿತಿಯಲ್ಲಿ ತಂದೆಯ ಅಂತ್ಯಸಂಸ್ಕಾರವನ್ನು ಅನಾಥಾಶ್ರಮದ ಸಿಬಂದಿಗಳು ನೆರವೇರಿಸಿದರು. ಅಂತ್ಯಸಂಸ್ಕಾರದ ವೀಡಿಯೋವನ್ನು ಕಳು ಹಿಸಿಕೊಡಿ ಎಂದು ಅನಾಥಾಶ್ರಮದ ಸಿಬಂದಿಗಳಲ್ಲಿ ಈ ಮಕ್ಕಳು ಕೇಳಿಕೊಂಡರು. ತಂದೆಯ ಅಸ್ಥಿಯನ್ನು ನೀವೇ ಗಂಗೆಯಲ್ಲಿ ವಿಸರ್ಜಿಸಿ, ನಮಗೆ ಅನಾಥಾಶ್ರಮಕ್ಕೆ ಬರಲು ಸಮಯವಿಲ್ಲ ಎಂದೂ ಹೇಳಿದರು. ಹೀಗೆ ತನ್ನ ಮೂವರು ಮಕ್ಕಳನ್ನು ಅಪಾರವಾಗಿ ಪ್ರೀತಿಸಿ ಓದಿಸಿದ ತಂದೆ ಇಹಲೋಕಕ್ಕೆ ವಿದಾಯ ಕೋರಿದರು. ಹಾಗಂತ,
ಎಲ್ಲ ಮಕ್ಕಳೂ ಹೀಗೆಯೇ ಎಂದಲ್ಲ. ಈ ದೇಶದಲ್ಲಿ ಸರಕಾರಿ ಮತ್ತು ಖಾಸಗಿ- ಎರಡನ್ನೂ ಲೆಕ್ಕ ಹಾಕಿದರೆ, ಬರೇ ಒಂದು ಸಾವಿರಕ್ಕೂ ಮಿಕ್ಕಿ ವೃದ್ಧಾಶ್ರಮಗಳಷ್ಟೇ ಸಿಗುತ್ತವೆ. ಹೆಚ್ಚೆಂದರೆ, ಒಂದೂವರೆ ಲಕ್ಷ ವೃದ್ಧರು ಈ ಆಶ್ರಮಗಳಲ್ಲಿದ್ದಾರೆ. ಆದರೆ ಭಾರತದಲ್ಲಿ 60 ವರ್ಷವನ್ನು ಮೀರಿದ ಹಿರಿಯರ ಸಂಖ್ಯೆ 16 ಕೋಟಿಯಷ್ಟಿದೆ. ಇವರೆಲ್ಲ ಎಲ್ಲಿದ್ದಾರೆ? ಮಕ್ಕಳು ಮತ್ತು ಆಶ್ರಿತರ ಜೊತೆಗೆ ಇದ್ದರಲ್ವಾ ಎಂಬ ಪ್ರಶ್ನೆಯನ್ನು ಎತ್ತಬಹುದು. ನಿಜ. ಆದರೆ,
ಇದರರ್ಥ ಈ ಹಿರಿಯರೆಲ್ಲ ತಮ್ಮ ಮಕ್ಕಳು ಮತ್ತು ಕುಟುಂಬದವರ ಜೊತೆ ಸುಖವಾಗಿದ್ದಾರೆ ಎಂದಲ್ಲ. 2024ರಲ್ಲಿ ಹೆಲ್ಪ್ ಏಜ್ ಇಂಡಿಯಾ ಪ್ರಕಟಿಸಿದ ವರದಿಯನ್ನು ಓದಿದರೆ ಆಘಾತ ವಾಗಬಹುದು. ತಮ್ಮ ಮಗ ಮತ್ತು ಸೊಸೆಯಿಂದ ಹಿಂಸೆ ಅನುಭವಿಸುತ್ತಿರುವವರ ಸಂಖ್ಯೆ 7%ದಿಂದ 25%ದಷ್ಟಿದೆ ಎಂದು ಈ ವರದಿ ಹೇಳಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರೇ ಈ ಹಿಂಸೆಗೆ ಅತೀ ಹೆಚ್ಚು ತುತ್ತಾಗುತ್ತಿದ್ದಾರೆ. ಅಲ್ಲದೇ, ಈ ಸಮೀಕ್ಷೆಯಲ್ಲಿ ಭಾಗವಹಿಸಿದ ವೃದ್ಧರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಹಿಂಜರಿದಿರುವುದನ್ನೂ ಹೆಲ್ಪ್ ಏಜ್ ಇಂಡಿಯಾ ಬಹಿರಂಗಪಡಿಸಿದೆ. ಅಭಿಪ್ರಾಯವನ್ನೇ ಹೇಳದ ವೃದ್ಧರೂ ಇದ್ದಾರೆ. ಯಾಕೆ ಹೀಗೆ ಅಂದರೆ, ತನ್ನ ಮಗ ಮತ್ತು ಸೊಸೆಯನ್ನು ಅಥವಾ ಮಗಳು ಮತ್ತು ಅಳಿಯನನ್ನು ಅಪರಾಧಿಯಾಗಿ ಬಿಂಬಿಸಿದರೆ ಮುಂದೇನು ಗತಿ ಎಂಬ ಭಯ ಅವರನ್ನು ಕಾಡಿರಬಹುದು. ನಿಜವಾಗಿ,
ಧರ್ಮ ಈ ಅನಾದರದ ವಿರುದ್ಧ ಇದೆ. ಹೆತ್ತವರನ್ನು ಅಪಾರವಾಗಿ ಪ್ರೀತಿಸಿದ ಶ್ರವಣ ಕುಮಾರನ ಕತೆಯನ್ನು ಶಾಲಾ ಪಠ್ಯಪುಸ್ತಕದಲ್ಲಿ ನೀಡಲಾಗಿದೆ. ವೃದ್ಧರಾದ ಹೆತ್ತವರು ನಿಮಗಿದ್ದರೆ ಅವರಿಗೆ ‘ಛೆ’ ಎಂಬ ಪದವನ್ನೂ ಬಳಸಬಾರದು ಮತ್ತು ಇವರು ನನ್ನನ್ನು ಚಿಕ್ಕಂದಿನಲ್ಲಿ ಸಾಕಿದಂತೆಯೇ ನೀನು ಅವರ ಮೇಲೆ ಕರುಣೆ ತೋರು..’ ಎಂದು ದೇವನಲ್ಲಿ ಪ್ರಾರ್ಥಿಸಬೇಕು ಎಂದು ಪವಿತ್ರ ಕುರ್ಆನ್ (17:23-24) ಮಕ್ಕಳಿಗೆ ನಿರ್ದೇಶನ ನೀಡಿದೆ. ‘ನಿಮ್ಮ ತಾಯಿ ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ನಿಮ್ಮನ್ನು ಗರ್ಭದಲ್ಲಿರಿಸಿದ್ದಾಳೆ, ಎರಡು ವರ್ಷ ಎದೆ ಹಾಲು ನೀಡಿದ್ದಾಳೆ, ಆದ್ದರಿಂದ ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸಬೇಕು..’ ಎಂದು ಪವಿತ್ರ ಕುರ್ಆನ್ (31:14) ಮಕ್ಕಳಿಗೆ ತಾಕೀತು ಮಾಡಿದೆ. ಇದಲ್ಲದೇ, ಪವಿತ್ರ ಕುರ್ಆನಿನ 4, 6, 29, 46 ಇತ್ಯಾದಿ ಅಧ್ಯಾಯಗಳಲ್ಲೂ ಹೆತ್ತವರ ಜೊತೆ ಗೌರವಯುತವಾಗಿ ನಡಕೊಳ್ಳುವಂತೆ ಮತ್ತು ಮಕ್ಕಳನ್ನು ಬೆಳೆಸುವಲ್ಲಿ ಅವರ ಶ್ರಮದ ಕುರಿತಂತೆ ವಿವರಿಸಲಾಗಿದೆ.
ಪ್ರವಾದಿ ಮುಹಮ್ಮದ್(ಸ)ರಂತೂ ಹೆತ್ತವರ ವಿಷಯದಲ್ಲಿ ಅತೀವ ಎಚ್ಚರಿಕೆಯ ನಿರ್ದೇಶನವನ್ನು ನೀಡಿದ್ದಾರೆ. ‘ದೇವನ ಸಂತೋಷವು ಹೆತ್ತವರ ಸಂತೋಷದಲ್ಲಿದೆ ಮತ್ತು ದೇವನ ಕೋಪವು ಹೆತ್ತವರ ಕೋಪದಲ್ಲಿದೆ..’ ಎಂದು ಅವರು ಹೇಳಿದ್ದಾರೆ. ಓರ್ವ ಮುಸ್ಲಿಮನ ಮಟ್ಟಿಗೆ ಅತ್ಯುತ್ತಮ ಕೆಲಸ ಯಾವುದೆಂದರೆ, ‘ಸಮಯಕ್ಕೆ ಸರಿಯಾಗಿ ನಮಾಝï ಮಾಡುವುದು ಮತ್ತು ಹೆತ್ತವರನ್ನು ಗೌರವಿಸುವುದು..’ ಎಂದೂ ಅವರು ಹೇಳಿದ್ದಾರೆ. ಇಲ್ಲಿ ನಮಾಝ್ ಮತ್ತು ಹೆತ್ತವರಿಗೆ ಗೌರವ ನೀಡುವುದನ್ನು ಒಂದೇ ವಾಕ್ಯದಲ್ಲಿ ಮತ್ತು ಒಂದೇ ಉಸಿರಿನಲ್ಲಿ ಪ್ರವಾದಿ(ಸ) ಹೇಳಿದ್ದಾರೆ ಎಂಬುದು ಹೆತ್ತವರ ಗೌರವದ ಮಹತ್ವವನ್ನು ಹೇಳುತ್ತದೆ.
‘ಪಾಪಗಳಲ್ಲಿ ಅತೀ ದೊಡ್ಡ ಪಾಪ ಯಾವುದೆಂದರೆ, ದೇವನಿಗೆ ಸಹಭಾಗಿಗಳನ್ನಾಗಿ ಮಾಡುವುದು ಮತ್ತು ಹೆತ್ತವರ ಜೊತೆ ಅನಾದರದಿಂದ ವರ್ತಿಸುವುದು..’ ಎಂದೂ ಪ್ರವಾದಿ ಹೇಳಿದ್ದಾರೆ. ಇಲ್ಲೂ ಕೂಡ ದೇವನಿಗೆ ಸಹಭಾಗಿ ಮಾಡುವುದನ್ನು ಮತ್ತು ಹೆತ್ತವರಿಗೆ ಅನಾದರ ತೋರಿಸುವುದನ್ನು ಜೊತೆಜೊತೆಯಾಗಿ ಮತ್ತು ಒಂದೇ ಉಸಿರಿನಲ್ಲಿ ಹೇಳಿದ್ದಾರೆ. ‘ಯಾರಿಗಾದರೂ ವೃದ್ಧ ಹೆತ್ತವರಿದ್ದೂ ಅವರ ಸೇವೆ ಮಾಡದ ಕಾರಣಕ್ಕಾಗಿ ಓರ್ವ ಸ್ವರ್ಗ ಪ್ರವೇಶದಿಂದ ವಿಮುಖರಾಗುತ್ತಾರೆಂದರೆ ಅವರಷ್ಟು ದುರದೃಷ್ಟವಂತರು ಇನ್ನಾರೂ ಇಲ್ಲ..’ ಎಂದೂ ಪ್ರವಾದಿ(ಸ) ಹೇಳಿದ್ದಾರೆ. ‘ವೃದ್ಧ ಹೆತ್ತವರ ಸೇವೆ ಮಾಡದವರು ಅಥವಾ ಹೆತ್ತವರ ಕೋಪಕ್ಕೆ ತುತ್ತಾದ ಮಕ್ಕಳು ಸ್ವರ್ಗ ಪ್ರವೇಶಿಸುವುದಿಲ್ಲ..’ ಎಂದೂ ಪ್ರವಾದಿ(ಸ) ಹೇಳಿದ್ದಾರೆ. ನಿಜವಾಗಿ,
ಸಮಸ್ಯೆ ಧರ್ಮಗ್ರಂಥಗಳದ್ದಲ್ಲ. ಧರ್ಮಗ್ರಂಥಗಳನ್ನು ತೆರೆದು ನೋಡಿದರೆ ಹೆತ್ತವರ ಮಹತ್ವವನ್ನು ತಿಳಿಸುವ ಸಾಲು ಸಾಲು ಆದೇಶಗಳು ಪುಷ್ಕಳವಾಗಿ ದೊರೆಯುತ್ತವೆ. ಸಮಸ್ಯೆ ಇವುಗಳನ್ನು ಅನುಸರಿಸುವವರಲ್ಲಿದೆ. ಧರ್ಮಗ್ರಂಥಗಳ ಬೋಧನೆಗಳು ಬರೇ ಪಠಣಕ್ಕಷ್ಟೇ ಸೀಮಿತವಾದಾಗ ಮತ್ತು ಅನುಸರಣೆಯು ನಾಸ್ತಿಯಾದಾಗ ಇಂಥ ಅನಾದರಗಳು ಹೆಚ್ಚಾಗುತ್ತಾ ಹೋಗುತ್ತವೆ. ಸಮಾಜದ ಕಣ್ಣಿನಲ್ಲಿ ಕೆಟ್ಟವರಾಗಬಾರದು ಎಂಬ ಕಾರಣಕ್ಕಾಗಿ ಎಷ್ಟೋ ಮಕ್ಕಳು ತಮ್ಮ ಹೆತ್ತವರನ್ನು ವೃದ್ಧಾಶ್ರಮಕ್ಕೆ ಹಾಕುವುದಿಲ್ಲ. ಆದರೆ, ಮನೆಯಲ್ಲೇ ಉಳಿಯುವ ಇಂಥ ವೃದ್ಧ ಹೆತ್ತವರು ಪ್ರತಿದಿನ ಮಕ್ಕಳು ಮತ್ತು ಮೊಮ್ಮಕ್ಕಳಿಂದ ಅನಾದರ, ವ್ಯಂಗ್ಯ, ಕುಹಕ ಮತ್ತು ನಿಂದನೆಗಳಿಗೆ ತುತ್ತಾಗುತ್ತಲೇ ಇರುತ್ತಾರೆ ಎಂಬ ವರದಿಯೂ ಇದೆ.
ಇವನ್ನು ಕೇವಲ ಕಾನೂನೊಂದರಿಂದಲೇ ಬದಲಿಸಲು ಸಾಧ್ಯವಿಲ್ಲ. ಮಕ್ಕಳ ಮನಸ್ಸು ಬದಲಾಗಬೇಕು. ಆಧ್ಯಾತ್ಮ ಬೋಧನೆಗಳು ಮಕ್ಕಳ ಮನಸ್ಸನ್ನು ಮೃದುಗೊಳಿಸಬೇಕು. ಒಂದು ದಿನ ತಾವೂ ಇದೇ ವೃದ್ಧಾಪ್ಯಕ್ಕೆ ತಲುಪಲಿದ್ದೇವೆ ಎಂಬ ವಿವೇಕದ ಧ್ವನಿ ಅವರನ್ನು ಎಚ್ಚರಗೊಳಿಸಬೇಕು. ಹೆತ್ತವರನ್ನು ಅನಾದರಿಸುವ ಮಕ್ಕಳಿಗೆ ಇಹಲೋಕದಲ್ಲಿ ಶಿಕ್ಷೆ ಸಿಗುತ್ತದೆ ಎಂಬ ಪ್ರವಾದಿ(ಸ)ಯ ಮಾತು ಎಲ್ಲ ಧರ್ಮೀಯರಿಗೂ ಎಚ್ಚರಿಕೆಯ ಕರೆಯಾಗಬೇಕು.












