ಸನ್ಮಾರ್ಗ ವಾರ್ತೆ
ಮೂಢನಂಬಿಕೆ ವಿರೋಧಿ ಕಾರ್ಯಕರ್ತ ನರೇಂದ್ರ ದಾಭೋಕರ್ ಅವರ ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ ವ್ಯಕ್ತಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ ಹಾಗೂ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ರಂಜಿತ್ಸಿನ್ಹಾ ಭೋಸ್ಲೆ ಅವರ ಪೀಠವು ಸಚಿನ್ ಅಂದುರೆಗೆ ಜಾಮೀನು ಮಂಜೂರು ಮಾಡಿ ಈ ಆದೇಶ ಹೊರಡಿಸಿದೆ. ಆಗಸ್ಟ್ 2013 ರಲ್ಲಿ ದಾಭೋಕರ್ ಅವರನ್ನು ಗುಂಡಿಕ್ಕಿ ಕೊಂದವರಲ್ಲಿ ಅಂದುರೆ ಕೂಡ ಒಬ್ಬರು ಎಂದು ಪ್ರಾಸಿಕ್ಯೂಷನ್ನ್ ವಾದಿಸಿತ್ತು.
ವಿವರವಾದ ತೀರ್ಪಿನ ಪ್ರತಿಯು ಇನ್ನೂ ಲಭ್ಯವಾಗಬೇಕಿದೆ.
ಈ ಪ್ರಕರಣದಲ್ಲಿ ದೋಷಿಯಾಗಿರುವ ಶರದ್ ಕಳಸ್ಕರ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿ ಮೂರು ತಿಂಗಳಿಗೂ ಹೆಚ್ಚು ಸಮಯ ಕಳೆದ ನಂತರ ಈ ಆದೇಶ ಬಂದಿದೆ.
2024 ರ ಮೇ ತಿಂಗಳಲ್ಲಿ ಸೆಷನ್ಸ್ ನ್ಯಾಯಾಲಯವು ಅಂದುರೆ ಮತ್ತು ಕಳಸ್ಕರ್ ಅವರನ್ನು ಕೊಲೆ ಪ್ರಕರಣದಲ್ಲಿ ದೋಷಿಗಳೆಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದಾಗ್ಯೂ, ಇಬ್ಬರ ಮೇಲೂ ಕಾನೂನುಬಹಿರ ಚಟುವಟಿಕೆ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಹೊರಿಸಲಾಗಿದ್ದ ಆರೋಪಗಳಿಂದ ದೋಷಮುಕ್ತಗೊಳಿಸಲಾಗಿತ್ತು. ಇತರ ಮೂವರಾದ – ವೀರೇಂದ್ರಸಿಂಗ್ ತಾವಡೆ, ವಿಕ್ರಮ್ ಭಾವೆ ಮತ್ತು ಸಂಜೀವ್ ಪುನೇಕರ್ ಅವರನ್ನು ದೋಷಮುಕ್ತಗೊಳಿಸಲಾಗಿತ್ತು.
ತಾವಡೆ, ಭಾವೆ ಮತ್ತು ಪುನೇಕರ್ ಅವರ ದೋಷಮುಕ್ತತೆಯ ವಿರುದ್ಧ ಹಾಗೂ ಅಂದುರೆ ಮತ್ತು ಕಳಸ್ಕರ್ ಅವರು ಭಯೋತ್ಪಾದನಾ ನಿಗ್ರಹ ಕಾಯ್ದೆಯ ಆರೋಪಗಳಿಂದ ಮುಕ್ತಳಾಗುವುದರ ವಿರುದ್ಧ ದಾಭೋಕರ್ ಅವರ ಮಗಳು ಮುಕ್ತಾ ಅವರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಂದುರೆ ಮತ್ತು ಕಳಸ್ಕರ್ ಇಬ್ಬರೂ ತಮ್ಮ ಮೇಲ್ಮನವಿಗಳು ಬಾಕಿ ಇರುವಾಗ ಜಾಮೀನು ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು.
ತಮ್ಮ ಜಾಮೀನು ಅರ್ಜಿಯಲ್ಲಿ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಯಾವುದೇ ಗುರುತು ಪರೇಡ್ (ಟೆಸ್ಟ್ ಐಡೆಂಟಿಫಿಕೇಷನ್ ಪರೇಡ್) ನಡೆಸಿರಲಿಲ್ಲ ಎಂದು ಅಂದುರೆ ವಾದಿಸಿದ್ದರು ಎಂದು ‘ಲೈವ್ ಲಾ’ ವರದಿ ಮಾಡಿದೆ. ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ 2014 ರಲ್ಲಿ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು.
ಸಾಕ್ಷಿಗಳ ಹೇಳಿಕೆಗಳಲ್ಲಿ ವ್ಯತ್ಯಾಸಗಳಿದ್ದು, ಕೆಲವರು ತಾವು ಅಂದುರೆ ದಾಭೋಕರ್ ಅವರಿಗೆ ಗುಂಡು ಹಾರಿಸುವುದನ್ನು ನೋಡಿರುವುದಾಗಿ ಹೇಳಿದರೆ, ಮತ್ತೆ ಕೆಲವರು ಆ ಸ್ಥಳದಲ್ಲಿ ಅವರನ್ನು ನೋಡಿರುವುದನ್ನು ನಿರಾಕರಿಸಿದ್ದಾರೆ ಎಂದು ಅಂದುರೆ ವಾದ ಮಾಡಿದ್ದರು.
ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ವಾದಿಸಿ ದಾಭೋಲ್ಕರ್ ಅವರ ಕುಟುಂಬವು ಜಾಮೀನನ್ನು ವಿರೋಧಿಸಿತ್ತು ಎಂದು ‘ಲೈವ್ ಲಾ’ ವರದಿ ಮಾಡಿದೆ. 2015 ಮತ್ತು 2017 ರ ನಡುವೆ ಗೋವಿಂದ ಪನ್ಸಾರೆ, ಗೌರಿ ಲಂಕೇಶ್ ಮತ್ತು ಎಂ.ಎಂ. ಕಲಬುರ್ಗಿ ಸೇರಿದಂತೆ ಇತರ ವಿಚಾರವಾದಿಗಳು ಮತ್ತು ಚಿಂತಕರು ಇದೇ ರೀತಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂಬುದನ್ನು ಅವರು ಗಮನಕ್ಕೆ ತಂದಿದ್ದರು.












