ಹೊಸದಿಲ್ಲಿ, ಜು. 23: ಪಕ್ಷೇತರ ಶಾಸಕರು ಸಲ್ಲಿಸಿದ ಅರ್ಜಿಯಲ್ಲಿ ಸುಪ್ರೀಂಕೋರ್ಟು ಯಾವುದೇ ಸೂಚನೆಗಳನ್ನು ನೀಡದೆ ವಿಚಾರಣೆಯನ್ನು ನಾಳೆಗೆ ಮುಂದೂಡಿತು. ಆದ್ದರಿಂದ ದೋಸ್ತಿಗಳು ಇಂದು ಕೂಡ ವಿಶ್ವಾಸ ಮತಯಾಚನೆ ನಡೆಯುವುದು ಅನುಮಾನ ಎನ್ನುವ ಪರಿಸ್ಥಿತಿ ಸಂಜಾತವಾಗಿದೆ. ಇದೇವೇಳೆ ಸ್ಪೀಕರ್ ರಮೇಶ್ ಕುಮಾರ್ ಇಂದೇ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯನ್ನು ಮುಗಿಸಿಕೊಡುವುದಾಗಿ ಹೇಳಿದ್ದಾರೆ. ವಿಶ್ವಾಸ ಮತಯಾಚನೆಗೆ ಸುಮ್ಮನೆ ಸಮಯ ಎಳೆಯಲಾಗುತ್ತಿದ್ದು ವಿಶ್ವಾಸ ಮತಯಾಚನೆಗೆ ಇಂದು ಗಡು ವಿಧಿಸಬೇಕೆಂದು ಪಕ್ಷೇತರ ಶಾಸಕರು ಅರ್ಜಿಯಲ್ಲಿ ಮನವಿ ಮಾಡಿದ್ದರು. ಇಂದು ವಿಶ್ವಾಸ ಮತಯಾಚಿಸುವ ಕುರಿತು ನ್ಯಾಯಾಲಯಕ್ಕೆ ಸ್ಪೀಕರ್ ತಿಳಿಸಿದ್ದು ಬಹುತೇಕ ಇಂದೇ ವಿಶ್ವಾಸ ಮತ ಯಾಚನೆ ನಡೆಯಬಹುದು ಎಂದು ವಿಚಾರಣೆಯನ್ನು ಮುಂದೂಡುತ್ತಾ ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವಾಸಮತ ಯಾವಾಗ ಮುಗಿಸುತ್ತೀರಿ? ಎಂದು ರಂಜನ್ ಗೊಗೊಯಿ ಕೇಳಿದರು. ಇದಕ್ಕೆ ಉತ್ತರಿಸಿದ ಸಿಂಘ್ವಿ, ಚರ್ಚೆಯ ಮಧ್ಯೆ ವಿಶ್ವಾಮತ ಯಾಚಿಸುವುದು ಹೇಗೆ? ಎಲ್ಲರಿಗೂ ಸದನದಲ್ಲಿ ಮಾತಾಡಲು ಅವಕಾಶ ಕಲ್ಪಿಸಬೇಕಾಗಿದೆ. ಚರ್ಚೆ ನಾಳೆಗೂ ಮುಂದುವರಿಯಬಹುದು ಎಂದು ಸ್ಪೀಕರ್ ಪರ ಹಾಜರಾದ ಅಭಿಷೇಕ್ ಮನು ಸಿಂಘ್ವಿ ಹೇಳಿದರು.












