ದ.ಕ. ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಕುದ್ರೋಳಿಯ ಮುಹಮ್ಮದ್ ಅಯಾನ್ ಅಶ್ರಫ್‌ಗೆ 1 ಚಿನ್ನ, 2 ಕಂಚು

0
325

ಸನ್ಮಾರ್ಗ ವಾರ್ತೆ

ಮಂಗಳೂರು, ಆ. 29: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿ ಒನ್ ಅಕ್ವಾ ಸೆಂಟರ್, ಮಂಗಳೂರು ಇವರ ಸಹಯೋಗದಲ್ಲಿ ಆಗಸ್ಟ್ 29, 2026ರಂದು ಎಮ್ಮೆಕೆರೆಯ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ಜಿಲ್ಲಾಮಟ್ಟದ ಈಜು ಸ್ಪರ್ಧೆ ನಡೆಯಿತು.

ಸ್ಪರ್ಧೆಯ ಗ್ರೂಪ್–IV ವಿಭಾಗದಲ್ಲಿ ಕುದ್ರೋಳಿಯ ಬ್ರೈಟ್ ಮಾಡೆಲ್ ಸ್ಕೂಲ್‌ನ 3ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಅಯಾನ್ ಅಶ್ರಫ್ ಗಮನಾರ್ಹ ಸಾಧನೆ ಮಾಡಿದ್ದಾರೆ.

ಅಯಾನ್ ಅಶ್ರಫ್ ಅವರು 50 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ಚಿನ್ನದ ಪದಕ 🥇 ಹಾಗೂ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಮತ್ತು 100 ಮೀಟರ್ ಫ್ರೀಸ್ಟೈಲ್ ವಿಭಾಗಗಳಲ್ಲಿ ತಲಾ ಕಂಚಿನ ಪದಕ 🥉🥉 ಗೆದ್ದು ಶಾಲೆಗೆ ಹಾಗೂ ಕುದ್ರೋಳಿ ಪ್ರದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಕಿರಿಯ ವಯಸ್ಸಿನಲ್ಲೇ ಈಜು ಕ್ರೀಡೆಯಲ್ಲಿ ಉತ್ತಮ ಪ್ರತಿಭೆ ಪ್ರದರ್ಶಿಸಿ ಮೂರು ಪದಕಗಳನ್ನು ಮುಡಿಗೇರಿಸಿಕೊಂಡಿರುವ ಅಯಾನ್ ಅಶ್ರಫ್ ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಭವಿಷ್ಯದಲ್ಲಿಯೂ ಈಜು ಕ್ರೀಡೆಯಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.