ಸನ್ಮಾರ್ಗ ವಾರ್ತೆ
ಹೊಸದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು, ಹರಿಯಾಣದ ಮಹಿಳಾ ಕುಸ್ತಿಪಟುಗಳು ತನ್ನ ಮೇಲೆ ಹೊರಿಸಿರುವ ಆರೋಪಗಳು ತನ್ನನ್ನು ಒಬ್ಬ ಹೀರೋವನ್ನಾಗಿ ಮಾಡಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಹುದ್ದೆಗೆ ಬಡ್ತಿ ಪಡೆದ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಚಿನ್ ತನ್ವಾರ್ ಅವರಿಗೆ ನೀಡಲಾದ ಸನ್ಮಾನ ಸಮಾರಂಭದಲ್ಲಿ ಬ್ರಿಜ್ ಭೂಷಣ್ ಸಿಂಗ್ ಈ ರೀತಿಯ ಗೇಲಿ ಮಾಡಿದ್ದಾರೆ.
ಕುಸ್ತಿಪಟುಗಳ ಬಗ್ಗೆ ತನಗೆ ಯಾವುದೇ ದ್ವೇಷವಿಲ್ಲ. ರಾಮಾಯಣದಲ್ಲಿ ಕೈಕೇಯಿಯ ಪಾತ್ರಕ್ಕಾಗಿ ಭಗವಾನ್ ರಾಮನು ಹೆಚ್ಚು ಹೆಸರುವಾಸಿಯಾಗಿದ್ದಾನೆ. ಅದೇ ರೀತಿಯಲ್ಲಿ, ಲೈಂಗಿಕ ಕಿರುಕುಳದ ದೂರುಗಳನ್ನು ದಾಖಲಿಸಿರುವ ಕುಸ್ತಿಪಟುಗಳನ್ನು ಬ್ರಿಜ್ ಭೂಷಣ್ ಗೇಲಿ ಮಾಡಿದ್ದು, ತನ್ನ ವಿರುದ್ಧ ಮಾಡಲಾದ ಆರೋಪಗಳು ದೇಶಾದ್ಯಂತ ತನ್ನನ್ನು ಹೀರೋವನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ. ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದ ಮಹಿಳಾ ಕುಸ್ತಿಪಟುಗಳು ಈಗ ಅತ್ಯಲ್ಪ ಮೊತ್ತಕ್ಕೂ ಪರದಾಡುತ್ತಿದ್ದಾರೆ ಮತ್ತು ಯಾರೂ ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲ ಎಂದು ಬ್ರಿಜ್ ಭೂಷಣ್ ತಿಳಿಸಿದ್ದಾರೆ.
ತಮ್ಮ ಜೀವನದಲ್ಲಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸಿದ್ದೇನೆ ಆದರೆ ಎಂದಿಗೂ ಬಿಟ್ಟುಕೊಟ್ಟಿಲ್ಲ ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ. ತಮ್ಮ ಐವರು ಸಹೋದರರು ಮತ್ತು ಸ್ವಂತ ಮಗನ ಅಂತ್ಯಕ್ರಿಯೆಯನ್ನು ಮಾಡುವ ಪರಿಸ್ಥಿತಿ ಎದುರಾಗಿತ್ತು ಮತ್ತು ತಮ್ಮದೇ ಮನೆ ಧ್ವಂಸಗೊಳ್ಳುವುದನ್ನು ಕಣ್ಣಾರೆ ಕಂಡಿದ್ದೇನೆ ಎಂದಿದ್ದಾರೆ. 1996 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ತನಗೂ ನಂಟಿದೆ ಎಂಬ ಆರೋಪಗಳು ಬಂದಿದ್ದವು ಎಂದು ಬ್ರಿಜ್ ಭೂಷಣ್ ಸಿಂಗ್ ತಿಳಿಸಿದ್ದಾರೆ.
ಮಹಿಳಾ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ಬ್ರಿಜ್ ಭೂಷಣ್ ಸಿಂಗ್ ಅವರನ್ನು ದೋಷಮುಕ್ತಗೊಳಿಸಿದೆ.












