ಸನ್ಮಾರ್ಗ ವಾರ್ತೆ
ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ) ಸೀರತ್ ಅಭಿಯಾನ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಇದರಾ ಅದಬ್ ಏ ಇಸ್ಲಾಮೀ ಹಿಂದ್ ಬೀದರ್ ಸಹಯೋಗದಲ್ಲಿ ಭಾನುವಾರ ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಂಘ ಸಭಾಂಗಣದಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು.
ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯ ಮುಹಮ್ಮದ್ ನಿಜಾಮುದ್ದಿನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
“ಪವಿತ್ರ ಕುರಾನಿನ 33 ಅಧ್ಯಾಯದ ಸೂಕ್ತ 45-47ವರೆಗೆ ಪಠಿಸಿ ಪ್ರವಾದಿ ಮುಹಮ್ಮದ್(ಸ) ಸಂದೇಶ ವಾಹಕದ ನೆಲೆಯ ಕರ್ತ್ಯವದ ಗುಣವಿಶೇಷಗಳನ್ನು ತಿಳಿಸುತ್ತ, ಪ್ರವಾದಿ ದೇವರಿಂದ ನಿಯುಕ್ತರಾಗಿ ದೇವ ಸಂದೇಶದ ಸಾಕ್ಷಿದಾರರಾಗಿಯೂ ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರಾಗಿಯೂ ಮತ್ತು ದೇವನ ಅನುಮತಿಯಿಂದ ಅವನ ಕಡೆಗೆ ಕರೆ ನೀಡುವವರಾಗಿಯೂ ಮತ್ತು ಪ್ರಕಾಶಮಯ ಜ್ಯೋತಿಯಾಗಿದ್ದರು” ಎಂದು ಹೇಳಿದರು.
ಸ್ಥಾನೀಯ ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಮುಹಮ್ಮದ್ ಮೌಝ್ಹಮಾ ಅಧ್ಯಕ್ಷತೆ ವಹಿಸಿ ಮಾತನಾಡಿ, “ಬೀದರ್ ಜಿಲ್ಲೆಯು ಬಹುಭಾಷಿಕರ ನೆಲವಾಗಿದ್ದು, ಇಲ್ಲಿ ಕನ್ನಡ, ಹಿಂದಿ, ಉರ್ದು, ತೆಲುಗು ಹಾಗೂ ಮರಾಠಿ ಭಾಷೆಯ ಜನರು ವಾಸಿಸುತ್ತಾರೆ. ಬಹುತ್ವದ ನೆಲದಲ್ಲಿ ಎಲ್ಲಾ ಭಾಷಿಕರಿಗೂ ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶ ಪರಿಚಯಿಸುವ ಉದ್ದೇಶದಿಂದ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ” ಎಂದರು.
“ಪ್ರವಾದಿ ಮುಹಮ್ಮದ್ ಅವರ ಕ್ರಾಂತಿ ಮಾನವೀಯ ಕ್ರಾಂತಿಯಾಗಿದೆ. ಜನರ ಮನಸ್ಸುಗಳನ್ನು ಒಗ್ಗೂಡಿಸುವ ಮಾನವ ಕುಲ ಒಂದೇ ಎಂದು ಸಾರುವುದು. ನೈತಿಕತೆ ಹಾಗೂ ಚಾರಿತ್ರ್ಯವನ್ನು ಶುದ್ಧೀಕರಿಸುವ ಮುಖಾಂತರ ಸಮಾಜ ಬದಲಾವಣೆ ಬಯಸಿದರು. ಇಂದಿನ ಸಮಾಜಕ್ಕೆ ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶ ದಾರಿದೀಪವಾಗಿದೆ” ಎಂದರು.
ಕವಿಗೋಷ್ಠಿಯಲ್ಲಿ ಡಾ.ರಾಮಚಂದ್ರ ಗಣಾಪುರ, ಡಾ.ರಘುಶಂಖ ಭಾತಂಬ್ರಾ ಡಾ.ಮಕ್ತುಂಬಿ ಎಂ., ಅಶ್ವಜೀತ್ ದಂಡಿನ್, ಡಾ.ಶ್ರೇಯಾ ಮಹೀಂದ್ರಕರ್, ಸಂಗಮೇಶ ಜವಾದಿ, ವಿದ್ಯಾವತಿ ಅವರು ಕನ್ನಡದಲ್ಲಿ ಕವಿತೆ ವಾಚಿಸಿದರು. ಜಗದೀಶ್ವರ ಬಿರಾದರ್, ಧನಲಕ್ಷ್ಮಿ ಪಾಟೀಲ್ ಇಂಗ್ಲಿಷ್ ಕವಿತೆ ವಾಚಿಸಿದರು. ಉರ್ದು ಭಾಷೆಯಲ್ಲಿ ಸೈಯದ್ ಜಮೀಲ್ ಹಾಸ್ಮಿ, ಮುನವ್ವರ್ ಅಲಿ ಶಾಹಿದ್, ಸೈಯದ್ ಖಾಸಿಂ ಸಾಜಿದ್, ಖಾಜಿ ಇದ್ರಿಸ್ ಅಲಿ, ಹಾಮೆದ್ ಸಲೀಮ್ ಹಾಮೆದ್, ಹೈದರ್ ಅಲಿ ಸೌದಾಗರ್ ಹಾಗೂ ಹಿಂದಿಯಲ್ಲಿ ಅಜೀಮ್ ಬಾದಶಾ ಕವಿತೆ ವಾಚಿಸಿದರು.
ಇದರಾ ಅದಬ್ ಏ ಇಸ್ಮಾಮೀ ಹಿಂದ್ ಅಧ್ಯಕ್ಷ ರಫೀವುಝ್ಹಮಾ ಖಾದ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, “ಕ್ರಾಂತಿಯ ಜ್ಯೋತಿಯಾಗಿದ್ದ ಪ್ರವಾದಿ ಮುಹಮ್ಮದ್ ಅವರು ಜಗತ್ತಿಗೆ ಸಾರಿದ ಸತ್ಯ, ನ್ಯಾಯ, ಕರುಣೆ, ಘನತೆ, ಏಕತೆ ಹಾಗೂ ಸಮಾನತೆ ಸಂದೇಶಗಳನ್ನು ಜನರಿಗೆ ಪರಿಚಯಿಸುವುದು ಹಾಗೂ ಜನರಿಗೆ ಅವರ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಸೀರತ್ ಅಭಿಯಾನದ ಉದ್ದೇಶವಾಗಿದೆ” ಎಂದರು.
ಮಕ್ಸೂದ್ ಅಲಿಯವರು ದೇವರ ಪ್ರಶಂಸೆ ಮತ್ತು ಪ್ರವಾದಿ ಅವರ ಗುಣಗಾನ ಗೀತೆ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಜಮಾಅತೆ ಇಸ್ಲಾಮೀ ಹಿಂದ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದರಾ ಅದಬ್ ಏ ಇಸ್ಲಾಮೀ ಹಿಂದ್ ಕಾರ್ಯದರ್ಶಿ ಹಾಮೇದ್ ಸಲೀಮ್ ಹಾಮೆದ್ ವಂದಿಸಿದರು.















