ಸನ್ಮಾರ್ಗ ವಾರ್ತೆ
ಹೊಣೆಗಾರಿಕೆ ನಿಗದಿ, ಪರಿಹಾರ ಹಾಗೂ ವಿದ್ಯಾರ್ಥಿ ವಸತಿ ಸುರಕ್ಷತೆಯ ತುರ್ತು ಪರಿಶೀಲನೆಗೆ ಆಗ್ರಹ
ಹೊಸದಿಲ್ಲಿ: ದಿಲ್ಲಿಯ ಸತ್ಯ ನಿಕೇತನದಲ್ಲಿ ವಿದ್ಯಾರ್ಥಿಗಳ ಬಾಲಕರ ವಸತಿ ನಿಲಯವಾಗಿದ್ದ ಐದು ಅಂತಸ್ತಿನ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಏಳು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆಗೆ ಜಮಾಅತೆ ಇಸ್ಲಾಮೀ ಹಿಂದ್ (JIH) ಉಪಾಧ್ಯಕ್ಷ ಪ್ರೊ. ಸಲೀಂ ಎಂಜಿನಿಯರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸಿರುವ ಅವರು, ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ದುರಂತದಿಂದ ಬಾಧಿತರಾದ ಎಲ್ಲರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆ.
ಶಿಕ್ಷಣಕ್ಕಾಗಿ ದಿಲ್ಲಿಗೆ ಬರುವ ಯುವಜನರಿಗೆ ಸುರಕ್ಷಿತ ಹಾಗೂ ಗೌರವಯುತ ವಸತಿ ವ್ಯವಸ್ಥೆ ಕಲ್ಪಿಸುವಲ್ಲಿ ಇರುವ ಗಂಭೀರ ಕೊರತೆಗಳನ್ನು ಈ ಘಟನೆ ಮತ್ತೊಮ್ಮೆ ಬಹಿರಂಗಪಡಿಸಿದೆ. ವಿದ್ಯಾರ್ಥಿ ವಸತಿ ವ್ಯವಸ್ಥೆಯ ಸುರಕ್ಷತೆಯನ್ನು ತುರ್ತಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ನ ನಿಯೋಗವು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿ, ಸ್ಥಳದಲ್ಲಿನ ಪರಿಸ್ಥಿತಿಯನ್ನು ಅರಿತುಕೊಂಡಿತು. ನಿಯೋಗದಲ್ಲಿ JIH ಉಪಾಧ್ಯಕ್ಷ ಪ್ರೊ. ಸಲೀಂ ಎಂಜಿನಿಯರ್, ರಾಷ್ಟ್ರೀಯ ಕಾರ್ಯದರ್ಶಿಗಳಾದ ಮೌಲಾನಾ ಶಾಫಿ ಮದನಿ, I. ಕರೀಮುಲ್ಲಾ, ಅತೀಕುರ್ ರಹ್ಮಾನ್ ಹಾಗೂ ಸಲ್ಮಾನ್ ಅಹ್ಮದ್ ಅವರು ಉಪಸ್ಥಿತರಿದ್ದರು.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಪ್ರೊ. ಸಲೀಂ ಎಂಜಿನಿಯರ್ ಅವರು, “ಈ ಭೇಟಿಯ ಸಂದರ್ಭದಲ್ಲಿ ನಾವು ಕಂಡು ತಿಳಿದುಕೊಂಡ ಸಂಗತಿಗಳು ಅತ್ಯಂತ ಆತಂಕಕಾರಿಯಾಗಿವೆ. ಈ ದುರಂತವನ್ನು ಕೇವಲ ದುರದೃಷ್ಟಕರ ಕಟ್ಟಡ ಕುಸಿತವೆಂದು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಯಾರು ಹೊಣೆ ಎಂಬುದನ್ನು ನಿಗದಿಪಡಿಸಬೇಕು. ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಕಟ್ಟಡ ಕುಸಿತಕ್ಕೆ ಕಾರಣವಾದ ಪರಿಸ್ಥಿತಿಗಳ ಕುರಿತು ಪಾರದರ್ಶಕ ತನಿಖೆ ನಡೆಸಿ, ನಿರ್ಲಕ್ಷ್ಯ, ನಿಯಮ ಉಲ್ಲಂಘನೆ ಅಥವಾ ಮೇಲ್ವಿಚಾರಣೆಯ ವೈಫಲ್ಯ ಕಂಡುಬಂದಲ್ಲಿ ಸಂಬಂಧಪಟ್ಟವರ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು” ಎಂದು ಹೇಳಿದರು.
ಅವರು ಮುಂದುವರಿದು, “ಈ ದುರಂತವು ದಿಲ್ಲಿ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ವಿದ್ಯಾರ್ಥಿ ವಸತಿ ವ್ಯವಸ್ಥೆಯಲ್ಲಿರುವ ದೊಡ್ಡ ಬಿಕ್ಕಟ್ಟಿನತ್ತವೂ ಗಮನ ಸೆಳೆಯುತ್ತದೆ. ಕಾಲೇಜುಗಳಲ್ಲಿ ಸಾಕಷ್ಟು ಹಾಸ್ಟೆಲ್ ಸೌಲಭ್ಯಗಳಿಲ್ಲದ ಕಾರಣ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ಸಾವಿರಾರು ವಿದ್ಯಾರ್ಥಿಗಳು ಖಾಸಗಿ ಪೇಯಿಂಗ್ ಗೆಸ್ಟ್ (PG) ವಸತಿ ಮತ್ತು ಬಾಡಿಗೆ ಕಟ್ಟಡಗಳನ್ನು ಅವಲಂಬಿಸಬೇಕಾಗಿದೆ. ಇಂತಹ ವಸತಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅತಿಯಾದ ಜನಸಂದಣಿ ಹಾಗೂ ಅಸುರಕ್ಷಿತ ಕಟ್ಟಡಗಳಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು.
“ಆದ್ದರಿಂದ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಾಕಷ್ಟು, ಕೈಗೆಟುಕುವ ದರದ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ಸತ್ಯ ನಿಕೇತನ ಹಾಗೂ ಇತರೆ ವಿದ್ಯಾರ್ಥಿ ಕೇಂದ್ರಗಳಲ್ಲಿ ಹಾಸ್ಟೆಲ್ ಮತ್ತು PG ವಸತಿಗಳಾಗಿ ಬಳಸಲಾಗುತ್ತಿರುವ ಕಟ್ಟಡಗಳ ರಚನಾತ್ಮಕ ಪರಿಶೀಲನೆ (Structural Audit) ಹಾಗೂ ಸಮಗ್ರ ಸುರಕ್ಷತಾ ಮೌಲ್ಯಮಾಪನವನ್ನು ವಿಳಂಬವಿಲ್ಲದೆ ನಡೆಸಬೇಕು. ಸುರಕ್ಷತಾ ಮಾನದಂಡಗಳು, ತುರ್ತು ನಿರ್ಗಮನ ದ್ವಾರಗಳು, ಕಟ್ಟಡದ ಅನುಮತಿಗಳು ಮತ್ತು ಇತರ ಅಗತ್ಯ ಸುರಕ್ಷತಾ ಕ್ರಮಗಳನ್ನು ವಸತಿ ಬೇಡಿಕೆಯನ್ನು ಪೂರೈಸುವ ನೆಪದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು” ಎಂದು ಅವರು ಒತ್ತಾಯಿಸಿದರು.
“ಈ ದುರಂತದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿ ಸಂಘಟನೆಗಳು ಹಾಗೂ ಇತರರೊಂದಿಗೆ ನಾವು ಸಂಪೂರ್ಣವಾಗಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಅವರು ಮುಂದಿಟ್ಟಿರುವ ನ್ಯಾಯಸಮ್ಮತ ಬೇಡಿಕೆಗಳನ್ನು ಆಲಿಸಿ ಪರಿಹರಿಸಬೇಕು; ಅವುಗಳನ್ನು ನಿರ್ಲಕ್ಷಿಸಬಾರದು. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಅಗತ್ಯವಾದ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಬೇಕು”.

“ನಿಯಂತ್ರಣ ವ್ಯವಸ್ಥೆಯ ವೈಫಲ್ಯ, ಸಾಕಷ್ಟು ಸಂಸ್ಥೆಯ ಮೂಲಸೌಕರ್ಯದ ಕೊರತೆ ಅಥವಾ ವಾಣಿಜ್ಯ ಹಿತಾಸಕ್ತಿಗಳ ಕಾರಣದಿಂದ ಯುವ ವಿದ್ಯಾರ್ಥಿಗಳ ಜೀವಗಳನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ. ಈ ದುರಂತಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸುವುದರ ಜೊತೆಗೆ, ಮುಂದೆ ಇಂತಹ ತಡೆಯಬಹುದಾದ ದುರಂತಗಳಲ್ಲಿ ಮತ್ತಷ್ಟು ಯುವ ಜೀವಗಳು ಬಲಿಯಾಗದಂತೆ ವ್ಯವಸ್ಥಿತ ಸುಧಾರಣೆಗಳನ್ನು ಜಾರಿಗೆ ತರಬೇಕು” ಎಂದು ಪ್ರೊ. ಸಲೀಂ ಎಂಜಿನಿಯರ್ ಆಗ್ರಹಿಸಿದರು.












