‘ಎಲ್ಲಾ ದಾಖಲೆಗಳು ಸರಿಯಾಗಿವೆ, 2002 ಮತ್ತು 2026 ರ ಎಸ್‌ಐಆರ್ ಪಟ್ಟಿಯಲ್ಲಿ ಹೆಸರಿದೆ’; ಜಲೀಲ್ ಅಖ್ತರ್ ಅವರನ್ನು ಬಾಂಗ್ಲಾದೇಶಿ ಎಂದು ಬಂಧಿಸಿರುವುದಕ್ಕೆ ಕುಟುಂಬದ ವಿರೋಧ

0
262

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ‘ಬಾಂಗ್ಲಾದೇಶಿ’ ಎಂಬ ಆರೋಪದ ಮೇಲೆ ಪಶ್ಚಿಮ ಬಂಗಾಳದಲ್ಲಿ ಬಂಧಿತರಾಗಿರುವ 66 ವರ್ಷದ ವೃದ್ಧರೊಬ್ಬರ ಭಾರತೀಯ ಗುರುತಿನ ದಾಖಲೆಗಳು ಮಾನ್ಯವಾಗಿವೆ ಎಂದು ಪೊಲೀಸರು ನ್ಯಾಯಾಲಯದಲ್ಲಿ ವಿವರಿಸಿದ ಹೊರತಾಗಿಯೂ ಅವರ ಕುಟುಂಬಕ್ಕೆ ಇನ್ನೂ ಜಾಮೀನು ಸಿಕ್ಕಿಲ್ಲ. ಉತ್ತರ ದಿನಾಜ್‌ಪುರ ಜಿಲ್ಲೆಯ ಕರಂದಿಘಿ ಬ್ಲಾಕ್‌ನ ಬಗ್ರೋಯ್ ನಿವಾಸಿ ಜಲೀಲ್ ಅಖ್ತರ್ ಅವರನ್ನು ಜೂನ್ 20 ರ ಮುಂಜಾನೆ ದಾಲ್‌ಖೋಲಾ ಪೊಲೀಸರು ಅವರ ಮನೆಯಿಂದಲೇ ವಶಕ್ಕೆ ಪಡೆದಿದ್ದಾರೆ. 2002 ಮತ್ತು 2026ರ ಎಸ್‌ಐಆರ್ ಮತದಾರರ ಪಟ್ಟಿಯಲ್ಲಿ ಅಖ್ತರ್ ಅವರ ಹೆಸರು ಸೇರಿದೆ.

ಜೂನ್ 20ರ ಮಧ್ಯರಾತ್ರಿ ಸುಮಾರಿಗೆ ಮನೆಗೆ ಬಂದ ಪೊಲೀಸರು ಅಖ್ತರ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯಲ್ಲಿ ಮಲಗಿದ್ದ ಇತರ ಸದಸ್ಯರಿಗೆ ಮರುದಿನ ಬೆಳಿಗ್ಗೆಯಷ್ಟೇ ಈ ಘಟನೆಯ ಬಗ್ಗೆ ತಿಳಿದುಬಂದಿದೆ ಎಂದು ಕುಟುಂಬ ಹೇಳುತ್ತದೆ. ಅಖ್ತರ್ ಅವರನ್ನು ಮೊದಲು ನಿಜಾಮ್‌ಪುರದ ಹೋಲ್ಡಿಂಗ್ ಸೆಂಟರ್‌ಗೆ, ನಂತರ ಮತ್ತೊಂದು ಹೋಲ್ಡಿಂಗ್ ಸೆಂಟರ್‌ಗೆ ಮತ್ತು ಆನಂತರ ಇಸ್ಲಾಂಪುರ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಕುಟುಂಬ ಹೇಳಿದೆ.

ಅಖ್ತರ್ ಬಾಂಗ್ಲಾದೇಶಿ ಪ್ರಜೆ ಎಂಬುದನ್ನು ಸಾಬೀತುಪಡಿಸಲು ಪೊಲೀಸರು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ ಎಂದೂ ಕುಟುಂಬ ಆರೋಪಿಸಿದೆ. ಈ ಮಧ್ಯೆ, ಅಖ್ತರ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅವರು ಸುಮಾರು 24 ವರ್ಷಗಳ ಹಿಂದೆ ಹಿಲಿ-ಮಾಲ್ಡಾ ಗಡಿಯ ಮೂಲಕ ಭಾರತಕ್ಕೆ ಬಂದಿದ್ದರು ಎಂದು ಹೇಳಲಾಗಿದೆ. ಆದರೆ, 1995 ರ ಮತದಾರರ ಪಟ್ಟಿ ಮತ್ತು 2002 ರ ಎಸ್‌ಐಆರ್ ಪಟ್ಟಿಯಲ್ಲಿ ಅಖ್ತರ್ ಅವರ ಹೆಸರು ಸೇರಿರುವ ದಾಖಲೆಗಳನ್ನು ಕುಟುಂಬವು ನ್ಯಾಯಾಲಯಕ್ಕೆ ಸಲ್ಲಿಸಿದೆ. ಪೊಲೀಸರು ಹೇಳುವುದು ನಿಜವಾಗಿದ್ದು ಅವರು 24 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದರೆ, 1995ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಹೇಗೆ ಬಂತು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ರಾತ್ರೋರಾತ್ರಿ ಮನೆಯಿಂದಲೇ ವಶಕ್ಕೆ ಪಡೆಯಲಾಗಿದೆ ಎಂದ ಕುಟುಂಬ

ಅಖ್ತರ್ ಮನೆಯ ಮುಂಭಾಗದ ಮಂಚದ ಮೇಲೆ ಮಲಗಿದ್ದರು. ಜೂನ್ 20ರ ಬೆಳಿಗ್ಗೆ ಅವರ ಪತ್ನಿ ತೌಫಾ ಬೀಬಿ ಎಚ್ಚರಗೊಂಡಾಗಲಷ್ಟೇ ಅಖ್ತರ್ ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ. ಆರಂಭದಲ್ಲಿ ಅವರು ಫಜ್ರ್ ನಮಾಜ್‌ಗೆ ಹೋಗಿರಬಹುದು ಎಂದು ಭಾವಿಸಿದ್ದರು, ಆದರೆ ಅವರ ಬಟ್ಟೆಗಳು ಮನೆಯಲ್ಲೇ ಇರುವುದನ್ನು ಕಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು.

ಹಿಂದಿನ ರಾತ್ರಿ ಪೊಲೀಸ್ ವಾಹನವೊಂದು ಗ್ರಾಮಕ್ಕೆ ಬಂದಿದ್ದ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭಿಸಿತು ಎಂದು ಸಂಬಂಧಿ ಮೋತಿಯುರ್ ರೆಹಮಾನ್ ತಿಳಿಸಿದ್ದಾರೆ. ಆನಂತರ ಅವರು ಬಜಾರ್‌ಗಾಂವ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಪೊಲೀಸರು ಅಖ್ತರ್ ಅವರನ್ನು ವಶಕ್ಕೆ ಪಡೆದಿರುವ ವಿಷಯ ಕುಟುಂಬಕ್ಕೆ ತಿಳಿದುಬಂದಿದೆ ಎಂದು ಆರೋಪಿಸಲಾಗಿದೆ.

ಪೊಲೀಸ್ ವಶದಲ್ಲಿರುವಾಗ ಅಖ್ತರ್ ಅವರನ್ನು ಬಂದೂಕು ತೋರಿಸಿ ಬೆದರಿಸಲಾಗಿತ್ತು ಮತ್ತು ಅವರ ಕುರ್ತಾವನ್ನು ತೆಗೆಯಲು ಸಹ ಅವಕಾಶ ನೀಡಲಿಲ್ಲ ಎಂದು ಕುಟುಂಬ ಆರೋಪಿಸಿದೆ, ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.

ಅಖ್ತರ್ ಅವರ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು 1995 ರ ಮತದಾರರ ಪಟ್ಟಿ, 2002 ರ ಎಸ್‌ಐಆರ್ ಪಟ್ಟಿ, ಅವರ ತಂದೆ ರೌಶನ್ ಅಲಿ ಅವರೊಂದಿಗಿನ ಸಂಬಂಧವನ್ನು ದೃಢಪಡಿಸುವ ಭೂ ದಾಖಲೆಗಳು ಮತ್ತು ಬಸರ್‌ಗಾಂವ್-2 ಪಂಚಾಯತ್‌ನಿಂದ ವಾಸಸ್ಥಳ ಪ್ರಮಾಣಪತ್ರವನ್ನು ಸಂಗ್ರಹಿಸಿರುವುದಾಗಿ ಕುಟುಂಬ ಹೇಳಿದೆ.

ತಾವು ಜುಲೈ 9 ರಂದು ದಾಲ್‌ಖೋಲಾ ಪೊಲೀಸ್ ಠಾಣೆಗೆ ಮತ್ತು ಅದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಈ ದಾಖಲೆಗಳನ್ನು ಸಲ್ಲಿಸಿದ್ದಾಗಿ ಕುಟುಂಬ ಹೇಳಿದೆ. ದಾಖಲೆಗಳನ್ನು ಪರಿಶೀಲಿಸಲು ತಮಗೆ ಸಮಯ ಬೇಕು ಎಂದು ಪೊಲೀಸರು ತಿಳಿಸಿದ್ದು, ಅವರು ಭಾರತೀಯ ಪ್ರಜೆ ಎಂದು ಸಾಬೀತಾದರೆ ಅಖ್ತರ್‌ಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಕುಟುಂಬ ಹೇಳಿದೆ. ಇದೇ ವೇಳೆ, ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಹುಡುಕಿ ಗಡೀಪಾರು ಮಾಡುವಂತೆ ಮೇಲಧಿಕಾರಿಗಳಿಂದ ತೀವ್ರ ಒತ್ತಡವಿದೆ ಎಂದು ಪೊಲೀಸರು ಹೇಳಿರುವುದಾಗಿ ಕುಟುಂಬ ಆರೋಪಿಸಿದೆ.

ಬಾಂಗ್ಲಾದೇಶಕ್ಕೆ ಕಳುಹಿಸಲು ಯತ್ನಿಸಿದ ಆರೋಪ

ಎಸ್‌ಐಆರ್ ಪಟ್ಟಿಯಿಂದ ಹೊರಗುಳಿದವರಿಗೆ ಸಹಾಯ ಮಾಡುವ ಮತದಾನದ ಹಕ್ಕುಗಳ ರಕ್ಷಣಾ ಸಂಘಟನೆಯಾದ ‘ವೋಟಾಧಿಕಾರ್ ಸುರಕ್ಷಾ ಸಮನ್ವಯ ಸಮಿತಿ’ಯ ಸಂಘಟಕ ದುಲಾಲ್ ರಾಜ್‌ಬಂಶಿ, ಅಖ್ತರ್ ಅವರನ್ನು ಎರಡು ಬಾರಿ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಅಖ್ತರ್ ಅವರನ್ನು ಫುಲ್ಬಾರಿ ಗಡಿ ಚೆಕ್‌ಪೋಸ್ಟ್ ಬಳಿಯ ಹೋಲ್ಡಿಂಗ್ ಸೆಂಟರ್‌ಗೆ ಸ್ಥಳಾಂತರಿಸಲಾಗಿತ್ತು ಮತ್ತು ನಂತರ ಬಿಎಸ್‌ಎಫ್‌ಗೆ ಹಸ್ತಾಂತರಿಸಲಾಗಿತ್ತು ಎಂದು ರಾಜ್‌ಬಂಶಿ ಹೇಳಿದ್ದಾರೆ. ಜುಲೈ 6ರಂದು ಅಖ್ತರ್ ಅವರನ್ನು ನಿಜಾಮ್‌ಪುರದಿಂದ ಫುಲ್ಬಾರಿ ಪ್ರದೇಶಕ್ಕೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ತಮಗೆ ಲಭಿಸಿತು, ಆನಂತರ ಅವರ ಕುಟುಂಬ ಮತ್ತು ಕಾರ್ಯಕರ್ತರು ಅಧಿಕಾರಿಗಳನ್ನು ಸಂಪರ್ಕಿಸಿದರು ಎಂದು ಅವರು ತಿಳಿಸಿದ್ದಾರೆ.

ಎಫ್‌ಐಆರ್ ಮತ್ತು ಕೇಸ್ ಡೈರಿಯಲ್ಲಿನ ವಿರೋಧಾಭಾಸಗಳು

ಜೂನ್ 20ರ ಬೆಳಿಗ್ಗೆ 1.05ಕ್ಕೆ ನಿಜಾಮ್‌ಪುರದಿಂದ ಅಖ್ತರ್ ಅವರನ್ನು ಬಂಧಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಆದರೆ, ನಿಜಾಮ್‌ಪುರ ಅವರ ಮನೆಯಿಂದ ಸುಮಾರು 35 ಕಿ.ಮೀ ದೂರದಲ್ಲಿದೆ.

ಅಖ್ತರ್ ಜೊತೆಗೆ ಇತರ ಇಬ್ಬರು ‘ಅಕ್ರಮ ಬಾಂಗ್ಲಾದೇಶಿ ನುಸುಳುಕೋರರನ್ನು’ ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಎಫ್‌ಐಆರ್ ಹೇಳುತ್ತದೆ. ಅವರು ಬಾಂಗ್ಲಾದೇಶದ ಠಾಕೂರ್‌ಗಾಂವ್ ಜಿಲ್ಲೆಯ ಅಂಧ್ರಹಮತ್‌ಪುರ ಗ್ರಾಮದವರಾಗಿದ್ದು, ವಿಚಾರಣೆಯ ವೇಳೆ ಅಖ್ತರ್ ಈ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ನಡುವೆ, ಆಗಸ್ಟ್ 5ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ಕೇಸ್ ಡೈರಿಯಲ್ಲಿ, ಅಖ್ತರ್ 1982ರ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. 1982ರಲ್ಲಿ ಉತ್ತರ ದಿನಾಜ್‌ಪುರಕ್ಕೆ ಬಂದಿದ್ದ ಅಖ್ತರ್ ದೆಹಲಿಯಲ್ಲಿ ರಿಕ್ಷಾ ಎಳೆಯುವವರಾಗಿದ್ದರು ಮತ್ತು ಅವರು ಸರಿಯಾಗಿ ಬಂಗಾಳಿ ಮಾತನಾಡುತ್ತಿರಲಿಲ್ಲ ಎಂದು ಸ್ಥಳೀಯರಿಂದ ಮಾಹಿತಿ ಲಭಿಸಿದೆ ಎಂದು ಕೇಸ್ ಡೈರಿಯಲ್ಲಿ ಉಲ್ಲೇಖಿಸಲಾಗಿದೆ.