ಸನ್ಮಾರ್ಗ ಸಂಪಾದಕೀಯ
ಇಸ್ಲಾಮ್ನಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ಮುಸ್ಲಿಮರಿಗಿಂತಲೂ ಹೆಚ್ಚು ಮುಸ್ಲಿಮೇತರರಲ್ಲಿ ಕುತೂಹಲವಿದೆ. ಇದಕ್ಕಿರುವ ಎರಡು ಕಾರಣಗಳಲ್ಲಿ ಒಂದು ಏನೆಂದರೆ, ಮುಸ್ಲಿಮ್ ಮಹಿಳೆಯರ ಬದುಕು. ಇನ್ನೊಂದು, ಧಾರ್ಮಿಕ ಮುಖಂಡರು ಅಪರೂಪಕ್ಕೆ ವ್ಯಕ್ತಪಡಿಸುವ ಅಭಿಪ್ರಾಯಗಳು.
ಹೆಣ್ಣನ್ನು ಮನೆಯೊಳಗೆ ಮಾತ್ರ ಸೀಮಿತಗೊಳಿಸಿಕೊಂಡ ಧರ್ಮವು ಪರಿಪೂರ್ಣ ಮತ್ತು ಪ್ರಕೃತಿ ಧರ್ಮವಾಗಿ ಗುರುತಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೆಣ್ಣು ಮತ್ತು ಗಂಡು ಬೇರೆ ಬೇರೆ ಅಲ್ಲ. ಮನುಷ್ಯ ಕುಲದ ಸೃಷ್ಟಿ ಕೇವಲ ಪುರುಷನಿಂದ ಅಥವಾ ಕೇವಲ ಮಹಿಳೆಯಿಂದ ಆಗಿಲ್ಲ. ಇವರಿಬ್ಬರೂ ಜೊತೆ ಸೇರಿದಾಗಲೇ ಮಾನವ ಕುಲದ ವಿಕಾಸವಾಗಿದೆ ಎಂದು ಪವಿತ್ರ ಕುರ್ಆನ್ (4:1) ಹೇಳಿದೆ. ಇಸ್ಲಾಮಿನ ದೃಷ್ಟಿಯಲ್ಲಿ ಗಂಡು ಶ್ರೇಷ್ಠ ಮತ್ತು ಹೆಣ್ಣು ಕನಿಷ್ಠ ಎಂದಾಗಿದ್ದರೆ ಬರೇ ಪುರುಷನಿಂದಲೇ ಅಲ್ಲಾಹನಿಗೆ ಈ ಜಗತ್ತಿನ ಮಾನವ ವಿಕಾಸವನ್ನು ಮಾಡಬಹುದಿತ್ತು. ಪ್ರಥಮ ಮಾನವ ಆದಮ್(ಅ)ಗೆ ಹವ್ವಾ(ಅ) ಎಂಬ ಜೋಡಿಯನ್ನು ಕೊಟ್ಟು ಅವರಿಬ್ಬರಿಂದ ಈ ಜಗತ್ತಿಗೆ ಅನೇಕ ಪುರುಷರನ್ನು ಮತ್ತು ಸ್ತ್ರೀಯರನ್ನು ಹರಡಿದೆನು ಎಂದು ಅಲ್ಲಾಹನು (4:1) ಹೇಳಬೇಕಾಗಿರಲಿಲ್ಲ. ಇಸ್ಲಾಮ್ ಹೆಣ್ಣು ಮತ್ತು ಗಂಡಿನ ಹೊಣೆಗಾರಿಕೆಯನ್ನು ವಿಭಜಿಸಿದೆಯೇ ಹೊರತು ಸ್ಥಾನಮಾನವನ್ನು ಅಲ್ಲ. ‘ಹೆಣ್ಣು ಮನೆ ನಿರ್ವಹಣೆ ಮಾಡಬೇಕು ಮತ್ತು ಗಂಡು ಹೊರಗಡೆ ದುಡಿದು ತರಬೇಕು’ ಎಂಬುದರ ಅರ್ಥ, ಹೆಣ್ಣಿಗೆ ಅಡುಗೆ ಕೋಣೆ ಮತ್ತು ಗಂಡಿಗೆ ಹೊರಗಿನ ಪ್ರಪಂಚ ಎಂದೂ ಅಲ್ಲ. ಅಡುಗೆ ಹೆಣ್ಣೂ ಮಾಡಬಹುದು. ಗಂಡೂ ಮಾಡಬಹುದು. ಅಡುಗೆಯನ್ನು ಇಸ್ಲಾಮ್ ವಿಭಜಿಸಿಯೇ ಇಲ್ಲ. ಮನೆ ನಿರ್ವಹಣೆ ಎಂಬುದರ ಅರ್ಥ ಅಡುಗೆ ಕೋಣೆ ಎಂದೂ ಅಲ್ಲ. ಪುರುಷನಿಗೆ ಸಾಧ್ಯವೇ ಇಲ್ಲದ ಕೆಲವೊಂದು ಸ್ಥಿತಿ ಹೆಣ್ಣಿನಲ್ಲಿದೆ. ಅದರಲ್ಲಿ ಒಂದು, ಗರ್ಭಾವಸ್ಥೆ. ಇನ್ನೊಂದು ತಾಯ್ತನ. ಈ ಎರಡೂ ಸ್ಥಿತಿಗಳು ಆರಾಮವನ್ನು ಬಯಸುತ್ತವೆ. ಆರೈಕೆಯನ್ನೂ ಬಯಸುತ್ತವೆ. ಇದು ದುರ್ಬಲಾವಸ್ಥೆಯಲ್ಲ. ಮಾತ್ರವಲ್ಲ, ಇಂಥದ್ದೊಂದು ಸಾಮರ್ಥ್ಯ ಗಂಡಿಗೆ ಇಲ್ಲದೇ ಇರುವುದರಿಂದ ಆತ ಕೀಳು ಎಂದೂ ಅಲ್ಲ. ಸ್ಥಾನಮಾನದ ಆಚೆಗೆ ವೈಶಿಷ್ಟö್ಯವಾಗಿ ಮಾತ್ರ ಇಂಥ ವಿಭಜನೆಯನ್ನು ನೋಡಬೇಕು. ಸಾಮಾನ್ಯವಾಗಿ,
ಗಂಡು ದೈಹಿಕವಾಗಿ ಬಲಿಷ್ಠನಾದರೆ ಹೆಣ್ಣು ಮಾನಸಿಕವಾಗಿ ಬಲಿಷ್ಠಳು. ಇದಕ್ಕೆ ಹುದೈಬಿಯಾ ಒಪ್ಪಂದದ ವೇಳೆ ನಡೆದಿರುವ ಸನ್ನಿವೇಶವೇ ಸಾಕ್ಷಿ. ಹುದೈಬಿಯಾ ಒಪ್ಪಂದದ ಬಗ್ಗೆ ಪ್ರವಾದಿ(ಸ) ಅನುಯಾಯಿಗಳಲ್ಲಿ ತೀವ್ರ ಅಸಮಾಧಾನವಿತ್ತು. ಮಕ್ಕಾದ ವಿರೋಧಿಗಳ ಮುಂದೆ ಶರಣಾದ ಭಾವ ಅವರಲ್ಲಿತ್ತು. ಈ ಬಾರಿ ಮಕ್ಕಾಕ್ಕೆ ಹೋಗುವಂತಿಲ್ಲ ಮತ್ತು ಹುದೈಬಿಯಾ ಎಂಬ ಸ್ಥಳದಿಂದಲೇ ಮರಳಿ ಮದೀನಾಕ್ಕೆ ಹೋಗಬೇಕು ಎಂಬುದು ಒಪ್ಪಂದದ ತಿರುಳಾಗಿದ್ದುದರಿಂದ ಒಪ್ಪಂದವನ್ನು ಪಾಲಿಸುವ ಉಮೇದು ಯಾರಲ್ಲೂ ಇರಲಿಲ್ಲ. ಆದ್ದರಿಂದಲೇ, ಪ್ರವಾದಿಯ(ಸ) ಮಾತನ್ನು ಯಾರೂ ಪಾಲಿಸಲಿಲ್ಲ. ‘ತಮ್ಮೊಂದಿಗೆ ಕರೆತಂದಿರುವ ಜಾನುವಾರುಗಳನ್ನು ಇಲ್ಲೇ ಬಲಿ ಕೊಡಿ, ತಲೆ ಕ್ಷೌರ ಮಾಡಿಕೊಂಡು ಇಹ್ರಾಮ್ನಿಂದ ಹೊರಬನ್ನಿ..’ ಎಂದು ಪ್ರವಾದಿ ಕರೆಕೊಟ್ಟರೂ ಯಾರೂ ಮಿಸುಕಾಡಲಿಲ್ಲ. ಆಗ ಪ್ರವಾದಿ ಪತ್ನಿ ಉಮ್ಮು ಸಲಮಾ(ರ) ಪ್ರವಾದಿಯವರ ಡೇರೆಗೆ ಹೋದರು. ‘ನೀವು ಏನು ಆದೇಶಿಸಿದ್ದೀರೋ ಅದನ್ನು ನೀವೇ ಮೊದಲು ಮಾಡಿ. ನಿಮ್ಮ ಜಾನುವಾರನ್ನು ಬಲಿಕೊಡಿ ಮತ್ತು ತಲೆ ಕ್ಷೌರ ಮಾಡಿಕೊಳ್ಳಿ. ಹೀಗೆ ನೀವು ಮಾಡಿದರೆ ಅನುಯಾಯಿಗಳು ನಿಮ್ಮನ್ನು ಅನುಸರಿಸುತ್ತಾರೆ..’ ಎಂದು ಅವರು ಹೇಳಿದರು. ಪ್ರವಾದಿ(ಸ) ಹಾಗೆಯೇ ಮಾಡಿದರು ಮತ್ತು ಅವರ ನಿರೀಕ್ಷೆಯಂತೆಯೇ ಎಲ್ಲವೂ ನಡೆಯಿತು.
ಉಮ್ಮು ಸಲಮಾ(ರ) ಮಾನಸಿಕವಾಗಿ ಪ್ರಬಲರಾಗಿದ್ದರು. ತನ್ನ ಈ ತಂತ್ರವು ಯಶಸ್ವಿಯಾಗಲಿದೆ ಎಂಬ ಬಗ್ಗೆ ಅವರಲ್ಲಿ ಖಚಿತತೆ ಇತ್ತು. ಪ್ರವಾದಿ(ಸ) ದೈಹಿಕವಾಗಿ ಉಮ್ಮು ಸಲಮಾ(ರ)ರಿಗಿಂತ ಬಲಿಷ್ಠರಾಗಿರಬಹುದು. ಆದರೆ ಈ ದೈಹಿಕ ಸಾಮರ್ಥ್ಯದ ಮೇಲೆ ಹೆಣ್ಣಿನ ಮಾನಸಿಕ ಶಕ್ತಿ ಪ್ರಾಬಲ್ಯವನ್ನು ಸಾಧಿಸಿತು. ಒಂದುವೇಳೆ, ಹೆಣ್ಣು ಕನಿಷ್ಠ ಮತ್ತು ದ್ವಿತೀಯ ದರ್ಜೆಯ ಜೀವಿ ಎಂದಾಗಿದ್ದರೆ ಉಮ್ಮು ಸಲಮಾ(ರ) ಆ ಸಲಹೆ ಕೊಡುವ ಧೈರ್ಯವನ್ನೇ ಮಾಡುತ್ತಿರಲಿಲ್ಲ. ಒಂದುವೇಳೆ, ಸಲಹೆ ಕೊಡುವ ಧೈರ್ಯ ಮಾಡಿದರೂ ಶ್ರೇಷ್ಠನಾದ ಗಂಡು ಆ ಸಲಹೆಯನ್ನು ಸ್ವೀಕರಿಸಿ ಕನಿಷ್ಠನಾಗಲು ಒಪ್ಪುತ್ತಲೂ ಇರಲಿಲ್ಲ. ಅಂದಹಾಗೆ,
ಪವಿತ್ರ ಕುರ್ಆನ್ಗೆ ಪ್ರವಾದಿ(ಸ)ಗಿಂತ ಉತ್ತಮ ವ್ಯಾಖ್ಯಾನಕಾರ ಬೇರೆ ಯಾರೂ ಇರಲು ಸಾಧ್ಯವಿಲ್ಲ. ಪ್ರವಾದಿ ಮತ್ತು ಅವರ ನಂತರದ ಖಲೀಫರ ಕಾಲದಲ್ಲಿ ಮಹಿಳೆಯರು ವ್ಯಾಪಾರ, ಕೃಷಿ, ಕರಕುಶಲಕರ್ಮಗಳಲ್ಲಿ ಸಕ್ರಿಯರಾಗಿದ್ದರು ಎಂಬುದನ್ನು ಇತಿಹಾಸವೇ ಹೇಳುತ್ತದೆ. ಯುದ್ಧದಲ್ಲಿ ಭಾಗಿಯಾದ ಸೈನಿಕರ ಗಾಯಗಳಿಗೆ ಶುಶ್ರೂಷೆ ಮಾಡುವ ಕೆಲಸವನ್ನು ಉಮ್ಮು ಅಮ್ಮಾರ ಮಾಡಿದ್ದಾರೆ. ಸೈನಿಕರಿಗೆ ನೀರು ಹಂಚುವ ಕೆಲಸವನ್ನು ಇವರು ಮಾಡಿz್ದÁರೆ. ಸಮ್ರಾ ಬಿಂತ್ ನುಹೈಕ್ ಎಂಬ ಮಹಿಳೆ ಪ್ರವಾದಿ(ಸ) ಕಾಲದಲ್ಲಿ ಮಾರುಕಟ್ಟೆಯಲ್ಲಿ ನ್ಯಾಯಪಾಲನೆ ಮಾಡುತ್ತಿದ್ದ ವಿಧಾನ ಬಹು ಪ್ರಸಿದ್ಧವಾಗಿದೆ. ಪ್ರವಾದಿ(ಸ) ಪತ್ನಿಯಾಗಿರುವ ಝೈನಬ್ ಬಿಂತ್ ಜಹಶ್(ರ)ರು ಚರ್ಮ ಹದ ಮಾಡುವುದು ಮತ್ತು ಉಡುಪುಗಳನ್ನು ಹೊಲಿದು ಕೊಡುವುದನ್ನು ಮಾಡುತ್ತಿದ್ದರು. ಗಳಿಸಿದ ಹಣವನ್ನು ದಾನ ಮಾಡುತ್ತಿದ್ದರು. ರೈಹತ್ ಬಿಂತ್ ಅಬ್ದುಲ್ಲಾಹ್ ಎಂಬ ಮಹಿಳೆ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಅಸ್ಮಾ ಬಿಂತ್ ಮುರ್ರಿಬಾ ಎಂಬ ಮಹಿಳೆ ಸುಗಂಧ ದ್ರವ್ಯ ಮಾರಾಟ ಮಾಡುತ್ತಿದ್ದರು. ಮದೀನಾ ದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಾರುಕಟ್ಟೆಗಳೇ ಇದ್ದುವು. ಜಾಬಿರ್ ಇಬ್ನು ಅಬ್ದುಲ್ಲಾರ ಚಿಕ್ಕಮ್ಮ ಖರ್ಜೂರದ ತೋಟಗಳನ್ನು ನಿರ್ವಹಿಸುತ್ತಿದ್ದರು. ಕುರಿ, ಮೇಕೆಗಳನ್ನು ಮೇಯಿಸುವುದು, ನರ್ಸಿಂಗ್ ವೃತ್ತಿಯಲ್ಲಿ ತೊಡಗಿಸಿ ಕೊಳ್ಳುವುದನ್ನೂ ಪ್ರವಾದಿ(ಸ) ಕಾಲದಲ್ಲಿ ಮಹಿಳೆಯರು ಮಾಡುತ್ತಿದ್ದರು. ಈ ವಿಷಯದಲ್ಲಿ ರುಫೈದಾ ಅಲ್ ಅನ್ಸಾರಿಯಾ ಮತ್ತು ರಬೀಅ ಬಿಂತ್ ಮುಅವ್ವಿದ್ ಪ್ರಮುಖ ಹೆಸರು. ಖಲೀಫಾ ಉಮರ್ರ(ರ) ಕಾಲದಲ್ಲಿ ಅಲ್ ಶಿಫಾ ಬಿಂತ್ ಅಬ್ದುಲ್ಲಾಹ್ ಎಂಬ ಮಹಿಳೆಯ ಪಾತ್ರವು ಬಹು ಗಮನಾರ್ಹವಾಗಿದೆ. ಇವರು ಮದೀನಾ ಮಾರುಕಟ್ಟೆಯ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದರು. ತೂಕ ಮತ್ತು ಬೆಲೆಯ ಮೇಲೆ ಇವರು ನಿಗಾ ಇಟ್ಟಿದ್ದರು.
ಪವಿತ್ರ ಕುರ್ಆನಿನ 33ನೇ ಅಧ್ಯಾಯದ 33ನೇ ವಚನಕ್ಕೆ, ‘ಮಹಿಳೆ ಮನೆಯೊಳಗೇ ಇರಬೇಕಾದವಳು’ ಎಂಬ ಅರ್ಥವಷ್ಟೇ ಇರುವುದಾದರೆ ಮತ್ತು ಅದರಾಚೆಗೊಂದು ವ್ಯಾಖ್ಯಾನ ಇಲ್ಲ ಎಂದಾದರೆ, ಪ್ರವಾದಿ(ಸ) ಕಾಲದಲ್ಲಿ ಮಹಿಳೆಯರು ಇಷ್ಟೊಂದು ವೈವಿಧ್ಯಮಯ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಪವಿತ್ರ ಕುರ್ಆನ್ನ ವಚನಗಳು ಅತ್ಯಂತ ಸೂಚ್ಯವಾಗಿವೆ. ಅದಕ್ಕೆ ವಿಸ್ತೃತ ರೂಪವನ್ನು ಕೊಡಬೇಕಾದವರು ಪ್ರವಾದಿ ಮುಹಮ್ಮದ್(ಸ). ‘ಬಹುದೇವಾರಾಧಕರನ್ನು ಕೊಲ್ಲಿರಿ’ ಎಂಬ ಪವಿತ್ರ ಕುರ್ಆನಿನ 9ನೇ ಅಧ್ಯಾಯದ 5ನೇ ವಚನಕ್ಕೆ ಹೇಗೆ ನಿರ್ದಿಷ್ಟ ಸಂದರ್ಭ, ಸನ್ನಿವೇಶ, ಪರಿಸ್ಥಿತಿ, ವಾತಾವರಣಗಳ ಹಿನ್ನೆಲೆ ಇದೆಯೋ ಹಾಗೆಯೇ ಮಹಿಳೆಗೆ ಸಂಬಂಧಿಸಿದ ವಚನಕ್ಕೂ ಇದೆ. ಆ ಹಿನ್ನೆಲೆಯನ್ನು ತುಂಡರಿಸಿ, ಸಂದರ್ಭದಿಂದ ಬೇರ್ಪಡಿಸಿ ವಚನಗಳನ್ನು ಓದುವುದರಿಂದ ಬೇರೆಯದೇ ಆದ ಅರ್ಥಗಳು ಸೃಷ್ಟಿಯಾಗುತ್ತವೆ.
ಪವಿತ್ರ ಕುರ್ಆನ್ನಲ್ಲಿ ಮರ್ಯಮ್ ಎಂಬ ಹೆಣ್ಣಿನ ಹೆಸರಲ್ಲಿ ಅಧ್ಯಾಯವೇ ಇದೆ. ಇದಲ್ಲದೇ 4ನೇ ಅಧ್ಯಾಯದ ಹೆಸರೇ ಅನ್ನಿಸಾ ಅಥವಾ ಮಹಿಳೆಯರು. ಇದರಾಚೆಗೆ, 50ನೇ ಅಧ್ಯಾಯವಾದ ಮುಜಾದಿಲ, 66ನೇ ಅಧ್ಯಾಯವಾದ ಅತ್ತಹ್ರೀಮ್, 24ನೇ ಅಧ್ಯಾಯವಾದ ಅನ್ನೂರ್, 33ನೇ ಅಧ್ಯಾಯವಾದ ಅಹ್ಝಾಬ್, 65ನೇ ಅಧ್ಯಾಯವಾದ ಅತ್ತಲಾಕ್ ಇತ್ಯಾದಿಗಳು ನೇರವಾಗಿ ಮಹಿಳೆಯನ್ನೇ ಸಂಬೋಧಿಸುತ್ತವೆ. ಒಂದುವೇಳೆ, ಪವಿತ್ರ ಕುರ್ಆನ್ ಪುರುಷ ಪ್ರೇಮಿ ಆಗಿರುತ್ತಿದ್ದರೆ ಮತ್ತು ಮಹಿಳಾ ವಿರೋಧಿ ಆಗಿರುತ್ತಿದ್ದರೆ, ಹೆಣ್ಣಿನ ಹೆಸರಲ್ಲಿ ಅಧ್ಯಾಯಗಳು ಗುರುತಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಮಾತ್ರವಲ್ಲ, ಪವಿತ್ರ ಕುರ್ಆನಿನ ಉದ್ದಕ್ಕೂ ಪುರುಷ ಸೂಚಕ ಅಧ್ಯಾಯಗಳೇ ಕಾಣಿಸಬೇಕಿತ್ತು. ಆದರೆ, ಪುರುಷರ ಹೆಸರಲ್ಲಿ ಅಧ್ಯಾಯಗಳು ಬರೇ 8. ಪವಿತ್ರ ಕುರ್ಆನಿನ ಒಟ್ಟು 114 ಅಧ್ಯಾಯಗಳ ಪೈಕಿ ಹೆಣ್ಣು-ಗಂಡು ಸೂಚಕ ಈ ಅಧ್ಯಾಯಗಳನ್ನು ಪರಿಗಣಿಸಿದರೆ, ಪವಿತ್ರ ಕುರ್ಆನಿನ ಒಟ್ಟು ಸಾರಾಂಶ ಏನು ಅನ್ನುವುದು ಗೊತ್ತಾಗುತ್ತದೆ. ಅದು ಪುರುಷ ಪ್ರೇಮಿಯೂ ಅಲ್ಲ. ಮಹಿಳಾ ದ್ವೇಷಿಯೂ ಅಲ್ಲ. ಈ ಬಗೆಯ ವಿಭಜನೆಯೇ ಪವಿತ್ರ ಕುರ್ಆನಿನ ಸಂದೇಶಕ್ಕೆ ಮಾಡುವ ಅವಮಾನ. ಪ್ರವಾದಿ(ಸ) ಜೀವನದ ಬೆಳಕಿನಲ್ಲಿ ಅದನ್ನು ಅರ್ಥೈಸುವುದೇ ಸರಿಯಾದ ವಿಧಾನ.












