ಸನ್ಮಾರ್ಗ ವಾರ್ತೆ
ಲಖನೌನ ಸರ್ಕಾರಿ ಶಾಲೆಯೊಂದರ ಕಳಪೆ ಮೂಲಭೂತ ಸೌಕರ್ಯಗಳ ಕುರಿತು ವರದಿ ಮಾಡಿದ್ದಕ್ಕಾಗಿ ಪತ್ರಕರ್ತನೊಬ್ಬನ ವಿರುದ್ಧ ದಾಖಲಿಸಲಾಗಿದ್ದ ಪ್ರಥಮ ವರ್ತಮಾನ ವರದಿಗೆ (ಎಫ್ಐಆರ್) ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಗುರುವಾರ ವರದಿ ಮಾಡಿದೆ.
ಮಂಗಳವಾರ ನೀಡಿದ ತನ್ನ ಆದೇಶದಲ್ಲಿ, ಸರ್ಕಾರದ ಈ ಕ್ರಮವು “ಅಹಂನ ಸಮಸ್ಯೆ”ಯಂತೆ ಮತ್ತು “ದೂತನನ್ನು ಕೊಲ್ಲುವ” ಪ್ರತೀಕಾರದ ಕ್ರಮದಂತೆ ಕಂಡುಬರುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಶಾಲೆಗಳಲ್ಲಿ ನಿಗದಿತ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು 2009 ರ ಶಿಕ್ಷಣ ಹಕ್ಕು ಕಾಯ್ದೆಯಡಿ ಸರ್ಕಾರವು ಕಾನೂನ ಅಡಿಯಲ್ಲಿ ಬದ್ಧವಾಗಿದೆ ಎಂದು ನ್ಯಾಯಮೂರ್ತಿಗಳಾದ ಅಬ್ದುಲ್ ಮೊಯಿನ್ ಮತ್ತು ಪ್ರಮೋದ್ ಕುಮಾರ್ ಶ್ರೀವಾಸ್ತವ ಅವರ ಪೀಠವು ಅಭಿಪ್ರಾಯಪಟ್ಟಿದೆ ಎಂದು ವರದಿಯಾಗಿದೆ.
ಪತ್ರಕರ್ತರು ಎತ್ತಿತೋರಿಸಿದ ಲೋಪಗಳನ್ನು ಸರಿಪಡಿಸುವ ಕೆಲಸ ಮಾಡುವ ಬದಲು, ಅವರ ವರದಿಯನ್ನು “ಅಹಂನ ಸಮಸ್ಯೆ”(Ego issue) ಯಾಗಿ ಪರಿಗಣಿಸಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಬದಲು ಅಧಿಕಾರಿಗಳು ಆ ಕೊರತೆಗಳನ್ನು ಪರಿಹರಿಸಬೇಕಿತ್ತು ಎಂದು ತಿಳಿಸಿದೆ.
ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಲಖನೌನ ಗೊಸಾಯ್ಗಂಜ್ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 24 ರಂದು ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಪ್ರಶ್ನಿಸಿ ಪತ್ರಕರ್ತ ಅಮಿತ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು.
ಯಾದವ್ ಅವರು ವರದಿಗಾರರಾಗಿ ತಮ್ಮ ಕರ್ತವ್ಯದ ಭಾಗವಾಗಿ ಆಗಸ್ಟ್ 20 ರಂದು ಗೊಸಾಯ್ಗಂಜ್ನಲ್ಲಿರುವ ಪೂರ್ವ ಮಾಧ್ಯಮಿಕ ವಿದ್ಯಾಲಯಕ್ಕೆ ಭೇಟಿ ನೀಡಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ. ಶಾಲೆ ಸರಿಯಾಗಿ ನಿರ್ವಹಿಸಲ್ಪಟ್ಟಿಲ್ಲ, ಕೊಳಕು ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯವಿಲ್ಲದಿರುವುದು ಸೇರಿದಂತೆ ಇತರ ಸಮಸ್ಯೆಗಳಿವೆ ಎಂದು ಅವರು ತಮ್ಮ ವರದಿಯಲ್ಲಿ ಹೇಳಿಕೊಂಡಿದ್ದರು.
ಶಾಲೆಯು ಅತ್ಯುತ್ತಮ ಸ್ಥಿತಿಯಲ್ಲಿದೆ ಮತ್ತು ಅದರ ಶೌಚಾಲಯಗಳು ಸ್ವಚ್ಛವಾಗಿವೆ ಎಂದು ಹೇಳಿ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಎಫ್ಐಆರ್ ಪ್ರಕಾರ, ಯಾದವ್ ಅವರು ಅನುಮತಿಯಿಲ್ಲದೆ ಶಾಲೆಯೊಳಗೆ ಪ್ರವೇಶಿಸಿ, ವಿದ್ಯಾರ್ಥಿಗಳ ತರಗತಿಗಳಿಗೆ ಅಡ್ಡಿಪಡಿಸಿದ್ದಾರೆ ಮತ್ತು ಶಾಲೆಯ ಸ್ಥಿತಿಗತಿಗಳ ಬಗ್ಗೆ ಮಾತನಾಡಲು ಇಬ್ಬರು ಮಹಿಳಾ ಶಿಕ್ಷಕಿಯರ ಮೇಲೆ ಒತ್ತಡ ಹೇರಿದ್ದಾರೆ. ಅವರ ವರದಿಯು ರಾಜಕೀಯ ಪಕ್ಷಪಾತದಿಂದ ಕೂಡಿದೆ ಎಂದೂ ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಶಾಲೆಯ ಶೌಚಾಲಯಗಳು ಮತ್ತು ಆವರಣದ “ಅಯೋಮಯ ಸ್ಥಿತಿಯನ್ನು” ನ್ಯಾಯಾಲಯದ ಮುಂದೆ ಸಲ್ಲಿಸಲಾದ ಫೋಟೋಗಳು ಮೇಲ್ನೋಟಕ್ಕೆ ತೋರಿಸಿವೆ ಎಂದು ಪೀಠವು ಗಮನಿಸಿದೆ.
ಅಲ್ಲದೆ, ಶಾಲೆಯ ಪ್ರಸ್ತುತ ಸ್ಥಿತಿಯ ಬಗ್ಗೆ ನಾಲ್ಕು ವಾರಗಳಲ್ಲಿ ವೈಯಕ್ತಿಕ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಉತ್ತರ ಪ್ರದೇಶದ ಮೂಲ ಶಿಕ್ಷಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಯಾದವ್, ಹೈಕೋರ್ಟ್ಗೆ ಧನ್ಯವಾದ ಅರ್ಪಿಸಿದ್ದು, ಈ ಆದೇಶವು “ಸುಳ್ಳಿನ ವಿರುದ್ಧ ಸತ್ಯದ ಗೆಲುವು” ಎಂದು ಬಣ್ಣಿಸಿದ್ದಾರೆ.












