ಸನ್ಮಾರ್ಗ ವಾರ್ತೆ
ಭಾರತದಲ್ಲಿ ‘ತಲಾಕ್-ಎ-ಹಸನ’ ಮುಸ್ಲಿಂ ವಿಚ್ಛೇದನದ ಮಾನ್ಯವಾದ ಸ್ವರೂಪ ಎಂದು ಗುವಾಹಟಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಸ್ಸಾಂ ಕಡ್ಡಾಯ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ನೋಂದಣಿ ಕಾಯಿದೆ 2024ರ ಅಡಿಯಲ್ಲಿ ಇದನ್ನು ನೋಂದಾಯಿಸಬೇಕು ಎಂದೂ ನ್ಯಾಯಾಲಯ ನಿರ್ದೇಶಿಸಿದೆ. ಬರ್ಪೇಟಾದ ಸಬ್-ರಿಜಿಸ್ಟ್ರಾರ್ ತಲಾಕ್ ಘೋಷಣೆಯನ್ನು ನೋಂದಾಯಿಸಲು ನಿರಾಕರಿಸಿದ್ದರಿಂದ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ಅವರು 2017ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ತಲಾಕ್-ಎ-ಹಸನ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ಇದರಲ್ಲಿ ಮೂರು ಹಂತಗಳಲ್ಲಿ ವಿಚ್ಛೇದನದ ಘೋಷಣೆ ಮಾಡಲಾಗುತ್ತದೆ. ಮೊದಲ ಅಥವಾ ಎರಡನೇ ಘೋಷಣೆಯ ನಂತರ ದಂಪತಿ ಒಟ್ಟಿಗೆ ವಾಸಿಸಲು ಆರಂಭಿಸಿದರೆ ವಿಚ್ಛೇದನ ರದ್ದಾಗುತ್ತದೆ. ಆದರೆ ಮೂರನೇ ಘೋಷಣೆಯ ನಂತರ ವಿವಾಹವು ಅಧಿಕೃತವಾಗಿ ವಿಸರ್ಜನೆಗೊಳ್ಳುತ್ತದೆ ಮತ್ತು ಪತ್ನಿ ‘ಇದ್ದತ್’ ಅವಧಿ ಆಚರಿಸಬೇಕಾಗುತ್ತದೆ.
ಈ ಪ್ರಕರಣದಲ್ಲಿ ಪತ್ನಿ 2018ರಿಂದ ದೂರವಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದು, 2026ರ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಸಾಕ್ಷಿಗಳ ಸಮ್ಮುಖದಲ್ಲಿ ತಲಾಕ್-ಎ-ಹಸನ ಘೋಷಿಸಿ ನೋಟಿಸ್ ಕಳುಹಿಸಿದ್ದರು. ಬಳಿಕ 2024ರ ಕಾಯಿದೆಯಡಿ ನೋಂದಣಿಗೆ ಅರ್ಜಿ ಸಲ್ಲಿಸಿದಾಗ ರಿಜಿಸ್ಟ್ರಾರ್ ನಿರಾಕರಿಸಿದ್ದರು. ಹಳೆಯ ಕಾಯಿದೆ ರದ್ದಾಗಿರುವುದರಿಂದ ಬರ್ಪೇಟಾ ರಿಜಿಸ್ಟ್ರಾರ್ ಹುದ್ದೆ ಇಲ್ಲದಿರುವುದರಿಂದ ಅಲ್ಲಿ ನಿರ್ದೇಶನ ನೀಡಲುಸಾಧ್ಯವಿಲ್ಲ ಎಂದ ಹೈಕೋರ್ಟ್, 2024ರ ಕಾಯಿದೆಯ ಸರಿಯಾದ ಅಧಿಕಾರ ವ್ಯಾಪ್ತಿಯ ರಿಜಿಸ್ಟ್ರಾರ್ ಅನ್ನು ಸಂಪರ್ಕಿಸಲು ಸೂಚಿಸಿದೆ. ಅಲ್ಲದೆ, ನ್ಯಾಯಾಲಯದ ನೋಟಿಸ್ ನೀಡಿದರೂ ಪತ್ನಿ ವಿಚಾರನೆಗೆ ಹಾಜರಾಗಿಲ್ಲ ಎಂದಿರುವ ಕೋರ್ಟ್, ಅವರಿಗೆ ಸೂಕ್ತ ವೇದಿಕೆಯಲ್ಲಿ ಇದನ್ನು ಪ್ರಶ್ನಿಸುವ ಹಕ್ಕಿದೆ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಿಲೇವಾರಿ ಮಾಡಿದೆ.












