ಬೆಂಗಳೂರು, ಜು. 25: ರಾಜ್ಯದಲ್ಲಿ ವಿಶ್ವಾಸ ಮತಯಾಚನೆಯ ಮೂಲಕ ಕುಮಾರ ಸ್ವಾಮಿಯವರ ದೋಸ್ತಿ ಸರಕಾರ ಕುಸಿದರೂ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿಲ್ಲ. ಮೇಲಿಂದ ಆದೇಶ ಬರುವುದನ್ನು ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಕಾದು ಕುಳಿತಿದ್ದಾರೆ. ಬಹುಶಃ ಬಹುಮತ ಸಾಬೀತು ಪಡಿಸುವ ಕುರಿತು ಅವರಿಗೆ ಆತ್ಮವಿಶ್ವಾಸ ಇಲ್ಲ ಎನ್ನುವುದನ್ನು ಈ ಸ್ಥಿತಿ ಸೂಚಿಸುತ್ತಿದೆ. ಈವರೆಗೂ ಬಿಜೆಪಿ ಹೊಸ ಸರಕಾರ ರಚನೆಯತ್ತ ಮನಸ್ಸು ಮಾಡಿಲ್ಲ. ರಾಜೀನಾಮೆ ನೀಡಿದ್ದ ಹದಿನೈದು ಶಾಸಕರ ರಾಜೀನಾಮೆ ಸ್ವೀಕಾರವಾಗುತ್ತೋ, ಅಥವಾ ಅನರ್ಹರಾಗುತ್ತಾರೊ ಎನ್ನುವುದಿನ್ನೂ ಸ್ಪೀಕರ್ ನಿರ್ಧರಿಸಿಲ್ಲ.
ಸರಕಾರ ರೂಪಣೆಯ ಕುರಿತು ಕೇಳಲು ಬಿಜೆಪಿ ನಿಯೋಗ ಬಿಜೆಪಿ ಅಧ್ಯಕ್ಷ ಅಮಿತ್ ಶಾರ, ಕಾರ್ಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿಯಾಗಿ ಮರಳಿದೆ. ಆದರೆ ಈ ಭೇಟಿಯಿಂದಲೂ ಯಾವುದೇ ತೀರ್ಮಾನವಾಗಿಲ್ಲ. ಅತ್ತ ರಾಜೀನಾಮೆ ನೀಡಿದ ಶಾಸಕರು ನಾವು ಈಗಲೂ ಕಾಂಗ್ರೆಸ್ಸಿಗರು ಎನ್ನುತ್ತಿದ್ದಾರೆ. ಇಂದು ಮೂರು ಗಂಟೆಗೆ ಸರಕಾರ ಕುರಿತು ಸ್ಪಷ್ಟ ತೀರ್ಮಾನವಾಗಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗಿಲ್ಲದಿರುವುದರಿಂದ ಈಗ ಸದನದ ಸಂಖ್ಯೆ ೨೨೪ ಇರಲಿದ್ದು, ವಿಶ್ವಾಸ ಮತ ಗೆಲ್ಲಲು ಯಡಿಯೂರಪ್ಪ ೧೧೩ ಶಾಸಕರ ಬಲವನ್ನು ಹೊಂದಬೇಕಾಗಿದೆ ಅನ್ನುವ ಲೆಕ್ಕಾಚಾರವೂ ಇದೆ. ಆದ್ದರಿಂದ ರಾಜೀನಾಮೆ ವಿಚಾರ ಇತ್ಯರ್ಥವಾಗುವವರೆಗೆ ಸರಕಾರ ರಚನೆಗೆ ಆತುರ ತೋರದೆ ಕಾಡು ನೋಡಲು ಬಿಜೆಪಿ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ರಾಜ್ಯಪಾಲ ಆಡಳಿತ ಬಂದರೂ ಬರಬಹುದು.












