ಸನ್ಮಾರ್ಗ ವಾರ್ತೆ
ಸಾನಾ: ಸೌದಿ ಅರೇಬಿಯಾ ಜೊತೆಗಿನ ರಕ್ಷಣಾ ಒಪ್ಪಂದದ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ಪರವಾಗಿ ಮಿಲಿಟರಿ ಹಸ್ತಕ್ಷೇಪ ಮಾಡಿದರೆ ತೀವ್ರ ಕ್ರಮ ಕೈಗೊಳ್ಳುವುದಾಗಿ ಯೆಮೆನ್ನ ಹೌತಿಗಳು ಟರ್ಕಿ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಹೌತಿಗಳ ಹಿರಿಯ ಅಧಿಕಾರಿಯಾದ ಮುಹಮ್ಮದ್ ಅಲ್-ಬುಖೈತಿ ಅವರು ಈ ಎರಡು ದೇಶಗಳ ವಿರುದ್ಧ ಮಾತನಾಡಿದ್ದಾರೆ. ಮಕ್ಕ ರಕ್ಷಣಾ ಒಪ್ಪಂದದ ಕುರಿತು ಇಸ್ರೇಲ್ನ ‘ಮಾರಿವ್’ ಪತ್ರಿಕೆಯೊಂದಿಗೆ ಮಾತನಾಡುತ್ತ ಅವರು ಈ ಹೇಳಿಕೆ ನೀಡಿದ್ದಾರೆ.
ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ನಡುವಿನ ರಕ್ಷಣಾ ವ್ಯವಸ್ಥೆಗಳನ್ನು ಬುಖೈತಿ “ಸಾಂಕೇತಿಕ” ಎಂದು ಬಣ್ಣಿಸಿದ್ದಾರೆ. ಪ್ರಾದೇಶಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇತ್ತೀಚೆಗೆ ರೂಪುಗೊಂಡ “ಮಕ್ಕಾ ಒಪ್ಪಂದ”ದ ಸ್ಫೂರ್ತಿಗೆ ವಿರುದ್ಧವಾಗಿ ಈ ದೇಶಗಳು ಮಿಲಿಟರಿ ಕ್ರಮ ಕೈಗೊಂಡರೆ ಅದು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.
ಆದರೆ ಟರ್ಕಿ ಮತ್ತು ಪಾಕಿಸ್ತಾನವು ಸೌದಿ ಅರೇಬಿಯಾ ಜೊತೆ ಹೊಸ ರಕ್ಷಣಾ ಸಹಕಾರವನ್ನು ಬಲಪಡಿಸಿದ್ದರೂ, ಹೌತಿಗಳ ವಿರುದ್ಧ ನೇರವಾಗಿ ಮಿಲಿಟರಿ ಹಸ್ತಕ್ಷೇಪ ಮಾಡಲು ಈ ದೇಶಗಳು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದಾಗ್ಯೂ, ಸೌದಿ ಅರೇಬಿಯಾಕ್ಕೆ ಬೆಂಬಲವಾಗಿ ಯಾವುದೇ ನೇರ ಹಸ್ತಕ್ಷೇಪವು ದೊಡ್ಡ ಪರಿಣಾಮಗಳಿಗೆ ಮತ್ತು ಭಾರೀ ಬೆಲೆ ತೆರುವುದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಬುಖೈತಿ ಎಚ್ಚರಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೊಸ ರಕ್ಷಣಾ ಒಕ್ಕೂಟಗಳು ಪ್ರಸ್ತುತ ಭದ್ರತಾ ವಾತಾವರಣ ಮತ್ತು ಸಂಘರ್ಷಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಕಳವಳಗಳು ಹೆಚ್ಚುತ್ತಿರುವ ಮಧ್ಯೆ ಹೌತಿಗಳ ಈ ಪ್ರತಿಕ್ರಿಯೆ ಬಂದಿದೆ.
ಮತ್ತೊಂದಡೆ, ಹೌತಿಗಳು ಸೌದಿ ಅರೇಬಿಯಾದ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 73 ಜನರು ಗಾಯಗೊಂಡ ನಂತರ ಪಾಕಿಸ್ತಾನವು ಹೌತಿಗಳ ವಿರುದ್ಧ ಎಚ್ಚರಿಕೆ ನೀಡಿದೆ. ಹೌತಿ ಬಂಡುಕೋರರ ದಾಳಿಗಳು ಮುಂದುವರಿದರೆ ಸೌದಿ ಅರೇಬಿಯಾ ಜೊತೆಗಿನ ಜಂಟಿ ರಕ್ಷಣಾ ಒಪ್ಪಂದವನ್ನು ಕಾರ್ಯಗತಗೊಳಿಸಲು ಪಾಕಿಸ್ತಾನ ಸಿದ್ಧವಿರುತ್ತದೆ ಎಂದು ರಕ್ಷಣಾ ಸಚಿವ ಖಾವಾಜಾ ಆಸಿಫ್ ಹೇಳಿದ್ದಾರೆ.












