ಛತ್ತೀಸ್‌ಗಢ | ಬಿಜೆಪಿಗೆ ಅನಿರೀಕ್ಷಿತ ಹಿನ್ನಡೆ; ಕಾಂಗ್ರೆಸ್‌ ಸೇರ್ಪಡೆಯಾದ ಸಚಿವರ ಸಹೋದರ

0
326

ಸನ್ಮಾರ್ಗ ವಾರ್ತೆ

ರಾಯ್‌ಪುರ: 2028ರ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಚುರುಕುಗೊಳಿಸಲು ಯತ್ನಿಸುತ್ತಿರುವ ಛತ್ತೀಸ್‌ಗಢದ ಬಿಜೆಪಿ ಸರ್ಕಾರಕ್ಕೆ ಹಿನ್ನಡೆಯುಂಟಾಗಿದೆ. ಛತ್ತೀಸ್‌ಗಢ ಸಚಿವ ಸಂಪುಟದ ಸದಸ್ಯರಾದ ಗುರು ಖುಶ್‌ವಂತ್ ಅವರ ಹಿರಿಯ ಸಹೋದರ ದಾಲ್ದಾಸ್ ಸಾಹೇಬ್ ಅವರು ವಿರೋಧ ಪಕ್ಷವಾದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರು ಸಹೋದರರು ಸತ್ನಾಮಿ ಸಮುದಾಯದ ನಾಯಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಅವರು ಕಾಂಗ್ರೆಸ್ ಸೇರಿದರು.

“ಇದು ಹೊಸ ಆರಂಭ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಬಿಜೆಪಿಯನ್ನು ನಿರ್ನಾಮ ಮಾಡುತ್ತೇವೆ” ಎಂದು ದಾಲ್ದಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಪಕ್ಷವು ನಿರ್ಧರಿಸಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಸಿದ್ಧವಿರುವುದಾಗಿಯೂ ಅವರು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಚುನಾವಣೆಯಲ್ಲಿ ತನ್ನ ಸಹೋದರನ ವಿರುದ್ಧ ಸ್ಪರ್ಧಿಸಲು ಇಷ್ಟವಿಲ್ಲ ಎಂದು ಅವರು ರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಮುಂಗೇಲಿಯಿಂದ ಅಭ್ಯರ್ಥಿಯಾಗಲು ಬಯಸುತ್ತೇನೆ, ಅದು ಕೂಡ ಖುಶ್‌ವಂತ್ ಅಲ್ಲಿ ಸ್ಪರ್ಧಿಸದಿದ್ದರೆ ಮಾತ್ರ. ಸ್ವಾತಂತ್ರ್ಯಕ್ಕೂ ಮುಂಚೆಯೂ ನಮ್ಮ ಕುಟುಂಬವು ಅನೇಕ ಕ್ಷೇತ್ರಗಳಲ್ಲಿ ರಾಜಕೀಯದಲ್ಲಿ ತೊಡಗಿತ್ತು. ಜವಾಹರಲಾಲ್ ನೆಹರೂರಂತಹ ಜನನಾಯಕರು ಕೆಲಸ ಮಾಡಿದ ಕಾಂಗ್ರೆಸ್‌ಗೆ ಸೇರಲು ನಾನು ಬಯಸಿದ್ದೆ” ಎಂದು ಅವರು ಹೇಳಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೀಟು ಸಿಗುವುದಿಲ್ಲ ಎಂದು ಅರಿತುಕೊಂಡ ನಂತರ ಖುಶ್‌ವಂತ್ ಸಾಹೇಬ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ರಾಯ್‌ಪುರ ಜಿಲ್ಲೆಯ ಆರಾಂಗ್ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಸಚಿವರಾದರು.