ಸನ್ಮಾರ್ಗ ವಾರ್ತೆ
ರಾಯಿಟರ್ಸ್ ವರದಿ ಮಾಡಿರುವಂತೆ, ಶಾಲೆಯಲ್ಲಿ ಬುರ್ಖಾ ಮತ್ತು ನಿಖಾಬ್ ಧರಿಸುವುದನ್ನು ನಿಷೇಧಿಸಲು ಮತ್ತು ಪ್ರತಿ ತರಗತಿಯಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಲು ಇಟಲಿ ಸಿದ್ಧತೆ ನಡೆಸುತ್ತಿದೆ ಎಂದು ಪ್ರಧಾನಿ ಜಾರ್ಜಿಯಾ ಮೆಲೊನಿ ಭಾನುವಾರ ತಿಳಿಸಿದ್ದಾರೆ.
“ಶಾಲಾ ವ್ಯವಸ್ಥೆಯಲ್ಲಿ ಸೇರ್ಪಡೆಗೊಳ್ಳುವಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ” ವಿದೇಶಿ ವಿದ್ಯಾರ್ಥಿಗಳ ಪೋಷಕರು ಇಟಾಲಿಯನ್ ಭಾಷಾ ತರಗತಿಗಳಿಗೆ ಹಾಜರಾಗುವುದನ್ನು ಪ್ರಸ್ತಾವಿತ ಕ್ರಮಗಳು ಕಡ್ಡಾಯಗೊಳಿಸಲಿವೆ ಎಂದು ಮೆಲೊನಿ ಹೇಳಿದರು.
ರೋಮ್ನಲ್ಲಿ ನಡೆದ ತಮ್ಮ ಬಲಪಂಥೀಯ ಬ್ರದರ್ಸ್ ಆಫ್ ಇಟಲಿ ಪಕ್ಷದ ಯುವ ಘಟಕದ ವಾರ್ಷಿಕ ಸಮಾವೇಶದಲ್ಲಿ ಪ್ರಧಾನಿ ಈ ಕ್ರಮಗಳನ್ನು ಘೋಷಿಸಿದರು.
ವಲಸೆಯ ಬಗ್ಗೆ ಕಠಿಣ ನಿಲುವು ತಳೆದಿರುವ ನ್ಯಾಷನಲ್ ಫ್ಯೂಚರ್ ಪಾರ್ಟಿಯಿಂದ 2027ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಪಕ್ಷವು ಸವಾಲನ್ನು ಎದುರಿಸುವ ನಿರೀಕ್ಷೆಯಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಚುನಾವಣೆಯಲ್ಲಿ ವಲಸೆಯು ಪ್ರಮುಖ ವಿಷಯವಾಗುವ ನಿರೀಕ್ಷೆಯಿದೆ.
ಇಟಲಿಯಲ್ಲಿ ಬುರ್ಖಾ ಅಥವಾ ನಿಖಾಬ್ ಅನ್ನು ಸ್ಪಷ್ಟವಾಗಿ ನಿಷೇಧಿಸಲಾಗಿಲ್ಲ, ಆದರೆ 1975ರ ಕಾನೂನು ಸಮರ್ಥನೀಯ ಕಾರಣವಿಲ್ಲದೆ ಗುರುತಿಸುವಿಕೆಯನ್ನು ಕಷ್ಟಕರವಾಗಿಸುವ ಹೆಲ್ಮೆಟ್ ಅಥವಾ ಉಡುಪುಗಳ ಬಳಕೆಯನ್ನು ನಿಷೇಧಿಸುತ್ತದೆ.
ಗುರುತಿನ ಪರಿಶೀಲನೆ ಅಗತ್ಯವಿರುವಾಗ ಮುಖವು ಗೋಚರಿಸಿದರೆ, ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರಣಗಳಿಗಾಗಿ ಮುಖವನ್ನು ಸಂಪೂರ್ಣವಾಗಿ ಮುಚ್ಚುವ ಉಡುಪುಗಳನ್ನು ಧರಿಸಬಹುದು ಎಂದು 2008ರ ತೀರ್ಪು ಸ್ಪಷ್ಟಪಡಿಸಿದೆ.
ಇಟಾಲಿಯನ್ ಶಾಲೆಗಳಿಗೆ ದಾಖಲಾದವರಲ್ಲಿ ಇಟಾಲಿಯನ್ ಪ್ರಜೆಗಳಲ್ಲದ ವಿದ್ಯಾರ್ಥಿಗಳು ಶೇಕಡಾ 11.6 ರಷ್ಟು ಅಥವಾ ಪ್ರತಿ 100 ರಲ್ಲಿ ಸುಮಾರು 12 ಮಂದಿ ಇದ್ದಾರೆ ಎಂದು ಫೊಂಡಾಜಿಯೋನ್ ಐಎಸ್ಎಂಯು ಸಂಶೋಧನಾ ಸಂಸ್ಥೆಯ ದತ್ತಾಂಶ(Fondazione ISMU research institute)ವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.












