IIIT ಹೈದರಾಬಾದ್‌ನ ಘಟನೆ ನಡೆದ 2 ದಿನಗಳ ಬಳಿಕ, ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್

0
181

ಸನ್ಮಾರ್ಗ ವಾರ್ತೆ

ಬೆಂಗಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ವಿದ್ಯಾರ್ಥಿ ಸಮಿತಿಯು, ತನ್ನ ಕ್ಯಾಂಪಸ್‌ನಲ್ಲಿ ಸೆರೆವಾಸದಲ್ಲಿರುವ ಕಾರ್ಯಕರ್ತ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಿದೆ ಎಂದು ‘ದಿ ಹಿಂದೂ’ ಭಾನುವಾರ ವರದಿ ಮಾಡಿದೆ.

2020ರ ದೆಹಲಿ ಗಲಭೆಗೆ ಸಂಬಂಧಿಸಿದ ಪಿತೂರಿ ಪ್ರಕರಣದಲ್ಲಿ ಖಾಲಿದ್ ಕಳೆದ ಆರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದ ವಿಚಾರಣೆ ಇನ್ನು ಆರಂಭವಾಗಬೇಕಿದೆ.

‘ಪ್ರಿಸನರ್ ನಂ: 626710 ಈಸ್ ಪ್ರೆಸೆಂಟ್’ (Prisoner No: 626710 is Present) ಸಾಕ್ಷ್ಯಚಿತ್ರಕ್ಕೆ ಕೇಂದ್ರ ಸೆನ್ಸಾರ್ ಮಂಡಳಿಯು (CBFC) ಪ್ರಮಾಣಪತ್ರ ನೀಡಿಲ್ಲ ಎಂದು ತಿಳಿಸಿರುವ ಕಾರಣದಿಂದ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ‘ಲಾ ಅಂಡ್ ಸೊಸೈಟಿ ಕಮಿಟಿ’ ‘ದಿ ಹಿಂದೂ’ಗೆ ತಿಳಿಸಿದೆ.

ಸೆನ್ಸಾರ್ ಮಂಡಳಿಯ ಅಕ್ಷೇಪಣೆಯ ನಂತರ ಹೈದರಾಬಾದ್‌ನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ (IIIT) ಅದೇ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಪ್ರಮಾಣಪತ್ರ ಪಡೆಯದ ಸಾಕ್ಷ್ಯಚಿತ್ರದ ಸಾರ್ವಜನಿಕ ಪ್ರದರ್ಶನವು “ಕಾಯ್ದೆಯಡಿ ನಿರ್ದಿಷ್ಟ ವಿನಾಯತಿಯನ್ನು ಕೋರದೆ ಇದ್ದರೆ, ಅದು 1952ರ ಸಿನೆಮಾಟೋಗ್ರಾಫ್ ಕಾಯ್ದೆಯ ಉಲ್ಲಂಘನೆಯಾಗಿದೆ” ಎಂದು ಚಲನಚಿತ್ರ ಪ್ರಮಾಣೀಕರಣ ಸಂಸ್ಥೆಯು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿತ್ತು.

ಬೆಂಗಳೂರಿನ ಲಾ ಸ್ಕೂಲ್‌ನಲ್ಲಿ ಆರಂಭದಲ್ಲಿ ಸೆಪ್ಟೆಂಬರ್ 14 ರಂದು ಪ್ರದರ್ಶನವನ್ನು ನಿಗದಿಪಡಿಸಲಾಗಿತ್ತು. ಆದಾಗ್ಯೂ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ABVP) ಈ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಆಯೋಜಕರು ಅದನ್ನು ಮುಂದೂಡಿದ್ದರು.

ಎಬಿವಿಪಿಯು ಆಡಳಿತರೂಢ ಭಾರತೀಯ ಜನತಾ ಪಕ್ಷದ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ವಿಭಾಗವಾಗಿದೆ.

ಪ್ರದರ್ಶನವನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಮತ್ತು ವಿಶ್ವವಿದ್ಯಾಲಯದ ಆಡಳಿತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಎಬಿವಿಪಿಯ ಬೆಂಗಳೂರು ಘಟಕವು ಕೇಂದ್ರ ಸಚಿವರಿಗೆ ಪತ್ರ ಬರೆದಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಮತ್ತು ಅದರ ವಿರೋಧಿಗಳ ನಡುವೆ 2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಕೋಮುಗಲಭೆಗೆ ಸಂಬಂಧಿಸಿದಂತೆ ಖಾಲಿದ್, ಕಾರ್ಯಕರ್ತ ಶರ್ಜೀಲ್ ಇಮಾಮ್ ಹಾಗೂ ಇತರ ಹಲವಾರು ಕಾರ್ಯಕರ್ತರನ್ನು 2020ರ ಜನವರಿ ಮತ್ತು 2020ರ ಸೆಪ್ಟೆಂಬರ್ ನಡುವೆ ಬಂಧಿಸಲಾಗಿತ್ತು. ಈ ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು. ಮೃತರಾದವರಲ್ಲಿ ಹೆಚ್ಚಿನವರು ಮುಸ್ಲಿಮರು.