ಸಂಪೂರ್ಣ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸುವುದು ಜಾತ್ಯತೀತತೆಗೆ ವಿರೋಧ; ಕೇಂದ್ರ ಸರ್ಕಾರದ ನಿರ್ದೇಶನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟಿ.ಎಂ. ಕೃಷ್ಣ

0
245

ಸನ್ಮಾರ್ಗ ವಾರ್ತೆ

ದೆಹಲಿ: ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ದೇಶನವನ್ನು ಪ್ರಶ್ನಿಸಿ ಕರ್ನಾಟಕ ಸಂಗೀತಗಾರ ಟಿ.ಎಂ. ಕೃಷ್ಣ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡುವಂತೆ ಜನರನ್ನು ಬಲವಂತಪಡಿಸುವುದು ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮವು ಬಹುಸಂಖ್ಯಾತ ಧರ್ಮದ ಸಂದೇಶವನ್ನು ಹರಡುವುದಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವಂದೇ ಮಾತರಂ ಒಂದು ಸಂಕೀರ್ಣವಾದ ಗೀತೆಯಾಗಿದ್ದು, ಇದು ಭಾರತದ ರಾಷ್ಟ್ರಗೀತೆಯಾಗಲು ಸೂಕ್ತವಲ್ಲ ಎಂದು ಕೃಷ್ಣ ಈ ಹಿಂದೆ ಹೇಳಿದ್ದರು. ಬಂಕಿಮ್ ಚಂದ್ರ ಚಟರ್ಜಿ ಅವರು ಈ ಗೀತೆಯನ್ನು ಒಂದೇ ಬಾರಿಗೆ ಬರೆಯದೆ ಹಂತ ಹಂತವಾಗಿ ಪೂರ್ಣಗೊಳಿಸಿದ್ದಾರೆ ಎಂದು ಅವರು ಎತ್ತಿ ತೋರಿಸಿದ್ದಾರೆ.

ವಂದೇ ಮಾತರಂ ಅನ್ನು ರವೀಂದ್ರನಾಥ ಟಾಗೋರ್ ಅವರ ರಾಷ್ಟ್ರಗೀತೆಯಾದ ‘ಜನ ಗಣ ಮನ’ ದೊಂದಿಗೆ ಅವರು ಹೋಲಿಸುತ್ತಾರೆ. ಎರಡೂ ಹಾಡುಗಳು ಭಾರತವನ್ನು ವಿವಿಧ ದೃಷ್ಟಿಕೋನಗಳಿಂದ ಆಚರಿಸುತ್ತವೆಯಾದರೂ, ಹಿಂದೂ ಗುರುತಿಗೆ ಮಾತ್ರ ಸಂಬಂಧಿಸಿದ ವಂದೇ ಮಾತರಂಗಿಂತ ‘ಜನ ಗಣ ಮನ’ ರಾಷ್ಟ್ರಗೀತೆಯಾಗಿ ಹೆಚ್ಚು ಸೂಕ್ತವಾಗಿದೆ ಎಂದು ಕೃಷ್ಣ ಎತ್ತಿ ತೋರಿಸಿದ್ದಾರೆ. ವಂದೇ ಮಾತರಂನ ಕೆಲವು ಭಾಗಗಳಲ್ಲಿ ಭಾರತ ಮಾತೆಯನ್ನು ಹಿಂದೂ ದೇವತೆಯಾಗಿ ಚಿತ್ರಿಸಲಾಗಿದೆ, ಇದು ಹಾಡಿನ ಬಗ್ಗೆ ತಮಗಿರುವ ಮತ್ತೊಂದು ವಿರೋಧ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಶಾಲೆಗಳಲ್ಲಿ ರಾಷ್ಟ್ರಗೀತೆಗಿಂತ ಮೊದಲು ವಂದೇ ಮಾತರಂ ಹಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು. ವಂದೇ ಮಾತರಂ ಹಾಡುವಾಗ ಎಲ್ಲರೂ ಎದ್ದು ನಿಲ್ಲಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ರಾಷ್ಟ್ರಧ್ವಜಾರೋಹಣ, ರಾಷ್ಟ್ರಪತಿಗಳ ಭಾಷಣಗಳು ಹಾಗೂ ರಾಷ್ಟ್ರವನ್ನುದ್ದೇಶಿಸಿದ ಪ್ರಸಂಗಗಳ ಮೊದಲು ಮತ್ತು ನಂತರ, ಹಾಗೂ ರಾಜ್ಯಪಾಲರ ಆಗಮನ ಮತ್ತು ಭಾಷಣಗಳ ಮೊದಲು ಮತ್ತು ನಂತರ ಸೇರಿದಂತೆ ಹಲವಾರು ಅಧಿಕೃತ ಸಂದರ್ಭಗಳಲ್ಲಿ ಆರು ಚರಣಗಳನ್ನು ಒಳಗೊಂಡ 3 ನಿಮಿಷ 10 ಸೆಕೆಂಡುಗಳ ವಂದೇ ಮಾತರಂ ಆವೃತ್ತಿಯನ್ನು ಓದಲೇಬೇಕು ಅಥವಾ ಹಾಡಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.