ಮತದಾರರ ಪಟ್ಟಿಯಿಂದ ಅರ್ಹರ ಹೆಸರು ವ್ಯವಸ್ಥಿತವಾಗಿ ಕಡಿತಗೊಳಿಸಲು ಫಾರ್ಮ್-7 ದುರುಪಯೋಗ: ಅತ್ಯಂತ ಆತಂಕಕಾರಿ ಬೆಳವಣಿಗೆ – ಜಮಾಅತೆ ಇಸ್ಲಾಮೀ ಹಿಂದ್

0
209

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಕರಡು ಮತದಾರರ ಪಟ್ಟಿಯಿಂದ ಅರ್ಹ ಮುಸ್ಲಿಂ ಹಾಗೂ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಮತ್ತು ಸಾಮೂಹಿಕವಾಗಿ ಕಡಿತಗೊಳಿಸುವ ಸಲುವಾಗಿ ‘ಫಾರ್ಮ್-7’ರ ಮೂಲಕ ಅಕ್ರಮ ಆಕ್ಷೇಪಗಳನ್ನು ಸಲ್ಲಿಸುತ್ತಿರುವ ಕುರಿತು ಮಾಧ್ಯಮದ ತನಿಖಾ ವರದಿ ಅತ್ಯಂತ ಆಘಾತಕಾರಿ ಹಾಗೂ ಗಂಭೀರ ಬೆಳವಣಿಗೆಯಾಗಿದೆ. ಪ್ರಜಾಪ್ರಭುತ್ವದ ಬುನಾದಿಯಾದ ಮುಕ್ತ ಮತ್ತು ನ್ಯಾಯಸಮ್ಮತ ಮತದಾನದ ಹಕ್ಕಿಗೆ ಧಕ್ಕೆ ತರುತ್ತಿರುವ ಈ ಅಕ್ರಮ ಕೃತ್ಯವನ್ನು ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ.

ಯಾವುದೇ ಅಧಿಕೃತ ದಾಖಲೆಗಳಿಲ್ಲದೆ, ಕೇವಲ ನಕಲಿ ಸಹಿಗಳನ್ನು ಬಳಸಿ ಅಥವಾ ಸುಳ್ಳು ಮಾಹಿತಿ ನೀಡಿ ಸಾವಿರಾರು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಒಂದೇ ವಿಳಾಸದಿಂದ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಮುಖ್ಯವಾಗಿ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಹಾಗೂ ಮುಸ್ಲಿಂ ಮತದಾರರ ಪ್ರಾಬಲ್ಯವಿರುವ ಮತಗಟ್ಟೆಗಳನ್ನೇ ಗುರಿಯಾಗಿಸಿಕೊಂಡು ಇಂತಹ ನಕಲಿ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಮತಗಟ್ಟೆ ಏಜೆಂಟರು (ಬಿಎಲ್‌ಎ-2) ಈ ಅಕ್ರಮ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಒಬ್ಬ ವ್ಯಕ್ತಿ ತನ್ನ ಅಥವಾ ತನ್ನ ಕುಟುಂಬದವರ ಹೆಸರನ್ನು ಹೊರತುಪಡಿಸಿ, ನಿಯಮಬಾಹಿರವಾಗಿ ಸಾಮೂಹಿಕವಾಗಿ ನೂರಾರು ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲದಿದ್ದರೂ ಬಿಎಲ್‌ಒಗಳು ಅವುಗಳನ್ನು ಸ್ವೀಕರಿಸಿರುವುದು ಕಂಡು ಬಂದಿದೆ. ಮಾತ್ರವಲ್ಲ ಕರಡು ಮತದಾರರ ಪಟ್ಟಿಯ ‘ಫಾರ್ಮ್-7’ ವಿವರಗಳನ್ನು ಇಸಿಐಎನ್‌ಇಟಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದ ತಕ್ಷಣವೇ ಹಿಂದಿನ ದಿನಗಳ ಡೇಟಾ ಅಳಿಸಿಹೋಗುತ್ತಿರುವುದು ಮೇಲ್ವಿಚಾರಣೆಯ ಪಾರದರ್ಶಕತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಪ್ರಜಾಪ್ರಭುತ್ವದ ಆಶಯಗಳನ್ನು ಬುಡಮೇಲು ಮಾಡಲು ಯತ್ನಿಸುತ್ತಿರುವ ಇಂತಹ ದುಷ್ಟಪ್ರವೃತ್ತಿಗಳನ್ನು ತಡೆಯುವ ಸಲುವಾಗಿ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರವು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು. ನಿಯಮಬಹಿರವಾಗಿ ಹಾಗೂ ಸುಳ್ಳು ದಾಖಲೆಗಳ ಮೂಲಕ ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನಿಯಮಾವಳಿಗಳಿಗೆ ವಿರುದ್ಧವಾಗಿ ಸಲ್ಲಿಕೆಯಾಗಿರುವ ಸಾಮೂಹಿಕ ಆಕ್ಷೇಪಣೆ ಅರ್ಜಿಗಳನ್ನು ತಕ್ಷಣವೇ ವಜಾಗೊಳಿಸಬೇಕು. ಇಸಿಐಎನ್‌ಇಟಿ (ECINET) ಪೋರ್ಟಲ್‌ನಲ್ಲಿ ಅಪ್‌ಲೋಡ್ ಆಗುವ ಮಾಹಿತಿಗಳು ಕಣ್ಮರೆಯಾಗದಂತೆ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕವು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತದೆ.