ಸನ್ಮಾರ್ಗ ಸಂಪಾದಕೀಯ
ಅಲಹಾಬಾದ್ ಹೈಕೋರ್ಟ್ನ ನ್ಯಾಯಾಧೀಶ ಡಾ| ಗೌತಮ್ ಚೌಧರಿಯವರು ನೀಡಿರುವ ತೀರ್ಪು ಕೊರೋನಾ ಕಾಲವನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ.
ತಬ್ಲೀಗ್ ಜಮಾಅತ್ ಕಾರ್ಯಕರ್ತರಾದ ಮುಹಮ್ಮದ್ ಫೈಝಾನ್ ಮತ್ತು ಇನ್ನೊಬ್ಬರ ಮೇಲಿನ ಪ್ರಕರಣವನ್ನು ನ್ಯಾಯಾಧೀಶರು ರದ್ದುಪಡಿಸಿದ್ದಾರೆ. ಇವರನ್ನು ದುರುದ್ದೇಶ ಮತ್ತು ತೇಜೋವಧೆ ಮಾಡುವ ಉದ್ದೇಶದಿಂದ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಜೌನ್ಪುರದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇವರ ವಿರುದ್ಧ ನಡೆಯುತ್ತಿದ್ದ ಕ್ರಿಮಿನಲ್ ವಿಚಾರಣೆಯನ್ನೇ ರದ್ದುಪಡಿಸಿದ್ದಾರೆ.
2020 ಎಪ್ರಿಲ್ 2ರಂದು ಉತ್ತರ ಪ್ರದೇಶದ ಜೌನ್ಪುರದ ಶಾಹ್ಗಂಜ್ ಪೊಲೀಸ್ ಠಾಣೆಯಲ್ಲಿ ಈ ಇಬ್ಬರ ವಿರುದ್ಧ ಐಪಿಸಿ 188, 269, 270 ಮತ್ತು 307 ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿತ್ತು. ದೆಹಲಿಯಲ್ಲಿರುವ ತಬ್ಲೀಗ್ ಜಮಾಅತ್ ಸಂಘಟನೆಯ ಕೇಂದ್ರ ಕಚೇರಿಯಾದ ನಿಝಾಮುದ್ದೀನ್ ಮರ್ಕಝ್ನಲ್ಲಿ 2020 ಮಾರ್ಚ್ 13ರಿಂದ 15ರ ವರೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಇವರಿಬ್ಬರೂ ಭಾಗಿಯಾಗಿದ್ದಾರೆ ಮತ್ತು ಇವರಿಂದಾಗಿ ಕೊರೋನಾ ಹರಡುವ ಅಪಾಯ ಇದೆ ಎಂದು ಆರೋಪಿಸಲಾಗಿತ್ತು. ಕ್ವಾರಂಟೈನ್ಗೆ ಕಳುಹಿಸಲಾಗಿತ್ತು. ಆದರೆ, ಕೊರೋನಾ ಪರೀಕ್ಷೆಯಲ್ಲಿ ಇಬ್ಬರದ್ದೂ ನೆಗೆಟಿವ್ ಫಲಿತಾಂಶ ಬಂದಿತ್ತು. ಹೀಗಿದ್ದ ಮೇಲೂ ಇವರ ಮೇಲೆ ಪ್ರಕರಣ ದಾಖಲಿಸಲಾಯಿತು ಮತ್ತು ಇದಾಗಿ 6 ವರ್ಷಗಳ ಬಳಿಕ ಇದೀಗ ಇವರನ್ನು ದೋಷಮುಕ್ತಗೊಳಿಸಲಾಗಿದೆ. ಅಂದಹಾಗೆ,
ನಿಝಾಮುದ್ದೀನ್ ಮರ್ಕಝ್ನಲ್ಲಿ ಸಭೆ ನಡೆಯುತ್ತಿದ್ದಾಗ ದೇಶದಲ್ಲಿ ಕೊರೋನಾ ಬಗ್ಗೆ ಜಾಗೃತಿ ಸಾಮಾನ್ಯವಾಗಿತ್ತು. ಲಾಕ್ಡೌನ್ ಘೋಷಿಸಿರಲಿಲ್ಲ. ವಿದೇಶ ಪ್ರತಿನಿಧಿಗಳು ಈ ಸಭೆಗೆ ವಿಮಾನ ನಿಲ್ದಾಣದ ಎಲ್ಲಾ ಪರಿಶೀಲನೆಗಳನ್ನು ಮುಗಿಸಿಯೇ ಬಂದಿದ್ದರು. ಪಾರ್ಲಿಮೆಂಟ್ ಕಲಾಪವೂ ನಡೆಯುತ್ತಿತ್ತು. ಇದೇ ಸಮಯದಲ್ಲಿ ಮಹಾರಾಷ್ಟçದ ಸಾಯಿಬಾಬಾ ಮಂದಿರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಸೇರಿದ್ದರು. ತಬ್ಲೀಗ್ ಸಭೆಯ ನಂತರವೂ ಅವರು ಅಲ್ಲಿದ್ದರು. ಮಧ್ಯಪ್ರದೇಶದಲ್ಲಿ ನಡೆದ ಸರಕಾರಿ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ತಿರುಪತಿ ತಿರುಮಲ ಮಂದಿರವನ್ನು ಮಾರ್ಚ್ 20ರಂದು ಅಂದರೆ ತಬ್ಲೀಗ್ ಸಭೆಯ 5 ದಿನಗಳ ಬಳಿಕ ಮುಚ್ಚಲಾಯಿತು. ನಂತರ ಜೂನ್ನಲ್ಲಿ ಮರು ತೆರೆದಾಗ ಅಲ್ಲಿನ ನೂರಾರು ಸಿಬಂದಿಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದುವು. ಹಲವು ಜನನಿಬಿಡ ಪ್ರಮುಖ ಮಂದಿರಗಳು ಮಾರ್ಚ್ ಕೊನೆಯಲ್ಲಿ ಮುಚ್ಚಲ್ಪಟ್ಟವು. ಅಲ್ಲಿಯವರೆಗೆ ಸಾಮಾನ್ಯ ದಿನಗಳಂತೆ ಅಸಂಖ್ಯ ಮಂದಿ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಗುರುದ್ವಾರ ಗಳನ್ನು ಮುಚ್ಚಲು ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ ಮಾರ್ಚ್ ಮಧ್ಯದಲ್ಲಿ ನಿರಾಕರಿಸಿತು. ಪವಿತ್ರ ಕ್ಷೇತ್ರವಾದ ಗೋಲ್ಡನ್ ಟೆಂಪಲ್ ಸಹಿತ ಅನೇಕ ಐತಿಹಾಸಿಕ ಗುರುದ್ವಾರಗಳಲ್ಲಿ ಮಾರ್ಚ್ 18ರ ವರೆಗೆ ದಿನನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಿದ್ದರು. ಸ್ಯಾನಿಟೈಝರ್ ಮಾಡುವಂತೆ ಹೇಳಲಾಗುತ್ತಿತ್ತೇ ಹೊರತು ಗುರುದ್ವಾರ ಗಳನ್ನು ಮುಚ್ಚಲಾಗಿರಲಿಲ್ಲ. ಆದರೂ,
ತಬ್ಲೀಗ್ ಜಮಾಅತ್ ಕಾರ್ಯಕರ್ತರನ್ನು ಮಾತ್ರ ಮಾಧ್ಯಮಗಳು ಟಾರ್ಗೆಟ್ ಮಾಡಿದುವು. ಕೊರೋನಾ ಜಿಹಾದ್, ತಬ್ಲೀಗಿ ವೈರಸ್, ಕೊರೋನಾ ಬಾಂಬ್, ಮೌಲಾನಾ ಆಫ್ ಡೆತ್, ಹ್ಯೂಮನ್ ಬಾಂಬ್ ಎಂಬಿತ್ಯಾದಿ ಪದಗಳ ಮೂಲಕ ದೇಶದಲ್ಲಿ ನಿರ್ದಿಷ್ಟ ಆಲೋಚನೆಯನ್ನು ಹುಟ್ಟುಹಾಕಿದುವು. ತಬ್ಲೀಗ್ ಸದಸ್ಯರು ಉದ್ದೇಶಪೂರ್ವಕವಾಗಿ ವೈರಸ್ ಹರಡುತ್ತಿದ್ದಾರೆ, ಆಸ್ಪತ್ರೆ ಸಿಬಂದಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ಮೂತ್ರದ ಬಾಟಲಿಗಳನ್ನು ಎಸೆಯುತ್ತಿದ್ದಾರೆ.. ಎಂಬಂಥ ಸುಳ್ಳು ವೀಡಿಯೋಗಳು ಮತ್ತು ವರದಿಗಳು ಪ್ರಸಾರವಾದುವು. ಮುಸ್ಲಿಮರನ್ನು ಸಾಮಾಜಿಕವಾಗಿ ಬಹಿಷ್ಕರಿಸುವ ಕರೆಗಳನ್ನೂ ಕೊಡಲಾಯಿತು. ಕೆಲವು ಕಡೆ ಮುಸ್ಲಿಮರ ಮೇಲೆ ದಾಳಿಗಳೂ ನಡೆದುವು. ತಬ್ಲೀಗ್ ಸಭೆಯಲ್ಲಿ ಭಾಗಿಯಾದವರ ವಿರುದ್ಧ ಅನೇಕ ಎಫ್ಐಆರ್ಗಳೂ ದಾಖಲಾದುವು. ಆದರೆ, ಬಳಿಕ
ನ್ಯಾಯಾಲಯಗಳು ಸಾರಾಸಗಟಾಗಿ ಈ ಎಫ್ಐಆರ್ಗಳನ್ನು ರದ್ದುಪಡಿಸುತ್ತಾ ಹೋದವು. ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾದ ಟಿ.ವಿ. ನಲವಡೆ ಮತ್ತು ಎಂ.ಜಿ. ಸೇವ್ಲಿಕರ್ ಅವರಿದ್ದ ವಿಭಾಗೀಯ ಪೀಠವು 29 ವಿದೇಶಿ ನಾಗರಿಕರು ಮತ್ತು 6 ಭಾರತೀಯರ ಮೇಲಿನ ಎಫ್ಐಆರ್ಗಳನ್ನು 2020 ಆಗಸ್ಟ್ 22ರಂದು ರದ್ದುಪಡಿಸಿತು. ಮಾತ್ರವಲ್ಲ, ಸರಕಾರವನ್ನು ಕಟುವಾಗಿ ಟೀಕಿಸಿತು. ‘ಮಹಾಮಾರಿ ಅಥವಾ ವಿಪತ್ತಿನ ಸಮಯದಲ್ಲಿ ಸರಕಾರವು ಬಲಿಪಶುಗಳನ್ನು ಹುಡುಕುತ್ತದೆ ಮತ್ತು ಈ 29 ವಿದೇಶಿಯರನ್ನು ಬಲಿಪಶುಗೊಳಿಸಲಾಗಿದೆ’ ಎಂದಿತು.
‘ಮಾಧ್ಯಮಗಳು ಅಪಪ್ರಚಾರ ನಡೆಸಿ ಕಿರುಕುಳ ನೀಡಿದುವು ಮತ್ತು ಪೊಲೀಸರು ಬುದ್ಧಿಯಿಲ್ಲದೇ ವರ್ತಿಸಿದರು’ ಎಂದಿತು. ‘ಸಿಎಎ ವಿರೋಧಿ ಪ್ರತಿಭಟನೆಯ ನಂತರ ಭಾರತೀಯ ಮುಸ್ಲಿಮರಿಗೆ ಪರೋಕ್ಷ ಎಚ್ಚರಿಕೆ ನೀಡುವುದೇ ಈ ಪ್ರಕರಣಗಳ ಉದ್ದೇಶವಾಗಿತ್ತು’ ಎಂಬ ಅಂಶವನ್ನೂ ಗಮನಿಸಿತು. 2025 ಜುಲೈ 17ರಂದು ದೆಹಲಿ ಹೈಕೋರ್ಟ್ನ ನ್ಯಾಯಾಧೀಶೆ ನೀನಾ ಬನ್ಸಾಲ್ ಕೃಷ್ಣ ಅವರು 70 ಭಾರತೀಯ ತಬ್ಲೀಗ್ ಕಾರ್ಯಕರ್ತರ ಮೇಲಿನ ಎಫ್ಐಆರನ್ನು ರದ್ದುಗೊಳಿಸಿ ದರು. ವಿದೇಶಿಯರಿಗೆ ಆಶ್ರಯ ನೀಡಿದ್ದಾರೆ ಎಂಬ ಆರೋಪವನ್ನು ಇವರ ಮೇಲೆ ಹೊರಿಸಲಾಗಿತ್ತು. ಇವರಲ್ಲಿ ಯಾರೂ ಕೊರೋನಾ ಪಾಸಿಟಿವ್ ಆಗಿರಲಿಲ್ಲ. ಲಾಕ್ಡೌನ್ ಬಳಿಕ ಹೊರಗೆ ಹೋಗಿರಲಿಲ್ಲ, ಹಠಾತ್ತನೇ ಲಾಕ್ಡೌನ್ ಘೋಷಿಸಿದ್ದರಿಂದ ಬೇರೆ ದಾರಿ ಕಾಣದೇ ನಿಝಾಮುದ್ದೀನ್ ಮರ್ಕಝïನಲ್ಲಿ ಉಳಿದುಕೊಂಡಿದ್ದರು. ಕೇವಲ ಮರ್ಕಝ್ನಲ್ಲಿ ವಾಸಿಸುವುದು ನಿಷೇಧಾಜ್ಞೆ ಉಲ್ಲಂಘನೆಯಲ್ಲ ಎಂದು ನ್ಯಾಯಾಧೀಶೆ ತೀರ್ಪು ನೀಡಿದರು. ಇದೇರೀತಿ,
ಮದ್ರಾಸ್, ಕರ್ನಾಟಕದ ನ್ಯಾಯಾಲಯಗಳಲ್ಲೂ ತಬ್ಲೀಗ್ ಕಾರ್ಯಕರ್ತರ ಮೇಲಿನ ಪ್ರಕರಣವನ್ನು ರದ್ದುಪಡಿಸ ಲಾಯಿತು. ಇವರಲ್ಲಿ ವಿದೇಶಿ ನಾಗರಿಕರೂ ಸೇರಿದ್ದಾರೆ. ಯಾವ ಪ್ರಕರಣದಲ್ಲೂ ತಬ್ಲೀಗ್ ಸದಸ್ಯರು ಉದ್ದೇಶಪೂರ್ವಕ ವಾಗಿ ವೈರಸ್ ಹರಡಿಸಿದ್ದಾರೆ ಎಂದು ಸಾಬೀತಾಗಿಲ್ಲ. ಅದರ ಬದಲು, ಆಧಾರ ರಹಿತವಾದ, ಪಕ್ಷಪಾತದ ಮತ್ತು ಅಧಿಕಾರ ದುರುಪಯೋಗದ ಪ್ರಕರಣಗಳು ಎಂದು ನ್ಯಾಯಾಲಯಗಳು ಷರಾ ಬರೆದಿವೆ. ವಿಷಾದ ಏನೆಂದರೆ,
ನ್ಯಾಯಾಲಯಗಳು ಮೇಲಿಂದ ಮೇಲೆ ತಬ್ಲೀಗ್ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ರದ್ದುಪಡಿಸುತ್ತಿದ್ದರೂ, ಈಗಾಗಲೇ ಅದರ ಪ್ರಚಾರ ಮಾಡಿರುವ ಮಾಧ್ಯಮಗಳಾಗಲಿ, ಅದರ ಬೆನ್ನಿಗೆ ನಿಂತ ಪ್ರಭುತ್ವವಾಗಲಿ, ಕನಿಷ್ಠ ಒಂದು ಗೆರೆಯ ವಿಷಾದವನ್ನೂ ವ್ಯಕ್ತಪಡಿಸುತ್ತಿಲ್ಲ. ಮಂದಿರಗಳು ಮತ್ತು ಗುರುದ್ವಾರಗಳಲ್ಲಿ ತಬ್ಲೀಗ್ ಸಭೆಯಲ್ಲಿರುವುದಕ್ಕಿಂತ ಹೆಚ್ಚಿನ ಜನರು ಅದೇ ಸಮಯದಲ್ಲಿ ಸೇರಿದ್ದರೂ ಕೇವಲ ತಬ್ಲೀಗ್ ಸಭೆಯನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡಿದಿರಿ ಎಂಬ ಪ್ರಶ್ನೆಗೂ ಉತ್ತರ ಕೊಡುತ್ತಿಲ್ಲ. ನಿಜ ಏನೆಂದರೆ, ಕೊರೋನಾ ನಿರ್ವಹಣೆಯ ವೈಫಲ್ಯದಿಂದ ತಪ್ಪಿಸಿಕೊಳ್ಳುವುದಕ್ಕೆ ಸರಕಾರಕ್ಕೆ ಒಂದು ನೆಪ ಬೇಕಿತ್ತು. ಮಂದಿರ ಮತ್ತು ಗುರುದ್ವಾರಗಳನ್ನು ಗುರಿ ಮಾಡುವುದು ರಾಜಕೀಯವಾಗಿ ಹಿನ್ನಡೆಯಾಗಬಹುದು ಎಂದು ಅದು ತೀರ್ಮಾನಿಸಿತು. ಮುಸ್ಲಿಮರನ್ನು ಗುರಿ ಮಾಡುವುದರಿಂದ ಈ ಭಯ ಇಲ್ಲದಿರುವುದನ್ನೂ ಗಮನಿಸಿತು. ಈ ಹಿನ್ನೆಲೆಯಲ್ಲಿ, ಅದು ಮಾಧ್ಯಮಗಳನ್ನು ಬಳಸಿಕೊಂಡಿತು.
ದೆಹಲಿಯ ಮಾಧ್ಯಮ ಕಚೇರಿಗಳಿಂದ ಹಿಡಿದು ರಾಜ್ಯಗಳ ಮಾಧ್ಯಮ ಕಚೇರಿಗಳ ವರೆಗೆ ಎಲ್ಲಕ್ಕೂ ಒಂದೇ ಸೂಚನೆಯನ್ನು ರವಾನಿಸಿತು. ಆದ್ದರಿಂದ ಬೇರೆ ಬೇರೆ ಮಾಲಕತ್ವದ ಮತ್ತು ಬೇರೆ ಬೇರೆ ಭಾಷೆಯ ಟಿವಿ ಚಾನೆಲ್ಗಳು ಮತ್ತು ಪತ್ರಿಕೆಗಳು ಏಕರೀತಿಯಲ್ಲಿ ಮಾತಾಡತೊಡಗಿದುವು. ಆ್ಯಂಕರ್ಗಳು ಬೇರೆ ಬೇರೆಯಾದರೂ ಅವರ ಮಾತುಗಳು, ಧ್ವನಿ ಮತ್ತು ದೇಹಭಾಷೆಯಲ್ಲಿ ಏಕರೂಪ ಇತ್ತು. ಪತ್ರಿಕೆಗಳ ವರದಿಗಳಲ್ಲೂ ಈ ಏಕರೂಪ ಢಾಳಾಗಿ ಕಾಣಿಸಿತ್ತು. ಹೀಗೆ ತಬ್ಲೀಗ್ ಕಾರ್ಯಕರ್ತರನ್ನು ಎಲ್ಲರೂ ಸೇರಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಬಗೆಬಗೆಯ ಕತೆಗಳನ್ನು ಕಟ್ಟಿದರು. ಈ ಮೂಲಕ ಕೇಂದ್ರ ಸರಕಾರವನ್ನು ರಕ್ಷಿಸುವ ತಂತ್ರ ಯಶಸ್ವಿಯಾಗಿ ನೆರವೇರಿತು. ಜನರ ಗಮನ ತಬ್ಲೀಗ್ ಕಾರ್ಯಕರ್ತರ ಮೇಲೆ ಬಿತ್ತು. ಬಿಳಿ ಕುರ್ತಾ, ಪೈಜಾಮ, ಟೋಪಿ ಮತ್ತು ಗಡ್ಡ ಧರಿಸಿದ ಮುಸ್ಲಿಮರೇ ಕೊರೋನಾ ತಂದಿದ್ದಾರೆ ಎಂದು ಜನರು ಭಾವಿಸತೊಡಗಿದರು. ತಬ್ಲೀಗ್ ಹೆಸರಲ್ಲಿ ಮುಸ್ಲಿಮ್ ಸಮುದಾಯವೇ ಅಪರಾಧ ಸ್ಥಾನದಲ್ಲಿ ನಿಲ್ಲಬೇಕಾಯಿತು.
ಈಗ ಎಲ್ಲವೂ ಮರೆತಿದೆ. ಆದ್ದರಿಂದಲೇ ನ್ಯಾಯಾಲಯಗಳ ತೀರ್ಪುಗಳೂ ಎಲ್ಲೂ ಚರ್ಚೆಗೆ ಒಳಗಾಗುತ್ತಿಲ್ಲ.












