ಸನ್ಮಾರ್ಗ ವಾರ್ತೆ
ಹೊಸದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಮತ್ತು ಚುನಾವಣಾ ಆಯೋಗದಲ್ಲಿ ಸಮಗ್ರ ಬದಲಾವಣೆಗಳನ್ನು ಒತ್ತಾಯಿಸಿ ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗುತ್ತಿದೆ. ಈ ಸಂಬಂಧ ಕಾಕ್ರೋಚ್ ಜನತಾ ಪಕ್ಷವು ದೆಹಲಿ ಪೊಲೀಸರಿಗೆ ಅಧಿಕೃತ ನೋಟಿಸ್ ನೀಡಿದೆ.
ಸಿಜೆಪಿ (CJP) ಸಹ-ಸಂಚಾಲಕ ಸೌರಭ್ ದಾಸ್ ಅವರು ಸಂಸತ್ ರಸ್ತೆ ಪೊಲೀಸ್ ಠಾಣೆಗೆ ನೇರವಾಗಿ ತೆರಳಿ ಅಧಿಕೃತ ಪತ್ರವನ್ನು ಹಸ್ತಾಂತರಿಸಿದರು. ಅಕ್ಟೋಬರ್ 10 ರಂದು ದೇಶದ ವಿವಿಧ ಭಾಗಗಳಿಂದ ಯುವಕರು ಮತ್ತು ಕಾರ್ಯಕರ್ತರು ಜಂತರ್ ಮಂತರ್ನಲ್ಲಿ ಜಮಾಯಿಸಲಿದ್ದು, ಆದ್ದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಸಂಚಾರ ವ್ಯವಸ್ಥೆ ಕಲ್ಪಿಸಲು ಪೊಲೀಸರು ಸಹಕರಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪೊಲೀಸ್ ಅನುಮತಿಗಾಗಿ ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳಲಿವೆ ಮತ್ತು ಇದು ದೊಡ್ಡ ಹೋರಾಟವಾಗಲಿದೆ ಎಂದು ಸೌರಭ್ ದಾಸ್ ಎಚ್ಚರಿಸಿದ್ದಾರೆ. “ಪ್ರತಿಯೊಬ್ಬರೂ ತಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿಕೊಳ್ಳಬೇಕು ಮತ್ತು ಈ ಮುಷ್ಕರದಲ್ಲಿ ಪಾಲ್ಗೊಳ್ಳಲು ಸಿದ್ಧರಾಗಬೇಕು. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿದರೂ ನಾವು ಹಿಂದೆಹರಿಯುವುದಿಲ್ಲ. ಚುನಾವಣಾ ಆಯೋಗದಲ್ಲಿ ನಿಜವಾದ ಬದಲಾವಣೆಗಳಾಗುವವರೆಗೆ ನಾವು ನಮ್ಮ ಬೇಡಿಕೆಗಳಿಗೆ ಬದ್ಧರಾಗಿರುತ್ತೇವೆ” ಎಂದು ಅವರು ಹೇಳಿದರು. ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಅನಿಯಮಿತತೆಗಳ ವಿರುದ್ಧ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.
ಚುನಾವಣಾ ಆಯೋಗ ಮತ್ತು ಆಡಳಿತ ಪಕ್ಷದ ಕ್ರಮಗಳ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಕೂಡ ಒಗ್ಗೂಡುತ್ತಿವೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನೇಹಾ ಬೋರಾ ಹೇಳಿದ್ದಾರೆ. ಪ್ರತಿಭಟನಾಕಾರರು ಮೂರು ಮುಖ್ಯ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ: ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ, ಅವರ ವಿರುದ್ಧ ಕ್ರಮಿನಲ್ ಕ್ರಮ ಮತ್ತು ಎಸ್ಐಆರ್ (SIR) ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ ಸ್ವತಂತ್ರ ತನಿಖೆ ನಡೆಸುವುದು.












