ಪ್ರವಾದಿ ನಿಂದನೆ | ಸೌದಿಯಲ್ಲಿ ಶ್ರೀಲಂಕ ಪ್ರಜೆಗೆ ಮರಣದಂಡನೆ ಶಿಕ್ಷೆ

0
331

ಸನ್ಮಾರ್ಗ ವಾರ್ತೆ

ಕೊಲಂಬೊ: ಫೇಸ್‌ಬುಕ್‌ನಲ್ಲಿ ಪ್ರವಾದಿ ಮುಹಮ್ಮದರ(ಸ) ವಿರುದ್ಧ ಕಮೆಂಟ್ ಮಾಡಿದ ಇಪ್ಪತ್ತನಾಲ್ಕು ವರ್ಷದ ಶ್ರೀಲಂಕನ್ ಪ್ರಜೆಗೆ ಸೌದಿ ಅರೇಬಿಯದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಅನೋಜನ್ ಶಿವರಸ ಎಂಬಾತ ಮರಣದಂಡನೆ ಶಿಕ್ಷೆಗೊಳಗಾದ ಶ್ರೀಲಂಕನ್ ಪ್ರಜೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ ಈತನ ಬಿಡುಗಡೆಗಾಗಿ ಕುಟುಂಬ ಪ್ರಯತ್ನ ಆರಂಭಿಸಿದೆ.

ಶ್ರೀಲಂಕದ ಒಂದು ಘಟನೆಯ ನಂತರ ರೂಪುಗೊಂಡ ಆನ್‌ಲೈನ್ ವಾಗ್ವಾದದೊಂದಿಗೆ ಪ್ರಕರಣ ಶುರುವಾಗಿತ್ತು. ಹಿಂದೂ ತೀರ್ಥಯಾತ್ರೆಯಲ್ಲಿ ಮುಸ್ಲಿಂ ಯುವಕನೊಬ್ಬ ನಾಯಿಯನ್ನು ತುಳಿಯುವ ದೃಶ್ಯಗಳ ವೀಡಿಯೊ ವ್ಯಾಪಕವಾಗಿ ವೈರಲ್ ಆಗಿತ್ತು. ಇದಕ್ಕೆ ಒಬ್ಬ ವ್ಯಕ್ತಿ ಕೆಟ್ಟ ಕಮೆಂಟ್‌ ಹಾಕಿದಾಗ ರೊಚ್ಚಿಗೆದ್ದ ಅನೋಜನ್ ಅದಕ್ಕೆ ಪ್ರತಿಯಾಗಿ ತಮಿಳಿನಲ್ಲಿ ಪ್ರವಾದಿ(ಸ) ವಿರುದ್ಧ ಆಕ್ಷೇಪಾರ್ಹ ಕಮೆಂಟ್‌ ಹಾಕಿದ್ದ.

ಆರಂಭದಲ್ಲಿ ಸ್ಥಳೀಯ ನ್ಯಾಯಾಲಯವು ಪ್ರವಾದಿ ವಿರುದ್ಧ ಅವಹೇಳನ ಮಾಡಲಾಗಿದೆ ಎಂಬ ಆರೋಪದ ಮೇಲೆ ಆತನಿಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು. ಆದರೆ, ಮೇಲ್ಮನವಿ ನ್ಯಾಯಾಲಯವು (ಅಪೀಲ್ ಕೋರ್ಟ್) ಪ್ರಕರಣವನ್ನು ಪರಿಶೀಲಿಸಿ ಶಿಕ್ಷೆಯನ್ನು ಮರಣದಂಡನೆಯಾಗಿ ಪರಿವರ್ತಿಸಿತು.

ಆ ಪೋಸ್ಟ್ ಅನ್ನು ನಂತರ ಡಿಲೀಟ್ ಮಾಡಲಾಗಿದ್ದು, ಅನೋಜ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರೂ ಸೌದಿ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಯುವಕನ ಪ್ರಾಣ ಉಳಿಸಲು ಶ್ರೀಲಂಕಾ ಸರ್ಕಾರ ಮತ್ತು ವಿವಿಧ ಮಾನವ ಹಕ್ಕುಗಳ ಸಂಘಟನೆಗಳು ರಾಜತಾಂತ್ರಿಕ ಪ್ರಯತ್ನಗಳನ್ನು ಆರಂಭಿಸಿದೆ ಹಾಗೂ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.