ಶ್ರೀನಗರ,ಜು. 29: ಕಾಶ್ಮೀರದ ವಿಶೇಷ ಅಧಿಕಾರವನ್ನು ತೆಗೆದು ಹಾಕಲು ಕೇಂದ್ರ ಸರಕಾರ ಮತ್ತು ಬಿಜೆಪಿ ನಡೆಸುತ್ತಿರುವ ಶ್ರಮಗಳ ವಿರುದ್ಧ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬ ಮುಫ್ತಿ ಕಿಡಿಕಾರಿದ್ದಾರೆ. ಕೇಂದ್ರ ಸರಕಾರದ ಕ್ರಮಗಳು ಬೆಂಕಿಯೊಂದಿಗೆ ಆಟವಾಡಿದಂತಾಗಬಹುದು ಎಂದು ಮೆಹಬೂಬ ಮುಫ್ತಿ ಮುನ್ನೆಚ್ಚರಿಕೆ ನೀಡಿದರು. ಶ್ರೀನಗರದಲ್ಲಿ ನಡೆದ ಪಿಡಿಪಿ ಸ್ಥಾಪನೆ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು. ಕಾಶ್ಮೀರದ ವಿಶೇಷ ಅಧಿಕಾರವನ್ನು ಮುಟ್ಟಿದ್ದರೆ ಅದು ಬೆಂಕಿಯಾಟವಾದೀತು ಎಂದು ಅವರು ಎಚ್ಚರಿಕೆ ನೀಡಿದರು.
ಕಾಶ್ಮೀರದ ರಾಜಕೀಯ, ಆರ್ಥಿಕ ಪತನಕ್ಕೆ ಈ ಕ್ರಮ ದಾರಿಯಾಗುತ್ತದೆ. ಚುನಾವಣೆಗಳು ಮತ್ತು ಸರಕಾರಗಳು ಬರುತ್ತವೆ ಹೋಗುತ್ತವೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಸಂರಕ್ಷಿಸಲು ಸಾಯುವವರೆಗೆ ಹೋರಾಡುವೆ. ಕಾಶ್ಮೀರಕ್ಕಾಗಿ ಪಿಡಿಪಿ ಮಾತ್ರ ಹೋರಾಡುತ್ತಿದೆ. ಆದ್ದರಿಂದ, ಪಿಡಿಪಿ ಮತ್ತು ಅದರ ನಾಯಕರಿಗೆ ಕೇಂದ್ರ ಸರಕಾರ ಕಿರುಕುಳ ನೀಡುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕುವ ಕ್ರಮವನ್ನು ಪ್ರತಿರೋಧಿಸುವುದಾಗಿ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲ ಹೇಳಿದರು. ಪಿಡಿಪಿ ಫ್ಯಾಶಿಸ್ಟ್ಗಳನ್ನು ರಾಜ್ಯದೊಳಕ್ಕೆ ನುಗ್ಗಿಸಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ವೇಳೆ ಕೇಂದ್ರ ಸರಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 35ನೆ ವಿಧಿಯನ್ನು ರದ್ದು ಪಡಿಸಲು ಶ್ರಮ ಆರಂಭಿಸಿದೆ.












