ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ನವಿ ಪಿಳ್ಳೆಯಿಂದ ನೆತನ್ಯಾಹು ವಿರುದ್ಧ ಯುದ್ಧ ಅಪರಾಧಗಳ ವಿಚಾರಣೆಗೆ ಆಗ್ರಹ

0
129

ಸನ್ಮಾರ್ಗ ವಾರ್ತೆ

ಲಂಡನ್: ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನ್ಯಾಯಾಧೀಶೆ ನವಿ ಪಿಳ್ಳೆ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದಲ್ಲಿ (ಐಸಿಸಿ) ಯುದ್ಧ ಅಪರಾಧಗಳ ವಿಚಾರಣೆಯನ್ನು ಎದುರಿಸಬೇಕು ಎಂದು ಒತ್ತಾಯಿಸಿದ್ದಾರೆ. ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗದ ನೇತೃತ್ವ ವಹಿಸಿದ್ದಾಗ, ಇಸ್ರೇಲ್ ಗಾಝಾದಲ್ಲಿ ನರಮೇಧ ಎಸಗುತ್ತಿದೆ ಎಂದು ನವಿ ಪಿಳ್ಳೆ ಕಳೆದ ವರ್ಷ ಹೇಳಿದ್ದರು.

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದ ನಂತರ, ಇಸ್ರೇಲ್ ನವಿ ಪಿಳ್ಳೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ನೆತನ್ಯಾಹು ಅವರು ನವಿ ಪಿಳ್ಳೆ ಅವರನ್ನು ಜನಾಂಗೀಯವಾದಿ ಎಂದು ಆರೋಪಿಸಿದಾಗ, ನಾಝಿ ಪ್ರಚಾರಕ ಜೋಸೆಫ್ ಗೋಬೆಲ್ಸ್ ‘ನರಕದಿಂದ ಚಪ್ಪಾಳೆ ತಟ್ಟುತ್ತಿರುತ್ತಾರೆ’ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿತ್ತು. ಆದಾಗ್ಯೂ, ಈ ಪ್ರತಿಕ್ರಿಯೆಗಳು ಸಂಪೂರ್ಣವಾಗಿ ವೈಯಕ್ತಿಕ ಮತ್ತು ನೋವುಂಟುಮಾಡುವಂತಿವೆ ಎಂದು ನವಿ ಪಿಳ್ಳೆ ತಿರುಗೇಟು ನೀಡಿದರು.

ಗೋಬೆಲ್ಸ್ ಕೈಯಲ್ಲಿ ಸಾವಿರಾರು ಜನರ ರಕ್ತವಿತ್ತು. ಅವರು ಯಹೂದಿಯರ ಸಾವಿಗೆ ಮಾತ್ರವಲ್ಲದೆ ನನ್ನಂತಹ ಕಪ್ಪು ವರ್ಣೀಯರ ಸಾವಿಗೂ ಕಾರಣರಾಗಿದ್ದಾರೆ. ಆದ್ದರಿಂದ, ಅಂತಹ ಹೇಳಿಕೆಗಳು ಅವಮಾನಕರವಾಗಿವೆ ಎಂದು ನವಿ ಪಿಳ್ಳೆ ಹೇಳಿದರು. ರಾಜಕೀಯ ಪರಿಸ್ಥಿತಿಯು ನೆತನ್ಯಾಹು ಅವರನ್ನು ತಕ್ಷಣವೇ ಬಂಧಿಸಲು ಅವಕಾಶ ನೀಡದಿರಬಹುದು, ಆದರೆ ಭವಿಷ್ಯದಲ್ಲಿ ಅವರು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

‘ಸ್ಕೈ ನ್ಯೂಸ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಅವರು ಗಾಝಾ ದಾಳಿಯ ತನಿಖಾ ವರದಿಯನ್ನು ವಿವರಿಸಿದರು. ಇಸ್ರೇಲ್ ಗಾಝಾದಲ್ಲಿ ನಾಗರಿಕರು ಮತ್ತು ಮಕ್ಕಳನ್ನು ಗುರಿಯಾಗಿಸುತ್ತಿದೆ ಎಂದು ವರದಿಯು ಬೆಟ್ಟು ಮಾಡುತ್ತದೆ. “ನಮ್ಮ ಮುಖ್ಯ ಶಿಫಾರಸು ಮತ್ತು ಸಂಶೋಧನೆ ಇದೇ ಆಗಿದೆ. ಇಸ್ರೇಲ್ ಅಧ್ಯಕ್ಷರು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವರ ವಿಚಾರಣೆ ನಡೆಯಬೇಕು. ಅವರು ರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಅಥವಾ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದಲ್ಲಿ ಯುದ್ಧ ಅಪರಾಧಗಳ ವಿಚಾರಣೆಯನ್ನು ಎದುರಿಸಬೇಕು” ಎಂದು ನವಿ ಪಿಳ್ಳೆ ಹೇಳಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ನವಿ ಪಿಳ್ಳೆ ಟೀಕಿಸಿದರು. ಅಂತಾರಾಷ್ಟ್ರೀಯ ಕಾನೂನಿನ ಬಗ್ಗೆ ತಮ್ಮ ಕಾನೂನು ಸಲಹೆಗಾರರೊಂದಿಗೆ ಮಾತನಾಡುವಂತೆ ಟ್ರಂಪ್ ಅವರಿಗೆ ಸಲಹೆ ನೀಡಿದರು. ಸ್ವತಂತ್ರ ಅಂತಾರಾಷ್ಟ್ರೀಯ ನ್ಯಾಯಾಲಯದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದು ಕಾನೂನುಬಾಹಿರ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದೂ ನವಿ ಪಿಳ್ಳೆ ಒತ್ತಾಯಿಸಿದರು. ತಮಗೆ ನೊಬೆಲ್ ಪ್ರಶಸ್ತಿ ಬಂದ ಕೂಡಲೇ ಟ್ರಂಪ್ ಆಡಳಿತವು ಐಸಿಸಿ ವಿರುದ್ಧ ನಿರ್ಬಂಧಗಳನ್ನು ಘೋಷಿಸಿತು. ತಮಗೆ ಪ್ರಶಸ್ತಿ ಸಿಗದ ಸಿಟ್ಟಿನಿಂದ ಈ ಸೇಡು ತೀರಿಸಿಕೊಳ್ಳಲಾಗಿದೆ ಎಂದು ನವಿ ಪಿಳ್ಳೆ ಆರೋಪಿಸಿದರು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧದ ಐಸಿಸಿ ಬಂಧನ ವಾರಂಟ್ ಅನ್ನು ಸ್ವಾಗತಿಸಿದ್ದ ಅಮೆರಿಕ, ನೆತನ್ಯಾಹು ವಿರುದ್ಧದ ತನಿಖೆಯನ್ನು ವಿರೋಧಿಸುವುದು ಸ್ಪಷ್ಟ ಧ್ವಂಧ ಧೋರಣೆಯಾಗಿದೆ ಎಂದು ಹೇಳಿದೆ. ನೆತನ್ಯಾಹು ಅವರಿಗೆ ಬಂಧನ ವಾರಂಟ್ ಜಾರಿ ಮಾಡಿದ್ದಕ್ಕೆ ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಮಿಲಿಟರಿ ಭಾಗಿಯಾಗಿರುವ ಕುರಿತು ತನಿಖೆ ನಡೆಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಐಸಿಸಿಯನ್ನು ಹಂತ ಹಂತವಾಗಿ ಮುಚ್ಚುವುದಾಗಿ ಟ್ರಂಪ್ ಆಡಳಿತ ಹೇಳಿತ್ತು. ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಈ ನಿರ್ಬಂಧಗಳು ಆರು ತಿಂಗಳಲ್ಲಿ ಜಾರಿಗೆ ಬರಲಿವೆ.

ಈ ಮಧ್ಯೆ, ಹೇಗ್‌ನಲ್ಲಿರುವ ನ್ಯಾಯಾಲಯದ ವಿಷಯದಲ್ಲಿ ಟ್ರಂಪ್ ಅವರೊಂದಿಗೆ ಸುಧಾರಣೆಗಳ ಬಗ್ಗೆ ಚರ್ಚಿಸುವುದಾಗಿ ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ ಸೂಚಿಸಿದರು, ಆದರೆ ನವಿ ಪಿಳ್ಳೆ ಅದನ್ನು ಒಪ್ಪಲಿಲ್ಲ. ಅಮೆರಿಕದ ನಾಗರಿಕರನ್ನು ನ್ಯಾಯಾಲಯವು ವಿಚಾರಣೆ ನಡೆಸುವುದನ್ನು ತಡೆಯುವುದೇ ಟ್ರಂಪ್ ಅವರ ಗುರಿಯಾಗಿದೆ. ಆದರೆ ಒಂದು ಗುಂಪು ಒಂದು ಕಾನೂನನ್ನು ಮತ್ತು ಮತ್ತೊಂದಕ್ಕೆ ಬೇರೆಯೇ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಮತ್ತು ಇದು ಅತ್ಯಂತ ಅಪಾಯಕಾರಿ ಪೂರ್ವಪೀಠಿಕೆಗೆ ಕಾರಣವಾಗುತ್ತದೆ ಎಂದು ನವಿ ಪಿಳ್ಳೆ ಎಚ್ಚರಿಸಿದ್ದಾರೆ.