ನೀರಿನ ಬಾಟ್ಲಿಗೆ 2 ರೂ ಹೆಚ್ಚು; ರೆಸ್ಟೋರೆಂಟ್ ಮಾಲಿಕನಿಗೆ ದಂಡ

0
179

ಸನ್ಮಾರ್ಗ ವಾರ್ತೆ

ಅಲಿಗಡ: ನೀರಿನ ಬಾಟಲಿಗೆ ಗರಿಷ್ಠ ಚಿಲ್ಲರೆ ಬೆಲೆಗಿಂತ ಎರಡು ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದ ರೆಸ್ಟೋರೆಂಟ್‌ಗೆ ಗ್ರಾಹಕ ನ್ಯಾಯಾಲಯವು ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಉತ್ತರಪ್ರದೇಶದ ಹಾತ್ರಸ್‌ನ ಬಿಬಿಸಿಎನ್ ರಾಯಲ್ ರೆಸ್ಟಾರೆಂಟ್ ಆಂಡ್ ಪಾರ್ಟಿ ಹಾಲ್‌ನ ಮಾಲಕನಿಗೆ ಅಲಿಗಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ದಂಡ ವಿಧಿಸಿದ್ದು, ಇದಲ್ಲದೆ ದೂರುದಾರನಿಗೆ ನಷ್ಟಪರಿಹಾರವಾಗಿ ಒಂದು ಸಾವಿರ ರೂಪಾಯಿ ಮತ್ತು ನ್ಯಾಯಾಲಯವನ್ನು ಸಂಪರ್ಕಿಸಿದ ವೆಚ್ಚ ಐದು ಸಾವಿರ ರೂಪಾಯಿ ನೀಡುವಂತೆ ಆದೇಶಿಸಿದೆ.

ರೆಸ್ಟೋರೆಂಟ್‌ನಲ್ಲಿ 20 ರೂಪಾಯಿ ಎಂ.ಆರ್.ಪಿ. ಇದ್ದ ನೀರಿನ ಬಾಟಲಿಗೆ ಗ್ರಾಹಕರಿಂದ 22 ರೂಪಾಯಿ ವಸೂಲಿ ಮಾಡಲಾಗಿತ್ತು. ಎಂ.ಆರ್.ಪಿ. ಗಿಂತ ಹೆಚ್ಚಿನ ಹಣ ವಸೂಲಿ ಮಾಡಿದ್ದನ್ನು ಪ್ರಶ್ನಿಸಿ ಗ್ರಾಹಕರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು (ನ್ಯಾಯಾಲಯ) ಸಂಪರ್ಕಿಸಿದರು. ಉತ್ಪನ್ನಗಳ ಮೇಲೆ ನಮೂದಿಸಲಾದ ಗರಿಷ್ಠ ಚಿಲ್ಲರೆ ಬೆಲೆಗಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುವ ಹಕ್ಕು ಹೊಟೇಲ್ ಅಥವಾ ರೆಸ್ಟೋರೆಂಟ್‌ಗಳಿಗೆ ಇಲ್ಲ ಎಂಬುದನ್ನು ಈ ತೀರ್ಪು ನೆನಪಿಸಿದೆ.