ಉಡುಪಿ ಜಿಲ್ಲಾ ಜಮಾಅತ್ ಬಂಧುಗಳ ಸಭೆ

0
283

ಸನ್ಮಾರ್ಗ ವಾರ್ತೆ

ಉಡುಪಿ: ಮಿಥ್ಯ ಸಿದ್ಧಾಂತದ ವಿರುದ್ಧ ಅಹೋ ರಾತ್ರಿ ದುಡಿಯುವವರು ಅಲ್ಲಾಹನಿಗೆ ಅತೀ ಹೆಚ್ಚು ಪ್ರಿಯರು.
ಅಲ್ಲಾಹನ ಆಜ್ಞೆಯನ್ನು ಪ್ರವಾದಿ ಮುಹಮ್ಮದ್ (ಸ)ರವರ ಅನುಸರಣೆಯ ಮೂಲಕ ಸ್ಥಾಪಿಸಲಿಕ್ಕಾಗಿಯೇ ಅಲ್ಲಾಹನು ಮನುಷ್ಯನನ್ನು ಭೂಮಿಗೆ ಕಳುಹಿಸಿರುತ್ತಾನೆ.
ಈ ಕೆಲಸ ಮಾಡುವಾಗ ಹಲವಾರು ಎಡರು ತೊಡರುಗಳು, ಅಡ್ಡಿ -ಆತಂಕಗಳು ಎದರಾಗುತ್ತವೆ. ಅದನ್ನು ದೃಢ ವಿಶ್ವಾಸದ ಮೂಲಕ ಎದುರಿಸಿ, ಗುರಿಯನ್ನು ಸಾಧಿಸಲು ಮುಂದೆ ಸಾಗಿದರೆ ಅಲ್ಲಾಹನ ಸಹಾಯ ಬಂದೇ ಬರುತ್ತದೆ. ಭೂಮಿಯಲ್ಲಿ ಸತ್ಯ ಮಾತ್ರ ಸದಾ ಕಾಲ ಉಳಿಯಲಿದೆ.

ಮಿಥ್ಯ ಸಿದ್ದಂತಾ ಶೈತಾನನ ಕಾರ್ಯಸೂಚಿ ಆಗಿದ್ದು, ಅದನ್ನು ಕುರ್‌ಆನ್‌ನ ಬೆಳಕಿನ ಮೂಲಕ ಅಳಿಸುವ ಕೆಲಸ ಸತ್ಯವಿಶ್ವಾಸಿಗಳು ಮಾಡಬೇಕಾಗಿದೆ. ಕುರ್‌ಆನ್‌ನ ಬೋಧನೆಗಳು ಮತ್ತು ಪ್ರವಾದಿ ಮುಹಮ್ಮದ್ (ಸ)ರವರ ಚರ್ಯೆಯ ಮೂಲಕ ಸಮಾಜದಲ್ಲಿ ಸಂತುಲಿತ ಜೀವನ ಸಾಗಿಸಲು ಸಾಧ್ಯವಿದೆ. ಇಂತಹ ಸಮಾಜ ನಿರ್ಮಿಸಲು ಜಮಾಅತ್‌ನ ಕಾರ್ಯಕರ್ತರು ಕಟಿ ಬದ್ಧರಾಗಿರಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯಧ್ಯಕ್ಷರಾದ ಡಾಕ್ಟರ್ ಸಾದ್ ಬೆಳ್ಗಾಮಿಯವರು ಹೇಳಿದರು.

ಅವರು ಜಮಾಅತ್ ನ ಸದಸ್ಯರು , ಕಾರ್ಯಕರ್ತರು , ಎಸ್. ಐ. ಓ , ಜಿ. ಐ.ಓ, ಸಾಲಿಡಾರಿಟಿ , ಮಹಿಳಾ ವಿಭಾಗ ಮತ್ತು ವಿವಿಧ ಅಂಗ ಸಂಸ್ಥೆಗಳ ಜಮಾಅತ್ ಬಂದುಗಳನ್ನು ಉದ್ದೇಶಿಸಿ , ಉಡುಪಿ ಜಾಮಿಯಾ ಮಸ್ಜಿದ್ ನಲ್ಲಿ ಹಮ್ಮಿಕೊಂಡ್ಡ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿಯವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ , ಇಸ್ಲಾಮ್ ಧರ್ಮದ ಮೂಲ ತತ್ವ , ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ, ಪ್ರವಾದಿ ಮುಹಮ್ಮದ್ (ಸ). ಅಲ್ಲಾಹನ ದಾಸ ಮತ್ತು ಸಂದೇಶವಾಹಕರಾಗಿದ್ದಾರೆ.

ಇದೇ ತತ್ವವನ್ನು ಅಂಗೀಕರಿಸಿ ಜಮಾಅತೆ ಇಸ್ಲಾಮಿ ಹಿಂದ್ ಈ ದೇಶದಲ್ಲಿ ಕಾರ್ಯಾಚರಿಸುತ್ತದೆ. ಈ ತತ್ವದ ತಿರುಳನ್ನು ಮೊತ್ತ ಮೊದಲು ಜಮಾಅತ್ ನ ಕಾರ್ಯಕರ್ತರು ತಮ್ಮಲ್ಲಿ ಸಂಸ್ಥಾಪಿಸಿ , ಆ ಪ್ರಕಾರ ಜೀವಿಸಿ ಸಮಾಜದಲ್ಲಿ ಮಾದರಿಯಾಗಿ, ಇತರರಿಗೂ ಅದರ ಪರಿಚಯ ಮಾಡಿಸಿ ಅದರಂತೆ ಬದುಕಲು ಪ್ರೆರೇಪಿಸಬೇಕು.

ಜಮಾಅತ್ ನ ಕಾರ್ಯಕರ್ತರನ್ನು ನೋಡುವಾಗ , ಇವರು ನಿಜವಾದ ಮುಸ್ಲಿಮರು , ಇವರು ಒಳಿತನ್ನು ಬೋಧಿಸಿ , ಕೆಡುಕನ್ನು ನಿವಾರಿಸುವವರು ಎಂದು ಗುರುತಿಸಿ ಕೊಳ್ಳುವಂತೆ ಇರಬೇಕು ಎಂದು ನುಡಿದರು.

ಚಿಲ್ಡ್ರನ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಜಿಲ್ಲಾ ಹೊಣೆಗಾರರದ ಮೆಹರುನ್ನೀಸಾ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಜಿಲ್ಲಾ ಹೊಣೆಗಾರರಾದ ನುಜ್ಲಾ ಫಾತಿಮಾ , ಐಟಾದ ಜಿಲ್ಲಾ ಹೊಣೆಗಾರರಾದ ಅಸ್ಲಮ್ ಹೈಕಾಡಿ , ಸಾಲಿಡಾರಿಟಿಯ ಜಿಲ್ಲಾ ಹೊಣೆಗಾರರಾದ ಆಫ್ವಾನ್ ರವರು ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ಈ ಸಂದರ್ಭದಲ್ಲಿ ಸಾಲಿಡಾರಿಟಿ ವತಿಯಿಂದ ನವಂಬರ್ 7 ರಂದು ಉಡುಪಿ ಟೌನ್ ಹಾಲ್ ನಲ್ಲಿ. ನಡೆಯುವ ಬೃಹತ್ ಸಮಾವೇಶದ ಪೋಸ್ಟರ್‌ನ್ನು ರಾಜ್ಯಧ್ಯಕ್ಷರು ಬಿಡುಗಡೆಗೊಳಿಸಿದರು.

ಕಾಪು ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿಯವರ ಕುರ್ ಆನ್ ಪಠಣದೊಂದಿಗೆ ಸಭೆಯು ಪ್ರಾರಂಭವಾಯಿತು.

ಜಿಲ್ಲಾ ಸಂಚಾಲಕರಾದ ಡಾ, ಅಬ್ದುಲ್ ಅಝೀಝ್ ರವರು ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದ ನೀಡಿದರು.
ವೇದಿಕೆಯಲ್ಲಿ ವಲಯ ಸಂಚಾಲಕರಾದ ಸಯೀದ್ ಇಸ್ಮಾಯಿಲ್ ಉಪಸ್ಥಿತರಿದ್ದರು.