ಸನ್ಮಾರ್ಗ ವಾರ್ತೆ
ಲಕ್ನೋ: ಉತ್ತರ ಪ್ರದೇಶ ರಾಜ್ಯದಲ್ಲಿ ಗುಂಪು ಹಲ್ಲೆ ನಡೆದ ಬಳಿಕ 60 ವರ್ಷದ ಮುಸ್ಲಿಂ ಪತ್ರಕರ್ತರೊಬ್ಬರು ಮೃತಪಟ್ಟಿದ್ದಾರೆ. ತಮ್ಮ ಪತ್ರಿಕೆಯ ದೀಪಾವಳಿ ಜಾಹೀರಾತಿನ ಕುರಿತಾದ ವಾಗ್ವಾದದ ನಂತರ ಈ ದಾಳಿ ನಡೆದಿದೆ. ವಿಚಾರಣೆಗಾಗಿ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೊಹಮ್ಮದ್ ನಸೀಮ್ ಅಹ್ಮದ್ ಅವರು ಹಿಂದಿ ಭಾಷೆಯ ‘ದೈನಿಕ ಜನ್ವಾಣಿ’ ದಿನಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿದ್ದರು. ಅಕ್ಟೋಬರ್ 18, ಭಾನುವಾರದಂದು ಹಪುರ್ ಜಿಲ್ಲೆಯಲ್ಲಿ ದಾಳಿಕೋರರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಿಂದೂಗಳ ಬೆಳಕಿನ ಹಬ್ಬವಾದ ದೀಪಾವಳಿಯ ಮುನ್ನ ಜಾಹೀರಾತನ್ನು ಕೋರಲು ಅವರು ಸ್ಥಳೀಯ ವ್ಯಾಪಾರಿಯೊಬ್ಬರ ಬಳಿಗೆ ತೆರಳಿದ್ದರು. ಅಹ್ಮದ್ ಅವರ ಅಳಿಯ ಡಾ. ಶಾರುಖ್ ಪೊಲೀಸ್ ದೂರು ದಾಖಲಿಸಿದ್ದಾರೆ.
ನಸೀಮ್ ಅಹ್ಮದ್ ಅವರು ಹಲವಾರು ಸಂಗಾತಿಗಳೊಂದಿಗೆ ಗೋಧಿ ಹಿಟ್ಟಿನ ಗಿರಣಿಗೆ ತೆರಳಿದ್ದರು. ಜಾಹೀರಾತಿನ ವಿನಂತಿಯ ವಿಷಯವಾಗಿ ವ್ಯಾಪಾರಿಯೊಡೆನೆ ವಾಗ್ವಾದ ಪ್ರಾರಂಭವಾಯಿತು. ಗಿರಣಿಯ ಮಾಲೀಕರನ್ನು ಅಶೋಕ್ ಕುಮಾರ್ ಗುಪ್ತಾ ಎಂದು ದೂರಿನಲ್ಲಿ ಹೆಸರಿಸಲಾಗಿದೆ. ಅವರು ಜಾಹೀರಾತು ನೀಡಲು ನಿರಾಕರಿಸಿದ ನಂತರ ನಸೀಮ್ ಅಹ್ಮದ್ ಮತ್ತು ಅವರ ಸಂಗಾತಿಗಳನ್ನು “ನಕಲಿ ಪತ್ರಕರ್ತರು” ಎಂದು ನಿಂದಿಸಿದ್ದಾರೆ ಎನ್ನಲಾಗಿದೆ.
ಈ ನಿಂದನೆಯ ಮಾತುಗಳನ್ನು ನಸೀಮ್ ಅಹ್ಮದ್ ವಿರೋಧಿಸಿದರು. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ನಸೀಮ್ ಅಹ್ಮದ್ ಮತ್ತು ಇನ್ನೊಬ್ಬ ವ್ಯಕ್ತಿ ಸಲಾವುದ್ದೀನ್ ಅವರ ಮೇಲೆ ಏಳರಿಂದ ಎಂಟು ಜನರು ದಾಳಿ ನಡೆಸಿದ್ದಾರೆ ಎಂದು ದೂರು ತಿಳಿಸಿದೆ. ಅಶೋಕ್ ಗುಪ್ತಾ, ಅವರ ಮಗ ಕಪಿಲ್ ಹಾಗೂ ನರೇಶ್ ಕುಮಾರ್ ಎನ್ನಲಾದ ವ್ಯಕ್ತಿ ಮತ್ತು ಗುರುತಿಸಲಾಗದ ಹಲವಾರು ಜನರನ್ನು ಭಾಗವಹಿಸಿದವರಾಗಿ ಹೆಸರಿಸಲಾಗಿದೆ.
ದಾಳಿಕೋರರು ನಸೀಮ್ ಅಹ್ಮದ್ ಅವರಿಗೆ ಪದೇ ಪದೇ ಒದ್ದಿದ್ದಾರೆ ಎಂದು ವರದಿಯಾಗಿದೆ. ನಸೀಮ್ ಅಹ್ಮದ್ ಅವರ ಎದೆ ಮತ್ತು ದೇಹದ ಇತರ ಭಾಗಗಳಿಗೆ ಹೊಡೆದಿದ್ದಾರೆ. ಅಹ್ಮದ್ ಗಂಭೀರ ಗಾಯಗೊಂಡಿದ್ದಾರೆ. ಕುಟುಂಬಸ್ಥರು ಮತ್ತು ಸಂಗಾತಿಗಳು ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ನಸೀಮ್ ಅಹ್ಮದ್ ಅವರ ಮಗಳು ಅಂದರೆ ಶಾರುಖ್ ಅವರ ಪತ್ನಿ ಮಾಡಿದ ಫೋನ್ ಕರೆಯ ಮೂಲಕ ಶಾರುಖ್ ದಾಳಿಯ ಬಗ್ಗೆ ತಿಳಿದುಕೊಂಡರು. ನಂತರ ಅವರು ಆರೋಗ್ಯ ಕೇಂದ್ರಕ್ಕೆ ತೆರಳಿದರು. ಮಾಲೀಕರು ವಿನಂತಿಯನ್ನು ತಿರಸ್ಕರಿಸಿ ಗುಂಪಿಗೆ ಬೈದಾಗ ಘರ್ಷಣೆ ಪ್ರಾರಂಭವಾಯಿತು ಎಂದು ನಸೀಮ್ ಅಹ್ಮದ್ ಅವರೊಂದಿಗೆ ತೆರಳಿದ್ದ ಸಾಕ್ಷಿಗಳು ತಿಳಿಸಿದ್ದಾರೆ.
ಜಾಹೀರಾತು ವಿವಾದಕ್ಕೆ ಸಂಬಂಧಿಸಿದ ಹಲ್ಲೆಯ ನಂತರ ನಸೀಮ್ ಅಹ್ಮದ್ ಮೃತಪಟ್ಟಿದ್ದಾರೆ ಎಂದು ಹಪುರ್ ಪೊಲೀಸ್ ವರಿಷ್ಠಾಧಿಕಾರಿ ಮಧುಬನ್ ಕುಮಾರ್ ದೃಢಪಡಿಸಿದ್ದಾರೆ. ವಿಚಾರಣೆಗಾಗಿ ಇಬ್ಬರನ್ನು ವಶದಲ್ಲಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯಲ್ಲಿ ಏನು ಕಂಡುಬರುತ್ತದೆ ಎಂಬುದರ ಮೇಲೆ ಮುಂದಿನ ಕಾನೂನು ಕ್ರಮ ಅವಲಂಬಿತವಾಗಿರುತ್ತದೆ.
ಈ ಹತ್ಯೆಯು ಭಾರತದಲ್ಲಿ ಗುಂಪು ಹಿಂಸಾಚಾರ ಮತ್ತು ಸ್ವಯಂಘೋಷಿತ ಬೀದಿರಕ್ಷರ ದಾಳಿಗಳ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಗುಂಪುಗಳು ಪದೇ ಪದೇ ಕಾನೂನನ್ನು ತಮ್ಮ ಕೈಗೆತ್ತಿಕೊಂಡಿವೆ, ಕೆಲವೊಮ್ಮೆ ಇದು ಮಾರಣಾಂತಿಕ ಪರಿಣಾಮಗಳಿಗೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮರು ಗುಂಪು ಹಲ್ಲೆಗಳಿಂದ ಪದೇ ಪದೇ ಅಪಾಯವನ್ನು ಎದುರಿಸಿದ್ದಾರೆ. ಕೆಲವು ದಾಳಿಗಳು ಧರ್ಮದ ಗುರುತಿಗೆ ಸಂಬಂಧಿಸಿದ್ದರೆ ಇನ್ನು ಕೆಲವು ಗೋಹತ್ಯೆಯ ಆರೋಪಗಳನ್ನು ಅನುಸರಿಸಿವೆ ಅಥವಾ ಕೋಮು ಉದ್ವಿಗ್ನತೆಯಿಂದ ಉದ್ಭವಿಸಿವೆ.
ಮಾನವ ಹಕ್ಕುಗಳ ಸಂಘಟನೆಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾವೆ ಮತ್ತು ಅಂತಹ ಹಿಂಸಾಚಾರವನ್ನು ತಡೆಯುವಲ್ಲಿ ಅಧಿಕಾರಿಗಳ ವೈಫಲ್ಯವನ್ನೂ ಅವರು ಬೆಟ್ಟು ಮಾಡುತ್ತಾರೆ.












