ಸನ್ಮಾರ್ಗ ವಾರ್ತೆ
ಕೋಲ್ಕತ್ತಾ: ಆರು ಮಂದಿ ವಿದ್ಯಾರ್ಥಿಗಳನ್ನು ಒಂದು ವರ್ಷದ ಅವಧಿಗೆ ಉಚ್ಚಾಟಿಸಿರುವುದನ್ನು ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ (ಎಸ್ಆರ್ಎಫ್ಟಿಐ) ಸಮರ್ಥಿಸಿಕೊಂಡಿದೆ. ಶಿಸ್ತು ಕ್ರಮವನ್ನು ವಿದ್ಯಾರ್ಥಿಗಳ ಪ್ರತಿಭಟನೆಯ ಆಧಾರದ ಮೇಲೆ ತೆಗೆದುಕೊಳ್ಳಲಾಗಿಲ್ಲ, ಬದಲಿಗೆ ಸಂಸ್ಥೆಯ ಆಸ್ತಿಗೆ ಹಾನಿ ಉಂಟುಮಾಡಿರುವುದು ಮತ್ತು ದೈಹಿಕ ಅತಿಕ್ರಮಣದಂತಹ ನಿರ್ದಿಷ್ಟ ಆರೋಪಗಳ ಮೇಲೆ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ. ಹಿರಿಯ ನಟ ನಸೀರುದ್ದೀನ್ ಶಾ ಅವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ನಂತರ ಸಂಸ್ಥೆಯು ಈ ಸ್ಪಷ್ಟನೆ ನೀಡಿದೆ.
ಕ್ಯಾಂಪಸ್ ಆಸ್ತಿಗೆ ಹಾನಿ, ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವುದು ಮತ್ತು ದೈಹಿಕ ಹಲ್ಲೆಯಂತಹ ಗಂಭೀರ ಶಿಸ್ತು ಉಲ್ಲಂಘನೆಗಳ ಪುರಾವೆಗಳು ದೊರೆತ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಂಸ್ಥೆಯು ಯಾವಾಗಲೂ ಶಾಂತಿಯುತ ಪ್ರತಿಭಟನೆಗಳನ್ನು ಗೌರವಿಸುತ್ತದೆ, ಆದರೆ ಕಾನೂನು ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್ಆರ್ಎಫ್ಟಿಐ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ.
ಆರ್ಎಸ್ಎಸ್ ಸಂಯೋಜಿತ ಅಖಿಲ ಭಾರತೀಯ ಗ್ರಾಹಕ್ ಪಂಚಾಯತ್ ಕಾರ್ಯಕರ್ತರು ಮತ್ತು ಹಿಂದೂ ಜಾಗರಣ ಮಂಚ್ ಅಕ್ಟೋಬರ್ 4 ರಂದು ಕ್ಯಾಂಪಸ್ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸೆಪ್ಟೆಂಬರ್ 27 ರಂದು ಶೈಕ್ಷಣಿಕ ಬಹಿಷ್ಕಾರ ಮತ್ತು ಮುಷ್ಕರವನ್ನು ಪ್ರಾರಂಭಿಸಿದ್ದರು. ಪ್ರತಿಭಟನೆಯ ಭಾಗವಾಗಿ, ವೈಸ್ ಚಾನ್ಸಲರ್ ಸಂತೋಷ್ ಅಜ್ಮೇರಾ ಅವರನ್ನು ತಡೆದು ಬಂಧಿಸಿಟ್ಟಿದ್ದರು ಎಂಬ ಆರೋಪದ ಮೇಲೆ ಅಕ್ಟೋಬರ್ 14 ರಂದು ಅಧಿಕಾರಿಗಳು ಆರು ವಿದ್ಯಾರ್ಥಿಗಳನ್ನು ಉಚ್ಚಾಟಿಸಿದರು ಮತ್ತು ಹಾಸ್ಟೆಲ್ಗಳನ್ನು ತೆರವುಗೊಳಿಸುವಂತೆ ಆದೇಶಿಸಿ, ತರಗತಿಗಳನ್ನು ನವೆಂಬರ್ 13 ರವರೆಗೆ ಅಮಾನತುಗೊಳಿಸಿದರು.
ಈ ವಿಷಯದಲ್ಲಿ ನಟ ನಸೀರುದ್ದೀನ್ ಶಾ ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳ ಚುನಾವಣಾ ಗೆಲುವಿನ ನಂತರ, ಬಿಜೆಪಿ ತನ್ನ ರಾಜಕೀಯ ಸಿದ್ಧಾಂತಗಳನ್ನು ಒಪ್ಪದವರ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಹೇಳಿದ್ದಾರೆ. ಇಂತಹ ಕ್ರಮಗಳ ಮೂಲಕ ಅಧಿಕಾರಿಗಳು ದೇಶದ ಭವಿಷ್ಯದ ಚಿತ್ರನಿರ್ಮಾಪಕರನ್ನು ಬೆದರಿಸಲು ಅಥವಾ ಅವರ ಆಲೋಚನೆಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದೂ ಅವರು ಬೆಟ್ಟು ಮಾಡಿದ್ದಾರೆ.
ಆದಾಗ್ಯೂ, ನಸೀರುದ್ದೀನ್ ಶಾ ಅವರ ಹೇಳಿಕೆಯ ವಿರುದ್ಧ ಬಿಜೆಪಿ ನಾಯಕತ್ವವು ತೀವ್ರವಾಗಿ ರೊಚ್ಚಿಗೆದ್ದಿದೆ. ನಸೀರುದ್ದೀನ್ ಶಾ ಅವರ ಆರೋಪಗಳ ಕುರಿತು ಸಮಗ್ರ ತನಿಖೆಗೆ ಬಿಜೆಪಿ ಸಂಸದ ಹಾಗೂ ವಕ್ತಾರ ರಾಹುಲ್ ಸಿನ್ಹಾ ಆಗ್ರಹಿಸಿದ್ದಾರೆ. ಇಂತಹ ಹೇಳಿಕೆಗಳು ಭಾರತೀಯ ಪ್ರಜಾಪ್ರಭುತ್ವವನ್ನು ನಾಶಪಡಿಸಲು ವಿದೇಶಿ ಶಕ್ತಿಗಳು ಮತ್ತು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ನಂತಹ ವಿರೋಧ ಪಕ್ಷಗಳು ನಡೆಸುತ್ತಿರುವ ಸಂಚಿನ ಭಾಗವಾಗಿದೆ ಎಂದು ರಾಹುಲ್ ಸಿನ್ಹಾ ಆರೋಪಿಸಿದ್ದಾರೆ.












